ಶನಿವಾರ, ಏಪ್ರಿಲ್ 27, 2013

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು......



ಧರ್ಮ, ಸಂಸ್ಕೃತಿ:
ಬಹುಪಾಲು ಭೂತಾನೀಯರು ಬೌದ್ಧಧರ್ಮೀಯರು.ಹಾಗಂತ ಟಿಬೆಟಿನ ದಲೈಲಾಮ ಅನುಕರಿಸುವ ತತ್ವಗಳಿಗೂ ಭೂತಾನೀಯರು ಅನುಕರಿಸುವ ತತ್ವಗಳಿಗೂ ಅಜಗಜಾಂತರ ವ್ಯತ್ಯಾಸವಂತೆ. ಇತ್ತೀಚೆಗೆ ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೂ ಇಲ್ಲಿ ಚರ್ಚುಗಳನ್ನು ನಿರ್ಮಿಸುವುದು ಕಾನೂನುಬಾಹಿರ.ಭೂತಾನಿನ ಪ್ರತೀ ಕಟ್ಟಡಗಳೂ ನೋಡಲು ಸೊಗಸು. ಭುದ್ಧಿಸ್ಟ್ ಆರ್ಕಿಟೆಕ್ಚರುಗಳಲ್ಲಿ ನಿರ್ಮಿಸಿರುವ ಝಾಂಗ್, ಮೊನಾಸ್ಟ್ರಿ, ಲಖಾಂಗ್ ಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಭೂತಾನಿನಲ್ಲಿ ಮಕ್ಕಳು ಹುಟ್ಟುತ್ತಿದ್ದಂತೆ ಭೌದ್ಧ ಭಿಕ್ಶುಗಳು ಪ್ರಮುಖ ಭೌದ್ಧ ಸನ್ಯಾಸಿ/ನಿ ಯರ ಹೆಸರನ್ನಿಟ್ಟು ಹರಸುತ್ತಾರೆ. ಆದ್ದರಿಂದಲೇ ಇಲ್ಲಿನ ಜನರ ಹೆಸರುಗಳನ್ನು ಕೇಳಿದಾಗ ಸರ್ವೇ ಸಾಮಾನ್ಯವಾಗಿ ಒಂದೇ ನಾಮಾಂಕಿತದಿಂದ ಬಹುಮಂದಿ ಗುರುತಿಸಲ್ಪಡುತ್ತಾರೆ.

ಭೂತಾನೀಯರಲ್ಲಿ ಬಹುಪಾಲು ವಿವಾಹಗಳು ಪ್ರೇಮ ವಿವಾಹವಾಗಿದ್ದು, ಸ್ತ್ರೀಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಮದುವೆಯಾದ ನಂತರ ಗಂಡು ಹೆಣ್ಣಿನ ಮನೆಗೆ ಬಂದು ವಾಸಿಸುವುದು ಸರ್ವೇ ಸಾಮಾನ್ಯ. ಇವರಲ್ಲಿ ಮದುವೆ ಎಂಬುದು ಗಂಡು ಮತ್ತು ಹೆಣ್ಣು ಒಬ್ಬರಿಗೊಬ್ಬರು ಇಷ್ಟಪಟ್ಟು ಒಟ್ಟಿಗೇ ವಾಸಿಸುವ ಕುಟುಂಬ ವ್ಯವಸ್ಥೆಯೇ ಹೊರತೂ ಅದಕ್ಕೆಂದೇ ಅಬ್ಬರದ ಸಮಾರಂಭ ಬೇಕೇಬೇಕೆಂದೇನೂ ಕಡ್ಡಾಯವಿಲ್ಲ(ಹೀಗಿದ್ದೂ ಇವರು ದಕ್ಷಿಣ ಭೂತಾನೀಯರಾದ ನೇಪಾಳಿ ಭಾಷಿಗರನ್ನು ತಮ್ಮವರಂತೆ ಕಾಣುವುದಿಲ್ಲ. ತಮ್ಮ ಮಕ್ಕಳು ನೇಪಾಳೀ ಭಾಷಿಗರನ್ನು ವಿವಾಹವಾಗಲು ವಿರೊಧಿಸುತ್ತಾರೆ). ಸಮಾಜದ ಪ್ರತಿಷ್ಟಿತ ಮನೆತನದವರು ಅಬ್ಬರದ ಸಮಾರಂಭಗಳನ್ನೇರ್ಪಡಿಸಿಕೊಳ್ಳುತ್ತಾರಷ್ಟೇ. ಇತ್ತೀಚೆಗೆ ಕೆಲವು ಸಾಮಾನ್ಯ ಜನರೂ ಕೂಡಾ "ಥೈದೆ" ಎಂದು ಕರೆಯಲ್ಪಡುವ ಮದುವೆ ಸಮಾರಂಭಗಳನ್ನು ಮಾಡುತ್ತಾರೆ. ವಧುವಿಗೆ "ವಿಗೃ" ಎಂದು ಕರೆಯಲ್ಪಡುವ ಆಭರಣವನ್ನು ತೊಡಿಸಲಾಗುತ್ತದೆ. ಇದನ್ನು ಆಕೆ ಪ್ರತೀ ದಿನ ಧರಿಸಬೇಕೆಂದೇನೂ ಕಡ್ಡಾಯವಿಲ್ಲ, ವಿಶೇಷ ಸಮಾರಂಭಗಳಲ್ಲಿ ಧರಿಸುವುದು ಕಡ್ಡಾಯ. ಭೂತಾನೀ ಸ್ತ್ರೀಯರು ಸರ್ವ ಸ್ವತಂತ್ರರು. ಮನೆಯ ಆದಾಯ ಹೆಂಗಸರ ದುಡಿಮೆಯಿಂದಲೇ ಹೆಚ್ಚಾಗಿ ಅವಲಂಭಿತವಾಗಿರುತ್ತದೆ. ಹಾಗಾಗಿ ಹೆಚ್ಚಿನ ಸ್ತ್ರೀಯರು ಹೊಟೆಲ್, ಅಂಗಡಿ ನಡೆಸುವುದು, ಟ್ಯಾಕ್ಸಿ ಚಲಾಯಿಸುವುದು, ಗದ್ದೆಯಲ್ಲಿ ದುಡಿಯುವುದು ಕಾಣಬಹುದು. ಇಲ್ಲಿ ಹೆಣ್ಣು ಭ್ರೂಣ ಹತ್ಯೆ ಇಲ್ಲವೇ ಇಲ್ಲ. ಲೈಂಗಿಕ ಕಿರುಕುಳ ಅಪರೂಪಕ್ಕೆ ಅಪರೂಪ. ಹೆಣ್ಣು ಮಗು ಜನಿಸಿದರೆ ಪೋಷಕರು ಸಂತಸಪಡುತ್ತಾರೆ. ಹಾಗಂತ ಇಲ್ಲಿ ಬಹು ಪತ್ನಿತ್ವ ಪದ್ಧತಿ ಕೂಡಾ ಜಾರಿಯಲ್ಲಿದೆ. ಇಲ್ಲಿನ ೪ನೆಯ ದೊರೆಗೆ ನಾಲ್ವರು ಹೆಂಡಿರು(ನಾಲ್ವರೂ ಅಕ್ಕ ತಂಗಿಯರು), ೨ನೆಯ ಹೆಂಡತಿಯ ಮಗ ಈಗ ರಾಜ್ಯಭಾರ ಮಾಡುತ್ತಿದ್ದಾನೆ.

 
                                                        ಗದ್ದೆ ಕೆಲಸದ ನಡುವೆ ವಿಶ್ರಾಂತಿ


ಭೂತಾನಿನ ಪ್ರತೀ ಮನೆಗಳಲ್ಲೂ "ಲೊಚೆ" ಎಂಬ ವಾರ್ಷಿಕ ಹಬ್ಬವಿರುತ್ತದೆ. ಆ ದಿನ ಮನೆಯವರೆಲ್ಲಾ ಉಪಸ್ಥಿತರಿದ್ದು, ಬೌದ್ಧ ಸನ್ಯಾಸಿ/ನಿಯರಿಂದ ನೆರವೇರುವ ಪೂಜೆಯಲ್ಲಿ ಭಾಗವಹಿಸುತ್ತಾರೆ. ನೆಂಟರು, ನೆರೆಹೊರೆಯವರನ್ನೆಲ್ಲಾ ಕರೆದು ವಿಶೇಷ ಭೋಜನ, ಮಧ್ಯ ಸೇವನೆ, ಹಾಡು ಕುಣಿತಗಳಲ್ಲಿ ಮೈಮರೆಯುತ್ತಾರೆ. ವರ್ಷಕ್ಕೊಮ್ಮೆ ಜಿಲ್ಲಾ ಉತ್ಸವ ಕೂಡಾ ನೆರವೇರುತ್ತದೆ. ನನಗೆ ಭುಮ್ತಾಂಗ್ ಉತ್ಸವ (ತಾಂಶಿಗ್ ಥಿಚು) ನೋಡಲು ಸಿಕ್ಕಿತ್ತು. ಭೂತಾನಿನ ಸಾಂಸ್ಕೃತಿವ ವೈಭವಗಳನ್ನು ಕಣ್ಣಾರೆ ಕಾಣಬೇಕೆಂದಿದ್ದರೆ ಜಿಲ್ಲಾ ಉತ್ಸವಗಳನ್ನು ನೊಡಬೇಕು. ವಿವಿಧ ಬಗೆಯ ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳ ಜೊತೆಗೆ ಕಡಿಮೆ ಬೆಲೆಗಳಿಗೆ ಕರಕುಶಲ ವಸ್ತುಗಳು ಮಾರಾಟಕ್ಕಿರುತ್ತವೆ.


ಭೂತಾನೀಯರಲ್ಲಿ ಮೃತ ದೇಹಗಳನ್ನು ಸುಡುವ ಸಂಪ್ರದಾಯವಿದೆ. ಮೃತರ ಮಕ್ಕಳು ಮೃತರ ಹೆಸರಿನಲ್ಲಿ ನೆಟ್ಟ ಪವಿತ್ರ ಪ್ರಾರ್ಥನಾ ದ್ವಜಗಳು ಹಲವೆಡೆ ಕಾಣಲು ಸಿಗುತ್ತವೆ.



ಭಾರತದದೊಂದಿಗೆ ವ್ಯವಹಾರಿಕ ಅವಲಂಬನೆ:
ಭೂತಾನ್ ವ್ಯಾಪಾರ ವ್ಯವಹಾರಗಳಲ್ಲಿ ಸುಮಾರು ೭೫ ಪ್ರತಿಶತ ಭಾರತದ ಮೇಲೆ ಅವಲಂಭಿತವಾಗಿದೆ. ಬಟ್ಟೆ ನೇಯುವ ನೂಲಿನಿಂದ ಹಿಡಿದು ಕೆಲವು ಆಹಾರ ಪಧಾರ್ಥಗಳು ಭಾರತದಿಂದ ಆಮದಾಗುತ್ತದೆ.ಇಲ್ಲಿ ಪ್ರಾಣಿಗಳನ್ನು ಕೊಲ್ಲುವುದಿಲ್ಲ ಬದಲಾಗಿ ಭಾರತದಿಂದ ಮಾಂಸವನ್ನು ಕೊಂಡು ತಿನ್ನುತ್ತಾರೆ. ಇಲ್ಲಿನ ಶಾಲೆಗಳಲ್ಲಿ ಭಾರತೀಯ ಶಿಕ್ಷಕರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಭೂತಾನೀಯರಿಗೆ ಮಿಲಿಟರಿ ಶಿಕ್ಷಣ ಕೂಡಾ ಭಾರತದಲ್ಲೇ ಆಗುವುದು.

ಶಿಕ್ಷಣ ಪದ್ಧತಿ:
ಭೂತಾನಿನಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಎಂಬುದು ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಚಲಿತದಲ್ಲಿದೆ. ಆದರೂ ಇಲ್ಲಿ ಪದವಿ ಕಾಲೇಜುಗಳು ಇನ್ನೂ ಹೆಚ್ಚಾಗಿ ತಲೆಯೆತ್ತಿಲ್ಲ. ನಾನು ನೋಡಿದಂತೆ ಹೆಚ್ಚು ಜನರು ೧೦ ಅಥವಾ ೧೨ನೆಯ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿದ್ದಾರೆ. ಇತ್ತೀಚೆಗೆ ಹೊಸ ಹೊಸ ಶಾಲಾ ಕಾಲೇಜುಗಳು ತಲೆಯೆತ್ತುತ್ತಿವೆ. ಭೂತಾನಿನ ರಾಜಧಾನಿ ಥಿಂಫುವಿನಲ್ಲಿ "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್" ಎಂಬ ೧೩ ಕರಕುಶಲ ಕಲೆಗಳನ್ನು ಕಲಿಸುವ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಯಿದೆ. ವಿಧ್ಯಾರ್ಥಿಗಳು ತಮ್ಮ ಆಸಕ್ತಿಯ ಕಲಾ ಶಿಕ್ಷಣವನ್ನು ಆಯ್ದುಕೊಂಡು ೪/೬ ವರ್ಷಗಳ ತರಬೇತಿ ಪಡೆಯುತ್ತಾರೆ. ಇಲ್ಲಿನ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳ ಜೊತೆಗೆ ತಿಂಗಳ ವೇತನವನ್ನೂ ಕೊಡಲಾಗುತ್ತದೆ. ವಿಧ್ಯಾರ್ಥಿಗಳನ್ನು ನಾನು ಮಾತನಾಡಿಸಿದಾಗ ಹೆಚ್ಚಿನವರು ವಿಧ್ಯಾಭ್ಯಾಸ ಮುಗಿದ ನಂತರ ಸ್ವಂತ ಉದ್ಯೋಗದಲ್ಲಿ ತೊಡಗುವ ಬಯಕೆ ವ್ಯಕ್ತಪಡಿಸಿದರು. ಥಿಂಫುವಿನಲ್ಲಿ "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಟ್ರಡಿಷನಲ್ ಮೆಡಿಸಿನ್" ಎಂಬ ಸಾಂಪ್ರದಾಯಿಕ ವೈಧ್ಯ ಶಿಕ್ಷಣ ಸಂಸ್ಥೆ ಕೂಡಾ ಇದೆ.



                                                                  ಚಿತ್ರ: ಥಿಂಪಾ ಪಿಂಗಿ

ಶಾಂತಿ ಮತ್ತು ಸೌಹಾರ್ಧತೆಯ ಸಂಕೇತ ಥಿಂಪಾ ಪಿಂಗಿ:
ಥಿಂಪಾ ಪಿಂಗಿಯ ಬಗ್ಗೆ ಪಾರೋವಿನ ಆರ್ಟ್ ಗ್ಯಾಲರಿ ಒಂದರ ಒಡೆಯ ಕರ್ಮ ಎಂಬಾತ ಹೇಳಿದ ಸುಂದರ ಕಥೆಯಿದು. ಬಹಳಾ ಹಿಂದೆ ಕಾಶಿಕಾ ಎಂಬೊಂದೂರಿನಲ್ಲಿ ಒಬ್ಬ ರಾಜನಿದ್ದನಂತೆ. ರಾಜನಿಗೂ, ಪ್ರಜೆಗಳಿಗೂ ಮಧ್ಯೆ ಒಮ್ಮೆ ಜೋರು ಗಲಾಟೆ. ವಿಷಯವೇನೆಂದರೆ, ರಾಜನ ಪ್ರಕಾರ ರಾಜ್ಯ ಸುಭಿಕ್ಷವಾಗಿರುವುದೂ ಹಾಗೂ ರಾಜ್ಯದ ಸಮಸ್ತ ಜನತೆ ಸುಖವಾಗಿರುವುದೂ ತನ್ನಿಂದಾಗಿ. ಆದರೆ ಪ್ರಜೆಗಳಿಗೆ ರಾಜನ ದುರಂಕಾರದ ಬಗ್ಗೆ ಅಸಮಧಾನ. ನಾವು ದಿನನಿತ್ಯ ಬಿಸಿಲ ಬೇಗೆಯಲ್ಲಿ ದುಡಿದು ಬೆಳೆ ತೆಗೆಯುತ್ತೆವೆ, ನಮ್ಮವರು ಪ್ರಾಣದ ಹಂಗು ತೊರೆದು ಸೈನ್ಯದಲ್ಲಿ ಹೋರಾಡುತ್ತಾರೆ, ಹೀಗಿದ್ದಾಗ ರಾಜ್ಯ ಸುಭಿಕ್ಷವಾಗಿರಲೂ, ರಾಜನು ವೈಭವದಿಂದ ರಾಜ್ಯಭಾರ ಮಾಡಲೂ ನಾವು ಕಾರಣಕರ್ಥರು ಎಂಬುದು ಪ್ರಜೆಗಳ ಅಭಿಪ್ರಾಯ. ಸಂಧಾನಕ್ಕೆಂದು ಮಂತ್ರಿಗಳು ಕಾಡಿನಲ್ಲಿ ವಾಸಿಸುವ ಸನ್ಯಾಸಿಯಲ್ಲಿಗೆ ರಾಜನನ್ನೂ, ಪ್ರಜೆಗಳನ್ನೂ ಕರೆತರುತ್ತಾರೆ. ಸಮಸ್ಯೆಯನ್ನಾಲಿಸಿದ ಸನ್ಯಾಸಿ, ಅದೇ ಕಾಡಿನಲ್ಲಿ ವಾಸಿಸುವ ಆನೆ, ಮಂಗ, ಮೊಲ ಮತ್ತು ಹಕ್ಕಿಯ ಸ್ನೇಹ, ಒಬ್ಬರಿಗೊಬ್ಬರು ಸಹಕಾರದಿಂದ ಸಹಬಾಳ್ವೆ ನಡೆಸುವುದನ್ನು ರಾಜ ಮತ್ತು ಪ್ರಜೆಗಳಿಗೆ ತೊರಿಸಿ, ಇವರಂತೆ ಬದುಕಿದರೆ ಮಾತ್ರ ಶಾಂತಿ, ಸೌಹಾರ್ಧತೆಯಿಂದ ಬದುಕಲು ಸಾಧ್ಯ ಎಂದು ಬುದ್ದಿವಾದ ಹೇಳುತ್ತಾನೆ. ಅಂದಿನಿಂದ ರಾಜನ ಕಣ್ತೆರೆಯುತ್ತದೆ. ರಾಜ್ಯದ ಸಮಸ್ತ ಜನತೆ ಪರಸ್ಪರ ಸ್ನೇಹ, ಸಹಕಾರದಿಂದ ಸುಖವಾಗಿರುತ್ತಾರೆ.

ಈ ಕಥೆಗೆ ಪೂರಕವಾಗಿರುವ ಚಿತ್ರ ಥಿಂಪಾ ಪಿಂಗಿ. ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಭೂತಾನೀಯರ ಮನೆಮನೆಗಳಲ್ಲೂ ಈ ಚಿತ್ರವನ್ನು ಕಾಣಬಹುದು. ಈ ಚಿತ್ರವಿದ್ದರೆ ಮನೆಯಲ್ಲಿ ನೆಮ್ಮದಿಯಿರುತ್ತದೆ, ಪರಸ್ಪರರ ಭಾಂಧವ್ಯ ಗಟ್ಟಿಯಿರುತ್ತದೆ ಎಂಬ ನಂಬಿಕೆ ಭೂತಾನೀಯರಲ್ಲಿ ಬೇರೂರಿದೆ.




ಮುಂದುವರೆಯುವುದು.....