ಬುಧವಾರ, ಸೆಪ್ಟೆಂಬರ್ 14, 2011

ಬಣ್ಣಗಳು..


ಚೌತಿ ಹಬ್ಬಕ್ಕೆಂದು ಊರಿಗೆ ಹೋದಾಗ ತಮ್ಮ ಬಿಸಾಡೋದಕ್ಕೆ ಎಂದು ಎತ್ತಿಟ್ಟಿದ್ದ ಸಿಡಿ ರಾಶಿನ ನೋಡಿ ಇದ್ರಲ್ಲಿ ಏನಾದ್ರೂ ಫೋಟೋಸ್ ತೆಗಿಬಹುದ ಅಂತ ಯೋಚನೆ ಬಂತು. ಹೇಗಿದ್ರು ಹೊರಗೆ ಕಾಲಿಡೋಕೆ ಸಾಧ್ಯ ಇಲ್ಲ. ಜೋರು ಮಳೆ ಬೇರೆ. "ಈ ಮಳೆಲಿ ಕ್ಯಾಮೆರಾ ಹಿಡ್ಕೊಂಡು ಅಲ್ಯಕ್ಕೆ ಹೋಗಡ ನೀನು" ಅಂತ ಅಮ್ಮ ಫರ್ಮಾನು ಹೊರಡಿಸಿ ಆಗಿತ್ತು. ಇನ್ನು ಮಾತು ಮೀರಿ ಹೊರಗೆ ಕಾಲಿಟ್ಟರೆ ಸಿಡಿಸಿಡಿ ಮಾಡುತ್ತಾರೆಂದು ಮನೇಲೆ ಟೈಮ್ ಪಾಸು ಮಾಡುವ ಅನಿವಾರ್ಯಕ್ಕೆ ಈ ಸಿಡಿಗಳು ಬಲಿಯಾದವು.


ಹಾಗೆ ಸಿಡಿ ನ ಒಂದರಮೇಲೊಂದು, ವೃತ್ತಾಕಾರದಲ್ಲಿ ಎಲ್ಲ ಇಟ್ಟು ಫೋಟೋ ತೆಗೆದು ನೋಡಿದೆ. ಯಾಕೋ ಸರೀ ಬರ್ತಾ ಇಲ್ಲ ಅಂತ ಅನಿಸಿತು. ಇದರ ಮೇಲೆ ನೀರು ಸಿಂಪಡಿಸಿ ಯಾಕೆ ಟ್ರೈ ಮಾಡಬಾರದು ಅಂತ ಯೋಚನೆ ಬಂತು. ಸರಿ ಅಂತ ಒಮ್ಮೆ ನೀರು ಸಿಂಪಡಿಸಿ ಅಡಿಗೆ ಮನೆ ಕಿಟಕಿ ಹತ್ರ ಇಟ್ಟು ಸ್ವಲ್ಪ ಫೋಟೋಸ್ ನ ಮಾಕ್ರೋ ಮೋಡ್ ನಲ್ಲಿ ತೆಗೆದರೆ VIBGYOR

ಬಣ್ಣಗಳ ಜೊತೆ ಹನಿಗಳು ಹರಳುಗಳಂತೆ ಗೋಚರಿಸತೊಡಗಿದವು. ಯಾಕೋ ನಾನಿಟ್ಟ ಸಿಡಿ ಲೋಕೇಶನ್ ಸರಿ ಇಲ್ಲ. ಬೆಳಕು ಇವುಗಳ ಮೇಲೆ ಸರಿ ಯಾಗಿ ಪ್ರತಿಫಲಿಸುತ್ತಿಲ್ಲ ಎಂದು ಭಾಸವಾಗತೊಡಗಿತು. ಫೋಟೋ ತೆಗೆಯುವಾಗ ನನ್ನ ಕ್ಯಾಮೆರಾದ ನೆರಳು ಸಿಡಿ ಮೇಲೆ ಕಾಣಿಸುತ್ತ ಪೂರ್ತಿ ಇಮೇಜ್ ನ ಸೌಂದರ್ಯವನ್ನು ಹಾಳು ಮಾಡುತ್ತಿದ್ದವು. ಈಗ ಬೆಳಕಿನ ಪ್ರತಿಫಲನ, ಹನಿಗಳ ಪೀನಮಸೂರದಂಥಹ ಗುಣಗಳನ್ನೆಲ್ಲ ಸರಿಯಾಗಿ ಬಳಸಿಕೊಂಡು ಒಳ್ಳೆಯ ಇಮೇಜ್ ತೆಗಿಬೇಕು ಅಂದ್ರೆ ಸಿಡಿ ಮತ್ತು ನನ್ನ ಕ್ಯಾಮೆರಾದ ಪೊಸಿಶನ್ ಯಾವ ರೀತಿ ಇರಬೇಕೆಂದು ಯೋಚಿಸತೊಡಗಿದೆ. ಮನೆಯ ಅಂಗಳದ ಕಟ್ಟೆಯ ಮೇಲಿಟ್ಟು ಹನಿಗಳಿಗೆ ೪೫ ಡಿಗ್ರಿ ಆಂಗಲ್ ನಲ್ಲಿ ಲೆನ್ಸ್ ಇಟ್ಟರೆ ಸಿಡಿಯ ಮೇಲೆ ಬಣ್ಣಗಳ ಜೊತೆ ಹನಿಗಳ ರಿಫ್ಲೆಕ್ಶನ್, ಜೊತೆಗೆ ಹನಿಯಲ್ಲಿ ಅಂಗಳದಲ್ಲಿ ನೆಟ್ಟ ಗಿಡಗಳ ಹಸಿರು ಹಾಗೂ ಆಕಾಶದ ನೀಲಿ ರಿಫ್ಲೆಕ್ಶನ್ ಬರಬಹುದು ಎಂದು ನನ್ನ ಎಣಿಕೆಯಾಗಿತ್ತು. ಆದರೆ ಬೆಳಕು ಜಾಸ್ತಿಯಿದ್ದು, ಮೋಡದ ವಾತಾವರಣವಿದ್ದಿದ್ದರಿಂದ ನನ್ನ ಈ ಐಡಿಯಾ ಫಲಿಸಲಿಲ್ಲ. ಸಿಡಿ ಯ ಮೇಲೆ ಬೆಳಕಿನಿದ ಉಂಟಾಗುವ ಬಣ್ಣಗಳು ಹೆಚ್ಹು ಕಮ್ಮಿ ಸರಿಸಮನಾದ ದೂರದಲ್ಲಿ ವಿಭಜಿಸಿದಂತೆ ಕಂಡುಬಂದು, ಅಂಗಳದ ಹಸಿರಿನ ಪ್ರತಿಫಲನ ಹನಿಗಳಮೇಲೆ ಅಷ್ಟಾಗಿ ಪ್ರಭಾವಿಸಿದಂತೆ ಕಂಡುಬರಲಿಲ್ಲ. ಕ್ಯಾಮೆರಾವನ್ನು ವಿವಿಧ ಆಂಗಲ್ ನಲ್ಲಿಟ್ಟು ಪ್ರಯತ್ನಿಸಿದರೂ ನಾನಂದುಕೊಂಡಂತೆ ಇಮೇಜ್ ಹೊರತರಲು ಅಸಾಧ್ಯವಾಯಿಯು. ನನಗೀಗ ಬೆಳಕು ತುಂಬಾ ಕಮ್ಮಿ ಅಥವಾ ತುಂಬಾ ಹೆಚ್ಹು ಇರುವ ಪ್ರದೇಶವನ್ನು ಬಿಟ್ಟು ಬೇರೆಯ ಕಡೆಗೆ ಆಬ್ಜೆಕ್ಟ್ ಹಾಗೂ ಕ್ಯಾಮೆರಾವನ್ನು ಕೊಂಡೊಯ್ಯಬೇಕಿತ್ತು. ಅಡಿಗೆಮನೆಯಲ್ಲಿ ಈಗಾಗ್ಲೇ ಎಕ್ಸ್‌ಪೆರಿಮೆಂಟ್ ಮಾಡಿದ್ದು, ಅದು ಸರಿಯಾದ ಜಾಗ ಅಲ್ಲ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜಗುಲಿಯಲ್ಲಿ ಬೆಳಕು ಜಾಸ್ತಿ. ನಡುಮನೆ ಮತ್ತು ಚೌಕಿಗಳಲ್ಲಿ ಬೆಳಕು ಕಡಿಮೆ. ತಳಿವಳ ?? ಹೌದು.. ಅದೇ ಸರಿಯಾದ ಜಾಗ. (ತಳಿವಳ : ನಮ್ಮ ಮನೆಯ ಚೌಕಿ ಮತ್ತು ಅಡುಗೆ ಮನೆ ಲಂಭ ಕೋನದಲ್ಲಿ ಸೇರುತ್ತವೆ, ಇವೆರಡಕ್ಕೂ ಸೇರುವಂತೆ ಒಂದು ಕಡೆ ಗೋಡೆ ಮತ್ತು ಇನ್ನೊಂದು ಕಡೆ ಕಬ್ಬಿಣದ ತಳಿಗಳಿಂದ ಕಟ್ಟಿದ ಭಾಗಕ್ಕೆ ನನ್ನ ಅಜ್ಜ ತಳಿವಳ ಎಂದು ನಾಮಕರಣ ಮಾಡಿದ್ದಾರೆ). ತಳಿವಳ ದಲ್ಲಿಯಾದರೆ ಬಟ್ಟೆಗಳನ್ನು ಒಣಗಿಸುವುದಕ್ಕೆ ತಳಿಗಳ ಎದುರು ನ್ಯಾಲೆ ಕಟ್ಟಲಾಗಿದೆ. ಹಾಗಾಗಿ ಬೆಳಕು ಜಾಸ್ತಿಯಾದರೆ ಬಟ್ಟೆ ಹರಗಿ ಒಳಬರುವ ಬೆಳಕಿನ ಪ್ರಮಾಣವನ್ನು ಕಂಟ್ರೋಲ್ ಮಾಡಬಹುದು. ಅದೇ ಸರಿಯಾದ ಐಡಿಯಾ. ಒಮ್ಮೆ ಟ್ರೈ ಮಾಡೋಣ ಎಂದು ನನ್ನ ಹತಾರಗಳ ಜೊತೆಗೆ ತಳಿವಳಕ್ಕೆ ಶಿಫ್ಟ್ ಆದೆ. ಮತ್ತೊಂದು ಸಿಡಿ ಮೇಲೆ ಸ್ವಲ್ಪವೇ ಸ್ವಲ್ಪ ನೀರಿನ ಹನಿ ಸಿಂಪಡಿಸಿ, ಮತ್ತೊಂದು ಆಪರೇಷನ್ ಗೆ ಸಿದ್ದವಾದೆ. ಹೀಗೆ ಬೆಳಕು ಮತ್ತೆ ಲೆನ್ಸ ಜೊತೆ ಆಟ ಆಡ್ತಾ ಅಂತೂ ನನ್ನ ಕಲ್ಪನೆಯ ಒಂದು ಇಮೇಜ್ ಹೊರಬಿತ್ತು. ಸಿಡಿಯ ಮೇಲೆ ಬಣ್ಣಗಳ ಓಕುಳಿ, ಬಣ್ಣಗಳ ಪ್ರತಿಫಲನ ಹನಿಗಳಮೇಲೆ, ಹನಿಗಳ ಪ್ರತಿಬಿಂಬ ಸಿಡಿಯ ಮೇಲೆ. ಕಿಟಕಿ(ತಳಿ)ಯ ಪ್ರತಿಬಿಂಬ ಸಿಡಿ,ಹನಿ ಮತ್ತು ಪ್ರತಿಬಿಂಬಿತ ಹನಿಗಳ ಮೇಲೆ. ಹೀಗೆ ಕೆಲವು ಫೋಟೋ ಕ್ಲಿಕ್ಕ್ಕಿಸಿ, ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡಿ ನೋಡಿದಾಗ ಒಂದು ಆಶ್ಟರ್ಯ ಕಾದಿದ್ದ್ತು. ಕಿಟಕಿಯ ಪ್ರತಿಫಲನ ಒರಿಜಿನಲ್ ಹನಿಗಳಿಗಿಂತ ಸ್ಪಷ್ಟವಾಗಿ ಪ್ರತಿಬಿಂಬಿತ ಹನಿಗಳ ಮೇಲೆ ಕಾಣುತ್ತಿತ್ತು.(ಅಪ್ಲೋಡ್ ಮಾಡಿದ ೩ ನೆ ಇಮೇಜ್ ಮೇಲೆ ಕ್ಲಿಕ್ ಮಾಡಿ ಕೂಲಂಕುಶವಾಗಿ ಪರಿಶೀಲಿಸಿದರೆ ಮೇಲೆ ಬರೆದಂಥಹ ಎಲ್ಲ ಕ್ಯಾರೆಕ್ಟರಿಸ್ಟಿಕ್ಸ್ ನೋಡಬಹುದು).