ಶನಿವಾರ, ಫೆಬ್ರವರಿ 5, 2011

ದಾಂಡೇಲಿ ಪ್ರವಾಸ ಭಾಗ-೨

ದಾಂಡೇಲಿ ಪ್ರವಾಸದ ಮೊದಲ ಭಾಗವನ್ನು ಓದಬೇಕಾದರೆ ಈ ಲಿಂಕನ್ನು ಕ್ಲಿಕ್ಕ್ಕಿಸತಕ್ಕದ್ದು http://nirantarahudukaatadalli.blogspot.com/2011/01/blog-post.html

ಪ್ರವಾಸದ ೨ನೆಯ ದಿನ:
ಮರುದಿನ ಎಲ್ಲರೂ ಮುಂಚೆ ಎದ್ದು ಕವಳ ಗುಹೆ ನೋಡಲು ಹೊರಟೆವು. ಕವಳ ಕೇವ್ಸ್ ಗೆ ಹೋಗುವ ಮುನ್ನ ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಅನುಮತಿ ತೆಗೆದುಕೊಳ್ಳುವುದು ಅವಶ್ಯಕ. ೩-೪ ಕಿ. ಮೀ ಗಳಷ್ಟು ಕಾಡಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬೆಳಿಗ್ಗೆ ಮುಂಚೆ ನಡೆಯುವುದು ಒಳ್ಳೆಯ ಅನುಭವ. ದಾರಿ ಪೂರ್ತಿ ದಟ್ಟ ಕಾನನದಿಂದ ಕೂಡಿದ್ದು, ಕಾಳಿ ನದಿ ಭೋರ್ಗರೆಯುವ ಸದ್ದು ಕೇಳುತ್ತಿರುತ್ತದೆ. ಸುತ್ತ ಸುಮಾರು ಹಸಿರು ಪರ್ವತಗಳೂ, ಕಣಿವೆಗಳೂ ನೋಡಲು ಸಿಗುತ್ತದೆ. ಕವಳ ಕೇವ್ಸ್ ಗೆ ಹೋಗುವ ದಾರಿಯಲ್ಲಿ ನಾನು ಸುಮಾರು ವಿಧದ ಹಕ್ಕಿಗಳನ್ನು ನೋಡಿದೆ. ಎಲ್ಲೂ ನಿಂತು ಫೋಟೋ ತೆಗೆಯುವುದಕ್ಕೆ ಹೆಚ್ಹು ಸಮಯವಿರಲಿಲ್ಲ. "ನಾನು ಪ್ಲೇಸ್ ಕವರ್ ಮಾಡೋಕೆ ಆಗೋದಿಲ್ಲ ಮತ್ತೆ" ಎಂದು ಪದೇ ಪದೇ ನಮ್ಮ ಗೈಡ್ ತಲೆ ತಿನ್ನುತ್ತಿದ್ದ. ಪ್ಲೇಸ್ ಏನು ಕವರ್ ಮಾಡುತ್ತೀ?? ನೋಡಿದ ಪ್ಲೇಸ್ ನ ನೆಟ್ಟಗೆ ನೋಡೋಕೆ ಬಿಡು ಮಾರಾಯ ಎಂದು ಹೇಳುವ ಮನಸ್ಸಾಗುತ್ತಿತ್ತು ನನಗೆ.



(ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ, ಕೇವ್ಸ್ ಗೆ ಹೋಗುವ ದಾರಿಯಲ್ಲಿ)

ಆದರೆ ನಮ್ಮ ಗುಂಪಿನಲ್ಲಿ ಎಲ್ಲರಿಗೂ ಜಾಸ್ತಿ ಪ್ಲೇಸ್ ನೋಡುವುದೇ ಮುಖ್ಯವಾದುದರಿಂದ, ಹಾಗೂ ನಾನು ಮತ್ತು ಸುಧರ್ ಇಬ್ಬರೇ ಸ್ವಲ್ಪ ಅಬ್ನೋರ್ಮಲ್ ಫೆಲೋಗಳಾಗಿದ್ದರಿಂದ ನನ್ನ ಸಿಟ್ಟನ್ನು ನನ್ನಲ್ಲೇ ಹತ್ತಿಕ್ಕಿಕೊಳ್ಳುತ್ತಿದ್ದೆ.ಅಂತೂ ಇಂತೂ ಓಡುತ್ತಾ ಕವಳ ಕೇವ್ಸ್ ತಲುಪಿ, ಒಳಗೆ ಆಗಲೇ ಯಾವುದೋ ಗುಂಪು ಇದ್ದಿದ್ದರಿಂದ ಸ್ವಲ್ಪ ಹೊತ್ತು ಫೋಟೋ ತೆಗೆಯುತ್ತ ಗುಹೆಯ ಹೊರಗೆ ಕುಳಿತೆವು.

(ಗುಹೆಯ ಹೊರಗೆ)

ಕವಳ ಗುಹೆಗಳು ಒಳಗೆ ಕಗ್ಗತ್ತಲಿನಿಂದ ಕೂಡಿದ್ದು, ಒಬ್ಬ ವ್ಯಕ್ತಿ ಮಾತ್ರಾ ಒಮ್ಮೆ ಕುಳಿತು ತೆವಳುತ್ತಾ ಒಳ ಹೋಗುವಂತಿದೆ. ಟಾರ್ಚ್ ಇಲ್ಲದೆ ಇಲ್ಲಿ ಪ್ರವೇಶಿಸುವುದು ಅಸಾಧ್ಯ. ಒಳಗೆ ವಿವಿಧ ಆಕಾರಗಳಿಂದ ನೈಸರ್ಗಿಕವಾಗಿ ರಚನೆಯಾದ ಶಿಲೆಗಳು ಹಾಗೂ ಲಿಂಗಗಳೂ ಇವೆ. ಇಲ್ಲಿಯ ಶಿಲೆಗಳಿಂದಲೇ ಕೆತ್ತಲ್ಪಟ್ಟ ಮಾನವ ನಿರ್ಮಿತ ವಿಗ್ರಹಗಳೂ ಕೂಡ ಪ್ರತಿಷ್ಟಾಪಿಸಲ್ಪಟ್ಟಿವೆ. ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆಯೆಂದೂ, ತುಂಬಾ ಭಕ್ತಾದಿಗಳೂ ಆಗ ಇಲ್ಲಿ ಬರುತಾರೆಂದೂ ನಮ್ಮ ಗೈಡ್ ಹೇಳಿದ.


(ಗುಹೆಯ ಒಳಗೆ ಪ್ರತಿಷ್ಟಾಪಿಸಲ್ಪಟ್ಟ ವಿಗ್ರಹಗಳು)

ಗುಹೆಯೊಳಗೆ ಕ್ಲಿಕ್ಕಿಸಿದ ಪ್ರತೀ ಫೋಟೋಗಳೂ ತುಂಬಾ ಬ್ಲರ್ ಆಗಿ ಬಂದಿದ್ದರಿಂದ ನನಗೆ ಪೂರ್ತಿ ನಿರಾಸೆಯಾಗಿತ್ತು. ಆಮೇಲೆ ಸುಧರ್ ಹೇಳಿದ, ಗುಹೆಯೊಳಗೆ ಆಮ್ಲಜನಕ ಕಡಿಮೆಯಿದ್ದು, ಮಂಜು ಕವಿದಿದ್ದರಿಂದ, ದೂರದಿಂದ ಕ್ಲಿಕ್ಕ್ಕಿಸಿದರೆ ಕ್ಲಾರಿಟಿ ಚೆನ್ನಾಗಿರುತ್ತದೆಂದೂ, ಈ ರೀತಿಯ ಪ್ರದೇಶಗಳಲ್ಲಿ ಲೆನ್ಸ್ ಮತ್ತು ಆಬ್ಜೆಕ್ಟ್ ನ ಮಧ್ಯೆ ಇರಬಹುದಾಗ ದೂರದ ಬಗ್ಗೆ ಸ್ವಲ್ಪ ಹೆಚ್ಹು ಗಮನವಹಿಸಬೇಕಾದುದು ಅಗತ್ಯವೆಂದೂ ನನಗೆ ವಿವರಿಸಿದ.


(ಕೆಂಪು ಇರುವೆಗಳ ಸಹಬಾಳ್ವೆ ಜೀವನ )

ಕವಳ ಕೇವ್ಸ್ ನಿಂದ ವಾಪಸು ಬರುವ ದಾರಿಯಲ್ಲಿ ನಮಗೆ ಕಾಡುಕೋಳಿ ಮತ್ತು ನವಿಲು ಹಾಗೂ ಕೆಲವು ಹಕ್ಕಿಗಳನ್ನು ಬಿಟ್ಟು ಇನ್ನೇನೂ ನೋಡಲು ಸಿಗಲಿಲ್ಲ.

(ಸುಂದರ ಪಕ್ಷಿ, ನವಿಲು)

ಕವಳ ಕೇವ್ಸ್ ನಿಂದ ವಾಪಾಸ್ ಬಂದು, ಸ್ನಾನ ತಿಂಡಿ ಮುಗಿಸಿ, ರೆಸೋರ್ಟನ್ನು ತೆರವು ಮಾಡಿ, ಸಾತೋಡಿ ಫಾಲ್ಸ್ ಗೆ ಹೋಗಿ ಅಲ್ಲಿಂದ ಸೀದಾ ರೈಲ್ವೆ ಸ್ಟೇಷನ್ ಗೆ ಹೋಗುವುದು ನಮ್ಮ ಪ್ಲಾನ್ ಆಗಿತ್ತು. ಮಧ್ಯದಲ್ಲಿ ನಾನು ಸೈಕ್ಸ್ ಪಾಯಿಂಟ್ ಚೆನ್ನಾಗಿದೆ ನೋಡೋಣ ಎಂದೆ. ಸೈಕ್ಸ್ ಪಾಯಿಂಟ್ ಈಗ ನಿರ್ಭಂದಿತ ಪ್ರದೆಶವೆಂದೂ,ಅಲ್ಲಿ ನೋಡಲು ಬಿಡುವುದಿಲ್ಲವೆಂದು ಗೊತ್ತಿದ್ದೂ ಸುಮ್ನೆ ಕೆ.ಪಿ.ಸಿ ಆಫೀಸ್ ಗೆ ಹೋಗಿ ರಿಕ್ವೆಸ್ಟ್ ಮಾಡಿ ನೋಡುವುದು ನಮ್ಮ ಉದ್ದೇಶವಾಗಿತ್ತು.ತುಂಬಾ ವರ್ಷಗಳ ಹಿಂದೆ ಸೈಕ್ಸ್ ಪಾಯಿಂಟ್ ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಿದ್ದು,ಹಾಗೂ ಆ ಜಾಗದ ಅಪರಿಮಿತ ಪ್ರಕೃತಿ ಸೌಂದರ್ಯ ನನ್ನನ್ನು ಮತ್ತೆ ಮತ್ತೆ ನೋಡಬೇಕೆಂದು ಪ್ರೇರೆಪಿಸಿದ್ದು.ಕೆ.ಪಿ.ಸಿ ಆಫೀಸಿನಲ್ಲಿ ಒಂದು ಗಂಟೆ ಕುಳಿತು, ಕಾಡಿ-ಬೇಡಿ, ಅಲ್ಲಿನ ಅಭಿಯಂತರ ಹೆಸರಿನಲ್ಲಿ ಪ್ರವೇಶಿಸಲು ಅನುಮತಿ ಕೋರಿ ಒಂದು ಪತ್ರ ಬರೆದು ಕೊಟ್ಟ ಮೇಲೆ ಅಂತೂ ಇಂತೂ ಆ ಮಹಾನುಭಾವ ನಮ್ಮ ಬಗ್ಗೆ ಕರುಣೆ ತೋರಿದ. ಇಷ್ಟೆಲ್ಲಾ ನಾಟಕಗಳು ನಡೆಯಬೇಕಾದರೆ ಉಳಿದವರೆಲ್ಲಾ ಹೊರಗೆ ಜೀಪಿನಲ್ಲಿ ಕುಳಿತಿದ್ದು,ನಾನು ಮತ್ತು ಹರಿ ಮಾತ್ರಾ ಆಫೀಸಿನೊಳಗೆ ಭಿಕ್ಷುಕರ ರೀತಿ ನಿಂತಿದ್ದರಿಂದ ಹರಿ ಒಳಗೊಳಗೇ ಕುದಿಯುತ್ತಿದ್ದ. "ಅದೇನು ಅಂತಾ ಒಳ್ಳೆ ಪ್ಲೇಸ್ ಏನೇ?ನೋಡದೆ ಹೋದ್ರೆ ನಮಗೆ ಲಾಸ್ ಆಗುತ್ತಾ? ಈಗ ಟೈಮ್ ವೇಸ್ಟ್ ಮಾಡಿದ್ದು ಸಾಕು, ನೆಟ್ಟಗೆ ಫಾಲ್ಸ್ ಗೆ ಹೋಗೋಣ" ಎಂದ. ಆದರೂ ಸುಮಾರು ೪೫ ನಿಮಿಷ ಕಾದಿದ್ದರಿಂದ "ಇನ್ನೂ ೫ ನಿಮಿಷ ನೋಡೋಣ ಬಿಡು, ಸ್ವಲ್ಪ ಟ್ರೈ ಮಾಡೋಣ" ಎಂದು ಅವರಿವರಿಂದ ಇನ್ಫ್ಲುಯೆನ್ಸ್ ಮಾಡಿಸಿ ಅಂತೂ ಪ್ರವೇಶ ದೊರಕಿಸಿಕೊಂಡ ಮೇಲೆ ನನಗೆ ಒಳಗೇ ನಡುಕ ಪ್ರಾರಂಭವಾಯಿತು. ನನಗೂ ಮತ್ತು ನಮ್ಮ ಗುಂಪಿನ ಇತರರಿಗೂ ಅಭಿರುಚಿಗಳಲ್ಲಿ ಸಾಮ್ಯ ಕಡಿಮೆ. ಅಪ್ಪೀ ತಪ್ಪೀ ಇವರಿಗೆಲ್ಲ ಈ ಜಾಗ ಇಷ್ಟ ಆಗದೇ ಹೋದರೆ ನನಗೆ ಒದೆ ಬೀಳುವುದು ಗ್ಯಾರಂಟಿ ಎಂದುಕೊಂಡೆ. ಈ ಹರಿ ಬೇರೆ "ಇಷ್ಟೆಲ್ಲಾ ಒದ್ದಾಡಿ, ಚೆನ್ನಗಿಲ್ದೆಹೋದ್ರೆ ನಿನ್ನ ಹೆಣ ಬೀಳುತ್ತೆ ನೋಡು!" ಎಂದು ಪಬ್ಲಿಕ್ಕಾಗೆ ರೋಫ್ ಹಾಕುತ್ತಾ ಕುಳಿತಿದ್ದ. ಆದರೆ ಸೈಕ್ಸ್ ಪಾಯಿಂಟ್ ಹಂತ ಹಂತವಾಗಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದೂ,ನಮಗೆ ಅಲ್ಲಿರಲು ಸಮಯದ ಅಭಾವವೂ, ಅಲ್ಲಿ ಫೋಟೋ ತೆಗೆಯುವುದನ್ನು ಖಡಾಖಂಡಿತವಾಗಿ ನಿರ್ಭಂದಿಸಿದ್ದರಿಂದ ಅಲ್ಲಿ ನಿಂತುಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿ ಫೋಟೋ ತೆಗಿಸಿಕೊಳ್ಳಲಾಗದ ಅಸಹಾಯಕತೆ ಎಲ್ಲವೂ ಸೇರಿ ನಮ್ಮ ಹುಡುಗರ ಸಿಟ್ಟು ಇಲ್ಲಿ ಪ್ರವೇಶವನ್ನು ನಿಷೇಧಿಸಿದ ಸರ್ಕಾರಕ್ಕೂ,ಅದಕ್ಕೆ ಕಾರಣರಾದ ನಕ್ಸಲೈಟ್ ಗಳ ಮೇಲೂ ತಿರುಗಿ, ಕೊನೆಗೆ ಅನುಮತಿ ನೀಡಲು ಸತಾಯಿಸಿ ತಡಮಾಡಿದ ಕೆ.ಪಿ.ಸಿ ಅಧಿಕಾರಿಯ ಮೇಲೆ ಮಾತಿನಲ್ಲೇ ಕೆಂಡಕಾರುವುದರೊಂದಿಗೆ ತಣ್ಣಗಾಯಿತು. ಸೈಕ್ಸ್ ಪಾಯಿಂಟ್ ನಲ್ಲಿ ನಿಂತು ಸುತ್ತಲೂ ನೋಡಿದರೆ ಕಾಣಸಿಗುವಿದು ಸುತ್ತಲೂ ದಟ್ಟವಾದ ಕಾನನಗಳಿಂದ ಕೂಡಿದ ಮನಮೋಹಕ ಪರ್ವತ-ಕಣಿವೆಗಳೂ, ಕೆಳಗೆ ಭೋರ್ಗರೆವ ಕಾಳಿ, ಹಾಗೂ ನಾಗಝರಿ ಪವರ್ ಹೌಸ್.


(ಸಾತೋಡಿ ಜಲಪಾತ)

ಸೈಕ್ಸಪಾಯಿಂಟ್ ನಿಂದ ನೇರವಾಗಿ ಯೆಲ್ಲಾಪುರಕ್ಕೆ ಹೋಗಿ, ಭಟ್ಟರ ಹೋಟೆಲ್ಲಿನಲ್ಲಿ ತಂಬ್ಳಿ ಊಟ ಮಾಡಿ, ಅಲ್ಲಿಂದ ೩ ಗಂಟೆ ಸುಮಾರಿಗೆ ನಾವು ಸಾತೋಡಿ ಫಾಲ್ಸ್ ಕಡೆ ಪ್ರಯಾಣ ಬೆಳೆಸಿದ್ದು. ಯೆಲ್ಲಾಪುರಕ್ಕೆ ಹೋಗುತ್ತಿದ್ದಾಗ ದಾರಿಮಧ್ಯೆ ಒಂದು ಮಂಗ ಅಪಘಾತದಿಂದ ಎಚ್ಹರತಪ್ಪಿ ಬಿದ್ದಿತ್ತು. ನಮ್ಮೆದುರೇ ಒಂದು ಬೈಕ್ ಸವಾರ ಅದಕ್ಕೆ ಗುದ್ದಿ, ಬರ್ರ್.. ಎಂದು ತಿರುಗಿಯೂ ನೋಡದೆ ಪರಾರಿಯಾಗಿದ್ದ. ನಮ್ಮ ಡ್ರೈವರ್ ಮಲ್ಲಿಕ್ ಜೀಪು ನಿಲ್ಲಿಸಿ ಬಾಯಿಗೆ ಬಂದಂತೆ ಆ ಬೈಕ್ ಸವಾರನಿಗೆ ಬೈಯುತ್ತಾ, ಎದುರು ಬರುತ್ತಿದ್ದ ಬಸ್ ಅನ್ನು ಮಂಗನ ಮೇಲೆ ಹಾದು ಹೋಗದಂತೆ ತಡೆದು ನಿಲ್ಲಿಸಿ, ನಮ್ಮಲ್ಲಿದ್ದ ಸ್ವಲ್ಪವೇ ಕುಡಿಯುವ ನೀರನ್ನು ಮಂಗನ ಮುಖದ ಮೇಲೆ ಸುರಿದು ಎಚ್ಹರಿಸಿ, ಹನುಮಂತ ಮತ್ತೆ ಕಾಡಿಗೆ ತೆರಳಿದ ಮೇಲೆ ಇನ್ನೊಮ್ಮೆ ಎಲ್ಲರೂ ಬೈಕ್ ಸವಾರನ ಅಜಾಗರೂಕತೆಯನ್ನೂ, ಅವನ ಕ್ರೂರತನವನ್ನೂ ಹಳಿದು, ನಮ್ಮ ಪ್ರಾಣಿ ಪ್ರೀತಿಯನ್ನು ಮೆರೆದೆವು. ನನಗೆ ಆ ಸಮಯದಲ್ಲಿ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರನ ಮೇಲೆ ಅಪಾರ ಗೌರವ ಹುಟ್ಟಿ ನೆನ್ನೆಯಿಂದ ಅವರು ಮಾಡಿದರೆಂದು ತಿಳಿದ ಪಾಪಗಳನ್ನೆಲ್ಲಾ ಮನ್ನಿಸಿಬಿಟ್ಟಿದ್ದೆ.
ಯೆಲ್ಲಾಪುರದಿಂದ ಸಾತೋಡಿ ಫಾಲ್ಸ್ ಗೆ ಹೋಗುವ ದಾರಿ ದಕ್ಷಿಣ ಕನ್ನಡಕ್ಕೆ ಹೋಗುವ ಘಾಟಿ ಸೆಕ್ಶನ್ ನೆನಪಿಗೆ ತರುತ್ತದೆ. ರಸ್ತೆಯ ಇಕ್ಕೆಲಗಳೂ ದಟ್ಟ ಕಾನನದಿಂದ ಕೂಡಿದ್ದರಿಂದ, ಮನುಷ್ಯ ವಾಸವಿದ್ದೂ, ಊರುಗಳು ಬೆಳೆದಿದ್ದೂ, ಇಲ್ಲಿ ಕಾಡುಗಳನ್ನು ಇಷ್ಟು ದಟ್ಟವಾಗಿ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ನಾನು ಯೋಚಿಸುತ್ತಿದ್ದೆ. ನಮ್ಮೂರಿನಂತೆ ಇಲ್ಲಿನ ಜನ ಕಾಡನ್ನು ಹಂತ ಹಂತವಾಗಿ ಒತ್ತುವರಿ ಮಾಡದೆ ಬಿಟ್ಟಿದ್ದಾದರೂ ಹೇಗೆ?? ಇಲ್ಲಿನ ಜನ ಪರಿಸರ ಪ್ರೇಮಿಗಳೋ ಅಥವಾ ಸರ್ಕಾರ ಮುಂಚೆ ಎಚ್ಹೆತ್ತಿದೆಯೋ?? ಒಟ್ಟಿನಲ್ಲಿ ನಮ್ಮ ಸಾಗರದ ಮಲೆನಾಡೆಂಬ ಮಲೆನಾಡಿಗಿಂತ ಇಲ್ಲಿ ಕಾಡು ಗಮ್ಮತ್ತಾಗಿ, ಸುಸ್ಥಿತಿಯಲ್ಲಿರುವುದಂತೂ ಸತ್ಯ. ಅಂತೂ ಇಂತೂ ಸಾತೋಡಿ ಫಾಲ್ಸ್ ನೋಡಿ, ಅಲ್ಲಿ ಹೋಗಿದ್ದು ವ್ಯರ್ಥವಾಗದಿದ್ದುದಕ್ಕೆ ಹಾಗೂ ನಮ್ಮ ಪ್ರವಾಸದ ೨ನೆಯ ದಿನ ಮೊದಲ ದಿನದಂತೆ ಸಪ್ಪೆಯಾಗಿರದಿದ್ದುದಕ್ಕೆ ನಾವೆಲ್ಲಾ ಖುಷಿಪಟ್ಟು ನೀರಾಟವಾಡಿದ್ದಾಯಿತು. ದಾರಿಯಲ್ಲಿ ಹೋಗುತ್ತಾ ಕೆಂಪು ಅಳಿಲು ಎಂಬ ಒಂದು ಜಾತಿಯ ಅಳಿಲನ್ನು ನೋಡಿದೆ. ಫೋಟೋ ತೆಗೆಯೋಕೆ ಆಗಿಲ್ಲ ಎಂದು ಬೇಜಾರಾಗಿತ್ತು. ಆದರೆ ಬೆಂಗಳೂರಿಗೆ ವಾಪಸು ಬಂದಮೇಲೆ ಯೆಲ್ಲಾಪುರದ ಗೆಳೆಯನೊಬ್ಬನೊಂದಿಗೆ ನನ್ನ ದುಃಖ ತೋಡಿಕೊಳ್ಳುತ್ತಿದ್ದಾಗ, ಕೆಂಪು ಅಳಿಲು ಯೆಲ್ಲಾಪುರದ ಸುತ್ತ ಮುತ್ತಲೂ ಸಾಮಾನ್ಯವಾಗಿ ಕಾಣಸಿಗುತ್ತದೆಂದು ತಿಳಿದು ಮತ್ತೊಮ್ಮೆ ನೋಡಿದರಾಯಿತೆಂದು ಸಮಾಧಾನ ಪಟ್ಟುಕೊಂಡೆ. ಸುಮಾರು ೧ ಗಂಟೆ ನಮ್ಮ ಗೈಡ್ ನ " ಲೇಟ್ ಆಗುತ್ತೆ, ಬೇಗ್ ಹೊರಡಿ, ಇಲ್ಲಾಂದ್ರೆ ಟ್ರೈನ್ ಮಿಸ್ ಮಾಡ್ಕೊತೀರ" ಎಂಬ ಕಿರಿ ಕಿರಿಗಳ ಮಧ್ಯೆ ಸಾತೋಡಿ ಫಾಲ್ಸ್ ನಲ್ಲಿ ನೀರಾಟವಾಡಿ, ಜಲಪಾತದ ಸೌಂದರ್ಯವನ್ನು ಸವಿದು ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ರೈಲ್ವೆ ಸ್ಟೇಷನ್ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಮತ್ತೆ ರೈಲಿನಲ್ಲಿ ಎಂದಿನಂತೆ ಹರಟೆ ಹೊಡೆದಿದ್ದು, ನಮ್ಮಲ್ಲಿ ಇಬ್ಬರು ಹುಡುಗರಿಗೆ ಗ್ಯಾಸ್ ಟ್ರಬಲ್ ಆಗಿ ಇನೋ ಕುಡಿದು ಪಟ್ಟ ಪಾಡು, ಎಲ್ಲವನ್ನೂ ಬರೆಯುವುದು ಇಲ್ಲಿ ಸೆನ್ಸಾರ್ಡ್ ಆಗಿದ್ದರಿಂದ ನನ್ನ ಈ ಪ್ರವಾಸ ಕಥನವನ್ನು ಅಳ್ನಾವರ ರೈಲ್ವೆ ಸ್ಟೇಶನ್ ನಲ್ಲೇ ಮುಕ್ತಾಯಗೊಳಿಸುತ್ತೇನೆ.