ಮುಖ ನೋಡಿದರೆ ನೆನಪಾಗುತ್ತದೆ
ಹಿಂದಿನದೆಲ್ಲಾ!..
ಮೌನದ ಹಿಂದಿನ ನೋವು,
ಶಾಂತತೆಯ ಸೊಗಡು ಹೊದ್ದ
ಜ್ವಾಲಾಮುಖಿ...
ಅಳಲೂ ಸ್ವಾತಂತ್ರ್ಯವಿಲ್ಲದೆ
ದುಃಖದ ಕಟ್ಟೆಯೊಡೆದು
ಹೊರಬರಲು ಹವಣಿಸುವ
ಕಣ್ಣೀರು..
ತುಟಿಯಂಚಿನ ಸಣ್ಣನೆಯ
ಕಂಪನ, ಏನೋ ಹೇಳಲು
ಹವಣಿಸುವ, ಮಾತು ಬಾರದ,
ಬಂದರೂ ಹೇಳಲಾರದ,
ಅನುಭವಿಸಲಾರದ ನೋವಿನ
ದಿನಗಳು.
ಮನದ ಮೌನ ಸ್ವಗತವಾಗಿ
ಸ್ವಗತ ಮಾತಾಗಿ
ಮನದ ದ್ವಂದ್ವಗಳನ್ನು
ಇಡಿಯಾಗಿ ಬಿಚ್ಚಿಡಲು...
ಇಲ್ಲ ಆಕೆ ಮೌನದಿಂದ
ಸ್ವಗತದೆಡೆಗೆ ಮಾತ್ರ ಚಲಿಸಬಲ್ಲಳು.
ಯಾಕೆ ಹೀಗೆ? ಭೇಧಿಸಲಾರಳೇ
ಜಿಡ್ಡುಗಟ್ಟಿದ ಜನಮನದ ಕಟ್ಟುಪಾಡು??
ನನ್ನನು ನಾನೇ ಕೇಳಿಕೊಳ್ಳುತ್ತೇನೆ,
ಪ್ರಶ್ನೆಗಳ ಮೇಲೆ ಪ್ರಶ್ನೆಗಳು
ಉತ್ತರವಿಲ್ಲದ, ಉತ್ತರಿಸಲಾಗದ
ಯಾರಲ್ಲೂ ಕೇಳದ
ನನ್ನೊಳಗಿನ ಪ್ರಶ್ನೆಗಳು!!
ಎಲ್ಲ ಬರೀ ಸ್ವಗತ.....