ಗುರುವಾರ, ಜನವರಿ 27, 2011

ದಾಂಡೇಲಿ ಪ್ರವಾಸ ಭಾಗ-೧

ದಾಂಡೇಲಿ ಅಭಯಾರಣ್ಯದಲ್ಲಿ ಸುತ್ತಾಡಬೇಕೆಂಬುದು ನನ್ನ ಬಹು ದಿನಗಳ ಬಯಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಅಂಬಿಕಾನಗರ ಕೆ.ಪಿ.ಸಿ ಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಾವನ ಮನೆಗೆ ಹೋದಾಗಲೆಲ್ಲ ಸೈಕ್ಸ್ ಪಾಯಿಂಟ್, ಬಿ.ಪಿ ಡ್ಯಾಂ ಎಲ್ಲ ಕಡೆ ಸುತ್ತಾಡಿದ್ದೆ. ಮಾವ ಸೂಚಿಸಿದ ನಿರ್ದಿಷ್ಟ ಜಾಗಕ್ಕೇ ಹೋಗುವ ಅನಿವಾರ್ಯತೆಯಿದ್ದ ಕಾರಣ ಅಲ್ಲೆಲ್ಲೋ ಮಧ್ಯದಲ್ಲಿ ಇಳಿದು ಕಾಡು ಸುತ್ತುವ ನನ್ನ ಅತೀ ಉತ್ಸಾಹವನ್ನು ಅದುಮಿಕೊಂಡು ಕೂರುವ ಅನಿವಾರ್ಯತೆಗೆ ಕಟ್ಟುಬಿದ್ದಿದ್ದೆ. ಮತ್ತೆ ಒಂದು ವರ್ಷದಿಂದ ಅಲ್ಲಿಗೆ ಹೋಗುವ ನನ್ನ ಮಹದಾಸೆಯನ್ನು ಈಡೇರಿಸಿಕೊಳ್ಳಬೇಕೆಂದು ಹರಿಯ ಜೊತೆ ಚರ್ಚಿಸಿ, ಹೋಗೋಣವೆಂದು ನಿರ್ಧರಿಸಿ ದಾಂಡೇಲಿಯ ಬಗ್ಗೆ ಎಲ್ಲ ವಿವರಗಳನ್ನೂ ಕಲೆ ಹಾಕಲು ಶುರುವಿಟ್ಟೆವು. ದಾಂಡೇಲಿ ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿ ಬರುವ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾಗೂ ವಿವಿಧ ಪ್ರಭೇಧಗಳ ಸಸ್ಯ ಮತ್ತು ಜೀವ ಸಂಕುಲಗಳನ್ನು ಒಳಗೊಂಡ ಅಭಯಾರಣ್ಯ.

(ರಾತ್ರಿ ರೈಲಿನಲ್ಲಿ)

ಕಾಳೀ ನದಿಯಲ್ಲಿ ರಾಫ್ಟಿಂಗ್ ಬೇಡವೆಂದು ನಾವು ಮೊದಲೇ ನಿರ್ಧರಿಸಿಯಾಗಿತ್ತು. ವಾರಾಹಿ ನದಿಯಲ್ಲಿನ ನಮ್ಮ ರಾಫ್ಟಿಂಗ್ ಅನುಭವವೂ ಹಾಗೂ ನಮ್ಮ ಪ್ರವಾಸ ೨ ದಿನಗಳ ಮಟ್ಟಿಗೆ ಮಾತ್ರಾ ಸೀಮಿತವಾಗಿದ್ದರಿಂದಲೂ ಹೆಚ್ಹು ಕಾಲಹರಣ ಮಾಡುವ ಆಲೋಚನೆಗಳು ನಮ್ಮಲ್ಲಿರಲಿಲ್ಲ. ಮೊದಲೇ ನಿಗದಿಯಾದಂತೆ ಮಾನ್ದಳಪಟ್ಟಿ ಪ್ರವಾಸ ಮುಗಿಸಿಬಂದ ಮುಂದಿನ ವಾರಾಂತ್ಯದಲ್ಲೇ ನಾವು ದಾಂಡೇಲಿಗೆ ಹೊರಟಿದ್ದು. ಈ ಬಾರಿ ನನ್ನ ಗೆಳೆಯ ಸೂಧರ್ ತಮಿಳಿಯನ್ ಆಗಿದ್ದರಿಂದ ನಮ್ಮೆಲ್ಲ ಕಾಡು ಹರಟೆಗಳನ್ನೂ ಇಂಗ್ಲೀಷಿನಲ್ಲಿ ಮಾಡುವ ಧರ್ಮಸಂಕಟಕ್ಕೆ ಸಿಲುಕಿದ್ದೆವು. ಇಲ್ಲವಾದರೆ ಮತ್ತೆ ಅವನಿಗೆ ನಮ್ಮೆಲ್ಲ ಜೋಕುಗಳನ್ನೂ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಬೇಕಿತ್ತು.ಇದರ ಮಧ್ಯದಲ್ಲೇ ಹರಿ ಒಂದು ಎಡವಟ್ಟು ಕೆಲಸ ಮಾಡಿದ್ದ. ಶ್ರೀನಿಧಿ ಹಾಗೂ ಶುಭ ನಮ್ಮೊಟ್ಟಿಗೆ ಬರುವುದು ಕೊನೆಯ ಕ್ಷಣದಲ್ಲಿ ರದ್ದಾದುದರಿಂದ ಅವರ ರಿಸರ್ವೇಶನ್ ಕ್ಯಾನ್ಸಲ್ ಮಾಡಿಸಬೇಕಿತ್ತು. ರೇಖಾಳ ಗೆಳೆಯನೊಬ್ಬ ಬರುತೇನೆ ಎಂದು ಒಪ್ಪಿಕೊಂಡಿದ್ದನ್ನು ಹರಿ ಮರೆತುಬಿಟ್ಟಿದ್ದ.ಹಾಗಾಗಿ ಶ್ರೀನಿಧಿಯ ಟಿಕೆಟನ್ನು ಕ್ಯಾನ್ಸಲ್ ಮಾಡಿಸಿ ಚೇತನ್ ಗೆ ಸೆಕೆಂಡ್ ಕ್ಲಾಸ್ ನಲ್ಲಿ ಬರುವ ಧರ್ಮಸಂಕಟಕ್ಕೆ ಸಿಲುಕಿಸಿದ್ದ.

(ಓಪನ್ ಜೀಪಿನಲ್ಲಿ ಪೋಸ್ ಕೊಡುತ್ತಾ)

ಹೇಗಾದರೂ ಮಾಡಿ ಚೇತನ್ ನನ್ನು ನಮ್ಮೊಟ್ಟಿಗೆ ಕೂರಿಸಿಕೊಳ್ಳಬೇಕೆಂದು ಟಿಸಿಯ ಹತ್ತಿರ ರೈಲು ಹೊರಡುವ ಮುಂಚೆಯೇ ನಾವು ಡೀಲ್ ಮಾಡುತ್ತಿರುವುದನ್ನು ನೋಡಿ ಅಕ್ಕ ಪಕ್ಕದವರೆಲ್ಲ ನಕ್ಕಿದ್ದರು. ಟಿಸಿ ನಮ್ಮಿಂದ ೫೦೦ ರೂ ಕೀಳಬೇಕೆಂದು ಪ್ರಯತ್ನಿಸುತ್ತಿದ್ದ. ಆಮೇಲೆ ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಸುಮಾರು ಜನ ಸ್ಲೀಪರ್ ಕೋಚ್ ನಲ್ಲಿ ಅಲ್ಲಲ್ಲಿ ನಿಂತಿದ್ದು ನೋಡಿ ಅನ್ಯಾಯವಾಗಿ ನಾವು ಟಿಸಿ ಮಾತಿಗೆ ಪಕ್ಕಾಗಿ ಬಕರಗಳಾಗಲಿಲ್ಲ ಎಂದು ಸಮಾಧಾನವಾಯಿತು.

(ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿಯಲ್ಲಿ)

ಬೆಳಿಗ್ಗೆ ೯ ಗಂಟೆ ಸುಮಾರಿಗೆ ಅಳ್ನಾವರ ರೈಲ್ವೆ ಸ್ಟೇಷನ್ ತಲುಪಿದೆವು. ಆಗಲೇ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರ ಸ್ಟೇಷನ್ ಹೊರಗಡೆ ನಮಗಾಗಿ ಕಾಯುತ್ತಾ ನಿಂತಿದ್ದರು.ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿದ್ದುದರಿಂದ ಹೋಂ ಸ್ಟೇ ಗೆ ಹೋಗುವ ಮೊದಲೇ ತಿಂಡಿ ತಿಂದು ನಂತರ ರೆಸಾರ್ಟ್ ಗೆ ಹೋಗಿ ಸ್ನಾನ ಮುಗಿಸಿ ಸೀದಾ ಸಿನ್ಥೆರಿ ರಾಕ್ಸ್ ಗೆ ಪ್ರಯಾಣ ಬೆಳೆಸಿದೆವು. ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿ ಪೂರ್ತಿ ದಟ್ಟ ಅರಣ್ಯಗಳಿಂದ ಕೂಡಿದ್ದರಿಂದ ನಮಗೆ ಆಚೀಚೆ ಇಣುಕಲು ಅನುಕೂಲವಾಗಲೆಂದು ಮಲ್ಲಿಕ್ ತನ್ನ ಜೀಪಿನ ಮೇಲ್ಭಾಗದ ಹೊದಿಕೆಯನ್ನು ತೆಗೆದುಬಿಟ್ಟಿದ್ದ.

(ಶಿಲೆಯ ಬಗ್ಗೆ ಪರಿಚಯಿಸುವ ಫಲಕ)

ಮತ್ತೊಮ್ಮೆ ನನಗೆ ಅಲ್ಲೆಲ್ಲಿಯಾದರೂ ಇಳಿದುಕೊಂಡು ಕಾಡು ಸುತ್ತುವ ಬಯಕೆಯಾಗುತ್ತಿತ್ತು.ಆದರೆ ನಮ್ಮ ಗೈಡ್ ಅದಕ್ಕೆಲ್ಲ ಆಸ್ಪದ ಕೊಡುವಂತಿರಲಿಲ್ಲ.ಕಾಡೊಳಗೆ ಹೋಗಲು ಫಾರೆಸ್ಟ್ ಡಿಪಾರ್ಟ್ಮೆಂಟಿನ ಪರ್ಮಿಶನ್ ಬೇಕೆಂದೂ, ನಾಳೆ ಕವಳ ಕೇವ್ಸ್ ಗೆ ಹೋಗುವಾಗ ಸ್ವಲ್ಪ ದೂರ ಟ್ರೆಕ್ಕಿಂಗ್ ಮಾಡಬೇಕೆಂದೂ ಹೇಳಿ ನನ್ನ ಮತ್ತು ಸೂಧರ್ ನ ಆಸೆಗೆ ತಣ್ಣೀರೆರಚಿದ್ದ.


ಅಂತೂ ಇಂತೂ ಸಿನ್ಥೆರಿ ರಾಕ್ಸ್ ತಲುಪಿದೆವು. ಸಿನ್ಥೆರಿ ರಾಕ್ಸ್ ಕಾಳಿ ನದಿ ಹರಿಯುವ, ವಲ್ಕನೋ ಆಕ್ಟಿವಿಟೀಸ್ ಗಳಿಗೆ ಸಿಕ್ಕಿ ರೂಪತಳೆದ ಬಂಡೆ ಕಲ್ಲುಗಳಿರುವ ಸುಂದರವಾದ ಪ್ರದೇಶ. ಮೇಲಿನಿನ ಕೆಳಗಿನವರೆಗೂ, ಪ್ರತಿ ಹೆಜ್ಜೆಗೂ ಅಲ್ಲಿ ಯಾವ ರೀತಿಯ ಕಲ್ಲುಗಳಿವೆ ಮತ್ತು ಅದರ ವಿಶೇಷತೆಗಳೇನೆಂದು ವಿವರಿಸಿರುವ ಫಲಕಗಳಿವೆ.(ಸಿನ್ಥೆರಿ ಬಂಡೆಗಳ ಮೇಲ್ನೋಟ)
(ಸಿನ್ಥೆರಿ ಬಂಡೆಗಳ ಮೇಲೆ)

ಸಿನ್ಥೆರಿ ರಾಕ್ಸ್ ನೋಡಿ ವಾಟರ್ ಗೇಮ್ಸ್ ಆಡಿರೆಂದು ನಮ್ಮ ಗೈಡ್ ಅದ್ಯಾವುದೋ ರೆಸಾರ್ಟ್ ಗೆ ನಮ್ಮನ್ನು ಕರೆದೊಯ್ದ. ನಾವು ವಾಟರ್ ಗೇಮ್ಸ್ ಆಡಿದರೆ ತನಗೆ ಕಮಿಶನ್ ಸಿಗುತ್ತದೆ ಎಂಬ ಆಸೆ ಅವನಿಗೆ. ರಾಫ್ಟಿಂಗ್, ಕಯಾಕಿಂಗ್ ಯಾವುದೂ ನಮಗೆ ಬೇಡವೆನಿಸಿದ್ದರಿಂದ ಜಕ್ಕುಜಿ ಬಾತ್ ಆಡೋಣವೆಂದು ಹೊರಟರೆ ನೀರಿನ ಒಳಹರಿವು ಹೆಚ್ಹಿದ್ದುದರಿಂದ ಇನ್ನೂ ಒಂದು ಗಂಟೆ ಕಾಯಬೇಕಾಗಬಹುದೆಂದು ಹೇಳಿದ. ಸರಿ, ಇಲ್ಲಿ ಕಾಲಹರಣ ಮಾಡುವುದು ಬೇಡವೆಂದು ತೀರ್ಮಾನಿಸಿ ಸೈಕ್ಸ್ ಪಾಯಿಂಟ್ ಗೆ ಹೋಗೋಣವೆಂದರೆ ಭವಿತ್ ತಾನು ನೀರಿಗಿಳಿಯಲೇಬೇಕು, ಇಲ್ಲವಾದರೆ ಟ್ರಿಪ್ ಬಂದದ್ದೇ ವ್ಯರ್ಥ ಎಂದು ತಗಾದೆ ತೆಗೆದ. ಇವನ ತಿಕ್ಕಲು ಬೇಡಿಕೆಗೆ ಎಲ್ಲರೂ ಅಸ್ತು ಎಂದು ಎಲ್ಲೋ ಒಂದು ಕಡೆ ಕಾಳಿ ನದಿಯ ಅಬ್ಬರ ಕಡಿಮೆ ಇರುವಲ್ಲಿ ನೀರಾಟವಾಡಿ ನಮ್ಮ ರೆಸಾರ್ಟ್ ಗೆ ವಾಪಾಸಾದೆವು.
(ಕಾಳೀ ನದಿ)

ಇಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ ಪರ್ ಕಿಲೋಮೀಟರು ಲೆಕ್ಕದಲ್ಲಿ ಬಾಡಿಗೆಗೆ ವಾಹನವನ್ನು ಗೊತ್ತು ಮಾಡಿಕೊಂಡಾಗ ಎಷ್ಟು ಹುಶಾರಾಗಿದ್ದರೂ ಸಾಲದು. ನಾವು ಅನುಭವಸ್ಥರಿಂದ ಮೊದಲೇ ತಿಳಿದುಕೊಂಡು ಯಾವ ಯಾವ ಜಾಗವನ್ನು ನೋಡಬಹುದು?? ಅದೇ ರೂಟಿನಲ್ಲಿ ಇನ್ಯಾವ ಜಾಗಗಳು ಸಿಗುತ್ತವೆ ಮತ್ತು ಒಂದು ದಿನದಲ್ಲಿ ಅಂದಾಜು ಎಷ್ಟು ಜಾಗಗಳನ್ನು ನೋಡಬಹುದೆಂದು ನಿರ್ಧರಿಸಿರುವುದು ಒಳಿತು. ಇಲ್ಲವಾದಲ್ಲಿ ಗೈಡುಗಳು ಮತ್ತು ಜೀಪ್ ಡ್ರೈವರ್ ಮೋಸ ಮಾಡುವ ಸಂಭವಗಳು ಹೆಚ್ಹು. ಸೂಪ ಡ್ಯಾಂ ಗೆ ಪ್ರವೇಶ ನಿಷಿದ್ದ ಎಂದು ಗೊತ್ತಿದ್ದೂ ನಮ್ಮ ಗೈಡ್ ಸುಮ್ಮನೆ ನಮ್ಮನ್ನು ಅಲ್ಲಿಗೆಲ್ಲ ಕರೆದೊಯ್ದು ಸುತ್ತಿಸಿದ. ಬದಲಾಗಿ ನೈಟ್ ಟ್ರೆಕ್ ಹೋಗಬೇಕೆಂದು ಮೊದಲೇ ಪರ್ಮಿಶನ್ ತೆಗೆದುಕೊಂಡಿದ್ದರಿಂದ ನಾವು ಸ್ವಲ್ಪ ಮುಂಚೆ ಹೋಗಿ ಕಾಡಿನಲ್ಲಿ ಸುತ್ತಬಹುದಿತ್ತು. ದಾಂಡೇಲಿಯಲ್ಲಿ ಅಪರೂಪದ ಹಕ್ಕಿಗಳು ನೋಡಲು ಸಿಗುತ್ತವೆಯೆಂದು ಕೇಳಿದ್ದೆ.ರಾತ್ರಿ ಕಾಡಿನಲ್ಲಿ ನಿಶ್ಯಬ್ದವಾಗಿ ಕುಳಿತು ಕಾದಿದ್ದರೆ ಯಾವುದಾದರೂ ಕಾಡುಪ್ರಾಣಿಗಳನ್ನು ನೋಡುವ ಸಂಭವವೂ ಇತ್ತು. ಸೂಧರ್ ಮತ್ತು ನನ್ನನ್ನು ಬಿಟ್ಟು ಇನ್ಯಾರಿಗೂ ಅಂತಹ ಮಹಾ ಹುಚ್ಹಿಲ್ಲದಿದ್ದುದೂ, ನಮ್ಮ ಕರ್ಮಕ್ಕೆ ನಮ್ಮ ಗೈಡ್ ಕೂಡ ಓವರ್ ಆಕ್ಟ್ ಮಾಡುತ್ತಿದ್ದುದರಿಂದಲೂ, ಇಲ್ಲಿ ಯಾವ ಪ್ರಾಣಿಗಳನ್ನೂ ನೋಡಲು ಸಾಧ್ಯವಿಲ್ಲವೆಂದು ನಮಗೆ ಮನದಟ್ಟಾಗಿ ಹೋಯಿತು.

(ನಮ್ಮ ರಾತ್ರಿ ಸುತ್ತಾಟ)

ರಾತ್ರಿ ಟ್ರೆಕ್ ಮಾಡುವುದು ಎಂದರೆ ಸುಮ್ಮನೆ ಟಾರ್ಚ್ ಹಿಡಿದುಕೊಂಡು ಕಾಡೊಳಗೆ ಹರಟೆ ಹೊಡೆಯುತ್ತಾ ವಾಕ್ ಹೋಗುವುದು ಎಂದು ನಂಬಿದ್ದ ಗುಂಪಿನ ಮಧ್ಯೆ ನಾನಿದ್ದೆ. ಆ ದಿನದ ನೈಟ್ ಟ್ರೆಕ್ ಅನವಶ್ಯಕ ನಡೆದಾಟ ಎಂದು ತೀವ್ರವಾಗಿ ಭಾಸವಾಗಲು ತೊಡಗಿ ದಾಂಡೇಲಿ ಪ್ರವಾಸ ವ್ಯರ್ಥವಾಯಿತೇನೋ ಎನಿಸಲು ತೊಡಗಿತು.ಕಾಡು ಸುತ್ತುವಾಗ ನಮ್ಮ ಚಿಕ್ಕ ಪುಟ್ಟ ಚಲನ ವಲನ ಗಳೂ ಎಚ್ಹರಿಕೆಯಿಂದ ಕೂಡಿರಬೇಕು. ಸ್ವಲ್ಪ ಹೆಜ್ಜೆ ಸದ್ದು ಕೇಳಿದರೂ ಪ್ರಾಣಿ, ಪಕ್ಷಿಗಳು ಹತ್ತಿರ ಸುಳಿಯುವುದಿಲ್ಲ. ನಮ್ಮ ಮನೆಯ ಹತ್ತಿರ ಹಕ್ಕಿ ನೋಡಲು ಹೋಗುವಾಗೆಲ್ಲ ಇದನ್ನು ಗಮನಿಸಿದ್ದೇನೆ. ನಮ್ಮಿಂದ ಏನೂ ಅಪಾಯವಿಲ್ಲವೆಂದು ಮನದಟ್ಟಾದರೆ ಮಾತ್ರ ಇವು ನಮ್ಮನ್ನು ನಿರ್ಲಕ್ಷಿಸಿ ತಮ್ಮ ದಿನಚರಿಯನ್ನು ಮುಂದುವರೆಸುತ್ತವೆ. ನಿಂತಲ್ಲೇ ನಿಂತು, ಸದ್ದು ಮಾಡದೆ ಸುಮ್ಮನೆ ಗಮನಿಸಿದರೆ ಮಾತ್ರ ಪ್ರಕೃತಿ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಸಾಕಷ್ಟು ಪೇಶಿಯೆನ್ಸ್ ಬೇಕು. ಒಂದೆರಡು ದಿನದ ಪ್ರವಾಸಗಳು ಏನಾಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಸುಮ್ಮನೆ ಇವರಂತೆ ನಾನೂ ಮಾತನಾಡುತ್ತ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡೆ.
(ಕ್ಯಾಂಪ್ ಫೈರ್)

ನೈಟ್ ಟ್ರೆಕ್ ಎಂಬ ತಿರುಗಾಟ ಮುಗಿಸಿ, ರೆಸಾರ್ಟ್ ಗೆ ವಾಪಾಸಾಗಿ ಸ್ವಲ್ಪ ಹೊತ್ತು ಕ್ಯಾಂಪ್ ಫೈರ್ ಮಾಡಿ, ಊಟ ಮಾಡಿ, ನಾಳೆ ಬೆಳಗ್ಗೆ ಮುಂಚೆ ಎದ್ದು ಕವಳ ಕೇವ್ಸ್ ಗೆ ಹೊರಡಬೇಕೆಂದು ಎಲ್ಲರೂ ೫:೩೦ ಗೆ ಹೊರಡಲು ತಯಾರಿರಬೇಕೆಂದೂ ಒಪ್ಪಂದ ಮಾಡಿಕೊಂಡು ಎಲ್ಲರೂ ಮಲಗಿದೆವು.
ಮುಂದುವರೆಯುವುದು.....