ಗುರುವಾರ, ನವೆಂಬರ್ 4, 2010

ಗೋವ ಪ್ರವಾಸ






ಈ ಬಾರಿ ೩ ದಿನಗಳ ರಜೆಗೆ ಕೊಚ್ಹಿನ್ ಗೆ ಹೋಗುವುದೋ ಅಥವಾ ಗೋವಾ ಗೆ ಹೋಗುವುದೋ ಎಂಬ ಸಂದಿಗ್ಧದಲ್ಲಿ ೨ ದಿನ ಕಳೆದು ನಂತರ ಗೋವಾ ಗೆ ಹೋಗೋಣ ಎಂದು ತೀರ್ಮಾನಿಸಿದ್ದಾಯಿತು. ೨೯ರ ಶುಕ್ರವಾರ ರಾತ್ರಿ ಹರ ಸಾಹಸ ಮಾಡಿ ಬಸ್ ಟಿಕೆಟ್ ಬುಕ್ ಮಾಡಿ ಹೊರಟಿದ್ದು ಆಯಿತು.

ಗೋವಾ ಭಾರತದ ಪಶ್ಚಿಮ ಭಾಗದಲ್ಲಿರುವ ಒಂದು ಪುಟ್ಟ ರಾಜ್ಯ. ೩೭೦೨ ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣದ ಈ ರಾಜ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯ ಭಾಗದಲ್ಲಿದೆ.ಯುರೋಪಿಯನ್ನರ ವಸಾಹತುವಾದ ಭಾರತದ ಮೊದಲ ಭಾಗ ಹಾಗು ಸ್ವತಂತ್ರಗೊಂಡ ಕೊನೆಯ ರಾಜ್ಯ ಗೋವಾ. ಗೋವಪುರ/ಗೊಮಟ ಎಂಬ ಹೆಸರಿದ್ದ ಈ ರಾಜ್ಯವನ್ನು ಗೋವಾ ಎಂದು ಮರು ನಾಮಕರಣ ಮಾಡಿದ್ದು ಸುಮಾರು ೪೫೦ ವರ್ಷ ಗೋವಾ ವನ್ನು ಆಳಿದ ಪೋರ್ತುಗೀಸರು. ೧೯೪೭ ರಲ್ಲಿ ಭಾರತ ಬ್ರಿಟಿಷರ ಆಢಳಿತದಿಂದ ಮುಕ್ತಿಗೊಂಡರೂ ೧೯೬೧ ರ ವರೆಗೆ ಪೋರ್ತುಗೀಸರ ಹಿಡಿತದಲ್ಲಿತ್ತು. ಇದು ಭಾರತದ ಅಂಗವಾಗಿ ಪರಿಗಣನೆಯಾಗಿದ್ದು ೧೯೮೭ರಲ್ಲಿ.

ಗೋವಾ ಮೋಜಿಗೆ ಹೆಸರಾದ ನಾಡು. ಮಧ್ಯ, ಗಾಂಜಾ ಎಲ್ಲವು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ನಾಡು ವಿದೇಶಿಯರ ಹಾಗು ಮೋಜು ಬಯಸಿ ಬರುವವರ ಕೇಂದ್ರಬಿಂದು. ಇವೆಲ್ಲವನ್ನೂ ಬಿಟ್ಟು ಪ್ರಕೃತಿ ಸೌಂದರ್ಯವನ್ನು ಸವಿಯಲು ಬಯಸಿದರೆ ಗೋವಾ ಅತ್ಯಂತ ಸುಂದರವಾದ, ತನ್ನದೇ ಆದ ಪ್ರತ್ಯೇಕ ಸಂಸ್ಕೃತಿಯನ್ನು ರೂಢಿಸಿಕೊಂಡ ಭಾರತದ ಪುಟ್ಟ ರಾಜ್ಯ. ೨ ೧/೨ ದಿನಗಳ ನಮ್ಮ ಪ್ರವಾಸದಲ್ಲಿ ನಾನು ಒಂದಷ್ಟು ಬೀಚುಗಳು, ಕೋಟೆಗಳನ್ನು ನೋಡಿದ್ದು, ಮೊತ್ತ ಮೊದಲ ಬಾರಿಗೆ ಡಾಲ್ಫಿನ್ ನೋಡಿದ್ದು, ನನ್ನ ಹೊಸ ಕ್ಯಾಮೆರಾದಲ್ಲಿ ಫೋಟೋಗ್ರಫಿ ಶುರು ಮಾಡಿದ್ದು, ಇವೆಲ್ಲ ನನ್ನ ಈ ಪ್ರವಾಸದ ಅನುಭವಗಳು.

ನಾವು ಇಬ್ಬರು ಪ್ರೈವೇಟ್ ಬೋಟ್ ಹೈಯರ್ ಮಾಡಿಕೊಂಡು ಸಮುದ್ರದಲ್ಲಿ ಸುಮಾರು ೭ ಕೀ ಮೀ ಪ್ರಯಾಣಿಸಿದ ನಂತರ ನಮಗೆ ಡಾಲ್ಫ್ಫಿನ್ಸ್ ಕಂಡಿದ್ದು. ಸಮುದ್ರದಲ್ಲಿ ನಾನು ಪ್ರಥಮ ಬಾರಿಗೆ ಪ್ರಯಾಣ ಮಾಡಿದ್ದು ಒಂದು ಹೊಸ ಅನುಭವ. ಅಲೆಗಳ ಹೊಯ್ದಾಟದ ನಡುವೆ ಫೋಟೋಸ್ ತೆಗೆಯಲು ಹರಾಸಾಹಸ ಮಾಡಬೇಕಾಯಿತು. ಡಾಲ್ಫ್ಫಿನ್ಸ್ ತನ್ನ ಚೂಪಾದ ಮೂತಿಯನ್ನು ಹೊರಹಾಕುವುದನ್ನೇ ಕಾದು ಅದನ್ನು ಕಾಮೆರಾದಲ್ಲಿ ಸೆರೆ ಹಿಡಿಯುವುದು ಸುಲಭದ ಕೆಲಸವೆನಾಗಿರಲಿಲ್ಲ.ಜೊತೆಗೆ ನಮ್ಮ ದೋಣಿ ಕೂಡ ಅಲೆಗಳ ಹೊಡೆತಕ್ಕೆ ತೊಯ್ದಾಡುತ್ತಿತ್ತು. ಅಂತೂ ಇಂತೂ ಒಂದೆರಡು ಫೋಟೋಸ್ ತೆಗೆದಿದ್ದಾಯಿತು ಹಾಗೂ ಡಾಲ್ಫ್ಫಿನ್ಸ್ ನೋಡಿದ್ದಾಯಿತು. ಡಿಸ್ಕವರೀ ಚ್ಯಾನೆಲ್ ನಲ್ಲಿ ಡಾಲ್ಫ್ಫಿನ್ಸ್ ಸಮುದ್ರದಿಂದ ಮೇಲೆ ಹಾರುವುದನ್ನು ನೋಡಿದ್ದ ನಾನು ಅದೇ ಕಲ್ಪನೆಯಲ್ಲಿದ್ದೆ. ಸ್ವಲ್ಪ ನಿರಾಸೆಯಾಗಿದ್ದು ನಿಜ. ಆದರೆ ಡಾಲ್ಫ್ಫಿನ್ಸ್ ನೋಡಿದ್ದು ಮಾತ್ರ ಮಜವಾಗಿತ್ತು.