ಗುರುವಾರ, ಡಿಸೆಂಬರ್ 30, 2010

ನಂಗಂತೂ ಗೊತ್ತಿಲ್ಲಾ!!


ನಾನು ಬೆಳಿಗ್ಗೆ ಮುಂಚೆ ಎದ್ದು ಹಕ್ಕಿ ನೋಡಲು ಹೋಗುತ್ತಿದ್ದಾಗ, ಹುಳ-ಹುಪ್ಪಟೆಗಳನ್ನು ಹುಡುಕಿಕೊಂಡು ತೋಟದಲ್ಲಿ, ನಮ್ಮನೆ ಕಾನು ಹಿತ್ತಲಿನಲ್ಲಿ ಎಲ್ಲ ಕಡೆ ಅಡ್ಡಾಡುತ್ತಿದ್ದಾಗ, ನನ್ನ ಕೈಲೊಂದು ಕ್ಯಾಮೆರಾ ಇರಬೇಕಿತ್ತೆಂಬ ಹಂಬಲ ಯಾವಾಗಲೂ ನನ್ನನ್ನು ಕಾಡುತ್ತಿತ್ತು. ಪ್ರಕೃತಿ ಎಷ್ಟೆಲ್ಲಾ ವಿಸ್ಮಯಗಳನ್ನು, ವೈಚಿತ್ರ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ!. ಒಣಗಿದ ಎಲೆಗಳ ಮಧ್ಯೆ,, ಹಸಿರೆಲೆಗಳ ಸಂದಿನಲ್ಲಿ ಎಲೆಗಳಂತೆ ಹುದುಗಿರುವ ಹುಳುಗಳನ್ನು ಕಂಡು ಆಶ್ಚರ್ಯಪಟ್ಟಿದ್ದೆ. ನಮ್ಮ ಗದ್ದೆಯಲ್ಲಿ ಹುಳುಗಳನ್ನು ತಿನ್ನುವ ಹೂವೊಂದನ್ನು ನೋಡಿ ಬರೀ ಮನುಷ್ಯರಿಗೆ ಮಾತ್ರವಲ್ಲ ಜಗತ್ತಿನ ಚರಾಚರ ಜೀವಿಗಳಿಗೂ ಕಂಡಾಪಟ್ಟೆ ಬುದ್ದಿ ಇರುತ್ತದೇನೋ ಎಂಬ ಯೋಚನೆ ಬಂದಿತ್ತು. ಈ ಮಾಂಸಾಹಾರಿ ಸಸ್ಯ ನೋಡಲು ಚಿಕ್ಕದಾಗಿ, ಸುಂದರಾವಾಗಿ ಅರಳಿ ನಿಂತಿರುತ್ತಿತ್ತು. ಇದರ ಸುವಾಸನೆಯಿಂದ ಆಕರ್ಷಿತವಾಗಿ ಪರಾಗ ಸ್ಪರ್ಶ ಮಾಡಲು ಬರುವ ಪುಟ್ಟ ಹುಳುವನ್ನು ತನ್ನ ಉದರದಲ್ಲಿರುವ ಅಂಟಿನಂಥ ರಸದಿಂದ ಹಿಡಿದಿಟ್ಟು ಅರಳಿದ ತನ್ನ ಪಕಳೆಗಳನ್ನು ಒಂದೊಂದಾಗಿ ಮುಚ್ಹಿ ತನ್ನ ಆಹಾರ ಸ್ವೀಕರಿಸುತ್ತಿತ್ತು. (ನಾನು ಪಿ ಯು ಸಿ ಓದುವ ದಿನಗಳಲ್ಲಿ ಇದನ್ನು ನೋಡಿದ್ದೇ, ಇತ್ತೀಚಿಗೆ ನಮ್ಮನೆ ಗದ್ದೆಯಲ್ಲಂತೂ ನೋಡಿಲ್ಲ). ಎಲ್ಲ ಜೀವಿಗಳೂ ನೈಸರ್ಗಿಕ ನಿಯಮಗಳಿಗನುಗುಣವಾಗಿ ("survival for the fittest") ಒಂದಲ್ಲಾ ಒಂದು ರೀತಿಯಿಂದ ತಮ್ಮ ರಕ್ಷಣೆಗೆ ಮತ್ತು ವಂಶಾಭಿವೃದ್ದಿಗೆ ಪೂರಕವಾಗಿ ಒಂದು ವ್ಯೂಹವನ್ನು ರಚಿಸಿಕೊಂಡಿರುವುದಂತೂ ಸುಳ್ಳಲ್ಲ.

ಇಂಥದೇ ಸಾವಿರಾರು ಯೋಚನೆಗಳನ್ನು ತಲೆಯಲ್ಲಿ ಹೊತ್ತು ನಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಸೆರೆ ಹಿಡಿದ ಚಿತ್ರ ಇದು. ಸರಿಯಾಗಿ ಪರೀಕ್ಷಿಸಿದರೆ ೫ ಹುಳುಗಳು ತಮ್ಮ ನಾಲ್ಕು ಕಾಲುಗಳನ್ನು ಉಪಯೋಗಿಸಿ ೨ ಪುಟ್ಟ (ಮೇಲೊಂದು, ಕೆಳಗೊಂದು) ಇನ್ವಿಸಿಬಲ್ ದಾರದಂತಹ ಎಳೆಗಳಿಗೆ ನೆತಾಡುತ್ತಿರುವದನ್ನು ಕಾಣಬಹುದು. ಇದನ್ನು ಸೆರೆ ಹಿಡಿಯಬೇಕಾದರೆ ನಾನು ಪಟ್ಟ ಪಾಡು ಅಂತಿಂಥದ್ದಲ್ಲ. ಮ್ಯಾಕ್ರೋ ಮೋಡ್ ಯೂಸ್ ಮಾಡಿ, ಎಷ್ಟು ಹತ್ತಿರದಿಂದ ಕ್ಲಿಕ್ಕಿಸಿದರೂ ಪೂರ್ತಿ ವಿಸಿಬಲ್ ಆಗುವಂತೆ ಫೋಟೋ ತೆಗೆಯುವುದು ದುಸ್ತರವಾಯಿತು(ನಾನು ನನ್ನ ಕ್ಯಾಮೆರಾವನ್ನು ಹೊಸತಾಗಿ ಎಕ್ಸ್‌ಪ್ಲೋರ್ ಮಾಡುತ್ತಿರುವುದೂ ಒಂದು ಕಾರಣವಿರಬಹುದು, ಆದರೂ ಸುಮಾರು ೨೦ ಚಿತ್ರಗಳನ್ನು ಕ್ಲಿಕ್ಕಿಸಿ ಮನೆಗೆ ತಂದು ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡಿ ನೋಡಿದಾಗ, ಒಂದರಲ್ಲಿ ಸುಮಾರಿಗೆ ವಿಸಿಬಲ್ ಆಗಿರುವಂತೆ ಕಂಡು ಬಂದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿದ್ದೇನೆ).ಬರಿಗಣ್ಣಿಗೆ ಸುಮಾರಿಗೆ ಈ ಹುಳುಗಳು ಕಾಣುವುದಿಲ್ಲ, ಮಲ್ಲಿಗೆ ಹೂಗಳಿಗಿಂತಲೂ ಚಿಕ್ಕ ಆಕಾರದಲ್ಲಿರುವ, ದೃಷ್ಟಿಗೆ ನಿಲುಕದಂತಹ ೨ ಎಳೆಗಳಿಂದ ತಮ್ಮ ಜೀವ ಹಿಡಿದುಕೊಂಡಿರುವ ಇವು ಯಾವ ಹುಳುಗಳು ಅಂತ ನನಗಂತೂ ಗೊತ್ತಿಲ್ಲ! ಯಾರಿಗಾದ್ರೂ ಗೊತ್ತಿದ್ರೆ ತಿಳಿಸಿ ಪ್ಲೀಸ್.