ಬುಧವಾರ, ಅಕ್ಟೋಬರ್ 31, 2012

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು.....

                                ಟೈಗರ್ಸ್ ನೆಸ್ಟ್  ಹಾದಿಯಲ್ಲಿ ಪುಟ್ಟ ಮಕ್ಕಳು


ಪಾರೋ:
ಶಾರಿ ಅಥವಾ ಪಾರೋಛು ಎಂಬ ನದಿಯ ತಟದಲ್ಲಿರುವ ಪಾರೋವಿಗೆ ರಾತ್ರಿ ನಾವು ತಲುಪುವಷ್ಟರಲ್ಲಿ ಎಲ್ಲ ಅಂಗಡಿ, ಮುಂಗಟ್ಟುಗಳೂ ಮುಚ್ಚಿದ್ದವು. ದಾರಿಯಲ್ಲಿ ಬರುತ್ತಾ ಹೊಟೆಲ್ ಒಂದಕ್ಕೆ ಕರೆಮಾಡಿ ಕೋಣೆ ಕಾಯ್ದಿರಿಸಿಕೊಂಡಿದ್ದರಿಂದ ನಾವು ಬಚಾವ್. ಪಾರೋವಿನಲ್ಲಿ ವ್ಯಾಪಾರ ವಹಿವಾಟೆಲ್ಲಾ ೭ ಗಂಟೆಯೊಳಗೆ ಬಂದಾಗಿರುತ್ತದೆ. ಆಮೇಲೆ ಊಟ ಸಿಗುವುದೂ ಕೂಡಾ ಕಷ್ಟ. ಭೂತಾನಿನಲ್ಲಿ ಯಾವುದೇ ಹೊಟೆಲ್ಲಿಗೆ ಹೋದರೂ ನೀವು ಆರ್ಡರ್ ಮಾಡಿ ಕನಿಷ್ಟ ಎಂದರೂ ೧ ಗಂಟೆ ಕಾಯಬೇಕು. ಇಲ್ಲಿ ಸಾಮಾನ್ಯವಾಗಿ ಕಡಿಮೆ ಜನರು ಹೊಟೆಲ್ಲುಗಳಿಗೆ ಬರುವುದರಿಂದ ಇವರು ಮೊದಲೇ ಎಲ್ಲಾ ಪದಾರ್ಥಗಳನ್ನೂ ಮಾಡಿಟ್ಟುಕೊಂಡಿರುವುದಿಲ್ಲ. ನಾವು ಹೋಗಿ ಆರ್ಡರ್ ಮಾಡಿದ ಮೇಲಷ್ಟೇ ಅಡಿಗೆ ಶುರುಹಚ್ಚಿಕೊಳ್ಳುವುದು. ರಾತ್ರಿ ಊಟ ಬೇಕೆಂದರೆ ೬:೩೦ಕ್ಕೆಲ್ಲಾ ಹೊಗಿ ಆರ್ಡರ್ ಮಾಡಿರಬೇಕು. ಚೋಡೆನ್ ಎಂಬ ಹುಡುಗಿ ನಡೆಸುವ ಹೋಟೆಲ್ ತೆರೆದಿತ್ತು. ನಾವು ಪಾರೋವಿನಲ್ಲಿ ತಂಗಿದ್ದಷ್ಟು ದಿನವೂ ಆಕೆಯ ಹೊಟೆಲ್ಲಿನಲ್ಲಿ ತಿಂದಿದ್ದೇ ಹೆಚ್ಚು.
 


                                            ಟೈಗರ್ಸ್ ನೆಸ್ಟ್ ಮೊನಾಸ್ಟ್ರಿ


ಮರುದಿನ ನಾನು ತಶೀಸೆಲ್ ಸಿಮ್ ಕಾರ್ಡ್ ತೆಗೆದುಕೊಂಡೆ. ನಾನು ಗುಂಪನ್ನು ಬಿಟ್ಟು ಬೇರೆಯಾಗಿ ತಿರುಗಾಡಲು ತೊಡಗಿದ್ದರಿಂದ ನಮ್ಮೊಳಗೆ ಕೆಲವೊಮ್ಮೆ ಮಾತುಕತೆ ಅನಿವಾರ್ಯವಾದಾಗ ಉಪಯೋಗಕ್ಕೆ ಬರುತ್ತದೆ ಎಂದು ಎಲ್ಲರೂ ಒತ್ತಾಯಿಸಿದರು. ಹಾಗೇ ತಿಂಡಿ ತಿಂದು "ತಕ್ಷಂಗ್" ಅಥವಾ "ಟೈಗರ್ಸ್ ನೆಸ್ಟ್" ಎಂದು ಕರೆಯಲ್ಪಡುವ ಮೊನಾಸ್ಟ್ರಿ ಒಂದನ್ನು ನೋಡಲು ಹೊರಟೆವು. ಪಾರೋವಿನಿಂದ ಸುಮಾರು ೮ ಕಿ ಮೀ ಹೊರವಲಯದಲ್ಲಿ ಬೆಟ್ಟ ಹತ್ತಲು ತೊಡಗಿದರೆ ಪಾರೋ ಕಣಿವೆಯ ಸುಂದರ ದೃಶ್ಯಗಳನ್ನು ನೋಡುತ್ತಾ ಸುಮಾರು ೩ ಗಂಟೆಗಳ ಕಾಲ ಬೇಕಾಗುತ್ತದೆ ಟೈಗರ್ಸ್ ನೆಸ್ಟ್ ತಲುಪಲು. ದಾರಿ ಮಧ್ಯೆ ಸುಮಾರು ವಿದೇಶೀ ಪ್ರವಾಸಿಗರೂ ಸಿಕ್ಕಿದ್ದರು. ಹಣ್ಣು ಹಣ್ಣು ವಿದೇಶೀ ಮುದುಕ ಮುದುಕಿಯರು ಎರಡೂ ಕೈಯಲ್ಲಿ ದೊಣ್ಣೆ ಹಿಡಿದು ಗೈಡ್ ಸಹಾಯದಿಂದ ಬೆಟ್ಟ ಹತ್ತುವುದೂ, ಇಳಿಯುವುದೂ ನೋಡಿ ವಾಹ್!! ಎನಿಸಿತ್ತು. ಷಕಚು ಎಂಬ ಜಲಪಾತದ ಎದುರು ಬೆಟ್ಟದ ಒಂದು ಪಾರ್ಶ್ವದಲ್ಲಿ ತುತ್ತ ತುದಿಗೆ ಕಟ್ಟಲ್ಪಟ್ಟ ಟೈಗರ್ಸ್ ನೆಸ್ಟ್ ಬಹು ಸುಂದರ ಮೊನಾಸ್ಟ್ರಿ. ಗುರು ರಿಂಪೊಚೆ ಎಂಬ ಬೌದ್ಧ ಸನ್ಯಾಸಿಯೊಬ್ಬ (೨ನೆಯ ಭುದ್ಧ ಎಂದು ಕೂಡಾ ಇವರಿಗೆ ಕರೆಯುತ್ತಾರೆ) ಹಾರುವ ಹುಲಿಯ ಮೇಲೆ ಬಂದು ಇಲ್ಲಿ ಮೊನಾಸ್ಟ್ರಿ ನಿರ್ಮಿಸಿದ್ದಾರೆಂಬ ನಂಬಿಕೆಯಿದೆ. ಆದ್ದರಿಂದಲೇ ಇದಕ್ಕೆ ಟೈಗರ್ಸ್ ನೆಸ್ಟ್ ಎಂದು ಹೆಸರು ಬಂತಂತೆ (ಭೂತಾನಿನ ಯಾವುದೇ ಮೊನಾಸ್ಟ್ರಿ ಅಥವಾ ಝಾಂಗ್ ಗಳಲ್ಲಿ ಕಾಲರ್ ಇರುವ ಪೂರ್ತಿ ತೋಳಿರುವ ಶರ್ಟ್ ಮತ್ತು ಕಾಲನ್ನು ಪೂರ್ತಿ ಮುಚ್ಚುವಂತೆ ಬಟ್ಟೆ ತೊಟ್ಟರೆ ಮಾತ್ರಾ ಒಳಗೆ ಬಿಡುತ್ತಾರೆ). ದೇವಾಲಯದ ಒಳಗೆ ಗುರು ರಿಂಪೊಚೆಯ ದೊಡ್ಡ ಮೂರ್ತಿ ಇದೆ. ಒಳಹೊಕ್ಕು ಕಣ್ಮುಚ್ಚಿ ಕುಳಿತರೆ ಬೆಟ್ಟ ಹತ್ತಿದ ಸುಸ್ತೆಲ್ಲಾ ಪೂರ್ತಿ ಮಾಯವಾಗಿ ಬಿಡುತ್ತದೆ. ವಾಪಾಸಾಗುವ ಹೊತ್ತಿಗೆ ಕತ್ತಲಾವರಿಸುತ್ತಾ ಬಂದಿತ್ತು. ಎಂದಿನಂತೆ ಹೊಟೆಲ್ಲುಗಳು ಮುಚ್ಚುವುದರೊಳಗಾಗಿ ನಾವು ಊಟ ಮಾಡಬೇಕಿತ್ತು.
 


                                      ಪಾರೋ ಛೂ ನದಿಯ ದಡದಿಂದ..
 

ಮರುದಿನ ಎಂದಿನಂತೆ ಬೇಗ ಎದ್ದು ನದಿಯ ತಟದಗುಂಟ ಪೂರ್ತಿ ಸುತ್ತಾಡಿ ಚೊಡೆನ್ನಳಲ್ಲಿ ತಿಂಡಿ ತಿಂದು ಆಕೆಯ ತಂಗಿ ತಿನ್ಲೆಯೊಟ್ಟಿಗೆ ಕಾಲ್ನಡಿಗೆಯಲ್ಲಿ ಹಳ್ಳಿಗಳನ್ನು ಸುತ್ತಲು ಹೊರಟೆ. ಭೂತಾನಿನಲ್ಲಿ ಮುಂಜಾನೆಯ ಸುತ್ತಾಟ ಹಾಗೂ ತಿನ್ಲೆಯೊಟ್ಟಿಗಿನ ತಿರುಗಾಟ ಭೂತಾನಿನ ಸಂಸ್ಕ್ರುತಿಯ ಹೆಚ್ಚಿನ ಚಿತ್ರಣಗಳನ್ನು ನನಗೆ ಕೊಟ್ಟಿದ್ದು ಸುಳ್ಳಲ್ಲ. ಪಾರೋ ಸುತ್ತಲಿನ ಹಳ್ಳಿಗಳ ಸುತ್ತಾಟದಿಂದಾಗಿ ತಿಳಿದುಕೊಂಡ ಹಲವು ವಿಷಯಗಳ ಚಿತ್ರಣವನ್ನು ತಕ್ಕಮಟ್ಟಿಗೆ ನನಗೆ ನೆನಪಿದ್ದಂತೆ ಚಿತ್ರಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.
 


                                           ಬೆಳಗಿನ ಕಾಯಕ..

                                      ಪಾರೋ ಸೌಂದರ್ಯ..


ಬಟ್ಟೆ ತಯಾರಿಕೆ ಮತ್ತು ಪರ್ಯಾಯ ಪದ್ದತಿ:
ಮೊದಲು ನಾವಿಬ್ಬರೂ "ಚೆಂಚೋ ಹ್ಯಾಂಡಿಡಿಕ್ರಾಫ್ಟ್" ಎಂಬ ಬಟ್ಟೆ ನೇಯ್ದು ಮಾರಾಟ ಮಾಡುವ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದೆವು. ವಿವಿಧ ಡಿಸೈನುಗಳ ಕೀರಾ, ಘೊ, ಮತ್ತು ಕಾರ್ಪೆಟ್ ಗಳನ್ನು ನೇಯುವಲ್ಲಿ ಹುಡುಗಿಯರು ಮಘ್ನರಾಗಿದ್ದರು. ಸಾಮಾನ್ಯರಿಗೆ ಬಟ್ಟೆ ನೇಯಲು ಸಾಮಾನ್ಯವಾಗಿ ೪ ರಿಂದ ೫ ತಿಂಗಳುಗಳು ಬೇಕಾಗುತ್ತದೆಯಂತೆ. ಕೆಲವು ವರ್ಷಗಳ ಹಿಂದೆ ಪಶ್ಚಿಮ ಭೂತಾನೀ ಹೆಂಗಸರು ನೇಕಾರ ಕಾಯಕವನ್ನೂ, ಪೂರ್ವ ಭೂತಾನೀಯರು ಬೆಳೆ ಬೆಳೆಯುವುದೂ ಹಾಗೂ ಗುಡ್ಡಗಾಡು ಭೂತಾನೀಯರು ಉಣ್ಣೆಯ ಬಟ್ಟೆ ಹಾಗೂ ಯಾಕ್ ಚೀಸ್ ತಯಾರಿಸುವುದೂ, ಎಲ್ಲರೂ ತಮ್ಮಲ್ಲಿ ಹೇರಳವಾಗಿ ಸಿಗುವ ಒಂದು ವಸ್ತುವಿಗೆ ಪರ್ಯಾಯವಾಗಿ ಮತ್ತೊಂದನ್ನು ಕೊಟ್ಟು ಪಡೆಯುವ ಪರ್ಯಾಯ ಪದ್ಧತಿ ಜಾರಿಯಲ್ಲಿತ್ತು. ಇತ್ತೀಚೆಗೆ ನಾನು ಭೇಟಿ ಮಾಡಿದಂಥಹಾ ಹಲವು ಮಳಿಗೆಗಳು ಭೂತಾನಿನ ಕೆಲವು ಪಟ್ಟಣಗಳಲ್ಲಿ ತಲೆಯೆತ್ತಿ ನೇಕಾರ ಹೆಂಗಸರಿಗೆ ಕಾಯಕ ಒದಗಿಸಿ ಬಟ್ಟೆ ತಯಾರಿಕೆ ಹಾಗೂ ಮಾರಾಟಗಳಲ್ಲಿ ತೊಡಗಿವೆ.
 


                           ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಕಾರ್ಪೆಟ್ ನೇಯುತ್ತಿರುವ ಹುಡುಗಿ


 ಚೆಂಚೋ ಹ್ಯಾಂಡಿಡಿಕ್ರಾಫ್ಟ್ ನಲ್ಲಿ ಬಟ್ಟೆ ನೇಯುವ ಮತ್ತೊಂದು ರೀತಿಯ ಯಂತ್ರ.. ಇದರಲ್ಲಿ ವಿವಿಧ ರೀತಿಯ ಡಿಸೈನ್ ಗಳಿರುವ ಬಟ್ಟೆ ನೇಯಲು ಸಾಧ್ಯವಿಲ್ಲ.. ಮತ್ತು ಇದರಿಂದ ತಯಾರಿಸಿದ ಬಟ್ಟೆಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತವೆ.


ನಂತರ ನಾವು ಡ್ರುಗ್ಯೆಲ್ ಝಾಂಗ್ ಎಂಬ ಜೀರ್ಣಾವಸ್ಥೆಯಲ್ಲಿರುವ ಹಳೆಯ ಕೋಟೆಯೊಂದಕ್ಕೆ ಭೇಟಿ ನೀಡಿದ್ದೆವು. ಝಾಂಗ್ ಒಳಹೋಗಲು ಸುತ್ತಲೂ ಕ್ರಮಬದ್ಧ ಹಾದಿಯಿರುತ್ತದೆ. ಮೊದಲು ಎಡಭಾಗದ ಹಾದಿಯಿಂದ ಬಳಸಿ ಬಂದು ಕಟ್ಟಡವನ್ನು ಸುತ್ತಿ, ಬಲ ಭಾಗದ ಹಾದಿಯಿಂದ ಒಳಹೋಗಬೇಕು, ಇಲ್ಲವಾದರೆ ದೇವರು ಹರಸುವುದಿಲ್ಲ ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ. ನಂತರ ಹಳ್ಳಿಗಳತ್ತ ನಮ್ಮ ಸಂಚಾರ ಕಾಲ್ನಡಿಗೆಯಲ್ಲಿ ಸಾಗಿತ್ತು.
 


                        ಡ್ರುಗ್ಯೆಲ್ ಝಾಂಗ್ ಎಂಬ ಜೀರ್ಣಾವಸ್ಥೆಯಲ್ಲಿರುವ ಹಳೆಯ ಕೋಟೆ


ಭೂತಾನಿನ ಹಳ್ಳಿಮನೆಗಳ ಚಿತ್ರಣ:
ಭೂತಾನಿನಲ್ಲಿ ಸಾಮಾನ್ಯ ಮನೆಗಳೂ ಕೂಡಾ ಭುದ್ದಿಷ್ಟ್ ಶೈಲಿಯ ವಾಸ್ತುಶಿಲ್ಪದಂತೆ ರಚನೆಗೂಂಡಿವೆ. ಮಣ್ಣು ಹಾಗೂ ಪೈನ್ ಮರಗಳನ್ನು ಉಪಯೋಗಿಸಿ ಕಟ್ಟಿದ ಮನೆಗಳಲ್ಲಿ ಚಂದದ ಕೆತ್ತನೆಗಳೂ ಹಾಗೂ ಚಿತ್ರಗಳೂ ಸಾಮಾನ್ಯ. ಸಾಮಾನ್ಯವಾಗಿ ೨ ಅಥವಾ ೩ ಅಂತಸ್ತಿನ ಮನೆಗಳು ಕಾಣಸಿಗುತ್ತವೆ. ಮೊದಲ ಅಂತಸ್ತಿನಲ್ಲಿ ಜನವಸತಿಯಿದ್ದರೆ, ಕೆಳ ಅಂತಸ್ತನ್ನು ಧವಸ, ಧಾನ್ಯಗಳ ಸಂರಕ್ಷಣೆಗೆ ಹಾಗೂ ಚಿಕ್ಕ ಮೇಲಂತಸ್ತನ್ನು ಹುಲ್ಲು ಹಾಗೂ ಇತರೆ ಜಾನುವಾರುಗಳಿರೆ ಆಹಾರ ಸಂರಕ್ಷಣೆಗೆ ಬಳಸುತ್ತಾರೆ. ಮನೆಯ ಪಕ್ಕ ಚಿಕ್ಕ ಕೊಟ್ಟಿಗೆ ಜಾನುವಾರು ಮತ್ತು ಕುದುರೆಗಳಿಗಾಗಿ ಮೀಸಲಿಟ್ಟಿದ್ದಾರೆ. ಮೊದಲೆಲ್ಲಾ ಮನೆಯ ಕೆಳ ಅಂತಸ್ತನ್ನೇ ಜಾನುವಾರುಗಳ ವಸತಿಗಾಗಿ ಬಳಸುತ್ತಿದ್ದರಂತೆ. ಕಾಲ ಬದಲಾದಂತೆ ಭೂತಾನೆಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿದೆ. ಆದ್ದರಿಂದಲೇ ಜಾನುವಾರುಗಳ ಸಾಕಣೆಗೆ ಕೊಟ್ಟಿಗೆಗಳು ಮನೆಯ ಹೊರಗೆ ಕಟ್ಟಲ್ಪಟ್ಟಿವೆ. ಪ್ರತೀ ಮನೆಗಳಲ್ಲೂ ಸುಸಜ್ಜಿತ ದೇವರ ಕೋಣೆ ಹಾಗೂ ಪ್ರಾರ್ಥನಾ ಚಕ್ರಗಳೂ ಸರ್ವೇ ಸಾಮಾನ್ಯ. ದೇವರ ಕೋಣೆಯಲ್ಲಿ ಬುದ್ಧ ಹಾಗೂ ಕೆಲವು ಪ್ರಮುಖ ಬೌದ್ಧ ಸನ್ಯಾಸಿಗಳ ಮೂರ್ತಿಗಳು ಇರುತ್ತವೆ. ಜೊತೆಗೆ ದಿನಾ ಬೆಳಗ್ಗೆಯಿಂದ ಸಂಜೆಯ ವರೆಗೆ ಹಣ್ಣುಗಳನ್ನು ಹಾಗೂ ಪುಟ್ಟ ಪುಟ್ಟ ತಾಮ್ರದ ಬೌಲುಗಳಲ್ಲಿ ನೀರು ತುಂಬಿಸಿ ದೇವರಿಗೆ ನೈವೇದ್ಯಕ್ಕೆಂದು ಇಡುವ ಪದ್ದತಿಯಿದೆ. ಸಂಜೆ ನೀರನ್ನು ಬರಿದುಮಾಡಿ ಅದೇ ಬೌಲುಗಳಲ್ಲಿ ದೀಪ ಹಚ್ಚುತ್ತಾರೆ. ನಾನು ಭೇಟಿ ನೀಡಿದ ತೊಬ್ಗೆ ಎಂಬ ಹಳ್ಳಿಗನ ಮನೆಯಲ್ಲಿ ಇದನ್ನೆಲ್ಲಾ ಆತ ನನಗೆ ಪೂರ್ತಿಯಾಗಿ ತೋರಿಸಿ ವಿವರಿಸಿದ.


 

                                  ಹೀಗೊಂದು ಸಾಮಾನ್ಯ ಮನೆ..

ಭೂತಾನಿನಲ್ಲಿ ಹೆಚ್ಚಾಗಿ ಬಾವಿಗಳನ್ನು ತೋಡುವುದಿಲ್ಲ. ನದಿಗಳಲ್ಲಿ ನೀರು ಯಾವಾಗಲೂ ಒಂದೇ ತೆರನಾಗಿ ಹರಿಯುವುದರಿಂದ ನದಿಯ ನೀರನ್ನೇ ದಿನನಿತ್ಯದ ಬಳಕೆಗಾಗಿ ಉಪಯೊಗಿಸುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಬ್ಬಿ ನೀರಿನ ಉಪಯೋಗ ಹೆಚ್ಹಾಗಿ ಕಂಡುಬರುತ್ತದೆ. ಮನೆಯ ಮುಂಭಾಗ ಸೋಂಗ್ಫು ಎಂದು ಕರೆಯಲ್ಪಡುವ ಒಲೆಗೆ ಪೈನ್ ಮರದ ಎಲೆಗಳು ಹಾಗೊ ಸಿಪ್ರೆಸ್ (ಇದು ಭೂತಾನಿನ ರಾಷ್ತ್ರೀಯ ಸಸ್ಯ) ಎಲೆಗಳನ್ನು ಒಟ್ಟಿ ಹೊಗೆಬರಿಸಿ ಸುಗಂಧವನ್ನು ಆಹ್ಲಾದಿಸುವ ಆಚರಣೆಯಿದೆ. ಇದೊಂದು ಪವಿತ್ರ ಪದ್ದತಿಯಾಗಿ ಕೂಡಾ ಭೂತಾನಿನಲ್ಲಿ ಜಾರಿಯಲ್ಲಿದೆ.

                                    ಸೋಂಗ್ಫು ಎಂದು ಕರೆಯಲ್ಪಡುವ ಒಲೆ


ಮನೆ ನಿರ್ಮಿಸುವುದು, ವ್ಯವಸಾಯ ಮತ್ತು ಸಹಕಾರೀ ಪದ್ಧತಿ: ಭೂತಾನೀಯರು ಹೆಚ್ಚಾಗಿ ಮಣ್ಣು ಮತ್ತು ಪೈನ್ ಮರದ ಹಲಗೆಗಳನ್ನು ಉಪಯೋಗಿಸಿ ಮನೆ ಕಟ್ಟುತ್ತಾರೆ. ಮನೆ ನಿರ್ಮಿಸುವುದರಲ್ಲಿ ಮತ್ತು ವ್ಯವಸಾಯ ಮಾಡುವಲ್ಲಿ ಇವರು ಸಹಕಾರೀ ಧೊರಣೆ ಅನುಸರಿಸುತ್ತಾರೆ. ಊರಿನ ಒಬ್ಬ ಮನೆ ಕಟ್ಟಬೇಕಾದರೆ ಊರಿನ ಎಲ್ಲರೂ ದುಡಿಯುತ್ತಾರೆ. ಗಂಡಸರು ಪೈನ್ ಮರವನ್ನು ಕಡಿದು, ಒಣಗಿಸಿ, ವಿವಿಧ ಆಕಾರಗಳಲ್ಲಿ ಕತ್ತರಿಸಲು ನೆರವಾದರೆ, ಹೆಂಗಸರು ಮಣ್ಣು ಕಲೆಸುವುದು, ಗೋಡೆ ಕಟ್ಟುವುದು ಮುಂತಾದ ಕೆಲಸಗಳಲ್ಲಿ ನೆರವಾಗುತ್ತಾರೆ. ಮರದ ಕೆತ್ತನೆಗಳಿಗೆ ಸಲಹೆ ಕೊಡಲು ಮಾತ್ರಾ ಕಾರ್ಪೆಂಟರ್ ಒಬ್ಬನನ್ನು ನೇಮಿಸಿಕೊಳ್ಳುತ್ತಾರೆ. ಕಾರ್ಪೆಂಟರನಿಗೆ ಸಂಬಳ ಕೊಟ್ಟು ಕೆಲಸ ತೆಗೆದುಕೊಳ್ಳುತ್ತಾರೆ
ಇಂತಿಪ್ಪ ಒಂದು ಮನೆ ಕಟ್ಟಲು ೪ ರಿಂದ ೫ ತಿಂಗಳುಗಳು ಬೇಕಂತೆ. ವ್ಯವಸಾಯದಲ್ಲಿ ಕೂಡಾ ಇದೇ ರೀತಿಯ ಸಹಕಾರೀ ಧೊರಣೆ ಕಂಡುಬರುತ್ತದೆ. ಗದ್ದೆ ನೆಟ್ಟಿಯಿಂದ ಹಿಡಿದು ಕಟಾವು ಮಾಡುವ ವರೆಗೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾರೆ


ಮುಂದುವರೆಯುವುದು........

ಸೋಮವಾರ, ಅಕ್ಟೋಬರ್ 22, 2012

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು....

                              ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್"ನ ಒಂದು ಅಂಗಡಿ


ಅಂತೂ ಇಂತೂ ಗಡಿ ದಾಟಿದೆವು:
ಗಡಿ ದಾಟಲು ಪರ್ಮಿಷನ್ ತೆಗೆದುಕೊಳ್ಳಬೇಕೆಂದು ಗೊತ್ತಿತ್ತೇ ಹೊರತೂ ಯಾವಾಗ? ಎಲ್ಲಿ? ಮುಂತಾದ ವಿಷಯಗಳು ತಿಳಿದಿರಲಿಲ್ಲ. ನಾವು ತಂಗಿದ್ದ ಹೋಟೆಲಿನಲ್ಲಿ ವಿಚಾರಿಸಿದೆವು. ಹೋಟೆಲ್ ಮಾಲೀಕ ಈ ದಿನ ಭಾನುವಾರವಾಗಿದ್ದರಿಂದ ನಿಮಗೆ ಪರ್ಮಿಷನ್ ಸಿಗುವುದಿಲ್ಲ. ನೀವು ಈ ದಿನ ಇಲ್ಲೇ ತಂಗಿದ್ದು ನಾಳೆ ಗಡಿ ದಾಟಲು ಸಾಧ್ಯ ಎಂದಿದ್ದ. ಅತೀ ಉತ್ಸಾಹದಿಂದ ಶನಿವಾರ ಬೆಳಿಗ್ಗೆ ಮುಂಚೆ ಹೊರಟು, ಎಲ್ಲೂ ನಿಲ್ಲದೆ ರಾತ್ರಿಯೆಲ್ಲಾ ಪ್ರಯಾಣ ಮಾಡಿದ್ದ ನಮಗೆ ನಿರಾಸೆಯಾಗಿತ್ತು. ಹಾಗೇ ತಿಂಡಿ ತಿಂದು ತಿರುಗಾಡಲು ಹೊರಟೆವು. ಭಾರತೀಯರು ಫುಲ್ಷೆಲೊಂಗ್ ನಲ್ಲಿ ಹಾಗೂ ಭೂತಾನೀಯರು ಜೈಗೊನಿನಲ್ಲಿ ಸುತ್ತಲು ಅನುಮತಿ ಪತ್ರ ಬೇಕಿಲ್ಲ. ಹಾಗೇ ಗಡಿ ದಾಟಿ ಸುತ್ತಾಡುತ್ತಾ ಇಮಿಗ್ರೇಷನ್ ಆಫೀಸ್ ತೆರೆದಿರುವುದನ್ನು ಕಂಡೆವು. ಸುಮ್ಮನೆ ಇರಲಿ ಎಂದು ಸೆಕ್ಯುರಿಟಿ ಒಬ್ಬನಿಗೆ ಈ ದಿನ ಅನುಮತಿ ಸಿಗುತ್ತದೆಯೇ ಕೇಳಿದರೆ, ಅರೆ ಭಾಯಿ..ನಿಮ್ಮ ಪಾಸ್ಪೋರ್ಟ್ ಸೈಜ್ ಫೊಟೊ ಹಾಗೂ ಐಡೆಂಟಿಟಿ ಕಾರ್ಡ್ ತನ್ನಿ ಭಾರತೀಯರಿಗೆ ಉಚಿತ ಅನುಮತಿ ಎಲ್ಲಾ ದಿನಗಳಲ್ಲೂ ಸಿಗುತ್ತದೆ ಎನ್ನಬೇಕೇ!! .. ಹೊಟೆಲ್ ಮಾಲೀಕನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಅಲ್ಲಿಂದ ತಡ ಮಾಡದೆ ಬೇಗ ಬೇಗ ಫೋಟೊ ತೆಗೆಸಿಕೊಂಡು, ಅನುಮತಿಗೆ ಅರ್ಜಿ ಹಾಕಿ, ಹೊಟೆಲ್ ತೆರವು ಮಾಡಿ ನಮ್ಮ ಲಗ್ಗೆಜುಗಳೊಂದಿಗೆ ಹಾಜರಾಗುವಷ್ಟರಲ್ಲಿ ನಮ್ಮ ಅನುಮತಿ ಪತ್ರ ನಮಗಾಗಿ ಕಾಯುತ್ತಿತ್ತು. ಅಂತೂ ಇಂತೂ ಅಧಿಕೃತ ಅನುಮತಿ ಪತ್ರದೊಂದಿಗೆ ನಾವು ಭಾನುವಾರ ಭೂತಾನ್ ಪ್ರವೇಶಿಸಿದ್ದೆವು. ಇಲ್ಲಿಂದ ಭೂತಾನಿನ ರಾಜಧಾನಿ ಥಿಂಫುವಿಗೆ ನಮ್ಮ ಪ್ರಯಾಣ ಸಾಗಬೇಕಿತ್ತು. ಸಾರಿಗೆ ವ್ಯವಸ್ಥೆ ಸರಿಯಾಗಿ ಬಳಸಿಕೊಳ್ಳಬೇಕೆಂದಿದ್ದ ನಾವು ಫುಲ್ಷೆಲೊಂಗ್ ನಲ್ಲಿ ಬಸ್ ನಿಲ್ದಾಣ ಎಲ್ಲಿದೆ ಮತ್ತು ಬಸ್ ವ್ಯವಸ್ಥೆ ಹೇಗಿದೆ ಎಂದು ವಿಚಾರಿಸಿಕೊಂಡೆವು. ಅರ್ಧಗಂಟೆಗೊಂದರಂತೆ ಬಸ್ ಸೌಕರ್ಯ ಇದೆ ಎಂದು ತಿಳಿದು ಸಮಾಧಾನವಾಗಿತ್ತು. ನಿಧಾನವಾಗಿ ಊಟ ಮುಗಿಸಿ ೪ ಗಂಟೆಗೆ ಹೊರಡುವ ಆ ದಿನದ ಕೊನೆಯ ಬಸ್ಸಿಗೆ ಹೋದರಾಯಿತೆಂದು ಊಟಕ್ಕೆ ತೆರಳಿದೆವು. ಊಟ ಮುಗಿಸಿ ಬಂದು ನೊಡುತ್ತೇವೆ ಬಸ್ ಹೋಗಿಯಾಗಿತ್ತು. ಆಮೇಲೆ ನಮಗೆ ನೆನಪಾಗಿತ್ತು, ಭೂತಾನಿನಲ್ಲಿ ಸಮಯ ಭಾರತಕ್ಕಿಂತ ಅರ್ಧ ಗಂಟೆ ಮುಂದಿದೆ ಎಂದು. ಥಿಂಫುವಿಗೆ ತೆರಳಬೇಕೆಂದಿದ್ದ ಭೂತಾನೀಯನೊಬ್ಬನನ್ನು ಹುಡುಕಿಕೊಂಡು, ಟ್ಯಾಕ್ಸಿ ಗೊತ್ತು ಮಾಡಿಕೊಂಡು ಥಿಂಫುವಿನ ಕಡೆಗೆ ಪ್ರಯಾಣ ಬೆಳೆಸಿದ್ದೆವು. ಫುಲ್ಷೆಲೊಂಗಿನಿಂದ ಥಿಂಫುವಿಗೆ ಹೋಗುವ ರಸ್ತೆ ಸುಂದರವಾಗಿದೆ. ಸುತ್ತಮುತ್ತಲೂ ಬೆಟ್ಟಗಳೂ, ಕಣಿವೆಗಳೂ, ಜಲಪಾತಗಳು.. ನೋಡನೋಡುತ್ತಿದ್ದಂತೆ. ನಮ್ಮ ಟ್ಯಾಕ್ಸಿ ಕಣಿವೆಗಳನ್ನು ಹತ್ತುತ್ತಾ ಇಳಿಯುತ್ತಾ ರಾತ್ರಿಯ ನೀರವತೆಯನ್ನು ಸೀಳಿ ನಮ್ಮನ್ನು ಹೊತ್ತು ಸಾಗಿತ್ತು. ಧೋ ಎಂದು ಸುರಿಯುವ ಮಳೆಯಲ್ಲಿ ರಾತ್ರಿ ೧೧:೩೦ಕ್ಕೆ ಥಿಂಫು ಪಟ್ಟಣ ಪ್ರವೇಶಿಸಿದೆವು. ಅಲ್ಲಿ ಹುಡುಕಾಡಿದ ಮೇಲೆ ಆಗಲೇ ಮುಚ್ಚಿದ್ದ ಲಾಡ್ಜುಗಳ ನಡುವೆ ಸ್ವಲ್ಪ ಹೊತ್ತಿನಲ್ಲಿ ಮುಚ್ಚಲಿ ತಯಾರಾಗಿದ್ದ ಲಾಡ್ಜ್ ಒಂದರಲ್ಲಿ ನಮಗೆ ತಂಗಲು ಜಾಗ ಸಿಕ್ಕಿತ್ತು(ಥಿಂಫುವಿನಲ್ಲಿ ೯ ಗಂಟೆಗೆಲ್ಲಾ ಹೊಟೆಲ್ಲುಗಳು ಮುಚ್ಚಿರುತ್ತವೆ).

 

                             ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್"ನಲ್ಲಿ ಜೋಡಿ ಮಕ್ಕಳು


ಥಿಂಫು ಎಂಬ ಮಾಯಾನಗರಿ:
ನಾವು ತಂಗಿದ್ದ ಎಲ್ಲಾ ದಿನಗಳಲ್ಲೂ ಭೂತಾನಿನಲ್ಲಿ ಬಹುಬೇಗ, ಎಂದರೆ ೫:೧೫ಕ್ಕೆಲ್ಲಾ ಬೆಳಗಾಗುತ್ತಿತ್ತು ಹಾಗೂ ಸಂಜೆ ೫:೩೦ಕ್ಕೆಲ್ಲಾ ಕತ್ತಲಾವರಿಸುತ್ತಿತ್ತು. ಥಿಂಫು ತಲುಪಿದ ಮರುದಿನವೇ ನಾವು ಮೂವರು ಮುಂಜಾನೆ ಎದ್ದು ಸುತ್ತಾಡಲು ಹೊರಟೆವು. ಸ್ವಲ್ಪ ಸ್ವಲ್ಪ ಮಳೆ ಹನಿಯುತ್ತಿತ್ತಾದರೂ, ರಾತ್ರಿಯ ಜೋರು ಮಳೆಯ ಅಬ್ಬರವಿರಲಿಲ್ಲ. ಕಣ್ಣು ಹಾಯಿಸುವಷ್ಟು ದೂರವೂ ಸುಂದರವಾದ ಮರದ ಕೆತ್ತನೆ ಹೊಂದಿದ ಕಟ್ಟಡಗಳೂ, ಅಂಗಡಿ ಮುಂಗಟ್ಟುಗಳೂ, ಸರ್ಕಾರಿ ಕಛೇರಿಗಳೂ ಹಾಗೂ ಮೋಡ ಮುಚ್ಚಿದ ಹಸಿರು ಗುಡ್ಡ ಬೆಟ್ಟ. ಮೊದಲ ನೋಟಕ್ಕೇ ಥಿಂಫು ಇಷ್ಟವಾಗಿಬಿಟ್ಟಿತ್ತು. ಭೂತಾನಿನ ಎಲ್ಲಾ ಮನೆಗಳಲ್ಲೂ, ಅಂಗಡಿಗಳಲ್ಲೂ ರಾಜ ಮತ್ತು ರಾಣಿಯರ, ಕೆಲವೊಮ್ಮೆ ಪೂರ್ತಿ ರಾಜಮನೆತನದವರ ಫೋಟೊಗಳು ರಾರಾಜಿಸುತ್ತವೆ. ರಾಜಮನೆತನದವರೆಂದರೆ ಇಲ್ಲಿಯ ಜನರಿಗೆ ತುಂಬಾ ಗೌರವ. ಥಿಂಫುವಿನಿಂದ ಸುಮಾರು ೮ ಕಿ ಮೀ ಹೊರವಲಯದಲ್ಲಿ ಅರಮನೆ ಇದೆ. ಆದರೆ ಅರಮನೆಗೆ ಪ್ರವೇಶ ನಿಷಿದ್ದವಾಗಿದ್ದರಿಂದ ನಾವು ಅತ್ತ ಮುಖ ಹಾಕಲಿಲ್ಲ.

ಥಿಂಫು ಭೂತಾನಿನ ರಾಜಧಾನಿಯಾದರೂ ಕೂಡಾ ಕಾಲ್ನಡಿಗೆಯಲ್ಲಿ ಸುತ್ತಬಹುದು. ಇದರ ವಿಸ್ತೀರ್ಣ ತುಂಬಾ ಚಿಕ್ಕದಿದೆ. ಮೊದಲ ದಿನವೇ ನಮಗೆ ತಿಳಿದುಬಂದಿದ್ದು ಇಲ್ಲಿ ಸುತ್ತಾಡುವಾಗ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು, ತಪ್ಪಿದರೆ ದಂಡ ತೆರಬೇಕಾಗುತ್ತದೆ ಎನ್ನುವುದು. ಇಲ್ಲಿ ಟ್ಯಕ್ಸಿಯ ಬಲಭಾಗದ ಬಾಗಿಲಿನಿಂದ ಇಳಿಯುವಂತಿಲ್ಲ. ಕಾಲ್ನಡಿಗೆಯಲ್ಲಿ ಹೋಗುವುದಾದರೆ ಫುಟ್ ಬಾತಿನಲ್ಲಿ ಮಾತ್ರಾ ನಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹುಡುಗಿಯರನ್ನು ಚುಡಾಯಿಸುವಂತೆಯೇ ಇಲ್ಲ. ಚುಡಾಯಿಸಿದರೆ ೧೨೦೦ ನು ದಂಡ ಗ್ಯಾರಂಟಿ. ಭೂತಾನಿನ ಎಲ್ಲ ಸರ್ಕಾರೀ ನೌಕರರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾಂಪ್ರದಾಯಿಕ ಉಡುಗೆ ತೊಡುವುದು ಕಡ್ಡಾಯ. ಇಲ್ಲಿನ ರಸ್ತೆ ನೋಡಿದ ನಮಗೆ ಬೈಕ್ ಟ್ರಿಪ್ ಹೋಗುವುದು ಸೂಕ್ತವೆನಿಸಿದರೂ, ವಿಚಾರಿಸಿ ನೋಡಿದಾಗ ಭೂತಾನೀ ಬೈಕುಗಳಿಗೆ ಭೂತಾನಿ ಪರವಾನಗಿ ಕಡ್ಡಾಯವಾಗಿದ್ದರಿಂದ ಹಾಗೂ ಬೈಕ್ ಸವಾರರು ಬಹಳಾ ಕಡಿಮೆ ಸಂಖ್ಯೆಯಲ್ಲಿ ಇದ್ದಿದ್ದರಿಂದ ನಾವು ನಮ್ಮ ಉಪಾಯವನ್ನು ಕಡೆಗಣಿಸಿ ಟ್ಯಕ್ಸಿಯಲ್ಲಿ ಸುತ್ತಾಡಲು ತೊಡಗಿದೆವು.
 


                                 ಡಿಚೆಂಗ್ ಪೊಡ್ರಾಂಗ್ ನ ಲಖಾನ್


ಬೆಳಿಗ್ಗೆ ತಿಂಡಿ ತಿಂದಾದ ಮೇಲೆ ನಾವು ಮಾಡಿದ ಮೊದಲ ಕೆಲಸ "ಲೋನ್ಲಿ ಪ್ಲಾನೆಟ್ ಭೂತಾನ್" ಎಂಬ ಪುಸ್ತಕ ಖರೀದಿಸಿದ್ದು. ಹಲವು ಅಂಗಡಿಗಳನ್ನು ಸುತ್ತಾಡಿ ನಮ್ಮ ಪ್ರವಾಸಕ್ಕೆ ಸೂಕ್ತ ಪುಸ್ತಕ ಖರೀದಿಸುವಲ್ಲಿ ಸ್ವಲ್ಪ ಸಮಯ ಕಳೆದಿತ್ತು. ಬೆಳಗ್ಗೆಯಿಂದ ಕೆಲವು ವಾಹನಗಳೂ, ಅಂಗಡಿಗಳೂ ಸಿಂಗರಿಸಲ್ಪಟ್ಟಿದ್ದು ಕಂಡು ಈದಿನ ಹಬ್ಬವೇನಾದರೂ ಇದೆಯೇ ಎಂದು ಅಂಗಡಿಯಾಕೆಯನ್ನು ವಿಚಾರಿಸಿದೆ. ಹೌದು, ಆದಿನ "ಬಿಷೆಗಾರೋ" ಎಂಬ ಹಬ್ಬವಿತ್ತು. ಈ ಹಬ್ಬ ನಮ್ಮಲ್ಲಿನ ಆಯುಧ ಪೂಜೆಯಂತೆ ಯಂತ್ರಗಳನ್ನು ಪೂಜಿಸುವ ಹಬ್ಬ. ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್" ಕಲಾವಿದರ ಕಲ್ಪನೆಯ ಸುಂದರ ಸೃಷ್ಟಿಗಳಿಗೆ ಪೋಷಣೆಗೈಯುವ ಥಿಂಫುವಿನ ಅದ್ಭುತ ಸ್ಥಳ. ಇಲ್ಲಿ ಕಲಾಪ್ರಿಯರಿಗೆ ಕಣ್ಣಿಗೆ ಹಬ್ಬವುಂಟುಮಾಡುವ ಬಗೆಬಗೆಯ ಕರಕುಶಲ ವಸ್ಥುಗಳನ್ನು ಮಾರಾಟಕ್ಕಿರುತ್ತಾರೆ. ಬಟ್ಟೆಗಳು, ಪೈಂಟಿಂಗುಗಳು, ಒಡವೆಗಳು, ಮುಖವಾಡಗಳು, ಮರಗೆತ್ತನೆ, ಆಟಿಕೆಗಳು.. ಇತ್ಯಾದಿ.. ಎಲ್ಲಾ ರೀತಿಯ ಭೂತಾನೀ ಕಲಾ ವೈವಿಧ್ಯತೆಗಳನ್ನೂ ಇಲ್ಲಿ ಕಾಣಬಹುದು. ಅಲ್ಲಿಂದ ಮುಂದೆ ಡಿಚೆಂಗ್ ಪೊಡ್ರಾಂಗ್ ಎಂಬ ಕಣಿವೆಯೊಂದಕ್ಕೆ ಪ್ರಯಾಣ ಬೆಳೆಸಿದೆವು. ಇಲ್ಲಿನ ಮೊನಾಸ್ಟ್ರಿ (ಮೊನಾಸ್ಟ್ರಿ ಎಂದರೆ ಇಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಾರೆ. ಬೌದ್ಧ ವಿದ್ಯಾರ್ಥಿ ಭಿಕ್ಷುಗಳು ವಿಧ್ಯಾಭ್ಯಾಸ ಮಾಡುವ ಸ್ಥಳವೂ ಹೌದು) ಹಾಗೂ ಮೊನಾಸ್ಟ್ರಿ ಪಕ್ಕದ ಲಖಾನ್(ಬೌದ್ಧ ದೇವಾಲಯ) ಹಾಗೂ ಕಣಿವಯ ಸುತ್ತ ಕಾಣುವ ಸುಂದರ ಪ್ರಕೃತಿಯನ್ನು ಕಣ್ತುಂಬಿಕೊಳ್ಳುತ್ತಾ ವಾಪಾಸು ಕಾಲ್ನಡಿಗೆಯಲ್ಲಿ ಸಾಗಿದೆವು.

ಮಧ್ಯಾಹ್ನ ಊಟಕ್ಕೆಂದು ಭೂತಾನಿ ಅಭಿರುಚಿಯ ಹೊಟೆಲ್ ಒಂದಕ್ಕೆ ಪ್ರವೇಶಿಸಿದ ನಮಗೆ ಗೊತ್ತಾಗಿದ್ದು, ಭೂತಾನೀಯರು ಕೆಂಪಕ್ಕಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಎಮದಾಚಿ(ಎಮ=ಮೆಣಸು, ದಾಚಿ=ಚೀಸ್), ಕೆವದಾಚಿ(ಕೆವ=ಅಲೂ),ಮಶ್ರೂಮ್ ದಾಚಿ ಇಲ್ಲಿನ ಬಹುಮುಖ್ಯ ತಿನಿಸುಗಳು. ಭೂತಾನೀಯರು ಎಷ್ಟು ಖಾರದ ಖಾದ್ಯಗಳನ್ನು ತಯಾರಿಸುತ್ತಾರೆ ಎಂದರೆ ಮೆಣಸಿನ ಕಾಯಿಗೆ ಸ್ವಲ್ಪ ತರಕಾರಿ ಸೇರಿಸಿ ಖಾದ್ಯ ತಯಾರಿಸುತ್ತಾರೆ. ಮೆಣಸು ಇಲ್ಲಿನ ಬಹುಮುಖ್ಯ ತರಕಾರಿ ಎಂದರೂ ತಪ್ಪಾಗಲಾರದು. ಸೂಜ ಎಂಬ ಬಟರ್ ಟೀ ಕೂಡಾ ಇಲ್ಲಿನ ವಿಶೇಷ ಪಾನೀಯ. ಯಾಕ್ ಚೀಸ್, ಉಪ್ಪು ಹಾಗೂ ಸ್ವಲ್ಪವೇ ಸ್ವಲ್ಪ ಹಾಲು ಬೆರೆಸಿ ತಯಾರಿಸುವ ಈ ಪಾನೀಯಕ್ಕೆ ಬಳಸುವ ವಿಶೇಷ ಟೀ ಎಲೆಗಳನ್ನು ಹೊಟೆಲ್ ಮಾಲೀಕನೊಬ್ಬ ನನಗೆ ತೋರಿಸಿದ್ದ. ಅಂತೂ ಭೂತಾನಿನಲ್ಲಿರುವಷ್ಟು ದಿನ ಎಮದಾಚಿ, ಕೆವದಾಚಿ ನನ್ನ ಪ್ರೀತಿಯ ಖಾದ್ಯವಾಗಿ ಹೋಗಿತ್ತು. ಸಸ್ಯಾಹಾರ ತಿಂದು ಬದುಕಬೇಕಿದ್ದ ನನಗೆ ಕೆಂಪಕ್ಕಿ ಅನ್ನ, ರೊಟಿ ಜೊತೆಗೆ ಎಮದಾಚಿ, ಕೆವದಾಚಿ ಬಿಟ್ಟರೆ ಬೇರೆ ಖಾದ್ಯ ಸಿಗುತ್ತಲೂ ಇರಲಿಲ್ಲ. ಇಲ್ಲಿಂದ ಮುಂದೆ ಎಲ್ಲರೂ ಕದಿಂಚೆ (ಧನ್ಯವಾದಗಳು) ಎಂದು ವಂದಿಸುವುದನ್ನೂ, ಲಸ್ಸಾ(ಬಾಯ್) ಎಂದು ಬೀಳ್ಕೊಡುವುದನ್ನೂ ಅಭ್ಯಾಸ ಮಾಡಿಕೊಂಡೆವು.


 

                                    ತ್ರಾಷಿ ಚೊಝಾಂಗ್ ಪಾರ್ಲಿಮೆಂಟ್ ಭವನ

ಥಿಂಪು ಹಾಗೂ ಭೂತಾನಿನ ಕೆಲವು ಪ್ರಮುಖ ಪಟ್ಟಣಗಳಲ್ಲಿ ವೀಕೆಂಡ್ ಮಾರ್ಕೆಟ್ ಎಂಬ ವಾರಾಂತ್ಯದ ತರಕಾರಿ ವ್ಯಾಪಾರ ನಡೆಯುತ್ತದೆ. ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿಗಳನ್ನು ಇಲ್ಲಿ ಮಾರಾಟಕ್ಕಿಡುತ್ತಾರೆ. ವೀಕೆಂಡ್ ಮಾರ್ಕೆಟನ್ನು ಥಿಂಫುವಿನಲ್ಲಿ ನೋಡಲು ಸಾಧ್ಯವಾಗದಿದ್ದರೂ, ಪಾರೊ ನಗರದಲ್ಲಿ ನೋಡಲು ಸಾಧ್ಯವಾಯಿತು.ಥಿಂಫುವಿನಲ್ಲಿ ಹರಿಯುವ ಥಿಂಫುಚು(ಚು=ನದಿ) ಎಂಬ ನದಿಯ ದಡದಲ್ಲಿರುವ ತ್ರಾಷಿ ಚೊಝಾಂಗ್ ಪಾರ್ಲಿಮೆಂಟ್ ಭವನ ಅದ್ಭುತವಾಗಿದೆ. ಇಲ್ಲಿ ಕೂಡಾ ಒಳಗೆ ಪ್ರವೇಶ ನಿಷಿದ್ಧ. ಹಾಗೆಂದೇ ನಾವು ದೂರದಿಂದ ನೋಡಿ, ಬುದ್ಧಾ ಪಾಯಿಂಟ್ ಎಂಬ ಬುದ್ಧನ ದೊಡ್ಡ ವಿಗ್ರಹವೊಂದು ಕೆತ್ತಲ್ಪಟ್ಟಿರುವ ಎತ್ತರದ ಪ್ರದೇಶವೊಂದಕ್ಕೆ ಹೋದೆವು. ಇಲ್ಲಿಂದ ಥಿಂಫು ನಗರವನ್ನೂ ಹಾಗೂ ಸುತ್ತಲಿನ ಹಳ್ಳಿಗಳನ್ನೂ ವೀಕ್ಷಿಸಬಹುದು.

                               ರಾಜಮನೆತನದ ಹೆಂಗಸರಿಗೆ ಕಿರಾ ನೇಯುತ್ತಿರುವ ಹೆಮೊ


ನನ್ನೊಟ್ಟಿಗೆ ಬಂದಿದ್ದ ಗೆಳೆಯರಿಗೆ ಮ್ಯೂಸಿಯುಂ ನೋಡುವುದು ಇಷ್ಟವಿಲ್ಲದ್ದರಿಂದ ಹಾಗೂ ಎಲ್ಲಾರೂ ಸೇರಿ ಥಿಂಫುವಿನಲ್ಲಿ ನೋಡಲು ಏನೂ ಉಳಿದಿಲ್ಲ ಎಂದು ತೀರ್ಮಾನಿಸಿದ್ದರಿಂದ ಮರುದಿನ ಬೆಳಿಗ್ಗೆ ೯ ಗಂಟೆಗೆಲ್ಲಾ ನಾನೊಬ್ಬಳೇ ಇಲ್ಲಿನ ಟೆಕ್ಸ್ ಟೈಲ್ ಮ್ಯೂಸಿಯುಂ ಗೆ ಹೋಗುವುದೆಂದು ತೀರ್ಮಾನಿಸಿದೆ. ಅಂದುಕೊಂಡಂತೆ ಮ್ಯೂಸಿಯುಂ ಬಾಗಿಲು ತೆರೆಯುವ ಮುನ್ನ ನಾನು ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದೆ. ಇಲ್ಲಿ ಭೂತಾನೀಯರ ವಿವಿಧ ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ ಹಾಗೂ ಪ್ರತೀ ಉಡುಗೆಯ ವೈಶಿಷ್ತ್ಯಗಳನ್ನು ವಿವರಿಸುವ ಫಲಕಗಳಿವೆ. ಇಲ್ಲಿ ರಾಜಮನೆತನದವರಿಗೆ ಮಾತ್ರಾ ವಿಶೇಷವಾಗಿ ಬಟ್ಟೆಗಳು ತಯಾರಿಸಲ್ಪಡುತ್ತವೆ. ಭೂತಾನಿನ ಗಂಡಸರು "ಘೋ" ಎಂಬ ಸಾಂಪ್ರದಾಯಿಕ ಉಡುಗೆಯನ್ನೂ, ಹೆಂಗಸರು "ಕಿರಾ" ಎಂಬ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತಾರೆ. ಟೆಕ್ಸ್ ಟೈಲ್ ಮ್ಯೂಸಿಯಂ ನಲ್ಲಿ ಕೆಲಸ ಮಾಡುವ ಯೊಂಗ್ಚಿನ್ ಎಂಬ ಮಹಿಳೆ ರಾಜಮನೆತನದವರ ವಧುವಿನ ಶಾಲ್ ಒಂದಕ್ಕೆ ಎಂಬ್ರಾಯ್ಡರಿ ಮಾಡುತ್ತಿದ್ದಳು. ಈಕೆಯ ಮಾತ್ರುಭಾಷೆ ಕಿಂಗ್ಪಾ. ಈಕೆಗೆ ಕಿಂಗ್ಪಾ, ಝೊಂಕಾ ಹಾಗೂ ಸ್ವಲ್ಪ ಸ್ವಲ್ಪ ಇಂಗ್ಲಿಷ್ ಭಾಷೆ ಬರುತ್ತಿತ್ತು. ಕಿಂಗ್ಪಾ ಎಂಬ ಹೊಸ ಭಾಷೆಯ ಹೆಸರು ಕೇಳಿದ ನನಗೆ ಈ ದೇಶದಲ್ಲಿ ಎಷ್ಟು ಭಾಷೆಗಳು ಚಾಲ್ತಿಯಲ್ಲಿರಬಹುದು ಎಂಬ ಪ್ರಶ್ನೆ ಹುಟ್ಟಿತು. ಭೂತಾನಿನಲ್ಲಿ ೧೫ಕ್ಕೂ ಹೆಚ್ಚು ಭಾಷೆಗಳು ಚಾಲ್ತಿಯಲ್ಲಿವೆಯಂತೆ. ಭೂತಾನಿನ ಪೂರ್ವ ಭಾಗದ ಜನರಿಗೆ ಇಲ್ಲಿನ ರಾಷ್ತ್ರೀಯ ಭಾಶೆ ಝೊಂಕ ಕೂಡಾ ತಿಳಿದಿಲ್ಲವಂತೆ. ಪ್ರತಿಯೊಂದು ಬುಡಕಟ್ಟಿನ ಜನರೂ ಕೂಡಾ ತಮ್ಮದೇ ಆದ ಸಾಂಪ್ರದಾಯಿಕ ಭಾಷೆಯನ್ನು ಹೊಂದಿದ್ದಾರೆ. ಇಷ್ಟು ಪುಟ್ಟ ದೇಶದಲ್ಲಿ ಎಷ್ಟೊಂದು ವಿವಿಧತೆ ಎಂದು ನನಗೆ ಆಶ್ಛರ್ಯವಾಗಿತ್ತು. ಯೊಂಗ್ಚಿನ್ ಇಲ್ಲಿನ "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್"(೧೩ ಆರ್ಟ್ಸ್ ಸ್ಕೂಲ್ ಎಂದು ಕೂಡಾ ಇದನ್ನು ಕರೆಯುತ್ತಾರೆ) ಎಂಬಲ್ಲಿ ೪ ವರ್ಷಗಳ ವಿಶೇಷ ತರಬೇತಿ ಹೊಂದಿದ್ದಳು. ಹೆಮೊ ಎಂಬ ಮಹಿಳೆ ರಾಜಮನೆತನದ ಹೆಂಗಸರಿಗೆ ಕಿರಾ ನೇಯುತ್ತಿದ್ದಳು. ರಾಜಮನೆತನದ ಒಂದು ಬಟ್ಟೆ ತಯಾರಿಸಲು ೧೫ ತಿಂಗಳುಗಳು ಬೇಕಾಗುತ್ತದೆಯಂತೆ. ಹೆಮೋಳಿಗೆ ಇಂಗ್ಲೀಷ್ ಬರುತ್ತಿರಲಿಲ್ಲ ಹಾಗೂ ಝೊಂಕಾ ಕೂಡಾ. ಪೂರ್ವ ಭೂತಾನಿ ಹೆಂಗಸರು ಮುಖ್ಯವಾಗಿ ನೇಕಾರರು. ನೇಕಾರ ಕಾಯಕ ತಾಯಿಯಿಂದ ಮಗಳಿಗೆ ಪರಂಪರಾಗತವಾಗಿ ಬರುತ್ತದೆಯಂತೆ. ಇಲ್ಲಿನ ೧೩ ಆರ್ಟ್ಸ್ ಸ್ಕೂಲಿನಲ್ಲಿ ನೇಕಾರ ತರಬೇತಿ ಇರುವುದಿಲ್ಲ. ಬಟ್ಟೆ ನೇಯುವ ನೂಲನ್ನು ಭಾರತದ ವಾರಣಾಸಿಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಚಳಿಗಾಲದಲ್ಲಿ ಬೆಳಿಗ್ಗೆ ೯ ರಿಂದ ೪ ಗಂಟೆಯವರೆಗೆ, ಹಾಗೂ ಬೇಸಗೆಯಲ್ಲಿ ಬೆಳಿಗ್ಗೆ ೯ ರಿಂದ ೫ ಗಂಟೆಯವರೆಗೆ ಕೆಲಸ ಮಾಡುತ್ತಾರೆ.

ನಂತರ ನಾನು "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್"ಗೆ ತೆರಳಿದೆ. ವಿವಿಧ ರೀತಿಯ ಕರಕುಶಲ ಕಲೆಗಳನ್ನು ಕಲಿಸುವ ಭೂತಾನಿನ ವಿಶೇಷ ಶಾಲೆ ಇದು. ೧೦ನೆಯ ತರಗತಿಯವರೆಗೆ ಸಾಮಾನ್ಯ ಶಿಕ್ಷಣ ಕಲಿತು ಮುಂದೆ ವಿಶಿಷ್ಟ ಕಲೆಯೊಂದಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಲಿಚ್ಚಿಸುವವರಿಗೆ ಸರಕಾರ ವಸತಿ ಹಾಗೂ ವೇತನ ಸೌಲಭ್ಯಗಳೊಂದಿಗೆ ಇಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದೆ. ವೃತ್ತಿ ಶಿಕ್ಷಣ ಎಂದು ನಾನು ಬಳಸಿದ್ದು ಭೂತಾನಿನ ವಿಧ್ಯಾಭ್ಯಾಸ ಹಾಗೂ ಜೀವನ ಶೈಲಿಯ ಕಾಂಟೆಕ್ಸ್ಟ್ ಗೆ ಸಮಾನಾರ್ಥಕವಾಗಿ. ಇಲ್ಲಿ ೪ ವರ್ಷ ಹಾಗೂ ೬ ವರ್ಷ ಶಿಕ್ಷಣ ಪಡೆದ ಪ್ರತಿಯೊಬ್ಬ ವಿಧ್ಯಾರ್ಥಿಯೂ ಕಲಾಪ್ರಾವೀಣ್ಯತೆಯಿಂದಾಗಿ ಸ್ವಂತ ಉದ್ಯೊಗ ಮಾಡಲು ಸಮರ್ಥನಾಗುತ್ತಾನೆ. ಪ್ರಸಿದ್ಧ ಆರ್ಟ್ ಗ್ಯಾಲರಿಗಳಲ್ಲಿ ಕೂಡಾ ಇವರಿಗೆ ವಿಶೇಷ ವೇತನವಿದೆ. ಹಾಗಂತ ಇಲ್ಲಿನ ವಿಧ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತಾ ಕಲಾ ಶಿಕ್ಷಣವನ್ನೇ ಆಯ್ದುಕೊಳ್ಳಬೇಕು. ಯಾರ ಒತ್ತಾಯ ಕೂಡಾ ಇರಬಾರದು. ಇಲ್ಲಿ ಮರಗೆಲಸ, ಎಂಬ್ರಾಯಿಡರಿ, ಪೈಂಟಿಂಗ್.. ಇತ್ಯಾದಿ ಕಲಿಯುತ್ತಿದ್ದ ವಿವಿಧ ವಿದ್ಯಾರ್ಥಿಗಳೊಂದಿಗೆ ನಾನು ಮಾತನಾಡಿದೆ. ನಿಮ್ಮ ವಿಧ್ಯಾಭ್ಯಾಸ ಮುಗಿದ ನಂತರ ಏನು ಮಾಡುತ್ತೀರಿ?? ಎಂದು ಕೇಳಿದೆ. ಹೆಚ್ಚಿನ ಜನರು ತಾವು ತರಬೇತಿ ಹೊಂದಿದ ಕಲಾ ಪ್ರಾಕಾರವನ್ನು ಬಳಸಿಕೊಂಡು ಸ್ವಂತ ಉದ್ಯೋಗ ಮಾಡುವ ಒಲವು ತೋರಿದರು. ಥಿಂಫುವಿನಲ್ಲಿ ಸಾಂಪ್ರದಾಯಿಕ ವೈದ್ಯ ಶಿಕ್ಶಣ ಕಲಿಸುವ ಕಾಲೆಜ್ ಕೂಡಾ ಇದೆ. ಆದರೆ ಸಮಯದ ಅಭಾವದಿಂದ ಇಲ್ಲಿನ "ವಾಲೆಂಟರಿ ಆರ್ಟ್ಸ್ ಸ್ಟುಡಿಯೊ, ರಾಯಲ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಗಳನ್ನು ಸಂದರ್ಶಿಸಲು ಆಸಕ್ತಿಯಿದ್ದರೂ ನನಗೆ ಸಾಧ್ಯವಾಗಲಿಲ್ಲ. ಭೂತಾನಿನಲ್ಲಿ ನಾವು ನೋಡಿದ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ಮೊದಲ ಹಾಗೂ ಕೊನೆಯ ವ್ಯಕ್ತಿ. ಎಲ್ಲ ನಿಯಮಗಳಿಗೂ ಒಂದೊಂದು ಎಕ್ಸೆಪ್ಶನ್ ಇರುತ್ತದಲ್ಲವೇ??..

ಥಿಂಫುವಿನ ಇಮಿಗ್ರೇಷನ್ ಆಫೀಸಿನಲ್ಲಿ ನಾವು ಕೆಲವು ನಿರ್ಭಂಧಿತ ಪ್ರದೇಶಗಳಿಗೆ ಪ್ರವೇಶಿಸಲು ವಿಶೇಷ ಅನುಮತಿ ಪಡೆಯಬೇಕಿತ್ತು. ಥಿಂಫು ಮತ್ತು ಪಾರೊ ನಗರಗಳು ಪ್ರವಾಸಿಗರಿಗೆ ತೆರೆದ ಪ್ರದೇಶಗಳೆಂದು ಅನುಮೋದನೆಯಾಗಿದ್ದರೂ, ಹಾ ಕಣಿವೆ, ಪುನಾಕ, ವ್ಯಾಂಗ್ಡ್ಯೂ, ಟ್ರೊಂಗ್ಸಾ, ಭುಂತಾಂಗ್ ಗಳಿಗೆ ವಿಶೇಷ ಅನುಮತಿ ಪತ್ರ ಪಡೆಯಬೇಕಿತ್ತು. ಬೆಂಗಳೂರಿನ ಆರ್.ಟಿ.ಒ ಆಫೀಸಿನಂತೆಯೇ ನಾವು ಇಡೀ ದಿನ ಇಮಿಗ್ರೇಷನ್ ಆಫೀಸಿನಲ್ಲಿ ಕಳೆದು ಅಂತೂ ಇಂತೂ ಅನುಮತಿ ಪತ್ರದೊಂದಿಗೆ ಹೊರಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇಲ್ಲಿಂದ ಮುಂದೆ ಪಾರೊ ಪಟ್ಟಣದತ್ತ ಮುಖ ಮಾಡಿದೆವು.


ಮುಂದುವರೆಯುತ್ತದೆ.....
 

ಮಂಗಳವಾರ, ಅಕ್ಟೋಬರ್ 2, 2012

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು..ಜೈಗೊನ್ ಪಟ್ಟಣದ ಬೀದಿ

ಶುರುವಾತಿಗೆ ಮುನ್ನ ಭೂತಾನ್ ಬಗ್ಗೆ ಒಂದಷ್ಟು :
ಭೂತಾನ್ ಎಂಬುದು ಹಿಮಾಲಯದ ಪೂರ್ವ ತಪ್ಪಲಿನಲ್ಲಿರುವ ಭಾರತದ ನೆರೆ ರಾಷ್ಟ್ರ. ಭೂ ವಿಸ್ತೀರ್ಣದಲ್ಲಿ ಪುಟ್ಟದಾದರೂ, ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಹೇರಳವಾಗಿ ಉಳಿಸಿಕೊಂಡಿರುವ, ಸರಿ ಸುಮಾರು ಏಳೂವರೆ ಲಕ್ಷ ಜನಸಂಖ್ಯೆ ಹೊಂದಿರುವ ರಾಜಾಢಳಿತವಿರುವ ಸುಂದರ ದೇಶ. ಇಲ್ಲಿನ ರಾಷ್ಟ್ರ ಭಾಷೆ ಜ಼ೊಂಕ. ಇಲ್ಲಿನ ಆಹಾರ ಪದ್ದತಿ ಖಾರವಾದರೂ, ಜನರು ತುಂಬಾ ಸಿಹಿ. ಭೂತಾನ್ ಪ್ರವೇಶಿಸಲು ಭಾರತದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಗಡಿ ಪ್ರದೇಶಗಳಿಂದ ಮಾತ್ರ ಸಾಧ್ಯವಿತ್ತು. ಅಸ್ಸಾಂ ಉಗ್ರರ ನುಸುಳುವಿಕೆ ತಡೆಗಟ್ಟಲು ಅಸ್ಸಾಂ ಗಡಿಯ ಪ್ರವೇಶವನ್ನು ಈಗ ನಿಷೇಧಿಸಲಾಗಿದೆ. ಪಶ್ಚಿಮ ಬಂಗಾಳದ ಗಡಿಪ್ರದೇಶದಿಂದ ಫುಲ್ಷೆಲೋಂಗ್ ನಲ್ಲಿರುವ ಇಮಿಗ್ರೇಶ್ಶನ್ ಆಫೀಸಿನಿಂದ ಅನುಮತಿ ಪಡೆದು ಪ್ರವೇಶಿಸಬಹುದು. ಭಾರತೀಯರಿಗೆ ಹಾಗೂ ಬಾಂಗ್ಲಾದೇಶೀಯರಿಗೆ ವೀಸಾ ಪಡೆಯುವುದು ಬೇಕಿಲ್ಲವಾದರೂ ಪ್ರಪಂಚದ ಇತರ ಭಾಗಗಳವರು ದಿನಕ್ಕೆ ಕಡಿಮೆಯೆಂದರೂ ೨೫೦ ರಿಂದ ೩೦೦ ಯು ಎಸ್ ಡಾಲರ್ ಗಳ ವರೆಗೆ ಭೂತಾನಿನಲ್ಲಿ ವ್ಯಯಿಸುವುದು ಅನಿವಾರ್ಯ.ಭೂತಾನಿನ ಪಾರೋ ಎಂಬ ಪುಟ್ಟ ಪಟ್ಟಣದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವಿಮಾನದಲ್ಲಿ ಪಯಣಿಸುವವರು ಪಾರೋವಿನಲ್ಲಿ ಕೂಡಾ ಅನುಮತಿ ಪಡೆಯಬಹುದು.


:
                            ಜೈಗೊನ್ ನಲ್ಲಿ ಭಾರತ ಹಾಗೂ ಭೂತಾನ್ ಗಡಿಯ ಗೇಟ್

 ಶುರುವಾತು:
ಸೆಪ್ಟೆಂಬರ್ ೧೫ರ ಮುಂಜಾನೆ ೬ ಗಂಟೆಗೆ ಬೆಂಗಳೂರಿನಿಂದ ಹೊರಡುವ ವಿಮಾನದಲ್ಲಿ ಒಟ್ಟು ನಾವು ೫ ಜನ ಕಲ್ಕತ್ತಕ್ಕೆ ಹೊರಟಿದ್ದೆವು. ಕಲ್ಕತ್ತದಿಂದ ಭಾಗ್ದೊಗ್ರಾ ಎಂಬ ಜಾಗದವರೆಗೆ ಮಾತ್ರಾ ನಮ್ಮ ಪ್ರಯಾಣವನ್ನು ಗೊತ್ತು ಮಾಡಿಕೊಂಡಿದ್ದ ನಮಗೆ ಮುಂದೆ ಏನು ಮಾಡಬೇಕೆಂಬುದು ಹಾಗೂ ಯಾವಾಗ ಎಲ್ಲಿಂದ ಹೇಗೆ ಪ್ರಯಾಣಿಸಬಹುದು ಎಂದೆಲ್ಲಾ ಆಲೋಚನೆ ಖಂಡಿತಾ ಇರಲಿಲ್ಲ.ಈ ಪ್ರವಾಸ ಪೂರ್ತಿಯಾಗಿ ಪೂರ್ವನಿರ್ಧಾರಿತವಾಗಿರಬಾರದು ಎಂದು ಮಾತ್ರಾ ನಮ್ಮೆಲ್ಲರ ಬಯಕೆಯಾಗಿತ್ತು. ಈ ಬಾರಿ ಮಾನ್ಸೂನ್ ತಡವಾಗಿ ಶುರುವಾಗಿದ್ದರಿಂದ ಕಲ್ಕತ್ತಾ ಹಾಗೂ ಭೂತಾನ್ ಗಳಲ್ಲಿ ಸಿಕ್ಕಾಪಟ್ಟೆ ಮಳೆ ನಮ್ಮ ಪ್ರವಾಸಕ್ಕೆ ಅಡೆತಡೆಯಾಗಬಹುದು ಎನಿಸಿತ್ತು. ಹಾಗೆಯೇ ಮೊದಲ ದಿನವೇ ಕೋಲ್ಕತ್ತದಿಂದಲೇ ಮಳೆರಾಯ ನಮ್ಮನ್ನು ಬಿಡದೆ ಹಿಂಬಾಲಿಸುವಂತೆ ಕಾಣುತ್ತಿದ್ದ. ಅಂತೂ ಕಲ್ಕತ್ತಾ ದಿಂದ ಭಾಗ್ದೊಗ್ರಾಗೆ ನಮ್ಮ ಕನೆಕ್ಟಿಂಗ್ ಫ್ಲೈಟ್ ಹೊರಡಲು ೪ ಗಂಟೆ ಸಮಯವಿದ್ದಿದ್ದರಿಂದ ಟ್ಯಾಕ್ಸೀ ಗೊತ್ತುಮಾಡಿಕೊಂಡು ಬೆಲುರ್ ಮಟ್ ಮತ್ತು ದ್ವಾರಕೇಶ್ವರ ದೇವಾಲಯ ಸುತ್ತಿ ಬನ್ದೆವು.ಕಲ್ಕತಾದಲ್ಲಿ ಸುತ್ತಾಡುವ ವರೆಗೂ ವಿಪರೀತ ಸೆಖೆ ಹಾಗೂ ಬಿಸಿಲು. ಸುತ್ತಾಟ ಮುಗಿಸಿ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಂತೆ ಒಮ್ಮೆಲೇ ಮಳೆ ಶುರುವಾಗಿತ್ತು. ನನ್ನ ಬೆಂಗಾಲಿ ಗೆಳೆಯನೊಬ್ಬ ನನ್ನನ್ನು ಭೇಟಿ ಮಾದುವವನಿದ್ದ. ಹಾಗೂ ಹೀಗೂ ೪೫ ಕೀ ಮೀ ಪ್ರಾಯಾಣಿಸಿ ನನಗೆ ೧೫ ನಿಮಿಷ ಮುಖ ತೋರಿಸಿ ವಾಪಸಾದ.ಅತಿಯಾದ ಮೋಡ ಮತ್ತು ಮಳೆಯ ಕಾರಣದಿಂದ ಭಾಗ್ದೊಗ್ರಾಗೆ ವಿಮಾನ ೩೦ ನಿಮಿಷ ತಡವಾಗಿ ಹೊರಟಿತ್ತು.

ಭಾಗ್ದೊಗ್ರಾ ವಿಮಾನ ನಿಲ್ದಾಣದಲ್ಲಿ ಕೂಡಾ ದಪ್ಪ ಹನಿಗಳಿಂದ ಕೂಡಿದ ಝಡಿ ಮಳೆ ನಮ್ಮನ್ನು ಸ್ವಾಗತಿಸಿತು. ಇಲ್ಲಿಂದ ಮುಂದೆ ಸಿಲಿಗುಡಿ ಎಂಬಲ್ಲಿ ಆ ರಾತ್ರಿ ತಂಗುವುದೋ ಅಥವಾ ಮುಂದಕ್ಕೆ ಪ್ರಯಾಣಿಸುವುದು ಸೂಕ್ತವೋ ಎಂದು ನಮಗೆ ತಿಲಿಯದಾಗಿತ್ತು.ಭಾಗ್ದೊಗ್ರ ಮತ್ತು ಭೂತಾನ್ ಗಡಿ ಪ್ರದೇಶದ ಮಧ್ಯೆ ನಕ್ಸಲ್ಬಾರಿ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಯೇ ನಕ್ಸಲರು ತಮ್ಮ ಚಟುವಟಿಕೆಗಳನ್ನು ಮೊದಲು ಪ್ರಾರಂಭಿಸಿದ್ದು. ಇವರು ಪ್ರವಾಸಿಗರಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ತಿಳಿಯಲ್ಪಟ್ಟರೂ ನಮ್ಮೊಳಗೆ ಭಯ ಕಾಡುತ್ತಿತ್ತು. ಏನಾದರಾಗಲೀ, ಮರುದಿನ ಮಾಡುವ ೪ ಗಂಟೆ ಪ್ರಯಾಣವನ್ನು ಇಂದೇ ಮಾಡುವ ಎಂದು ತೀರ್ಮಾನಿಸಿ ಟ್ಯಾಕ್ಷ್ಸಿ ಗೊತ್ತು ಮಾಡಿಕೊಂಡು ಹೊರಟೆವು. ನಮ್ಮ ಪ್ರಾರಭ್ದಕ್ಕೆ ಜೋರು ಮಳೆಯಿಂದ ಅಂದೇ ಭೂಕುಸಿತ ಉಂಟಾಗಿ ಗಡಿ ಪ್ರದೇಶಕ್ಕೆ ತೆರಳುವ ಮಾರ್ಗ ಬಂದಾಗಿತ್ತು. ಹಳ್ಳಿ ಮಧ್ಯೆ ಟ್ರಾಫಿಕ್ ಜಾಮ್ ಆಗಿ ೪ ಗಂಟೆಯ ಪ್ರಯಾಣ ೭ ಗಂಟೆ ತೆಗೆದುಕೊಂಡಿತು. ರಸ್ತೆ ಬೇರೆ ಪೂರ್ತಿ ಹಾಳಾಗಿತ್ತು ಜೊತೆಗೆ ನಮ್ಮ ಡ್ರೈವರ್ ಕರೆತಂದಿದ್ದ ಕ್ರಿಸ್ಚಿಯನ್ ಪಾದ್ರಿಯೊಬ್ಬ ನಮ್ಮ ತಲೆ ತಿನ್ನುತ್ತಿದ್ದ. ಒಟ್ಟಿನಲ್ಲಿ ಅವನ ಹ್ಯೂಮನ್ ರೈಟ್ಸ್ ಆಕ್ಟಿವಿಟೀಸ್ ನಮಗೆಲ್ಲ ಜೋಕ್ ಆಗಿಹೋಗಿತ್ತು.

ದಾರಿ ಮಧ್ಯೆ ಜಲ್ದಾಜಾಲ್ದಾ ಪಾರ ಎಂಬ ವೈಲ್ಡ್ ಲೈಫ್ ಸೇಂಕ್ಟುರಿ ಸಿಗುತ್ತದೆ. ಇಲ್ಲಿ ಅತಿಯಾಗಿ ಆನೆಗಳ ಕಾಟವಂತೆ. ಅದಕ್ಕೆಂದೇ ರಸ್ತೆಯ ಇಕ್ಕೆಲಗಳಲ್ಲೂ ಬಿದಿರಿನ ಕಂಬ ನಿಲ್ಲಿಸಿ ಬೆಂಕಿ ಹಚ್ಚಿದ್ದರು, ರಾತ್ರಿ ಆನೆಗಳು ಧಾಳಿ ಮಾಡದಿರಲಿ ಎಂದು. ಇಲ್ಲಿಯ ಜಲ್ಪಾಯ್ ಗುಡಿ ಜಿಲ್ಲೆಯ ಮಾದರಿ ಹಾಟ್ ಎಂಬ ಗ್ರಾಮದಲ್ಲಿ ಅಡಿಕೆ ತೋಟಗಳನ್ನು ನೋಡಿದೆ. ಇಲ್ಲಿಯ ಜನರ ಜೀವನ ಶೈಲಿ ಸರಿಸುಮಾರು ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ಅಡಿಕೆ ಬೆಳೆಗಾರರ ಜೀವನ ಶೈಲಿಗೆ ಹೊನ್ದುತ್ತದೆ. ಅಡಿಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದರು. ಮಧ್ಯೆ ಮಧ್ಯೆ ಬಾಳೆ ಗಿಡಗಳು ಕೂಡ. ತೋಟದ ಆಚೆ ಭತ್ತದ ಗದ್ದೆಗಳು. ಇವರು ಹಾಳೆ ಟೊಪ್ಪಿಗಳನ್ನು ಕೂಡ ಮಾಡಿ ಉಪಯೋಗಿಸುತ್ತಾರಂತೆ. ಅಡಿಕೆ ಸುಲಿಯಲು ನಮ್ಮಂತೆ ಮೆಡಕತ್ತಿ ಮಣೆ ಉಪಯೋಗಿಸುತ್ತಾರಂತೆ. ದಿನನಿತ್ಯ ಊಟಕ್ಕೆ ಬಾಳೆ ಎಲೆ, ಕವಳ ಹಾಕಿಕೊಂಡ ಗಂಡಸರೂ ಹೆಂಗಸರೂ ಅಲ್ಲಲ್ಲಿ ಕಾಣ ಸಿಗುತ್ತಾರೆ. ಅಂತೂ ಇಂತೂ ರಾತ್ರಿ ೧೨:೩೦ ಕ್ಕೆ ಜೈಗೊನ್ ಎಂಬ ಭಾರತದ ಗಡಿಪ್ರದೇಶ ತಲುಪಿದೆವು. ನಾವು ಇಳಿದುಕೊಂಡ ಹೊಟೆಲ್ ಎದುರಿನಲ್ಲಿಯೇ ಭಾರತ ಮತ್ತು ಭೂತಾನ್ ಬೇರ್ಪಡಿಸುವ ಗೇಟ್ ಕಾಣುತ್ತಿತ್ತು. ಮರುದಿನ ನಾವು ಭೂತಾನ್ ಗಡಿ ಪ್ರವೇಶಿಸಬೇಕಿತ್ತು.


                                             ಜೈಗೊನ್ ಮಾರ್ಕೆಟ್..

ಸಾಂಸ್ಕೃತಿಕ ವಿವಿಧತೆಯ ಅನಾವರಣ: 
 ಜೈಗೊನ್ ಎಂಬುದು ಭಾರತ ಮತ್ತು ಭೂತಾನ್ ಬೇರ್ಪಡಿಸುವ ಭಾರತದ ಪಟ್ಟಣವಾದರೆ, ಗೇಟ್ ದಾಟುತ್ತಿದ್ದಂತೆ ಭೂತಾನ್ ಗಡಿಯ  ಫುಲ್ಷೆಲೋಂಗ್ ಸಿಗುತ್ತದೆ. ಜೈಗೊನ್ ಭಾರತದ ಯಾವುದೇ ಪಟ್ಟಣ ದಂತೆ ಇದೆ. ಕಿವಿಗಡವಚ್ಚುವ ವಾಹನಗಳ ಸದ್ದು, ಟ್ರ್ಯಾಫಿಕ್, ರಸ್ತೆಯ ಇಕ್ಕೆಲಗಳಲ್ಲೂ ಗಲೀಜು, ಜಗಳ ಕಾಯುವ ಬೆಂಗಾಲೀಯರು. ಅದೇ  ಫುಲ್ಷೆಲೋಂಗ್ ಪ್ರವೇಶಿಸಿದರೆ ಒಂದೇ ನಿಮಿಷದಲ್ಲಿ ವಾತಾವರಣ ಸಿನಿಮೀಯ ರೀತಿಯಲ್ಲಿ ಬದಲಾಯಿಸಿರುತ್ತದೆ. ಸುವ್ಯವಸ್ಥಿತ ರಸ್ತೆ ಮತ್ತು ಫೂಟ್‍ಬಾತ್,ನಗುತ್ತಾ ಮಾತನಾಡಿಸುವ ಜನರು, ನಿಧಾನಗತಿಯಲ್ಲಿ ಗದ್ದಲವಿಲ್ಲದೇ ಚಲಿಸುವ ವಾಹನಗಳು, ಈ ರೀತಿಯ ವೈವಿಧ್ಯ ಇದೇ ಮೊದಲಬಾರಿ ನೋಡಿದ್ದ ನಾನು ಚಕಿತಗೊಂಡಿದ್ದೆ. ನಾನು ಭೂತಾನ್ ಗೆ ಹೋಗಬೇಕೆಂದಿದ್ದೇನೆ ಎಂದು ತಿಳಿಸಿದಾಗ, ನನ್ನ ಗೆಳೆಯರು ಕೆಲವರು " ಹುಷಾರು ಮಾರಾಯ್ತಿ, ಭೂತಾನ್ ಸೇಫ್ ಜಾಗ ಅಲ್ಲ, ಅಲ್ಲಿನ ಗುಡ್ಡಗಾಡು ಜನ ಅಡಗಿಕೊಂಡು ವಿಷ ಬಾಣಗಳನ್ನು ಬಿಡುತ್ತಾರಂತೆ, ಮಂಗನ ಥರಾ ಎಲ್ಲ ಕಡೆ ಹೋಗಬೇಡ" ಎಂದು ಸಲಹೆ ನೀಡಿದ್ದರು. ನನ್ನನ್ನು ನಂಬಿ, ಕೆಲವು ದಿನಗಳು ನನ್ನ ಜೊತೆ ಬಂದ ಗೆಳೆಯರನ್ನು ಬಿಟ್ಟು ನಾನೊಬ್ಬಳೇ ಕಾಲ್ನಡಿಗೆಯಲ್ಲಿ ಹಳ್ಳಿಗಳನ್ನು ಸುತ್ತಿದ್ದೇನೆ. ರಾತ್ರಿ ಕಗ್ಗತ್ತಲಲ್ಲಿ ಕೂಡ ಜನ ನಿಬಿಡ ಪ್ರದೇಶದಿಂದ ಹೊರಗೆ ಒಬ್ಬಳೇ ಸುತ್ತಾಡಿ ನೋಡಿದ್ದೇನೆ. ಎಲ್ಲೂ ನನಗೆ ಅಪಾಯ ಕಂಡಿಲ್ಲ. ಬದಲಾಗಿ ಪ್ರಪಂಚದಲ್ಲಿ ಹೆಣ್ಣಿಗೆ ಸೇಫ್ ಜಾಗ ಎಂಬುದೊಂದು ಇದೆ ಎಂದು ಮನದಟ್ಟಾಗಿದೆ. ನಾವಿದ್ದಷ್ಟು ದಿನವೂ ಇಲ್ಲಿನ ಜನರು ನಮಗೆ ಮೋಸ ಮಾಡಲು ಪ್ರತ್ನಿಸಲಿಲ್ಲ. ಬದಲಿಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೂಜ಼ಾಂಬೊ ಎಂದು ಮುಂಜಾನೆ ಸುತ್ತಾಡುವಾಗ ವಂದಿಸುತ್ತಿದ್ದರು. ಟ್ಯಾಕ್ಸೀ ಚಾಲಕನಿಂದ ಹಿಡಿದು ಅಂಗಡಿ, ಹೊಟೆಲ್ ಮಾಲೀಕರ ವರೆಗೆ ಎಲ್ಲರೂ ಸಹಾಯ ಮಾಡುವವರೇ. ಇವರು ವ್ಯಾಪಾರ ಮಾಡುವುದೂ ಕೂಡಾ ಸಮಯ ಕಳೆಯಲು, ಅತೀ ದುಡ್ಡು ಮಾಡುವ ನೆಪದಿಂದಲ್ಲ ಎಂದು ನಿಧಾನವಾಗಿ ನನಗೆ ಅರ್ಥವಾಗುತ್ತಾ ಸಾಗಿತ್ತು. ಒಟ್ಟಿನಲ್ಲಿ ಸುಸಂಸ್ಕೃತ ನಾಡಿನಲ್ಲಿ ನಾನಿದ್ದೆ. ಇದಕ್ಕೆಲ್ಲ ಕೆಲವು ಪುರಾವೆಗಳ ಸಹಿತ ಮುಂದೆ ಪೂರ್ತಿಯಾಗಿ ವಿವರಿಸುತ್ತೇನೆ.

ಮುಂದುವರೆಯುತ್ತದೆ....

ಶನಿವಾರ, ಸೆಪ್ಟೆಂಬರ್ 1, 2012

Silence! The court is in Session...

ಈದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಆಡಿಟೋರಿಯಂ ಒಂದರಲ್ಲಿ ಅಲ್ಲಿಯ ವಿಧ್ಯಾರ್ಥಿಗಳ ನಾಟಕ ಪ್ರದರ್ಶನವಿತ್ತು. ಹೇಗೂ ಮಲ್ಲೇಶ್ವರಂಗೆ ಕೆಲಸದ ನಿಮಿತ್ತ ಹೋಗಿದ್ದೆ. ನಾಟಕ ನೋಡದೇ ಬಹಳಾ ದಿನಗಳಾಗಿದ್ದರಿಂದ ಕೆಲಸ ಮುಗಿಸಿ ಐ ಐ ಎಸ್ ಸಿ ಕ್ಯಾಂಪಸ್ ಕಡೆ ಮುಖ ಮಾಡಿದೆ. ವಿಜಯ್ ತೆಂಡುಲ್ಕರ್ ಅವರ  "Silence! The Court is in Session" ಎಂಬ ಇಂಗ್ಲೀಷ್ ನಾಟಕ. ಮಧ್ಯಮ ವರ್ಗದ ಸೋ ಕಾಲ್ಡ್ ಮರ್ಯಾದಸ್ಥ ಸಮಾಜದ ಹುಳುಕುಗಳು, ಭಾರತದ ಕಾನೂನು ವ್ಯವಸ್ಥೆ, ಸಮಾಜ ಸೇವೆಯ ಮುಖವಾಡ ಹೊತ್ತವರ ಒಳಗಿನ (ಅ)ಸಹ್ಯ ಮುಖಗಳು ಮತ್ತು ಪುರುಷ ಪ್ರಧಾನ ಸಮಾಜದ ಷಂಡ ಗಂಡುಗಳ ಅಟ್ಟಹಾಸಗಳ ವ್ಯಂಗ್ಯಗಳನ್ನು ಲಘು ಹಾಸ್ಯದೊಂದಿಗೆ ರಂಗದ ಮೇಲೆ ತಂದ ನಾನ್ ಪ್ರೊಫೆಶನಲ್ ನಾಟಕ ಕಲಾವಿದರ ಪ್ರಯತ್ನ ಮೆಚ್ಚುವಂಥದ್ದು.

"ನ ಸ್ತ್ರೀ ಸ್ವಾತಂತ್ರ್ಯಮ್ ಅರ್ಹತೀ:..." ಎಂಬ ಚಿಕ್ಕ ಪದ್ಯದೊಂದಿಗೆ ಪ್ರಾರಂಭವಾಗುವ ನಾಟಕ, ಹಂತ ಹಂತವಾಗಿ ಒಂದೊಂದೇ ಸಾಮಾಜಿಕ ವ್ಯಂಗ್ಯಗಳನ್ನು ಹದವಾಗಿ ಬಿಚ್ಚಿಡುತ್ತಾ ಸಾಗುತ್ತದೆ. ಜಾನಕಿ ಶಾಲೆಯಲ್ಲಿ ಶಿಕ್ಷಕಿ, ಜೊತೆ ಜೊತೆಗೆ ಹವ್ಯಾಸಿ ನಾಟಕ ಕಲಾವಿದೆ. ೩೪ ವರ್ಷವಾದರೂ ಅವಿವಾಹಿತೆ. ಅಯ್ಯಂಗಾರ್ ಎಂಬ ಸಾಮಾಜ ಸೇವಕನ ನಾಟಕ ಟ್ರೂಪ್ ಒಂದರಲ್ಲಿ ಅಭಿನಯಿಸಲು ಮೈಸೂರಿಗೆ ಬಂದಿರುತ್ತಾಳೆ. ಕಾನೂನಿನ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅವರ ಆ ದಿನದ ನಾಟಕದ ಮುಖ್ಯ ಉದ್ದೇಶ. ಅವರ ಗುಂಪಿನ ನಾಟಕ ಕಲಾವಿದನ ಆಗಮನದಲ್ಲಿ ವಿಳಂಬವಾಗುವುದರಿಂದ ನಾಟಕದ ಹಾಲಿನಲ್ಲಿ ಕೆಲಸ ಮಾಡುವ ಒಬ್ಬ ಸ್ಥಳೀಯ ಹುಡುಗನನ್ನು ೪ ನೆಯ ವಿಟ್ನೆಸ್ ಆಗೆಂದು ಒಪ್ಪಿಸುತ್ತಾರೆ. ಆತನಿಗೆ ಕೋರ್ಟ್ ಬಗ್ಗೆ ಸ್ವಲ್ಪವೂ ಅರಿವಿಲ್ಲದಿದ್ದರಿಂದ ನಾಟಕದ ಟ್ರಯಲ್ ಒಂದನ್ನು ಅಭಿನಯಿಸಿ ಆತನನ್ನು ಸಂಜೆಯ ನಾಟಕಕ್ಕೆ ಅಣಿಗೊಳಿಸಬೇಕೆಂಬುದು ಎಲ್ಲರ ಆತುರ. ಇಲ್ಲಿ, "ನೀನು ಕೋರ್ಟ್ ನೋಡಿದ್ದೀಯಾ??" ಎಂದು ಒಬ್ಬ ಆತನಿಗೆ ಕೇಳುತ್ತಾನೆ. ಆತ "ಇಲ್ಲ" ಎಂದು ಉತ್ತರಿಸುತ್ತಾನೆ. "ಸಿನಿಮಾದಲ್ಲೂ ನೋಡಿಲ್ಲವ" ಎಂದು ಕೇಳಿದಾಗ, "ಇಲ್ಲ ನನಗೆ ಅದರ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಾನೆ". ಒಳ್ಳೆಯದಾಯಿತು, ನೋಡಿ ಪೂರ್ವಾಗ್ರಹ ಪೀಡಿತನಾಗಿಲ್ಲ ಸಧ್ಯ.. ಎಂದು ನಿಟ್ಟಿಸಿರು ಬಿಡುವ ವ್ಯಂಗ್ಯ....

ಜಸ್ಟ್ ಏ ಗೇಮ್....ಎಂದು ತುಂಬಾ ಬಿಗು ವಾತಾವರಣವಿಲ್ಲದೇ ಲಘು ಹಾಸ್ಯಗಳೊಂದಿಗೆ ಕೋರ್ಟ್ ನಲ್ಲಿ ಅಪರಾಧಿ(ಜಾನಕಿ), ವಕೀಲ, ಜಡ್ಜ್ ಹಾಗೂ ಸಾಕ್ಷಿ ಹೇಳುವ ಪಾತ್ರಗಳು ನಟಿಸುತ್ತಿರುವಾಗಲೇ.. ಸಾಕ್ಷಿ ಪಾತ್ರವೊಂದು ಹೇಳುವ ಕಲ್ಪಿತ ಸುಳ್ಳೊಂದು ಜಾನಕಿಯ ವೈಯುಕ್ತಿಕ ವಿಷಯಗಳ ಚರ್ಚೆಗೆ ದಾರಿ ಮಾಡಿಕೊಟ್ಟು, ಆಕೆಯ ಚಾರಿತ್ರ್ಯ ವಧೆ ಮಾಡುವತ್ತ ಎಲ್ಲರ ಗಮನವನ್ನೂ ಕೇಂದ್ರೀಕರಿಸಿ ಹಲವಾರು ದ್ವಂದ್ವಗಳನ್ನೆಬ್ಬಿಸುತ್ತಾ, ಹಲವು (ಅ)ಸಭ್ಯ ಮನಸ್ಸುಗಳ ರಕ್ಕಸ ಮುಖಗಳ ಅನಾವರಣಗೊಳಿಸುತ್ತಾ ಸಾಗುತ್ತದೆ. ಅಪರಾಧಿ ಅನೈತಿಕ ಸಂಭಂಧದಿಂದಾಗಿ ಬಸಿರಾಗಿದ್ದಾಳೆ, ಇದು ಆರೋಗ್ಯಕರ ಸಾಮಾಜದ ಲಕ್ಷಣವಲ್ಲವೆಂದು ಬೊಬ್ಬೆಗಯ್ಯುವ, ಜಾನಕಿಯನ್ನು ಮಾತಿನ ಚೂರಿಯಿಂದ ಇರಿಯುವ ಎಲ್ಲರೂ ಒಂದು ಹಂತದಲ್ಲಿ ಜಾನಕಿಯನ್ನು ಒಬ್ಬಂಟಿಗಳಾಗಿ ಮಾಡಿ ತಾವೇಲ್ಲರೂ ಒಂದಾಗುವುದು ನಾಟಕದ ಟ್ರಯಲ್ ಎಂಬ ಆಟ ಮೊದಲೇ ನಿರ್ಧರಿತ ಹುಳುಕಾಗಿತ್ತೇನೋ ಎಂದು ವೀಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ. "ಈ ಅವಿವಾಹಿತ ಹೆಣ್ಣು ಮದುವೆಯಿಲ್ಲದೇ ಎಲ್ಲ ಪಡೆದುಕೊಂಡಿದ್ದಾಳೆ, ಮದುವೆ ಯಾಕೆ ಬೇಕು??" ಎಂದು ಕೇಳುವ ಅಯ್ಯಂಗಾರ್ ಹೆಂಡತಿ ಪುರುಷ ಪ್ರಧಾನ ಸಾಮಾಜದ ಪುರುಷನ ಇಚ್ಛೆಗೆ ತಕ್ಕಂತೆ ಬದುಕುವ ಹೆಣ್ಣಿನ ಸಂಕೇತವಾಗುತ್ತಾಳೆ. ಆಕೆ ಏನು ಮಾತಾಡಿದರೂ "ಬಾಯ್ಮುಚ್ಚು.. ಮನೆಯಲ್ಲೂ ಮಧ್ಯೆ ಮೂಗು ತೂರಿಸುತ್ತೀಯ, ಇಲ್ಲೂ ಮಧ್ಯೆ ಮೂಗುತೂರಿಸುತ್ತೀಯ" ಎಂದು ಪದೇ ಪದೇ ಗಂಡನಿಂದ ಬೈಸಿಕೊಂಡರೂ ಗಂಡನಿಗೆ ವಿಧೆಯಳಾಗಿರುವ ಹೆಣ್ಣು. ಜಾನಕಿ, ಎಲ್ಲ ಗಂಡಸರ ಜೊತೆಗೆ ಚೆಲ್ಲು ಚೆಲ್ಲಾಗಿ ಮಾತನಾಡುತ್ತಾ, ಹಾಸ್ಯ ಮಾಡುತ್ತಾ ಹೆಣ್ಣಿನ ಮಿತಿಗಳನ್ನು ಮೀರಿದ್ದಾಳೆ  ಸ್ವತಂತ್ರವಾಗಿ ದುಡಿಯುವುದೇ ಅವಳ ದುರಹಂಕಾರಕ್ಕೆ ಕಾರಣ, ಎಂದು ಕಟಕಟೆಯಲ್ಲಿ ನಿಂತು ಜಾನಕೀಯ ಮೇಲೆ ತನ್ನ ವೈಯುಕ್ತಿಕ ಅಸಹನೆಯನ್ನು ಕಾರುವ (ಅ)ಹಿತ ಶತ್ರುವಾಗುತ್ತಾಳೆ. ನಾಟಕದ ಎಲ್ಲಾ ಪಾತ್ರಗಳೂ ಕಟಕಟೆಯಲ್ಲಿ ನಿಂತು ತಮ್ಮ ಕಲ್ಪಿತ ವೈಯುಕ್ತಿಕ ನಿಂದನೆಗಳನ್ನು ಜಾನಕಿಯ ಮೇಲೆ ಹೇರುತ್ತಾ ಅವಳನ್ನು ಮೂಕವಾಗಿಸುತ್ತವೆ. ಕೊನೆಗೆ ನ್ಯಾಯಾಧೀಶ ಕೂಡ ಎಲ್ಲಾ ಕಟ್ಟಲೆಗಳನ್ನೂ ಮುರಿದು ನನ್ನನ್ನು ಕಟಕಟೆ ಗೆ ಸಾಕ್ಷಿಯಾಗಿ ಕರಿ, ನಾನೂ ಕೆಲವೊಂದು ಸಂಗತಿಗಳನ್ನು ಹೇಳಬೇಕು ಎಂದು ಕಟಕಟೆಯಲ್ಲಿ ಸಾಕ್ಷಿಯಾಗಿ ನಿಂತು, ಜಾನಕಿಯ ಅನೈತಿಕ ಸಂಭಂಧದಿಂದಾದ ಬಸಿರಿನಿಂದಾಗಿ ಅವಳಿಗೆ ಶಾಲೆಯಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಸಾಕ್ಷಿ ಹೇಳುತ್ತಾನೆ.

ಜಾನಕಿ ರೂಮಿನಿಂದ ಹೊರಹೋಗಲು ಪ್ರಯತ್ನಿಸುವಾಗ ರೂಮಿನ ಬಾಗಿಲು ಹೊರಗಡೆಯಿಂದ ಲಾಕ್ ಆಗಿರುವುದು,ಅಯ್ಯಂಗಾರನ ಹೆಂಡತಿ ಒತ್ತಾಯಾಪೂರ್ವಕವಾಗಿ ಅವಳನ್ನು ಮತ್ತೆ ಎಳೆತಂದು ಕಟಕಟೆಯಲ್ಲಿ ಕೂರಿಸುವ ದೃಶ್ಯ, ಸಮಾಜ ಹೆಣ್ಣಿಗೆ ಪೂರ್ವಗ್ರಹ ಪೀಡಿತಚೌಕಟ್ಟಿನಿಂದ ಹೊರಹೋಗಲು ಸಾಧ್ಯವಾಗುವ ಎಲ್ಲಾ ಬಾಗಿಲುಗಳನ್ನೂ ಮುಚ್ಚಿ ಬೀಗ ಜಡಿಯುವ, ಬದುಕಿನ ಎಲ್ಲ ಮಜಲುಗಳಲ್ಲೂ ಅನಿವಾರ್ಯವಾಗಿ ಕಟ್ಟಲೆಗಳಿಗೆ ತಲೆಬಾಗುವ, ಸಮಾಜದ ಮಿತಿಗಳಿಗೆ ಹೆಣ್ಣನ್ನೇ ಹೊಣೆಯಾಗಿಸುವ ಸೋ ಕಾಲ್ಡ್ ಮರ್ಯಾದಸ್ಥ ಸಮಾಜದ ಸಾಂಕೇತಿಕ ಅ(ನ)ರ್ಥವಂತಿಕೆಯಾಗುತ್ತದೆ. ಕೊನೆಗೆ ನ್ಯಾಯಾಧೀಶ "ನಿನಗೆ ಹೇಳುವುದೇನಾದರೂ ಇದ್ದರೆ ಹೇಳು" ಎಂದಾಗಲು ಜಾನಕಿಗೆ ಬರೀ "ಸ್ವಗತ" ದಲ್ಲಿ ತನ್ನ ಮನಸ್ಸು ಬಿಚ್ಚಿಡಲು ಸಾಧ್ಯವಾಗುವುದು, ಪಬ್ಲಿಕ್ ಪ್ರೋಸಿಕ್ಯೂಟರ್ "ಅನೈತಿಕ ಸಂಬಂಧದಿಂದಾಗಿ ಬಸಿರಾಗಿರುವುದು ನಮ್ಮ ಸಂಸ್ಕೃತಿಗೆ ಕಳಂಕ ಎಂದೂ ಅಪರಾಧಿ ಕ್ಷಮಿಸಲು ಅರ್ಹಳಲ್ಲ ಆಕೆಗೆ ತಕ್ಕ ಶಿಕ್ಷೆಯಾಗಬೇಕೆಂದು"ವಾದಿಸುವ, ಡಿಫೆನ್ಸ್ ಲಾಯರ್ ಪೂರ್ತಿಯಾಗಿ ಕುಗ್ಗಿ "ಅಪರಾಧಿ ಮಾಡಿರುವುದು ಅಪರಾಧ, ಆದರೆ ಮನುಷ್ಯತ್ವದಿಂದ ಆಕೆಗೆ ಶಿಕ್ಷೆ ಕಡಿಮೆ ಮಾಡಬೇಕೆಂದು" ಬೇಡಿಕೊಳ್ಳುವ ದೃಶ್ಯ ನಮ್ಮ ಕಾನೂನು ಪಾಲಕರ ಅಸಹಾಯಕಾರಿ ಧೋರಣೆಗೆ ಸಂಕೇತವಾಗಿದೆ. ಕೊನೆಗೆ ನ್ಯಾಯಾಧೀಶ ಕೊಡುವ ತೀರ್ಪು: "ನೀನು ಎಸಗಿದ ಅಪರಾಧ ಅತೀ ನೀಚವಾದದ್ದು. ಅದಕ್ಕೆ ಕ್ಷಮೆಯೇ ಇಲ್ಲ. ನಿನ್ನ ತಪ್ಪಿನ ಸಂಕೇತ ಮುಂದಿನ ಪೀಳಿಗೆಗೆ ಉಳಿಯಬಾರದು, ಆದ್ದರಿಂದ ನಿನಗೆ ಬದುಕಲು ಅನುಮತಿಯಿದೆ, ನಿನ್ನ ಹೊಟ್ಟೆಯಲ್ಲಿರುವ ಪಿಂಡವನ್ನು ನಾಶ ಮಾಡು" ಎಂದು ಹೇಳುವುದು (ಅವ)ಮರ್ಯಾದಸ್ಥ ಸಮಾಜದ ಸಮಕಾಲೀನ ಬದುಕಿಗೆ ಕನ್ನಡಿ ಹಿಡಿಯುವಂತಿದೆ.

ಕೊನೆಯದಾಗಿ ಇಡೀ ನಾಟಕದಲ್ಲಿ ಎಲ್ಲರ ಅಭಿನಯ ಗುಣಮಟ್ಟದ್ದಾಗಿತ್ತು. ಯಾರೂ ಕೂಡ ನಾನ್ ಪ್ರೊಫೆಶನಲ್ ಎಂದು ಹೇಳುವಂತಿರಲಿಲ್ಲ. ಸಮಾಜದ ವ್ಯಂಗ್ಯಗಳನ್ನು ಲಘು ಹಾಸ್ಯದೊಂದಿಗೆ ವಿಮರ್ಶೆ ಮಾಡಿದ ಈ ನಾಟಕದಲ್ಲಿ ರಂಗದ ಬಳಕೆ, ಪಾತ್ರ ಪ್ರಯೋಗ,ಲಘು ಸಂಗೀತ, ಹಾಗೂ ಪ್ರೇಕ್ಷಕರನ್ನು ೨:೩೦ ಗಂಟೆ ಸೆರೆ ಹಿಡಿದ ತಂತ್ರಗಾರಿಕೆ  ಅದ್ಭುತವಾಗಿತ್ತು.ಇಲ್ಲಿ ಜಾನಕೀಯ ಪ್ರಿಯಕರ ರಂಗದ ಮೇಲೆ ಬರದೇ ಕಲ್ಪಿತ ಪಾತ್ರವಾಗಿರುವುದು ನಾಟಕಕಾರನ ಸೃಜನಶೀಲತೆಗೆ ಸಾಕ್ಷಿಯಾಗಿದೆ.

ಮಂಗಳವಾರ, ಜುಲೈ 24, 2012

ಪ್ರೀತಿಯ ಪೂರ್ಣಿಮಾ ಮೇಡಂ ಗೆ ಭಾವಪೂರ್ಣ ಶ್ರದ್ದಾಂಜಲಿ...

ಎರಡೂವರೆ ತಿಂಗಳ ಹಿಂದೆ ಸಾಗರಕ್ಕೆ ಹೊರಟಿದ್ದೆ. ಗಜಾನನ ಬಸ್ ಹತ್ತುತ್ತಿದ್ದಂತೆ ಅರೆ.. ಪೂರ್ಣಿಮ ಮೇಡಂ ಎಂಬ ಉದ್ಗಾರ ತನ್ನಿನ್ತಾನೇ ನನ್ನಿಂದ ಹೊರಟಿತು. ಹೇ ಕಾಂತಿ ಎಷ್ಟು ವರ್ಷ ಆಯ್ತು ನೋಡದೇ.. ಎಂದು ಪೂರ್ಣಿಮ ಮಾತಿಗಿಳಿದರು. ೨ ವರ್ಷಗಳ ಸತತ ಹೋರಾಟ ಕ್ಯಾನ್ಸರ್ ಜೊತೆಗೆ, ಮೇಡಂ ಪೂರ್ತಿಯಾಗಿ ಬಾಡಿ ಹೋಗಿದ್ದರು. ಕಾಲೇಜ್ ದಿನಗಳು, ಅನುಸಂಧಾನ ಶಿಬಿರ, ನೀನಾಸಂ ಎಲ್ಲದರ ಬಗ್ಗೆ ಉತ್ಸಾಹದಿಂದಲೇ ಮಾತನಾಡುತ್ತಿದ್ದರೂ, ಮಧ್ಯೆ ಮಧ್ಯೆ ನರಳುತ್ತಾ "ಬೇಡ ಅಂದ್ರೂ ನರಳಿಸುತ್ತೆ ಕಣೇ ಈ ಕಾಹಿಲೆ, ನೀನಿನ್ನೂ ಯಂಗ್.. ಎಂಜಾಯ್ ಯುವರ್ ಲೈಫ್ ಟು ದ ಕೋರ್" ಎಂದು ಕೈ ಹಿಡಿದುಕೊಂಡು ನೋವಿನ ನಗೆ ಬೀರಿದ್ದರು.. ಮನಸ್ಸಿಗೆ ನೋವಾದರೂ ತೋರಿಸಿಕೊಳ್ಳದೇ "ಬೇಗ ಆರಾಮಾಗ್ತೀರಾ ಬಿಡಿ ಮೇಡಂ" ಅಂದಿದ್ದೆ. "ಯಾರಾದ್ರೂ ಹಾಗೆ ಹೇಳ್ತಾ ಇದ್ರೆ ಧೈರ್ಯ ಬರುತ್ತೆ ನೋಡು, ಮನಸ್ಸಿಗೆ ಸಮಾಧಾನ" ಅಂದಿದ್ರು.

ಈಗೀಗ ನೀನು ಕಾಲೇಜ್ ಕಡೆ, ನೀನಾಸಂ ಕಡೆ ಬರೋದೆ ಬಿಟ್ಟು ಬಿಟ್ಟಿದೀಯ .. ಅಶೋಕ್ ಗೆ ಫೋನ್ ಕೂಡ ಮಾಡದೇ ಸುಮಾರ್ ದಿನ ಆಯ್ತು, ನಮ್ಮನೆಲ್ಲ ಮರ್ತಿದೀಯ ಎಂದು ನನ್ನನ್ನು ಪ್ರೀತಿಯಿಂದಲೇ ದೂರಿದರು. ನಾನೂ ಫೋನ್ ಮಾಡ್ತೀನಿ.. ನೀನೂ ಮಾಡೇ.. ಸ್ಟೂಡೆಂಟ್ಸ್ ಹತ್ರ ಮಾತಾಡಿದ್ರೆ ಸಮಾಧಾನ ಆಗುತ್ತೆ ಎಂದು ಪ್ರೀತಿಯಿಂದ, ಉತ್ಸಾಹದಿಂದ ಮಾತನಾಡುತ್ತಲೇ ಇದ್ದರು. ಕೀಮೋಥೆರಪಿಗೆಂದು ಬೆಂಗಳೂರಿಗೆ ಬಂದಿದ್ದೆ, ರಾಜಾರಾಮಣ್ಣ ಒಬ್ಳೆ ಹೋಗ್ಬೆಡ ಅಂದ್ರೂ ಮನ್ಸು ತಡೀಲಿಲ್ಲ. ಅಶೋಕ್ ಒಬ್ರೆ ಇರ್ತಾರೆ, ಅದ್ಕೆ ಧೈರ್ಯ ಮಾಡಿ ಹೊರಟುಬಿಟ್ಟೇ..ನನ್ನ ಪಕ್ಕ ಯಾರೂ ಬರದೇ ಇದ್ರೆ ಇಲ್ಲೇ ಕೂತ್ಕೋ ಅಂತ ಸಾಗರದವರೆಗೂ ಒಟ್ಟಿಗೆ ಕುಳಿತು ಗೆಳತಿಯಂತೆ ಹರಟಿದ್ದ ಮೇಡಂ ಇನ್ನಿಲ್ಲ ಎಂದು ಬೆಳಿಗ್ಗೆ ನನ್ನ ತಮ್ಮ ತಿಳಿಸಿದಾಗ ಮನಸ್ಸಿಗೆ ತುಂಬಾ ನೋವಾಯಿತು.

ಎಲ್ ಬಿ ಕಾಲೇಜಿನ ಸಾಹಿತ್ಯ ವಿಧ್ಯಾರ್ಥಿಗಳಿಗೆ ಮಾತ್ರವಲ್ಲದೆ ವಿಜ್ಞಾನ ಹಾಗೂ ವಾಣಿಜ್ಯ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚಾಗಿದ್ದ, ಪಠ್ಯೇತರ ಚಟುವಟಿಕೆಗಳಿಗೆ ಅತಿಯಾಗಿ ಪ್ರೋತ್ಸಾಹ ನೀಡುತ್ತಿದ್ದ ಪೂರ್ಣಿಮ ಹಾಗೂ ಅಶೋಕ್ ಕಾಲೇಜಿನ ಪ್ರತೀ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚು.

ವಿಧ್ಯಾರ್ಥಿಗಳಿಗೆ ಬರಿಯ ಶಿಕ್ಷಕಿಯಂತಿರದೆ ಗೆಳತಿಯಂತಿದ್ದ, ಅಶೋಕ್ ಅವರ ನೆಚ್ಚಿನ ಗೆಳತಿ ಹಾಗೂ ಬಾಳಸಂಗಾತಿ ಪೂರ್ಣಿಮಾರ ಅಗಲಿಕೆಯ ದು:ಖವನ್ನು ತಡೆದುಕೊಳ್ಳಲು ಪ್ರೀತಿಯ ಅಶೋಕ್ ಸರ್, ಸಾರಂಗ ಹಾಗೂ ಕುಟುಂಬದ ಎಲ್ಲರಿಗೂ ಪ್ರಕೃತಿ ಶಕ್ತಿ ಕೊಡಲಿ... ನಮ್ಮ ಪ್ರೀತಿಯ ಪೂರ್ಣಿಮ ಮೇಡಂಗೆ ಭಾವಪೂರ್ಣ ಶ್ರದ್ಧಾಂಜಲಿ...

ಶನಿವಾರ, ಜೂನ್ 30, 2012

ಉತ್ತರ ಕರ್ನಾಟಕ ಪ್ರವಾಸ, ಭಾಗ-೪

ಮಲಪ್ರಭ ದಂಡೆಯ ಮೀನುಗಾರರು....
 ಪಟ್ಟದಕಲ್ಲಿನಲ್ಲಿ ನಾವು ಆಟೋದಿಂದ ಇಳಿಯುತ್ತಿದ್ದಂತೆ, "ಈ ಬುಕ್ ತಗಳಿ ಮೇಡಂ, ಪಟ್ಟದಕಲ್ಲಿನದು ಪೂರ್ತಿ ಹಿಸ್ಟರೀ ಇದೆ. ಒಳ್ಳೋಳ್ಳೇ ಫೋಟೋಸ್ ಇದೆ" ಎಂದು ಮಕ್ಕಳ ಗೂಪೊಂದು ನಮ್ಮ ಹಿಂದೆ ಬಿತ್ತು. ನಾವು ಹೆಚ್ಚು ಸಮಯ ವ್ಯರ್ಥ ಮಾಡುವ ಗೋಜಿಗೆ ಹೋಗದೇ ದೇವಾಲಯಗಳ ಆವರಣ ಪ್ರವೇಶಿಸಿದೆವು.

ಪಟ್ಟದಕಲ್ಲು..........

ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಸಾಕ್ಷಿಯಾದರೆ..ಪಟ್ಟದಕಲ್ಲು ನಿರ್ದಿಷ್ಟ ಶೈಲಿಯ ವಿಧ ವಿಧದ ಸುಂದರ ಕೆತ್ತನೆಗಳನ್ನೊಳಗೊಂಡ ಸುಮಾರು ೯ ದೇವಾಲಯಗಳ ಆವರಣವನ್ನೊಳಗೊಂಡಿದೆ. ೧೭ ಮತ್ತು ೧೮ನೆಯ ಶತಮಾನದಲ್ಲಿ ಚಾಲುಕ್ಯರು ಕಟ್ಟಿಸಿದ ದೇವಾಲಯಗಳ ಸಂಕೀರ್ಣದಲ್ಲಿ ಪ್ರತೀ ದೇವಾಲಯವೂ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೆತ್ತಲ್ಪಟ್ಟಿದ್ದು ನೋಡುಗರ ಗಮನ ಸೆಳೆಯುತ್ತವೆ.

ಪಟ್ಟದಕಲ್ಲು.......

ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಪ್ರಮುಖ ದೇವಾಲಯಗಳು: ಗಳಗನಾಥ ದೇವಾಲಯ, ವಿರೂಪಾಕ್ಷ ದೇವಾಲಯ, ಜಂಬುಲಿಂಗ ದೇವಾಲಯ, ಸಂಗಮೇಶ್ವರ ದೇವಾಲಯ, ಕಾಡಸಿದ್ದೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶೀ ವಿಶ್ವನಾಥ ದೇವಾಲಯ ಮುಂತಾದವುಗಳು...ಇವುಗಳಲ್ಲಿ ಅತ್ಯಂತ ಹಳೆಯ ದೇವಾಲಯ ಸಂಗಮೇಶ್ವರ ದೇವಾಲಯ ಮತ್ತು ಅತ್ಯಂತ ದೊಡ್ಡದಾದ ದೇವಾಲಯ ವಿರೂಪಾಕ್ಷ ದೇವಾಲಯ ಎಂಬುದು ಆ ಆವರಣದಲ್ಲಿ ನೆಟ್ಟ ಮಾಹಿತಿ ಶಿಲೆಗಳಿಂದ ತಿಳಿಯಲ್ಪಟ್ಟ ವಿಷಯ.ಪಟ್ಟದಕಲ್ಲಿನಿಂದ ಬಾದಾಮಿಗೆ ಹೋಗುವ ದಾರಿಯಲ್ಲಿ ಒಂದು ಜೈನ ಬಸದಿ ಕೂಡ ಇದೆ.

ನಾನು....
 ನಾವು ದೇವಾಲಯಗಳ ಆವರಣದ ಒಂದು ಪಾರ್ಶ್ವದಲ್ಲಿ ಹರಿಯುವ ಮಲಪ್ರಭ ನದಿಯ ದಂಡೆಯ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದು, ನಂತರ ಮಹಾಕೂಟದತ್ತ ಹೊರಟೆವು. ಅಷ್ಟರಲ್ಲಾಗಲೇ ರವಿ ಅಸ್ಥಂಗತನಾಗುವ ತಯಾರಿಯಲ್ಲಿದ್ದ.

                                     ಪಟ್ಟದಕಲ್ಲು.......ದೇವಾಲಯಗಳ ಸಂಕೀರ್ಣ...


ದಟ್ಟ ಕಾನನದ ಮಧ್ಯೆ ಇರುವ ಮಾಹಾಕೂಟ ದಕ್ಷಿಣ ಕಾಶಿಯೇದು ಪ್ರಸಿದ್ದ. ಮಹಾಕೂಟದ ದೇವಾಲಯಗಳ ಸಂಕೀರ್ಣದಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ನಡುವೆ ಸುಂದರವಾದ ಪುಷ್ಕಣಿಯಿದೆ. ಸುತ್ತಲೂ ಶಿವಲಿಂಗ ಹಾಗೂ ವಿವಿಧ ವಿಗ್ರಹಗಳು ಕೆತ್ತಲ್ಪಟ್ಟಿವೆ. ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಅರ್ಧನಾರೀಶ್ವರನ ಕೆತ್ತನೆಯಿದೆ. ಅಗಸ್ತ್ಯ ಮುನಿಗಳು ಇಲ್ಲಿ ವಾಸವಾಗಿದ್ದರೆಂದು, ವಾತಾಪಿ ಗಣಪತಿಯನ್ನು ಪೂಜಿಸುತ್ತಿದ್ದಾರೆಂದೂ ಇಲ್ಲಿನ ಅರ್ಚಕರು ಮಹಾಕೂಟದ ವಿಶೇಷತೆಯನ್ನು ವಿವರಿಸುತ್ತಾ ಹೇಳಿದರು.

                                      ಅರ್ಧ ನಾರೀಶ್ವರ..ಮಹಾಕೂಟ..

ದಕ್ಷಿಣ ಕಾಶಿಯೆಂದು ಪ್ರಸಿದ್ದವಾದ ಮಹಾಕೂಟದ ದೇವಾಲಯಗಳ ಆವರಣದಲ್ಲಿ ಹೊರಗೆ ಕಾಶೀತೀರ್ಥವಿದೆ. ಆಗಲೇ ಕತ್ತಲಾವರಿಸುತ್ತಾ ಬಂದಿದ್ದರಿಂದ ಮಹಾಕೂಟದಲ್ಲಿ ನಾವು ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಸುತ್ತಮುತ್ತ ಕಾಡಿನಿಂದ ಕೂಡಿದ್ದ ಮಹಾಕೂಟದ ದೇವಾಲಯಗಳ ಹೊರ ಆವರಣದಲ್ಲಿ ಇರುವ ಮಂಟಪದಲ್ಲಿ ಕುಳಿತು ಕಟ್ತಲಾವರಿಸಿದ ಮೇಲೆ ವಾಪಸು ಬಾದಾಮಿಗೆ ಹೊರಟೆವು.

                               ಮಹಾಕೂಟ ದೇವಾಲಯಗಳ ಸಂಕೀರ್ಣದ ಹೆಬ್ಬಾಗಿಲು...

ನಾವು ತಂಗಿದ್ದ ಲಾಡ್ಜ್ ಗೆ ಹೋಗಿ, ಸ್ನಾನ ಮಾಡಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಸಿಗುವ ಖಾನಾವಳಿ ಹುಡುಕಾಟದಲ್ಲಿ ತೊಡಗಿದೆವು. ಮರುದಿನ ಮುಂಜಾನೆ ಸೂರ್ಯೋದಯ ನೋಡಲು ಬಾದಾಮಿಯ ಅಗಸ್ತ್ಯ ತೀರ್ಥದ ಬಳಿ ಹಾಜರಿರಬೇಕೆಂದು ನಿರ್ಧರಿಸಿ ನಾನು ಮಲಗಿಯಾಗಿತ್ತು. ದಿನಪೂರ್ತಿ ಸುತ್ತಾಡಿ ದಣಿಡಿದ್ದರಿಂದ ಹಾಗೂ ಹಿಂದಿನ ದಿನ ರಾತ್ರಿ ರೈಲಿನಲ್ಲಿ ನಿದ್ದೆ ಸರಿ ಬರದಿದ್ದರಿಂದಲೂ ಮಲಗುತ್ತಿದ್ದಂತೆ ಕಣ್ಣು ತುಂಬಾ ನಿದ್ದೆ ಆವರಿಸಿತು.


ಮುಂದುವರೆಯುವುದು...........

ಭಾನುವಾರ, ಏಪ್ರಿಲ್ 8, 2012

ಉತ್ತರ ಕರ್ನಾಟಕ ಪ್ರವಾಸ ಭಾಗ- ೩


ಬನಶಂಕರಿ ದೇವಸ್ಥಾನದಿಂದ ನಮ್ಮ ಪಯಣ ಐಹೊಳೆಯತ್ತ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಜೋಳದ ಗದ್ದೆಗಳು. ತೆನೆ ಬಿಟ್ಟು ಕಟಾವಿಗೆ ತಯಾರಾಗಿರುವ ಜೋಳಗಳು, ಇನ್ನೂ ಎಳೆಯ ಜೋಳಗಳು ಹೀಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಗೆ ಬಗೆಯ ಜೋಳದ ತೆನೆಗಳು. ಮಾರು ದೂರಕ್ಕೊಮ್ಮೆ ರಸ್ತೆಯ ಪಕ್ಕದಲ್ಲೇ ಜೊಳ ಹದಮಾಡುವುದರಲ್ಲಿ ಮುಳುಗಿದ ರೈತರು ಹಾಗೂ ಗಟ್ಟಿ ಜೋಳದ ತೆನೆಗಳನ್ನು ನುಂಗಿ ತನ್ನ ಉದರದಿಂದ ಹೊಟ್ಟಿನ ಹೊಗೆ ಬಿಡುವ ಹಾಗೂ ತನ್ನ ಒಂದು ಪಾರ್ಶ್ವದಿಂದ ಹದವಾದ ಜೋಳದ ಪುಟ್ಟ ಕಾಳುಗಳನ್ನು ಹೊರತೂರುವ ರೂವುವೂಮ್ ಎಂದು ಶಬ್ಧ ಮಾಡುವ ಯಂತ್ರ.ಸ್ವಲ್ಪ ಆಟೋ ನಿಲ್ಸಪ್ಪ, ಎಂದು ಡ್ರೈವರ್ ಗೆ ಹೇಳಿ ಕೆಳಗಿಳಿದೆವು. ಸ್ವಲ್ಪ ದೂರದ ವರೆಗೆ ಜೋಳದ ಗದ್ದೆಯೊಳಗೆ ಅಡ್ಡಾಡಿದೆವು. ಕೆಮ್ಮಣ್ಣು, ಕುಂಬಾರ ಮಣ್ಣು, ಕೆಂಪು ಮತ್ತು ಕಪ್ಪು ಮಿಶ್ರಿತ ಹಿಡಿ ಮಣ್ಣು ಎಲ್ಲವನ್ನೂ ನೋಡಿದ ಮಲೆನಾಡಿಗಳಾದ ನನಗೆ ಕಡುಗಪ್ಪು ಮಣ್ಣಿನಲ್ಲಿ ಸೊಗಸಾಗಿ ಎದ್ದ ಜೋಳದ ತೆನೆಗಳನ್ನು ನೋಡವ ಸಂಭ್ರಮ ಹೇಳತೀರದು. ಹಾಗೆಯೇ ಗದ್ದೆಯಿಂದ ವಾಪಸು ಬರುವಾಗ ಅಲ್ಲೇ ಜೋಳ ಹದ ಮಾಡುತ್ತಿದ್ದ ರೈತರ ಜೊತೆ ಮಾತಿಗಿಳಿದೆವು. ಭಾಷೆ ಬರುವುದಿಲ್ಲವೆಂದು ತಿಳಿದು ಕೈ ಸನ್ನೆ, ಬಾಯಿ ಸನ್ನೆ ಮಾಡಿ ಮಾತನಾಡಲು ತೊಡಗಿದ ಅವರಿಗೆ ನಾವು ಕನ್ನಡದವರೇ ಎಂದು ಮಾತನಾಡಲು ಶುರುವಿಟ್ಟೆವು. ನನ್ನ ಕೈಲಿದ್ದ ಕ್ಯಾಮೆರಾ ನೋಡಿದ ಹೆಂಗಸರು ನಮ್ಮ ಫೋಟೋ ತೆಗೆದು ನಮಗೆ ತೋರಿಸ್ರಿ ಎಂದು ಗಂಟು ಬಿದ್ದರು. ಹಾಗೆಯೇ ಮಾತನಾಡುತ್ತ ಅವರ ಫೋಟೋ ತೆಗೆದು ತೋರಿಸಿದೆ. ಕುಷಿಗೊಂಡ ಅವರು ಕಳೆದ ವಾರ ಗಿಡ್ದನೆಯ ಚಡ್ಡಿ ತೊಟ್ಟಿದ್ದ, ೨ ಅಮೆರಿಕಾದ ಹೆಂಗಸರು ಬಗೆ ಬಗೆಯ ಭಂಗಿಗಳಲ್ಲಿ ತಮ್ಮ ಫೋಟೋ ತೆಗೆದುಕೊಂಡು ಹೋದರೆಂದೂ, ಅದನ್ನು ಅಲ್ಲಿಯ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆಂದೂ ಕುಷಿಯಿಂದಲೂ ಸ್ವಲ್ಪ ನಾಚಿಕೆಯಿಂದಲೂ ಹೇಳಲು ತೊಡಗಿದರು.

ನಿಮ್ಮ ಪ್ರಮುಖ ಬೆಳೆ ಜೋಳನ?? ಎಂದು ಕೇಳಿದೆ. ಹೌದೆಂದು ಹೇಳಿದ ಅವರು ೧೦೦ ಎಕರೆ ಪ್ರದೇಶದಲ್ಲಿ ಮಲಪ್ರಭಾ ನದಿಯನ್ನೇ ನಂಬಿಕೊಂಡು ಜೋಳ ಬೆಳೆಯುವ ಪಾಡನ್ನೂ, ಆ ವರ್ಷ ಬೆಳೆದ ಜೋಳ ಒಂದು ವರ್ಷದ ರೊಟ್ಟಿ ಹಿಟ್ಟಿಗೆ ಮಾತ್ರ ಸರಿದೂಗುವುದೆಂದೂ, ಹೀಗೆ ಪ್ರತೀ ವರ್ಷವೂ ಬೆಳೆ ಬೆಳೆಯುವ, ಕಟಾವು ಮಾಡುವ, ತಿನ್ನುವ ಮತ್ತೆ ಬೆಳೆಯುವ ಪರಿಯನ್ನು ಹಂತ ಹಂತವಾಗಿ ಮಾತಿನಲ್ಲಿ ಬಿಚ್ಚಿಟ್ಟರು. ನೀವು ಬೆಳೆದ ಜೋಳವನ್ನು ಮಾರಾಟ ಮಾಡೋದಿಲ್ವ ಎಂದು ಕೇಳಿದೆ. ಇಲ್ಲ, ಮನೆಮಂದಿಗಾಗುವಷ್ಟು ಮಾತ್ರ ಬೆಳೆಯಲು ನಮ್ಮಿಂದ ಸಾಧ್ಯ ಎಂದರು. ೧೦೦ ಎಕರೆ ಹೊಲದಲ್ಲಿ ಸಿಗುವ ಬೆಳೆ ಅಷ್ಟೆನ ಎಂದು ನನಗೆ ದಿಗಿಲಾಯಿತು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ ಎಂದು ಕೇಳಿದೆ. ಸರಿ ಸುಮಾರು ೩೦ ಜನರ ಲೆಕ್ಕ ಸಿಕ್ಕಿತು. ಮನೆಯ ಹಿರಿಯರು ಯಜಮಾನರು, ಪತ್ನಿ, ೫ ಜನ ಪುತ್ರರು, ಅವರ ಹೆಂಡತಿ ಹಾಗೂ ಮಕ್ಕಳು. ೩ ತಲೆಮಾರಿನ ಜನ ಒಂದೇ ಸೂರಿನಡಿ ಒಟ್ಟಾಗಿ ಬದುಕುತ್ತಿದ್ದಾರೆ. ನನಗೆ ಮಲೆನಾಡಿನ ಹವ್ಯಕರ (ಸಾಗರದ ಸುತ್ತಲಿನ ಹಳ್ಳಿಗಳ ) ಚಿತ್ರಣ ಆ ಕ್ಷಣದಲ್ಲಿ ಕಣ್ಣ ಮುಂದೆ ಬಂತು. ಅಪ್ಪ ನೆಟ್ಟ ಅಡಕೆ ಮರವನ್ನು ಇಂಚಿಂಚು ಲೆಕ್ಕ ಹಾಕಿ, ಹೆಂಡತಿ ಬಂದ ತಕ್ಷಣ ಹಿಸೆ ಕೇಳುವ, ಬೇರೆ ಮನೆ ಮಾಡಿ ಮಕ್ಕಳ ಹತ್ತಿರ "ನಿನ್ ಅಜ್ಜ ೪ ಅದ್ಕೆ ಮರ ಬಿಟ್ರೆ ಬೇರೆ ಎಂತು ಕೊಡ್ಲೇ, ಹಿಸೆ ಆದ ತಕ್ಷಣ ಮನೆ ಮಾಡಿ, ಹಾಳು ಬಿದ್ದಿದ್ ತೋಟನ ಕೃಷಿ ಮಾಡ್ಸಿ ನಿಂಗ್ಳನ್ನ ದೊಡ್ಡ ಮಾಡಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಿ ಗೊತಿದ??" ಎಂದು ಕೇಳುತ್ತಾ, ಸುಗ್ಗಿಯ ಕಾಲದಲ್ಲಿ ೨ ತಿಂಗಳು ಕೊನೆಗೊಯಿಲು ಮಾಡಿ ಉಳಿದ ಕಾಲವೆಲ್ಲ ಅಕ್ಕ ಪಕ್ಕದ ಮನೆ ಕಟ್ಟೆ ಪಂಚಾಯತಿ, ಯಾರ್ ಮನೆ ಕೂಸು ಓಡಿ ಹೋತು?? ಯಾರ್ ಮದ್ವೆ ತಪ್ಸಿರೆ ನಾವು ಮಜಾ ತಗಳಲಕ್ಕು,?? ಯಾರ್ ಮನೆ ಹಿಸೆ ಪಂಚಾಯತಿಗೆ ಮೂಗು ತೂರಿಸ್ಲಕ್ಕು?? ಕೊನೆಗೆ ಈ ವರ್ಷದ ಅದ್ಕೆ ರೇಟ್ ಎಸ್ಟ್ ಆಗಗು?? ಎಂದು ವೃಥ ಕಾಲಹರಣ ಮಾಡುವ (ಕಷ್ಟ)ಜೀವಿಗಳ ಎದುರಿಗೆ ಉತ್ತರ ಕರ್ನಾಟಕದ ಜನ ಸುಖ ಜೀವಿಗಳೆಂಬ ತೀರ್ಮಾನಕ್ಕೆ ಬಂದೆ. ಜೋಳದ ಹಿಟ್ಟನ್ನು ಹೇಗೆ ಮಾಡುತ್ತೀರಿ?? ಎಂದು ಕೇಳಿದೆ. ಹೊಲದಿಂದ ಜೋಳ ಕಟಾವು ಮಾಡ್ತೆವ್ರಿ, ಜೋಳದ ತೆನೆ ಬಿಡಿಸಿ ಇಲ್ಲಿ ಹಾಕ್ತೆವಿ (ಎಂದು ಯಂತ್ರದ ಬುರುಡೆ ತೋರಿಸಿದ), ಹಿಟ್ಟು ಮಾಡೋ ಜೋಳ ಮತ್ತು ಹೊಟ್ಟು ಎರಡೂ ಬೇರೆ ಆದ ಮೇಲೆ ಜೋಳವನ್ನು ಕುಟ್ಟಿ ಹಿಟ್ಟು ಮಾಡುತ್ತೇವೆ, ಎಂದು ಜೋಳದ ರೊಟ್ಟಿ ತಿನ್ನುವ ಮುನ್ನ ಇರುವ ಎಲ್ಲ ಪ್ರೊಸೆಸ್ಸ್ ಗಳನ್ನೂ ವಿವರಿಸಿದರು. ಅವರಿಂದ ಬಿಳ್ಕೊಂಡು ಆಟೋ ಏರಿ ಮತ್ತೆ ಐಹೊಳೆಯತ್ತ ಸಾಗಿದೆವು.ಐಹೊಳೆ ಊರನ್ನು ನೋಡುವುದು ಮತ್ತೊಂದು ಸೊಗಸು. ಇದು ದೇಶ ವಿದೇಶಗಳ ಪ್ರವಾಸಿಗರ ಆಕರ್ಷನೆಯಾಗಿದ್ದೂ ಕೂಡ ತನ್ನದೇ ಆದ ಸಾಂಸ್ಕೃತಿಕ ಸೊಗಡನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಊರನ್ನು ಪ್ರವೇಶಿಸುತ್ತಿದ್ದಂತೆ ಚಿಕ್ಕ ಚಿಕ್ಕ ನೂರಾರು ಗುಡಿಗಳು ಕಾಣ ಸಿಗುತ್ತವೆ. ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದ ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಮೊದಲ ಅಡಿಪಾಯ ಎಂದು ಇಲ್ಲಿನ ಪ್ರತೀ ಕಲ್ಲುಗಳನ್ನು ನೋಡಿದರೂ ಗೊತ್ತಾಗುವಂಥಹ ಸತ್ಯ. ಇಲ್ಲಿನ ಮನೆಗಳೂ ಕೂಡ ಅಂಥದೇ ಕೆಂಪು ಕಲ್ಲಿನಿಂದ ಕಟ್ಟಲ್ಪತ್ತಿವೆ. ಮನೆ ಮುಂದೆ ಕುರಿ ಮಂದೆ, ಗೊಬ್ಬರಗುಂಡಿ, ಧೂಳೆಬ್ಬಿಸುವ ಮಣ್ಣಿನ ರಸ್ತೆಗಳು ಇನ್ನೂ ವ್ಯವಹಾರೀಕರಣಗೊಂಡಿಲ್ಲದ ಟಿಪಿಕಲ್ ಹಳ್ಳಿಯ ಚಿತ್ರಣ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಬೇರೆ ಪ್ರವಾಸಿ ತಾಣಗಳಿಗಿಂತ ಬೇರೆಯದೇ ಅನುಭವ ನೀಡುತ್ತದೆ. ಎಲ್ಲಿ ಹೋದರು ನಾನು ಇದರ ಪೂರ್ತಿ ಇತಿಹಾಸ ಹೇಳ್ತೀನಿ ೫ ರೂ ಕೊಡಿ ಸಾ ಎಂದು ಬೆನ್ನ ಹಿಂದೆ ಬೀಳುವ ಮಕ್ಕಳು, ಹೇಳದೆ ಕೇಳದೆ ನಿಲ್ಲಿಸಿಕೊಂಡು ಇತಿಹಾಸ ಹೇಳಿ ೨೦ ರೂ ಕೊಡಿ ಎಂದು ದುಡ್ಡು ಕೀಳುವ ಗಂಡಸರು.
ಸುಮಾರು ೧೨೫ ದೇವಸ್ಥಾನಗಳನ್ನೋಳಗೊಂಡ ಐಹೊಳೆಯಲ್ಲಿ ನಾವು ಮೊದಲು ಭೇಟಿ ನೀಡಿದ್ದು ರಾವನಫಡಿ ಎಂಬ ದೇವಾಲಯಕ್ಕೆ. ಒಂದು ದೊಡ್ಡದಾದ ಶಿಲೆಯಲ್ಲಿ ಗುಹೆಯಂತೆ ಕೊರೆದು ಕೆತ್ತನೆಗಳನ್ನು ಮಾಡಲಾಗಿದೆ. ಅಲ್ಲಿ ನಮ್ಮ ಹಿಂದೆ ಬಿದ್ದ ಮಕ್ಕಳಿಗೆ ಇತಿಹಾಸ ಹೇಳಲು ಹೇಳಿದೆವು. ಒಬ್ಬನ ನಂತರ ಇನ್ನೊಬ್ಬ ಹೀಗೆ ಸುಮಾರು ಮಕ್ಕಳು ತಾವು ಬಾಯಿಪಾಟ ಮಾಡಿಕೊಂಡ ಐಹೊಳೆ ಇತಿಹಾಸವನ್ನು ೨ ನಿಮಿಷದಲ್ಲಿ ಹೇಳಿ ಮುಗಿಸದವು. ಆಮೇಲೆ ಮಾಮೂಲಿಯಂತೆ ಕಾಸು ಕಿತ್ತು ಪೆರಿ ಕಿತ್ತವು. ನಂತರ ಹುಚ್ಚಿಮಲ್ಲಿ ಸಂಕೀರ್ಣಕ್ಕೆ ಭೇಟಿ ನೀಡಿ, ದೇವಸ್ಥಾನಗಳ ಸಂಕೀರ್ಣ ಹಾಗೂ ಪುರಾತತ್ವ ಇಲಾಖೆಯ ಮ್ಯುಸಿಯುಂ ಇರುವ ಸ್ಥಳಕ್ಕೆ ಹೋದೆವು.


ಐಹೊಳೆಯಲ್ಲಿ ಇರುವ ಸುಮಾರು ೧೨೫ ದೇವಸ್ತಾನಗಳನ್ನು ಪುರಾತತ್ವ ಇಲಾಖೆ ೨೨ ಗುಂಪುಗಳಾಗಿ ವಿಂಗಡಿಸಿದೆ. ೩ ಪ್ರಮುಖ ದೇವಾಲಯಗಳನ್ನು ಒಳಗೊಂಡ ಕೊಂಟಿಗುಡಿ ಗುಂಪಿನ ದೇವಸ್ಥಾನಗಳು ಹಾಗೂ ಸುಮಾರು ೩೦ ದೇವಸ್ಥಾನಗಳನ್ನೋಳಗೊಂಡ ಗಳಗನಾಥ ದೇವಾಲಯಗಳ ಗುಂಪು ಇವುಗಳಲ್ಲಿ ಪ್ರಮುಖವಾದವು. ಇವುಗಳ ಜೊತೆ ಜೈನ ಬಸದಿಗಳು ಕೂಡ ಇವೆ. ಹಾಗೆ ಎಲ್ಲವನೂ ಹಂತ ಹಂತವಾಗಿ ನೋಡಿ ಮುಗಿಸಿ, ವಾಪಸು ಹೋಗುವ ದಾರಿಯಲ್ಲಿ ನನಗೆ ಹೆಸರು ನೆನಪಿಲ್ಲದ ಯಾವುದೋ ಹಾಳುಬಿದ್ದ ಗುಡಿಗೆ ಹೋಗಿ ಅದರ ಹಿಂಭಾಗದಲ್ಲಿ ಜುಳು ಜುಳು ಹರಿಯುವ ಮಲಪ್ರಭಾ ದಂಡೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ವಿಶ್ರಮಿಸಿದೆವು.ಇಲ್ಲಿಂದ ಮುಂದೆ ಪಟ್ಟದಕಲ್ಲಿಗೆ ನಮ್ಮ ಪಯಣ ಸಾಗುತ್ತಿತ್ತು. ನಾಸ್ತಿಕಳಾದ ನಾನು ಸುಮಾರು ೫೦ ಗುಡಿಗಳನ್ನು ಸುತ್ತಿದ್ದಕ್ಕೆ ಬರಲೇಬೇಕಾದ ಪುಣ್ಯದ ಬಗ್ಗೆ ನನ್ನ ಗೆಳೆಯ ತನ್ನ ಅಮೋಘ ಕಲ್ಪನೆಗಳನ್ನು ಹರಿಯಬಿಡುತ್ತಿದ್ದ. ಧೂಳೆಬ್ಬಿಸುತ್ತಾ ಇದ್ಯಾವುದೂ ತನಗೆ ಸಂಭಂದವೇ ಇಲ್ಲವೇನೋ ಎಂದುಕೊಂಡ ನಮ್ಮ ಆಟೋ ತನ್ನ ಪಾಡಿಗೆ ತಾನು ಭರ್ರ್ರ್ ಎಂದು ಸದ್ದು ಮಾಡುತ್ತಾ ಚಲಿಸುತ್ತಿತ್ತು.

ಮುಂದುವರೆಯುವುದು ...................