ಶನಿವಾರ, ಜುಲೈ 24, 2010

ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್

(Photos By: Praveen)


ಪ್ರತಿದಿನ ಅದೇ ಆಫೀಸ್, ಪಿ ಜಿ, ಕೆಲಸದಿಂದ ಬೇಸತ್ತು ಒಂದುದಿನ ಪ್ರವೀಣ್ ಗೆ ಕರೆ ಮಾಡಿ "ಎಲ್ಲಾದ್ರೂ ಟ್ರಿಪ್ ಅರೇಂಜ್ ಮಾಡೋ ಮಾರಾಯ, ಬೆಂಗಳೂರು ಬೋರ್ ಬೈಂದು" ಎಂದೆ, ಅವನು "ಅರೇಂಜ್ ಮಾಡಿದ್ದಿ, ವಾರಾಹಿ ನದೀಲಿ ರಾಫ್ಟಿಂಗ್ ಹೋಗ ಪ್ಲಾನ್ ಇದ್ದು, ಬತ್ಯ??" ಎಂದು ಕೇಳಿದ. ನಾನು ಹಿಂದೂ ಮುಂದೂ ಯೋಚಿಸದೆ ಸರಿ ಬರುತ್ತೇನೆ ಎಂದುಬಿಟ್ಟೆ. ಹೀಗೆ ಶುರುವಾಗಿದ್ದು ನಮ್ಮ ರೀಸೆಂಟ್ ಟ್ರಿಪ್ "ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್ ". ನಮ್ಮ ಹಾಗೆ ಬೇಸತ್ತು ಬಸವಳಿದ ಕೆಲವರು ನಮ್ಮೊಂದಿಗೆ ಸೇರಿ ೧೬ ರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲು ಹಿಡಿದೆವು.

ಪ್ರವೀಣ್ ಹಾಗೂ ಸುಭ್ರಮಣ್ಯ ಸೇರಿ ಹುಟ್ಟು ಹಾಕಿದ "Xplore Nature" (http://xplorenature.com/)ವತಿಯಿಂದ ೨ ನೇ ಪ್ರವಾಸ ಇದು.ನಾವು ಸುಮಾರು ೧೭ ಜನ ಈ ಬಾರಿ ಪ್ರವಾಸ ಹೊರಟಿದ್ದು. ಶಿವಮೊಗ್ಗದಿಂದ ಟೆಂಪೋ ಒಂದರಲ್ಲಿ ಎಲ್ಲರೂ ಪ್ರವೀಣ್ ಮನೆಗೆ(ನಗರ) ತೆರಳಿ, ಫ್ರೆಶ್ ಆಗಿ, ಬೆಳಗಿನ ಉಪಾಹಾರ ಮುಗಿಸಿ, ಹಿಡ್ಲುಮನೆ ಫಾಲ್ಸ್ ನೋಡಲು ಉತ್ಸಾಹದಿಂದ ಹೊರಟೆವು. ನಿಟ್ಟೂರಿನಿಂದ ಕಾಲ್ನಡಿಗೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಉಂಬಳಗಳಿಗೆ ರಕ್ತದಾನ ಮಾಡುತ್ತಾ ಸುಮಾರು ೮ ಕಿ ಮಿ ದಟ್ಟ ಕಾನನದ ಒಳಗಿರುವ ನಯನ ಮನೋಹರ ಜಲಪಾತ ನಮ್ಮೆಲ್ಲರ ಗುರಿ.ಇದೊಂದು ಅಡ್ವೆಂಚರಸ್ ಟ್ರೆಕ್ ಅಲ್ಲದಿದ್ದರೂ ಕೊಡಚಾದ್ರಿಯ ಬುಡದಲ್ಲಿ ನೀರಿನ ಹರಿವಿಗೆ ವಿರುದ್ದ ದಿಕ್ಕಿನಲ್ಲಿ, ಮಳೆಗಾಲದಲ್ಲಿ, ಜಾರುತ್ತ, ಬೀಳುತ್ತಾ, ಬಂಡೆಗಳನ್ನು ಹತ್ತಿದ್ದು, ಜೋರು ಮಳೆಯಲ್ಲಿ ಫಾಲ್ಸ್ ನಲ್ಲಿ ನೀರಾಟವಾಡಿದ್ದು, ಪ್ರಿಯ ಪದೇ ಪದೇ ಬಿದ್ದಿದ್ದು :-) ಎಲ್ಲವೂ ಮನಸ್ಸಿನಲ್ಲಿ ಅಳಿಯದೆ ಉಳಿಯುವ ಸುಂದರ ಕ್ಷಣಗಳು.


ಮರುದಿನ ಬೆಳಿಗ್ಗೆ ಎಲ್ಲರು ನಗರ ಕೋಟೆ ಸುತ್ತಾಡಿ(ನಾನು ಹೋಗಲಿಲ್ಲ), ತಿಂಡಿ ತಿಂದು, ನಗರದಿಂದ ಕುಂದಾಪುರ ದಾರಿಯಲ್ಲಿರುವ ಸಿದ್ದಾಪುರದ ಹತ್ತಿರದ ವಾರಾಹಿ ಗೆ ತೆರಳಿದೆವು. ತೆರಳುವ ದಾರಿ ಘಾಟಿ ಸೆಕ್ಶನ್ ಆದದ್ದರಿಂದ ಪ್ರತೀ ೧೦ ನಿಮಿಷಕ್ಕೊಮ್ಮೆ ಹವಾಮಾನ ಬದಲಾಗುತ್ತಿತ್ತು. ಪೂರ್ತಿ ಮಂಜು ಮುಸುಕಿದ ವಾತಾವರಣ, ಬಿಸಿಲು, ಮಳೆ ಹೀಗೆ ೧ ಗಂಟೆಯ ಅವಧಿಯಲ್ಲಿ ವಿಪರೀತ ಬದಲಾವಣೆ.
ನನ್ನ ಜೀವನದಲ್ಲಿ ರಾಫ್ಟಿಂಗ್ ಇದೇ ಮೊದಲ ಅನುಭವ. ಮನಸೋ ಇಚ್ಹೆ ಎಂಜಾಯ್ ಮಾಡಿದೆ. ೧೨ ಕಿ ಮಿ ರಾಫ್ಟಿಂಗ್ನಲ್ಲೊಮ್ಮೆ ಮಳೆ ಬಂದಾಗ ನಾವೆಲ್ಲಾ ದೋಣಿಯಿಂದ ಇಳಿದು ಈಜಾಡಿದ್ದು, ಆ ಕ್ಷಣದಲ್ಲಿ ಕಂಡ ಸುಂದರ ಪ್ರಕೃತಿ ಎಲ್ಲವನ್ನು ಕಣ್ಣು ತುಂಬಿಕೊಂಡು ಹಾಗೇ ಕಣ್ಮುಚ್ಹಿ ಸ್ವಲ್ಪ ಹೊತ್ತು ನೀರಿನಲ್ಲಿ ತೇಲಾಡಿದೆ. ಅದೇ ದಿನ ರಾತ್ರಿ ಮನಸಿಲ್ಲದ ಮನಸ್ಸಿಂದ ಎಲ್ಲರು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಪ್ರವೀಣ್ ಮನೆಯಲ್ಲಿ ಮೊದಲ ಬಾರಿಗೆ ತಿಂದ "ಗೆಣಸಲೆ" ಬಗ್ಗೆ ಹೇಳದಿದ್ದರೆ ನಮ್ಮ ಟ್ರಿಪ್ ಅಪೂರ್ಣ. ಈ "ಗೆಣಸಲೆ" ಎಂಬ ಸಿಹಿ ಪದಾರ್ಥ ನಮ್ಮೆಲ್ಲರ ಮನಸೂರೆಗೊಂಡ ರುಚಿಕರ ತಿನಿಸು.
ಮಾಡುವ ವಿಧಾನ: ಅಕ್ಕಿಯನ್ನು ೨ ಗಂಟೆ ನೀರಿನಲ್ಲಿ ನೆನೆ ಹಾಕಿ, ರುಬ್ಬಿ, ಅದಕ್ಕೆ ಬೆಲ್ಲವನ್ನು ಸೇರಿಸಿ, ಸ್ವಲ್ಪ ಗಟ್ಟಿಯಾಗುವವರೆಗೂ ಸಣ್ಣ ಬೆಂಕಿಯಲ್ಲಿ ಬೇಯಿಸಬೇಕು. ಒಂದು ಹದಕ್ಕೆ ಬಂದ ನಂತರ ಅದನ್ನು ದಾಲ್ಚಿನ್ನಿ ಎಲೆಗಳ ಮೇಲೆ ಲೇಪಿಸಿ, ಅದರೊಳಗೆ ಬೆಲ್ಲ ಮತ್ತು ಕಾಯಿ ತುರಿ ಮಿಕ್ಸ್ ಅನ್ನು ಹಾಕಿ, ದಾಲ್ಚಿನ್ನಿ ಎಲೆಗಳನ್ನು ಮಡಚಿ, ಬೇಯಿಸಬೇಕು. ಹೀಗೆ ತಯಾರಾದ ಖಾದ್ಯವನ್ನು ತುಪ್ಪ ಹಾಕಿಕೊಂಡು ತಿಂದರೆ ಆಹಾ! ಅದರ ರುಚಿ ವರ್ಣಿಸಲಸದಳ. :-)
ಇಂತಹಾ ರುಚಿಕರ ಖಾದ್ಯವನ್ನು ನಮ್ಮೆಲ್ಲರಿಗೂ ಪರಿಚಯಿಸಿದ ಹಾಗೂ ೨ ದಿನ ನಮ್ಮೆಲ್ಲರನ್ನೂ ಪ್ರೀಯಿತಿಂದ ನೋಡಿಕೊಂಡ ಪ್ರವೀಣ್ ಪೋಷಕರಿಗೆ ಧನ್ಯವಾದಗಳು.