ಭಾನುವಾರ, ಮಾರ್ಚ್ 12, 2017

ಪೆನಿಸಿಲ್ವೇನಿಯಾದಲ್ಲೊಂದು ಪುಟ್ಟ ತರಕಾರಿ ತೋಟ

ಐತಿಹಾಸಿಕ ಪಿಟ್ಟ್ಸ್ ಬರ್ಗಿನ ಇಕ್ಕಟ್ಟು ರಸ್ತೆಗಳ ಇಕ್ಕೆಲಗಳಲ್ಲಿ ಆಚೆ ಈಚೆ ಒಟ್ಟಾಗಿ ಸೇರಿಸಿ ಕಟ್ಟಿದಂತಿದ್ದ ಕಟ್ಟಡಗಳ ಮಧ್ಯೆ ಹಬ್ಬಿದ್ದ ಪೊದೆಗಳನ್ನು ನೋಡಿ ಕೈಲ್ ನನಗೆ ಬರಲು ಹೇಳಿದ ಜಾಗ ಇದೇನಾ ಎಂದು ಸ್ವಲ್ಪ ಇರಿಸು ಮುರಿಸಾಗಿತ್ತು. ಒಂದು ನಿರ್ಜನ ರಸ್ತೆಯ ತುತ್ತ ತುದಿಯಲ್ಲಿ ಪೊದೆಗಳಂತಿದ್ದ ನಿರ್ಜನ ಪ್ರದೇಶಕ್ಕೆ ಗೂಗಲ್ ನಕ್ಷೆ ನನ್ನನ್ನು ಕೊಂಡೊಯ್ದಿತ್ತು. ನಾನು ಕಾರಿನಿಂದಿಳಿಯುತ್ತಿದ್ದಂತೆ ಕೈಲ್ ಕಾವಲು ನಾಯಿ ಕೂಗುತ್ತಾ ನನ್ನ ಮೇಲೆರಗುವುದಕ್ಕೂ, ಕೈಲ್ ಅದನ್ನು ಗದರಿಸುತ್ತಾ ಸಮಾಧಾನಪಡಿಸಿ ನನ್ನತ್ತ ಕೈಚಾಚುತ್ತಿದ್ದಂತೆ ನಾನು ತಲುಪಬೇಕಿದ್ದ ಜಾಗ ಇದೇ ಎಂದು ಮನದಟ್ಟಾಯಿತು. ೩೧ ವರ್ಷದ ಕೈಲ್ ಪ್ಯಾಟಿಸನ್ ಕುರುಚಲು ಪೊದೆಗಳ ಮಧ್ಯೆ ಹಸಿರು ಮನೆಯೊಂದನ್ನು ನಿರ್ಮಿಸಿ ತರಕಾರಿ ಗಿಡಗಳನ್ನು ನೆಡುತ್ತಿದ್ದರು. ಅವರ ಕೆಲಸಕ್ಕೆ ಸ್ವಲ್ಪವೂ ಕುತ್ತು ಬರದಂತೆ ನಾನವರ ಕೃಷಿ ಕೈಂಕರ್ಯಗಳ ಬಗ್ಗೆ ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಾ ಬಂದೆ. ನಮ್ಮಿಬ್ಬರ ಸಂವಾದದ ತುಣುಕು ಹಾಗೂ ಕೃಷಿಗೆ ತಮ್ಮನ್ನು ಹೊಸದಾಗಿ ಅರ್ಪಿಸಿಕೊಂಡ ಕೈಲ್ ಬದುಕು ಮತ್ತು ಪ್ರಯೋಗಗಳ ಪರಿಚಯ ಲೇಖನ.

ನಾನು: ಕೈಲ್, ನೀವು ಕೃಷಿ ಮಾಡಲು ಶುರುವಿಟ್ಟು ಎಷ್ಟು ವರ್ಷಗಳಾಯಿತು? ಎಷ್ಟು ಎಕರೆ ಜಾಗದಲ್ಲಿ ನಿಮ್ಮ ಕೃಷಿ ಭೂಮಿಯನ್ನು ವಿಸ್ತರಿಸಿದ್ದೀರ?
ಕೈಲ್: ಇದು ೨ನೇ ವರ್ಷ. ಹೋದ ವರ್ಷ ಸ್ವಲ್ಪ ಭೂಮಿಯನ್ನು ಬಾಡಿಗೆ ತೆಗೆದುಕೊಂಡು ಕೃಷಿ ಮಾಡಿದೆ. ವರ್ಷ ಜಾಗವೂ ಸೇರಿ ಕಡೆ ಚಿಕ್ಕ ಖಾಲಿ ಜಾಗಗಳನ್ನು ಬಾಡಿಗೆ ಪಡೆದು ಕೃಷಿ ಮಾಡುತ್ತಿದ್ದೇನೆ. ಎಲ್ಲಾ ಸೇರಿ ಸುಮಾರು ಎಕರೆ ಆಗಬಹುದೇನೋ.

ನಾನು: ನೀವು ಯಾವ ಬೆಳೆಗಳನ್ನು ಮುಖ್ಯವಾಗಿ ಬೆಳೆಯುತ್ತೀರಿ?

ಕೈಲ್: ನಾನು ತರಕಾರಿ ಹಾಗೂ ಗಿಡಮೂಲಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನಿನ್ನೂ ಸಾವಯವ ಕೃಷಿ ಪದ್ದತಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಇಂಥದ್ದೇ ತರಕಾರಿ ಬೆಳೆಯಬೇಕೆಂದು ಪೂರ್ತಿಯಾಗಿ ನಿರ್ಧರಿಸಿಲ್ಲ. ಪ್ರತೀ ಬಾರಿಯೂ ಹೊಸ ಹೊಸ ತರಕಾರಿಗಳನ್ನು ಬೆಳೆಸಿ ಮಣ್ಣಿಗೆ ಯಾವ ಬೆಳೆ ಅತ್ಯುತ್ತಮವೆಂದು ನಿರ್ಧರಿಸುವ ಹಂತದಲ್ಲಿ ನಾನಿದ್ದೇನೆ. ಸಧ್ಯಕ್ಕೆ, ಟೊಮ್ಯಾಟೊ, ಲೆಟ್ಟುಸ್, ಪಾಲಕ್ ಸೊಪ್ಪು ,ಬದನೆಕಾಯಿ, ಬೀಟ್ ರೂಟ್, ಬೀನ್ಸ್ವಿಧ ವಿಧ ಬೆಸಿಲ್, ಬೆಂಡೆಕಾಯಿ, ಮುಂತಾದವನ್ನು ಬೆಳೆಯುತ್ತಿದ್ದೇನೆ.

ನಾನು: ನೀವಿನ್ನೂ ಹೊಸದಾಗಿ ಕೃಷಿ ಮಾಡುತ್ತಿರುವವರು ಹಾಗೂ ಸಾವಯವ ಕೃಷಿ ಪದ್ದತಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವವರು, ನಿಮಗೆ ಕೃಷಿ ಮಾಡಬೇಕೆಂಬ ಉಮೇದು ಹಾಗೂ ಸಾವಯವ ಪದ್ದತಿಯಲ್ಲಿ ಮಾಡಬೇಕೆಂಬ ಮನಸ್ಸು ಯಾಕೆ ಬಂತು?
ಕೈಲ್: ನಾನು ತಿನ್ನುವ ಆಹಾರ ನಾನೇ ಬೆಳೆಯಬೇಕೆಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ನನ್ನ ತಂದೆ ತಾಯಿ ಇಬ್ಬರೂ ತುಂಬಾ ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದು ನನಗೆ ಗಾಬರಿಯಾಗಿತ್ತು. ಅವರ ನೋವಿನ ದಿನಗಳು ನನಗೆ ಮರೆಯಲಾಗದ್ದು. ಹಾಗೆಯೇ ನನ್ನ ಸುತ್ತ ಮುತ್ತ ಅನೇಕರನ್ನು ಹಲವು ಮಾರಣಾಂತಿಕ ಖಾಯಿಲೆಗಳು ಆವರಿಸುವುದನ್ನು ನೋಡಿ ರೀತಿಯ ರೋಗಗಳೇಕೆ ಬರುತ್ತದೆ? ಯಾವ ರೀತಿಯ ಆಹಾರಗಳಿಗೆ ನಮ್ಮ ದೇಹ ಹೇಗೆ ಸ್ಪಂದಿಸುತ್ತದೆ ಎಂದು ಕೂಲಂಕುಷವಾಗಿ ಅಧ್ಯಯನ ಮಾಡಿದೆ, ಈಗಲೂ ಮಾಡುತ್ತಿದ್ದೇನೆ. ನಾವು ತಿನ್ನುವ ಆಹಾರ ನಿಧಾನವಾಗಿ ನಮ್ಮ ದೇಹಸ್ಥಿತಿಯನ್ನು ನಿರ್ಧರಿಸುತ್ತದೆ. ಆಹಾರದಲ್ಲಿನ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಯೋಚಿಸಿದಾಗ ನಾನು ಹುಟ್ಟಿದಾಗಿನಿಂದ ತಿನ್ನುತ್ತಾ ಬಂದ ಆಹಾರ ಪದಾರ್ಥಗಳು ನನ್ನನ್ನು ರೋಗದ ಕೂಪಕ್ಕೆ ತಳ್ಳುವುದು ಖಚಿತವಾಗಿತ್ತು. ಹಾಗಾಗಿ ನಾನು ತಿನ್ನುವ ಆಹಾರ ಪದಾರ್ಥಗಳನ್ನು ಹೇಗೆ ಬೆಳೆಯಬೇಕೆಂದು ನಿರ್ಧರಿಸುವವನು ನಾನೇ ಆಗುವುದು ಅನಿವಾರ್ಯವಾಗಿತ್ತು. ದಿಸೆಯಲ್ಲಿ ಚಿಂತಿಸುವುದು ಇಡೀ ಮನುಕುಲಕ್ಕೆ ಇಂದಲ್ಲಾ ನಾಳೆ ಅನಿವಾರ್ಯ ಕೂಡಾ.

ನಾನು: ನೀವು ಬರಿಯ ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುವ ಬಗ್ಗೆ ಯೋಚಿಸಿದ್ದೀರಾ? ನಿಮ್ಮ ಸಮಯ ಹೇಗೆ ವಿನಿಯೋಗವಾಗುತ್ತಿದೆ?
ಕೈಲ್: ನಾನು ಗ್ರಾಫಿಕ್ಸ್ ಡಿಸೈನರ್. ದಿನದ ತಾಸು ನನ್ನ ತೋಟಕ್ಕಾಗಿ ಮೀಸಲಿಡುತ್ತೇನೆ.ಹಾಗೂ ವಾರಾಂತ್ಯಗಳನ್ನು ಸಾಮಾನ್ಯವಾಗಿ ತೋಟದಲ್ಲಿ ಕಳೆಯುತ್ತೇನೆ. ಸಧ್ಯಕ್ಕೆ ಹೆಚ್ಚಾಗಿ ನಾನುನೊಬ್ಬನೇ ಹಾಗೂ ಕೆಲವೊಮ್ಮೆ ನನ್ನ ಗೆಳತಿಯೊಟ್ಟಿಗೆ ಕಸುಬನ್ನು ಮಾಡಬೇಕಾಗಿರುವುದರಿಂದ ಬರಿಯ ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುವುದು ಅಸಾಧ್ಯ. ಹವ್ಯಾಸಿ ಕೃಷಿಯನ್ನೆ ತುಂಬಾ ಗಗಂಭೀರವಾಗಿ ಪರಿಗಣಿಸಿದ್ದೇನೆ. ಮುಂದೊಂದು ದಿನ ಸಾವಯವ ಕೃಷಿಪದ್ಧತಿಯ ದೊಡ್ಡ ತೋಟವೊಂದನ್ನು ಮಾಡುವಾಸೆ. ಆದರೆ ಅದಕ್ಕೆ ಇನ್ನೂ ಅನುಭವ ಹಾಗೂ ತಯಾರಿಯ ಅವಶ್ಯಕತೆ ಇದೆ. ಚಿಕ್ಕ ತರಕಾರಿ ತೋಟದ ಜೊತೆಗೆ ಸಣ್ಣ ಪ್ರಮಾಣದಲ್ಲಿ ಜೇನು ಸಾಕಣೆ ಕೂಡಾ ಮಾಡುವುದರಿಂದ ನನ್ನ ಸಮಯ ವ್ಯರ್ಥವಾಗುವುದಿಲ್ಲ. ಇಲ್ಲಿನ ರೆಸ್ಟೊರೆಂಟುಗಳಿಗೆ ನಾನು ದಿನನಿತ್ಯ ತರಕಾರಿ ಹಾಗೂ ಸೊಪ್ಪುಗಳನ್ನು ಒದಗಿಸುತ್ತೇನೆ.
ನಾನು: ನೀವು ಭೂಮಿಯ ಫಲವತ್ತತೆಯನ್ನು ಹೇಗೆ ನಿರ್ಧರಿಸುತ್ತೀರಿ? ಭೂಮಿಯನ್ನು ಫಲವತ್ತಾಗಿರಿಸಲು ಯಾವ ವಿಧಾನಗಳನ್ನು ಬಳಸುತ್ತೀರಿ?
ಕೈಲ್: ಇಲ್ಲಿ ಸುತ್ತಾ ಮುತ್ತಾ ಬೆಳೆದಿರುವ ಪೊದೆ, ಗಿಡಗಂಟಿಗಳನ್ನು ನೋಡಿ, ಇದನ್ನು ನಾನು ಪೂರ್ತಿ ಸ್ವಚ್ಚವಾಗಿರಿಸದೇ ಹಾಗೆಯೇ ಬಿಟ್ಟಿದ್ದೇನೆ. ನಾನು ಹೋದ ವರುಷ ಭೂಮಿಯನ್ನು ಬಾಡಿಗೆ ಪಡೆದಾಗ ದಟ್ಟವಾಗಿ ಹಬ್ಬಿದ್ದ ಪೊದೆಗಳಿಂದಾಗಿ ಮಣ್ಣಿಗೆ ಸೂರ್ಯನ ಕಿರಣವಾಗಲೀ, ಆಮ್ಲಜನಕವಾಗಲೀ ದೊರಕದೇ ಮಣ್ಣು ಯಾವ ಬೆಳೆಗಳನ್ನು ಬೆಳೆಯಲು ಕೂಡಾ ಅನುಪಯುಕ್ತವಾಗಿತ್ತು. ಮಧ್ಯೆ ಮಧ್ಯೆ ಅಲ್ಲಲ್ಲಿ ಗಿಡಗಂಟಿಗಳನ್ನು ಸವರಿ, ಸ್ವಲ್ಪ ಸಮತಟ್ಟು ಮಾಡಿ, ಇಲ್ಲಿಯೇ ಗೊಬ್ಬರವನ್ನು ಉತ್ಪಾದಿಸಲು ಪ್ರಾರಂಭಿಸಿದೆ. ನೆಲದಿಂದ ಅಡಿ ಎತ್ತರಕ್ಕೆ ಆಯತಾಕಾರದಲ್ಲಿ ಮರದ ಹಲಗೆಗಳನ್ನು ಹೂತು, ನಗರದ ಎಲ್ಲಾ ರೆಸ್ಟೊರೆಂಟುಗಳಿಂದ ಸಾವಯವ ತ್ಯಾಜ್ಯಗಳನ್ನೂ, ಕಾಫಿ ಡೇ ಗಳಿಂದ ಮತ್ತು ಬ್ರಿವರಿಗಳಿಂದ ಸಿಗುವ ವಿಧ ವಿಧದ ತ್ಯಾಜ್ಯಗಳನ್ನು ಇದರಲ್ಲಿ ಷೇಕರಿಸುತ್ತಾ ಹೋಗುತ್ತೇನೆ.ದಿನಕಳೆದಂತೆ ಸಾರಜನಕಯುಕ್ತ ಗೊಬ್ಬರವಾಗಿ ಪರಿವರ್ತಿತವಾಗುವ ತ್ಯಾಜ್ಯಗಳನ್ನು ನನ್ನ ಬೆಳೆಗಳಿಗೆ ಉಪಯೋಗಿಸುತ್ತೇನೆ ಎನ್ನುತ್ತ ಒಂದು ಕೋಲಿನಿಂದ ಗೊಬ್ಬರವನ್ನು ಸ್ವಲ್ಪ ಮೇಲೆ ಕೆಳಗೆ ಮಾಡಿ ಹಬೆಯಾಡುತ್ತಿದ್ದ ಮಧ್ಯದ ಭಾಗವನ್ನು ನನಗೆ ತೋರಿಸಿದ ಕೈಲ್ ಮುಂದುವರೆದು ಮತ್ತೆ ವಿವರಿಸತೊಡಗಿದರು.ಮಣ್ಣಿನ ಫಲವತ್ತತೆ ಕಾಪಾಡಲು ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೆಲವು ಹೊಸ ಗಿಡಗಂಟಿಗಳು ನಾನು ಬೆಳೆ ತೆಗೆಯಲು ಪ್ರಾರಂಭಿಸಿದ ನಂತರ ತನ್ನಿಂತಾನೇ ಸ್ವಚ್ಚಂದವಾಗಿ ಬೆಳೆಯತೊಡಗಿದವು. ಒಂದು ಹೂವಿನ ಕಾಡು ಗಿಡವನ್ನು ತೋರಿಸಿ, ಗಿಡವನ್ನು ನೋಡಿ ಇದು ಇತ್ತೀಚೆಗಷ್ಟೇ ಬೆಳೆಯಲು ತೊಡಗಿದೆ. ಇದರಲ್ಲಿ ಬಿಡುವ ಹೂವುಗಳಿಗೆ ಆಕರ್ಷಿತವಾಗಿ ಬರುವ ಕೆಲವು ಹುಳು ಹುಪ್ಪೆಗಳು ನನ್ನ ಗಿಡಗಳಿಗೆ ಹಾನಿ ಮಾಡುವ ಹುಳುಗಳನ್ನು ಕೂಡಾ ತಿನ್ನುವಂಥವು.ಹಾಗಾಗಿ ಇವು ನೈಸರ್ಗಿಕ ಕೀಟನಾಶಕವಾಗಿ ಕೆಲಸ ಮಾಡುತ್ತವೆ. ಇನ್ನು ಕೆಲವು ಗಿಡಗಳು ಸಾರಜನಕಯುಕ್ತವಾಗಿದ್ದು ಮಣ್ಣಿನ ಫಲವತ್ತತೆಯನ್ನು ತನ್ನಿಂತಾನೇ ಹೆಚ್ಚಿಸಿ ನನ್ನ ಬೆಳೆಗಳಿಗೆ ಸಹಾಯಕವಾಗಿವೆ. ನಾನು ಇವೆಲ್ಲ ಪ್ರಯೋಗಗಳನ್ನು ಪ್ರಾರಂಭಿಸಿದ ನಂತರ ಮಣ್ಣು ಸ್ವಲ್ಪ ಸ್ವಲ್ಪವಾಗಿ ತನ್ನ ಸ್ಥಿತಿಗತಿಗಳನ್ನು ಸುಧಾರಿಸಿಕೊಂಡು ಮೇಲ್ಪದರ ಬದಲಾವಣೆಯ ಹಂತದಲ್ಲಿರುವುದರಿಂದ ಹೊಸ ತರಕಾರಿ ಬೀಜಗಳನ್ನು ಬಿತ್ತಿ, ಯಾವ ತರಕಾರಿ ಇದಕ್ಕೆ ಒಗ್ಗುತ್ತದೆ ಎಂದು ಪ್ರಯೋಗ ಮಾಡುವುದಷ್ಟೇ ನನ್ನ ಕೆಲಸ.

ನಾನು: ನಿಮ್ಮ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ಇನ್ನೂ ಏನಾದರೂ ವಿಧಾನಗಳನ್ನು ಬಳಸುತ್ತೀರಾ?
ಕೈಲ್: ನಾನು ಸಾವಯವ ಫಿಶ್ ಮೋಶನ್ ಫರ್ಟಿಲೈಸರ್ಗಳನ್ನು ಬಳಸುತ್ತೇನೆ. ಅಮೇರಿಕಾದ ಬುಡಕಟ್ಟು ಜನಾಂಗದವರು ಸಿಸ್ಟೆರ್ ಗಾರ್ಡನ್ ಎಂಬ ಕೃಷಿ ಪದ್ಧತಿಯನ್ನು ಬಳಸುತ್ತಿದ್ದರು. ಜೋಳ, ಬೀನ್ಸ್ ಮತ್ತು ಸ್ಕ್ವಾಷ್ ಬೆಳೆಗಳನ್ನು ಒಟ್ಟಿಗೇ ಬೆಳೆಯುವ ಪದ್ದತಿಯಿದು. ಬೆಳೆಗಳ ಸಂಯೋಜನೆ ಒಂದಕ್ಕೊಂದು ಪೂರಕವಾಗಿದೆಯಲ್ಲದೆ ಮಣ್ಣಿನ ಪೋಶಣೆಗೆ ಸಹಕಾರಿ.ಜೋಳ ಕಾರ್ಬೋಹೈಡ್ರೇಟ್ ಯುಕ್ತವಾಗಿದ್ದರೆ, ಬೀನ್ಸ್ ಪ್ರೊಟೀನ್ ಯುಕ್ತವಾಗಿದ್ದು ಜೋಳದಲ್ಲಿ ಸಾಮಾನ್ಯವಾಗಿ ಅಮೈನೊ ಅಸಿಡ್ ಕೊರತೆಯನ್ನು ನೀಗಿಸುತ್ತದೆ.ಜೋಳದ ಖಾಂಡಗಳು ಬೀನ್ಸ್ ಬಳ್ಳಿಗಳು ಹರಡಲು ಪೂರಕವಾಗಿವೆ ಮತ್ತು ಬೀನ್ಸ್ ಬೇರುಗಳಿಂದ ಸಾರಜನಕವನ್ನು ತಾನೇ ತಾನಾಗಿ ಪಡೆಯುತ್ತವೆ. ಸ್ಕ್ವಾಷ್ ಬಳ್ಳಿಗಳು ಹಲವು ಕಳೆ ಗಿಡಗಳು ಬೆಳೆಯುವುದನ್ನು ನಿಯಂತ್ರಿಸುವುದಲ್ಲದೆ ಮಣ್ಣಿನಲ್ಲಿರುವ ತೇವಾಂಶ ಬೇಗ ಆವಿಯಾಗುವುದನ್ನು ನಿಯಂತ್ರಿಸಿ ಬೆಳೆಗಳಿಗೆ ಪೂರಕವಾಗಿವೆ. ಸಿಸ್ಟರ್ ಗಾರ್ಡನ್ ಗೆ ಬುಡಕಟ್ಟು ಜನರು ನೈಸರ್ಗಿಕ ಗೊಬ್ಬರವಾಗಿ ಮೀನನ್ನು ಬಳಸುತ್ತಿದ್ದರು. ಸತ್ತಾಗ ದುರ್ಗಂಧ ಬೀರುವ ಮೀನುಗಳನ್ನು ಬೆಳೆಗಳ ಮಧ್ಯೆ ಮಣ್ಣಿನಲ್ಲಿ ಹೂತರೆ ಹಾನಿಕಾರಕ ಕೀಟಗಳು ಬೆಳೆಗಳ ಹತ್ತಿರ ಸುಳಿಯುವುದಿಲ್ಲ. ಹಾಗೆಯೇ ದುರ್ವಾಸನೆಯನ್ನು ತಡೆದುಕೊಳ್ಳಲು ನಾವೂ ತಯಾರಿರಬೇಕಷ್ಟೆ. ಮೀನನ್ನು ಹೂಳುವ ಪದ್ಧತಿಯ ಸುಧಾರಿತ ಆವೃತ್ತಿ ಫಿಷ್ ಮೋಷನ್ ಫರ್ಟಿಲೈಸರ್.

ನಾನು: ನೀವು ನಿಮ್ಮ ಕೃಷಿಯನ್ನು ಅಭಿವೃದ್ಧಿಪಡಿಸಲು ಸಾಲ ಮಾಡಿದ್ದೀರಾ ಅಥವಾ ಮಾಡುವ ಯೋಚನೆಯಲ್ಲಿದ್ದೀರಾ? ಯಾವುದಾದರೂ ಸಂಸ್ಥೆಗಳು ಸಾವಯವ ಕೃಷಿಗಾಗಿಯೇ ಸಾಲ ನೀಡುತ್ತಿವೆಯೇ?
ಕೈಲ್: ಕಿವ ಎಂಬ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ, ಸಣ್ಣ ಕೈಗಾರಿಕೆ, ವಿಧ್ಯಾಭ್ಯಾಸ ಹೀಗೆ ಹಲವು ಕಾರಣಗಳಿಗೆ ಸಾಲ ನೀಡುತ್ತಿದೆ. ಇದು ಸಮುದಾಯದತ್ತ ಸೇವೆಯಿದ್ದಂತೆ. ಸಾಲ ನೀಡಬಯಸುವವರು ಸಂಸ್ಥೆಯ ಮೂಲಕ ಕನಿಷ್ಟ ೨೫ ಡಾಲರಿನಿಂದ ಹಿಡಿದು ತಮ್ಮ ಕೈಲಾದಷ್ಟು ನೀಡಬಹುದು. ಸಾಲಗಾರ ಅದನ್ನು ಮರುಪಾವತಿಸಿದ ನಂತರ ಹಣವನು ಹಿಂಪಡೆಯಬಹುದು ಅಥವಾ ಅದೇ ಹಣವನ್ನು ಮತ್ತೆ ಸಾಲ ನೀಡಲು ಹೂಡಿಕೆ ಮಾಡಬಹುದು. ಸಾಲ ಬೇಕಾದವರು ಯಾವುದಾದರೂ ಸಂಸ್ಥೆಯ ಮೂಲಕವೋ ಅಥವ ನೇರವಾಗಿ ಕಿವ ಅಂತರ್ಜಾಲ ಕೊಂಡಿಯ ಮೂಲಕ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿ ಅರ್ಜಿ ಸಲ್ಲಿಸಬಹುದು.

ನಾನು; ಅಮೇರಿಕಾದ ಕೃಷಿ ಕ್ಷೇತ್ರ ಪೂರ್ತಿಯಾಗಿ ವ್ಯಾಪಾರೀಕರಣವಾಗಿದೆಯಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸೀಡ್ ಫ್ರೀಡಂ ಬಗ್ಗೆ ನಿಮಗೇನಾದರೂ ಹೇಳಲಿಕ್ಕಿದೆಯೇ?
ಕೈಲ್: ನಾನು ಇತ್ತೀಚೆಗಷ್ಟೆ ಅಯೊವ ಪ್ರಾಂತ್ಯಕ್ಕೆ ಹೋಗಿದ್ದೆ. ಬಹುಮುಖ್ಯ ಆಹಾರ ಬೆಳೆಯಾದ ಜೋಳಗಳನ್ನು ಉತ್ಪಾದಿಸುವಲ್ಲಿ ಅಯೊವ ರಾಜ್ಯದ ಕೊಡುಗೆ ಮಹತ್ವದ್ದು. ನಾವು ದಿನನಿತ್ಯ ತಿನ್ನುವ ಕಾರ್ನ್ ಬ್ರೆಡ್, ಕಾರ್ನ್ ಫ್ಲೊರ್ ಗಳು ಇಂಥ ಜೋಳದಿಂದ ತಯಾರಿಸಲ್ಪಟ್ಟಿದ್ದು. ಎಥನಲ್ ಕಂಪನಿ ಕೃಷಿ ಉಪಕರಣಗಳನ್ನು ಬಾಡಿಗೆ ಕೊಟ್ಟು, ಬೀಜಗಳನ್ನು, ಕೀಟನಾಷಕಗಳನ್ನು ಮಾರಾಟ ಮಾಡಿ, ಬೆಳೆದ ಜೋಳಗಳನ್ನು ಖರೀದಿಸುವ ಒಪ್ಪಂದಕ್ಕೆ ರುಜುಮಾಡಿದೆ. ಮೇಲ್ನೋಟಕ್ಕೆ ಇದು ರೈತರಿಗೆ, ಆಹಾರೋಧ್ಯಮಕ್ಕೆ ಸಹಕಾರಿಯಾಗಿ ಕಂಡುಬಂದರೂ ಎಥನಾಲ್ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳು, ತಳೀಯವಾಗಿ ಪರಿವರ್ತಿಸಿದ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ಅವಲಂಭಿಯಾಗಿಸಿ ರೈತರ ಸ್ವಾತಂತ್ರವನ್ನು ಮೊಟಕುಗೊಳಿಸಿವೆಯಷ್ಟೆ. ಜೈವಿಕವಾಗಿ, ನೈಸರ್ಗಿಕವಾಗಿ ಸೀಡ್ ಫ್ರೀಡಂ ಬಹಳಾ ಮುಖ್ಯವಾಗುತ್ತದೆ. ಬಂಡವಾಳ ನೀತಿಯನ್ನು ಎತ್ತಿ ಹಿಡಿಯುವುದಕ್ಕಾಗಿ, ಹಣ ಹೂಡಿಕೆಗಳಿಗಾಗಿ ತಳೀಯವಾಗಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಬಳಸಬೇಕೆಂಬ ನಿಯಮ ಹೇರುತ್ತಿದ್ದರೂ, ಎಥನಲ್ ನಂಥಹಾ ಕಂಪನಿಗಳು ದುಬಾರಿ ಯಂತ್ರಗಳನ್ನು ಬಾಡಿಗೆಗೆ ಕೊಟ್ಟು, ರೈತರು ಮುಗಿಬಿದ್ದು ನಾನಾ ಆಸೆಗೆ ಬಲಿಯಾದರೂ, ಆಹಾರ ಸರಪಳಿಯಲ್ಲಿ ನಾವು ದಿನನಿತ್ಯ ತಿನ್ನುವ ಆಹಾರ ಬಹು ಮುಖ್ಯವಾಗಿದ್ದು. ಸ್ವಚ್ಚ, ಸಮೃದ್ದ ಆಹಾರಕ್ಕಾಗಿ ಮುಂದೊಮ್ಮೆ ಇವೆಲ್ಲ ಗೊಜಲುಗಳಿಂದ ಹೊರಬರುವ ದಾರಿ ಹುಡುಕುವುದು ಅಸಾಧ್ಯವಾದೀತು. ಹಾಗಾಗಿ ಬೆಳೆಯುವ ರೈತರಿಗೆ ಬೀಜ ಸಂರಕ್ಷಣೆ ಹಾಗೂ ಅವುಗಳನ್ನು ಭಿತ್ತನೆಗೆ ಮರುಬಳಕೆ ಮಾಡುವ ಸ್ವಾತಂತ್ರ ಅತೀ ಅವಶ್ಯಕ.


Note: Edited version of this article is published in Prajavani, March 7th 2017.ಮಂಗಳವಾರ, ಫೆಬ್ರವರಿ 7, 2017

ಅಮೇರಿಕದ ಹತ್ತಿ ನಾಡಿನಲ್ಲಿ ಹೀಗೊಂದು ಸಂಭಾಷಣೆ

ಧಾರಾಕಾರವಾಗಿ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೇ ಲಿನ್ನರ್ಡ್ ಚಿಲ್ಡ್ರನ್ಸ್ ನಮಗಾಗಿ ತಮ್ಮ ಬೃಹತ್ ಭಿತ್ತನೆ/ಕಟಾವು ವಾಹನಗಳ ಮಧ್ಯೆ ಕಾಯುತ್ತಿದ್ದರು. ಅಮೇರಿಕದ ಅಲಬಾಮ ರಾಜ್ಯದ ಹಂಟ್ಸ್ವಿಲ್ಲ್ ಎಂಬ ಪ್ರಾಂತ್ಯಕ್ಕೆ ೩ ದಿನಗಳ ಭೇಟಿಗೆಂದು ನಾನು ಹೊಗಿದ್ದೆ. ಹವ್ಯಾಸಿ ಕೃಷಿಕರಾದ ಲೋರ್ನ ಲೈಟ್ ಹಾಗೂ ಸ್ಟೀವ್ ದಂಪತಿಗಳೊಟ್ಟಿಗೆ ೨ ದಿನ ನಿವ್ ಹೊಪ್ ನಲ್ಲಿನ ಅವರ ನಿವಾಸದಲ್ಲಿ ಅತಿಥಿಯಾಗಿ ತಂಗಿದ್ದು ಆ ಪ್ರಾಂತ್ಯದ ಕೃಷಿ ಬದುಕಿನ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಲು ಅನುಕೂಲವಾಯಿತು. ಲೋರ್ನ ರದ್ದು ಮೂಲ ಅವಿಭಕ್ತ ಕೃಷಿ ಕುಟುಂಬ. ಇವರು ಸುಮಾರು ೫೦ ಎಕರೆಗಳಷ್ಟು ಜಾಗದಲ್ಲಿ ಹವ್ಯಾಸಿ ಕೃಷಿ ಮಾಡುತ್ತಾರಷ್ಟೆ. ಆದರೆ ಇವರ ಸುಮಾರು ೮೦೦ ಎಕರೆಗಳಷ್ಟು ಜಾಗವನ್ನು ಲಿನ್ನರ್ಡ್ ಚಿಲ್ಡ್ರನ್ಸ್ ಎಂಬ ಕೃಷಿಕ ಪ್ರತಿ ವರ್ಷ ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುತ್ತಾರೆ. ಲಿನ್ನರ್ಡ್ ಜೊತೆಗಿನ ಮಾತುಕಥೆಗಳನ್ನು ಯಥಾವತ್ತಾಗಿ ಅಕ್ಷರ ರೂಪಕ್ಕಿಳಿಸುವ ಮತ್ತು ಅಲಬಾಮ ರಾಜ್ಯದ ಕೃಷಿ ಬದುಕಿನ ಪಕ್ಷಿನೋಟದ ಪ್ರಯತ್ನವಷ್ಟೆ ಈ ಲೇಖನ.


ನಾನು: ಲಿನ್ನರ್ಡ್, ನಿಮ್ಮ ವಯಸ್ಸೆಷ್ಟು?? ಮತ್ತು ನೀವು ಎಷ್ಟು ವರ್ಷಗಳಿಂದ ಕೃಷಿಕರಾಗಿ ಜೀವನ ನಡೆಸುತ್ತಿದ್ದೀರ?

ಲಿನ್ನರ್ಡ್: ನನಗೀಗ ೬೬ ವರ್ಷ. ಜೀವನ ಪೂರ್ತಿ ನಾನು ಕೃಷಿಯನ್ನು ನಂಬಿಕೊಂಡೇ ಬದುಕಿದ್ದೇನೆ. ಬಿಳಿ ಕಾಲರಿನ ಕೆಲಸಕ್ಕಿಂತ ನನಗೆ ಕೃಷಿ ಮಾಡುವುದು ಹೆಚ್ಚು ಖುಷಿ.

ನಾನು: ನಿಮ್ಮ ಸರಿಸುಮಾರು ೬೦ ವರ್ಷಗಳ ಕೃಷಿ ಬದುಕಿನಲ್ಲಿ ಅಮೇರಿಕದ ಕೃಷಿ ಕ್ಷೇತ್ರ ಕಂಡ ಬದಲಾವಣೆಗಳ ಬಗ್ಗೆ ವಿವರಿಸುತ್ತೀರ?

ಲಿನ್ನರ್ಡ್: ಅವರ ಸುತ್ತ ನಿಂತಿದ್ದ ಧೈತ್ಯಾಕಾರದ ಬೀಜ ಭಿತ್ತನೆ, ಕಟಾವು ಮಾಡುವ ವಾಹನಗಳತ್ತ ಬೊಟ್ಟು ಮಾಡುತ್ತಾ, ಇವೆಲ್ಲಾ ನಾನು ಚಿಕ್ಕವನಿದ್ದಾಗ ಕಂಡು ಕೇಳರಿಯದ್ದು. ನನ್ನ ಆ ದಿನಗಳ ಕಲ್ಪನೆಗೆ ಮೀರಿದ್ದು. ನನ್ನ ತಂದೆಯವರು ಕುದುರೆಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರಂತೆ (ಈಗ ತಂದೆಯವರಿಗೆ ೯೦ ವರ್ಷ, ತಮ್ಮ ಮನೆ ಮತ್ತು ಜಮೀನಿನ ಕೆಲಸವನ್ನು ತಾವೊಬ್ಬರೇ ನಿಭಾಯಿಸುತ್ತಾ ಸ್ವತಂತ್ರರಾಗಿ ಬದುಕಿದ್ದಾರೆ). ನನಗೆ ತಿಳುವಳಿಕೆ ಬಂದ ಕಾಲದಲ್ಲಿ ಆಗಷ್ಟೇ ಟ್ರಾಕ್ಟರುಗಳು ಕೃಷಿ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದ್ದವು.ಆದರೂ ಭಿತ್ತನೆ, ನೀರಾವರಿಯಂತ ಸುಮಾರು ಕೆಲಸವನ್ನು ನಾವು ಸ್ವತಹ ಮಾಡಬೇಕಿತ್ತು. ಹೆಚ್ಚು ಸಮಯ ಮತ್ತು ಕಾರ್ಮಿಕರ ಅವಶ್ಯಕತೆ ಬೀಳುತ್ತಿತ್ತು. ಈಗ ಸುಮಾರು ೫೦೦೦ ಎಕರೆಗಳಷ್ಟು ಕೃಷಿ ಭೂಮಿಯಲ್ಲಿ ನಾನು ನನ್ನಿಬ್ಬರು ಮಕ್ಕಳೊಂದಿಗೆ ಅರಾಮಾಗಿ ಬೆಳೆ ತೆಗೆಯುತ್ತೇನೆ.

ನಾನು: ಕಾಲಕಾಲಕ್ಕೆ ಬದಲಾಗುತ್ತಿರುವ, ಅದೂ ತ್ವರಿತಗತಿಯಲ್ಲಿ ಬದಲಾಗುತ್ತಿರುವ ಕೃಷಿ ತಂತ್ರಜ್ನಾನಗಳನ್ನು ಬಳಸಿಕೊಳ್ಳಲು ನಿಮಗೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕಷ್ಟವಾಗಲಿಲ್ಲವೇ?

ಲಿನ್ನರ್ಡ್: ನನ್ನ ಹೆಂಡತಿಗೆ ಮೊದಲಿನಿಂದಲೂ ತುಂಬಾ ಓದುವ ಹುಚ್ಚು. ಪ್ರಪಂಚದ ಆಗು ಹೋಗುಗಳನ್ನು ಟೆಲಿವಿಜನ್ ಮೂಲಕ, ಪತ್ರಿಕೆಗಳ ಮೂಲಕ ಕೂಲಂಕುಷವಾಗಿ ತಿಳಿದುಕೊಳ್ಳುತ್ತಾಳೆ. ಕೃಷಿಯ ಹೊಸ ವಿಧಾನಗಳ ಬಗ್ಗೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ನನಗೆ ಸಲಹೆ ಕೊಡುವಲ್ಲಿ ಅವಳ ಪಾತ್ರ ಮಹತ್ವದ್ದು. ಮನೆಯ ಸುತ್ತ ಸುಮಾರು ೩೦ ಎಕರೆಗಳಷ್ಟು ಭೂಮಿಯಲ್ಲಿ ಅವಳ ಹೊಸ ಹೊಸ ಪ್ರಯೊಗಗಳು ನಡೆಯುತ್ತವೆ. ಅವಳ ಪ್ರಯೋಗಗಳ ಫಲಿತಾಂಶ, ಪರಿಣಾಮಗಳ ಕೂಲಂಕುಷ ವರದಿ ಬಂದ ನಂತರ ನಾನು ಧನಾತ್ಮಕ ಅಂಷಗಳನ್ನು ದೊಡ್ಡ ಪ್ರಮಾಣದ ಕೃಷಿಯಲ್ಲಿ ಅಳವಡಿಸಿಕೊಳ್ಳುತ್ತೇನೆ. ಇನ್ನು ಯಂತ್ರಗಳನ್ನು ಖರೀದಿಸಲು ಬ್ಯಾಂಕುಗಳಿಂದ ಸಾಲ ಪಡೆಯುವುದು ಇದ್ದೇ ಇದೆ.
ನಾನು:ನೀವು ಯಾವ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೀರಿ??

ಲಿನ್ನರ್ಡ್: ಹತ್ತಿ, ಜೋಳ ಮತ್ತು ಸೊಯಬೀನ್ ಗಳು ಈ ಭಾಗದ ಹವಾಮನಕ್ಕೆ ಸರಿಯಾಗಿ ಒಗ್ಗುವಂಥವು. ನಿಮಗೆ ಗೊತ್ತಿರಬೇಕು, ಅಲಬಾಮ ರಾಜ್ಯದ ಹಂಟ್ಸ್ವಿಲ್ಲ್ ಪ್ರಾಂತ್ಯ ಒಂದುಕಾಲದಲ್ಲಿ ಹತ್ತಿ ಮಿಲ್ಲುಗಳಿಗೆ ಪ್ರಖಾತ. ನಾಸ ಬಾಹ್ಯಾಕಾಶ ಕೇಂದ್ರ ಇಲ್ಲಿಗೆ ಕಾಲಿಡುವ ಶತಮಾನದ ಮೊದಲೇ ಹತ್ತಿ ಮಿಲ್ಲುಗಳು ಭಾರೀ ಪ್ರಮಾನದಲ್ಲಿ ತಲೆಯೆತ್ತಿದ್ದು,ಅಮೆರಿಕದ ಹತ್ತಿ ಉತ್ಪಾದನೆಯಲ್ಲಿ ಈ ಪ್ರಾಂತ್ಯ ಪ್ರಥಮ ಸ್ಥಾನದಲ್ಲಿತ್ತು.ಇಲ್ಲಿಯ ಹತ್ತಿ ಮಿಲ್ಲುಗಳು ಆ ಕಾಲದ ಕೈಗಾರೀಕರಣದಲ್ಲಿ ಇತಿಹಾಸವನ್ನ ಸೃಷ್ಟಿಸಿದ್ದವು. ಈಗಲೂ ನೀವು ಹಂಟ್ಸ್ವಿಲ್ಲಿನ ಪ್ರಮುಖ ಪೇಟೆ ಬೀದಿಗಳಲ್ಲಿ ಸುತ್ತಾಡಿದರೆ ಹಳೆಯ ಒಂದೆರಡು ಮಿಲ್ಲುಗಳು ಕಣ್ಣಿಗೆ ಬೀಳಬಹುದು.

ನಾನು: ಹತ್ತಿ, ಜೋಳ, ಸೊಯಬೀನ್ ಗಳನ್ನು ಪ್ರತೀ ವರ್ಷ ಒಂದೇ ಪ್ರಮಾಣದಲ್ಲಿ ಬೆಳೆಯುತ್ತೀರೋ ಅಥವ ವರ್ಷಕ್ಕೊಂದರಂತೆ ಸರದಿಯಲ್ಲಿ ಬೆಳೆಯುತ್ತೀರೋ?


ಲಿನ್ನರ್ಡ್: ಪ್ರತೀವರ್ಷ ಒಂದೇ ರೀತಿಯ ಬೆಳೆ ತೆಗೆಯುವುದರಿಂದ ಭೂಮಿ ಕೂಡ ಬೆಸತ್ತು ಹೊಗುತ್ತದೆ. ಕ್ರಾಪ್ ರೊಟೇಷನ್ ವಿಧಾನ ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ಅತ್ಯುತ್ತಮ ವಿಧಾನ. ಹಾಗಾಗಿ ಪ್ರತೀ ವರ್ಷವೂ ಮಣ್ಣಿನ ಫಲವತ್ತತೆ, ವಾರ್ಷಿಕ ಹವಾಮಾನಗಳ ಅಂಕಿ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಯಾವ ಬೆಳೆ ಸೂಕ್ತವೆಂದು ನಿರ್ಧರಿಸುತ್ತೇವೆ. ಕಡಿಮೆ ಮಳೆ ಸಂಭವನೀಯತೆಯಿದ್ದರೆ ಖಡಾಖಂಡಿತವಾಗಿ ಹತ್ತಿ ಬೆಳೆಯುತ್ತೇವೆ. ಸೊಯಬೀನ್ ಮಣ್ಣಿನ ಸಾರಜನಕ ಮಟ್ಟವನ್ನು ಹೆಚ್ಚಿಸುವುದರಿಂದ ಸಾರಜನಕ ಕೊರತೆಯ ಅಂಶ ಕಂಡುಬಂದಲ್ಲಿ ಸೊಯಬೀನ್ ಬೆಳೆಯುತ್ತೇವೆ. ಮಣ್ಣಿನ ಫಲವತ್ತತೆಯನ್ನು ಹಲವು ವಿಧಗಳಗ್ಗಿ ಅಳೆಯುತ್ತೇವೆ. ಅದರಲ್ಲಿ ಪಿ ಎಚ್ ಮಾಪನವೂ ಒಂದು. ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀವರ್ಷವೂ ತಕ್ಕ ಬೆಳೆಗಳನ್ನು ನಿರ್ಧರಿಸುತ್ತೇವೆ.

ನಾನು: ನೀವು ಸಾವಯವ ಕೃಷಿಗೆ ಹೆಚ್ಚು ಮಹತ್ವ ಕೊಡುತ್ತೀರೊ ಅಥವ ರಾಸಾಯನಿಕಗಳ ಬಳಕೆಗೊ?

ಲಿನ್ನರ್ಡ್: ಸಾವಯವ ಕೃಷಿ ಒಳ್ಳೆಯದೇ ಆದರೆ ಅದರಿಂದ ಹೆಚ್ಚು ಇಳುವರಿ ತೆಗೆಯುವ ಸಾಧತೆಗಳು ಕಡಿಮೆ. ಅಮೆರಿಕದ ಕೃಷಿ ಕ್ಷೇತ್ರ ರಾಸಾಯನಿಕ ಮುಕ್ತವಾಗಿಲ್ಲ. ಕೃಷಿ ಯಾಂತ್ರೀಕರಣಗೊಂಡಾಗ ಅದೊಂದು ಉದ್ಯಮವಾಗುತ್ತದೆ, ಇಂಥದ್ದೊಂದು ಸನ್ನಿವೆಶದಲ್ಲಿ ಹೆಚ್ಚು ಇಳುವರಿ ತೆಗೆಯುವ ವಿಧಾನ ಅನುಸರಿಸುವುದು ಅನಿವಾರ್ಯವಾದ್ದರಿಂದ ಸಾವಯವ ಕೃಷಿ ನಂಬಿಕೊಂಡು ಕೃಷಿ ಮಾತ್ರದಿಂದ ಜೀವನ ನಡೆಸಲು ಸಾಧವಿಲ್ಲ. ನನ್ನ ಹೆಂಡತಿ ಆಕೆಯ ಹವ್ಯಾಸೀ ಕೃಷಿ ಭೂಮಿಯಲ್ಲಿ ಮನೆಯ ಜನುವಾರುಗಳು ಹಾಗೂ ಕೊಳಿಫಾರಂನಿಂದ ಸಿಗುವ ತ್ಯಾಜ್ಯ/ಸಗಣಿಗಳಿಂದ ತರಕಾರಿ, ಹಣ್ಣುಗಳಂಥಹ ಕೆಲವು ಬೆಳೆಗಳಿಗೆ ಸಾವಯವ ಕೃಷಿ ಮಾಡುತ್ತಾಳೆ. ಆದರೆ ನನ್ನ ೫೦೦೦ ಎಕರೆ ಕೃಷಿ ಭೂಮಿಗೆ ಈ ರೀತಿಯ ಸಾವಯವ ಗೊಬ್ಬರವನ್ನು ಪ್ರತೀವರ್ಷ ಒದಗಿಸಲು ಸಾಧವಿಲ್ಲ. ಕೆಲವೊಮ್ಮೆ ವಿಂಟರ್ ವ್ಹೀಟ್ಸ್ ಬೆಳೆಯುವಾಗ ಸಾವಯವ ಕೃಷಿ ವಿಧಾನ ಅನುಸರಿಸಿದ್ದಿದೆ.

ನಾನು: ತಳೀಯವಾಗಿ ಪರಿವರ್ತಿತವಾದ ಬೀಜಗಳ ಹಾಗೂ ಅವುಗಳಿಂದ ಬೆಳೆದ ಬೆಳೆಗಳ ಬಗ್ಗೆ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಚರ್ಚೆಗಳು ನಡೆಯುತ್ತಿವೆ. ಇವುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಜಿಎಮ್ಒ ಗಳು ಆಹಾರ ಸರಪಣಿಗೆ ದೊಡ್ಡ ಹಾನಿ ಅಂತನಿಸುತ್ತಾ?

ಲಿನ್ನರ್ಡ್: ನಗುತ್ತಾ!! ಪ್ರತಿಯೊಂದು ಜೀವಿಯೂ ಹುಟ್ಟಿದ ಮೇಲೆ ಸಾಯಲೇ ಬೇಕು. ಬದುಕು ಶಾಶ್ವತ ಅಂತಾದರೆ ಮಾತ್ರ ನಾನು ಇಂಥವುಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುತ್ತಿದ್ದೆ. ನಾನು ಹಾಗೂ ನನ್ನ ಕುಟುಂಬ ಜಿಎಮ್ಒ ಗಳಿಂದ ಬೆಳೆಯಲ್ಪಟ್ಟ ಆಹಾರ ತಿನ್ನುತ್ತಾ ಬಂದಿದ್ದೇವೆ. ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದೇವೆ. ಜಿಎಮ್ಒ ಗಳಿಂದಾಗುವ ನಷ್ಟಗಳ ಬಗ್ಗೆ ನಾನು ಅಷ್ಟಾಗಿ ಯೊಚನೆ ಮಾಡಿಲ್ಲ ಆದರೆ ಜಿಎಮ್ಒ ಗಳನ್ನು ಅಧಿಕ ಇಳುವರಿ ಕೊಡುವಂತೆ, ಕ್ರಿಮಿಗಳು ಹಾನಿ ಮಾಡದಂತೆ ತಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಕೀಟನಾಶಕ ಬಳಸದೇ ಅಧಿಕ ಇಳುವರಿ ಪಡೆಯಬಹುದು. ಜಿಎಮ್ಒ ಬೀಜಗಳಿಂದ ಉತ್ಪಾದಿಸುವ ಬೆಳೆಗೂ ಹಾಗೂ ಸಾವಯವ ಬೀಜಗಳಿಂದ ಉತ್ಪಾದಿಸುವ ಬೆಳೆಗೂ ಪ್ರಮಾಣ ಹಗೂ ಗಾತ್ರಗಳಲ್ಲಿ ಬಹಳಾ ವ್ಯತ್ಯಾಸವಿರುತ್ತದೆ.

ನಾನು: ನಿಮ್ಮ ಇಷ್ಟು ವರ್ಷಗಳ ಬದುಕಿನಲ್ಲಿ ಬರಗಾಲ ನೋಡಿರುತ್ತೀರಷ್ಟೆ? ಯಾವುದಾದರೂ ಬರಗಾಲ ನಿಮ್ಮನ್ನು ಆರ್ಥಿಕವಾಗಿ ಅಲ್ಲೋಲಕಲ್ಲೋಲಗೊಳಿಸಿದ್ದಿದೆಯೆ?

ಲಿನ್ನರ್ಡ್: ನಾನು ನೋಡಿದಂತೆ ಅಮೆರಿಕದ ಕೆಲವು ಭಾಗಗಳಲ್ಲಿ ಬರಗಾಲವಾದರೆ ಮತ್ತೆ ಕೆಲವು ಭಾಗಗಳಲ್ಲಿ ಬರಗಾಲವಿರುವುದಿಲ್ಲ. ಹಾಗಾಗಿ ಆಹಾರಕ್ಕೇನೂ ಕೊರತೆಯಾಗುವುದಿಲ್ಲ. ಬರ ಅಬ್ಬರಿಸಿದ ಜಾಗದವರಿಗೆ ಒಂದೆರಡು ವರ್ಷ ನಷ್ಟವಾದರೆ, ಮತ್ತೊಂದು ಭಾಗದ ಜನತೆಗೆ ಬರಗಾಲವಾದಾಗ ನಮ್ಮ ಬೆಳೆಗಳಿಗೆ ಮತ್ತಷ್ಟು ಬೆಲೆ ಏರುತ್ತದೆ ಹಾಗಾಗಿ ಸರಿದೂಗುತ್ತದೆ. ಮತ್ತು ನೀರಾವರಿ ವ್ಯವಸ್ಥಿತವಾಗಿರುವುದರಿಂದ ಹಾಗೂ ನದಿಗಳು ಬತ್ತಿದ ಉದಾಹರಣೆಗಳಿಲ್ಲದ್ದರಿಂದ ಪ್ರಮುಖ ಆಹಾರ ಬೆಳೆಗಳನ್ನು ಬೆಳೆಯಲು ಯಾವತ್ತೂ ಕೊರತೆಯಾಗಿಲ್ಲ.

ನಾನು: ಈ ಊರಿನಲ್ಲಿ ನಿಮ್ಮಂತೆ ಕೃಷಿಯನ್ನೇ ನಂಬಿಕೊಂಡು ಬದುಕುವವರು ಎಷ್ಟು ಜನರಿದ್ದಾರೆ?

ಲಿನ್ನರ್ಡ್: ನನ್ನನ್ನೂ ಸೇರಿ ಬರೀ ೩ ಕುಟುಂಬಗಳು ಮಾತ್ರ ಕೃಷಿಕರು. ಅಮೇರಿಕದ ಜನಸಂಖ್ಯೆಯ ೨% ಕೃಷಿಕರು ಪೂರ್ತಿ ದೇಶಕ್ಕೆ ಹಾಗೂ ಹೊರ ದೇಶಗಳಿಗೂ ಆಹಾರ ಒದಗಿಸುತ್ತಿದ್ದೇವೆ. ಜಪಾನ್, ವಿಯೆಟ್ನಾಂ ಮುಂತಾದ ದೇಶಗಳಿಗೆ ನಾನು ನನ್ನ ಬೆಳೆಗಳನ್ನು ರಫ್ತು ಮಾಡುತ್ತೇನೆ. ತರಕಾರಿ, ಹತ್ತಿ,ಜೋಳ ಇನ್ನೂ ಕೆಲವು ಆಹಾರ ಪದಾರ್ಥಗಳಲ್ಲದೆ ಮಾಂಸ ಉತ್ಪಾದನೆ ಹಾಗೂ ರಫ್ತು ಕೂಡಾ ಅಮೇರಿಕದ ಪ್ರಮುಖ ಕೃಷಿಗಳಾಗಿವೆ.

(ಜಾನುವಾರು, ಕುರಿ, ಕೋಳಿ ಮುಂತಾದ ಪ್ರಾಣಿ ಸಾಕಣೆಗಳನ್ನು ಪ್ರಾಣಿ ಸಾಕಣೆ ಎಂದು ಪ್ರತ್ಯೇಕವಾಗಿ ವಿಂಗಡಿಸದೆ ಕೃಷಿ ಎಂದೇ ಸಂಭೋಧಿಸುತ್ತಿದ್ದುದು ನಾನು ಹಲವರೊಟ್ಟಿಗೆ ಕೃಷಿ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾಗ ತಿಳಿದುಬಂದಿದ್ದು).

Note: This article is published in Prajavani 7th Feb 2017

ಸೋಮವಾರ, ಜನವರಿ 16, 2017

ಅನಿಕೇತನ

ಸುತ್ತಲೂ ಗವ್ವೆನ್ನುವ ಕತ್ತಲು, ಕಡುಗಪ್ಪು ಅಮವಾಸ್ಯೆ ಆಕಾಶದಲ್ಲಿ ಆಕಾಶಗಂಗೆ ಲೆಕ್ಕಕ್ಕೆ ಸಿಗದಷ್ಟು ತಾರೆಗಳ ಹೊತ್ತು ಪೆರೇಡ್ ನಡೆಸಿದ್ದಾಳೆ. ಮಧ್ಯೆ ಜೀರುಂಡೆಗಳ ಕಲರವದಲ್ಲಿ ನಮ್ಮೆಲ್ಲ ಗಂಟು ಮೂಟೆಗಳನ್ನು ಟ್ರಕ್ಕಿನಿಂದ ಕೆಳಗಿಳಿಸಿ ಸ್ವಲ್ಪ ಸಮತಟ್ಟು ಜಾಗ ನೋಡಿ ಅಲ್ಲಲ್ಲಿ ಬಿದ್ದಿದ್ದ ಕುರುಚಲು, ಕಟ್ಟಿಗೆಗಳನ್ನು ಒಟ್ಟುಗೂಡಿಸಿ ಕ್ಯಾಂಪ್ ಫಯರ್ ನಾಮಾಂಕಿತ  ಬೆಂಕಿ ಒಟ್ಟಿ ಆಯಿತು. ನಾನು ಬೆಂಕಿ ದೊಡ್ಡದು ಮಾಡಲು ಪ್ಲಾಸ್ಟಿಕ್ ತಟ್ಟೆಯ ಒಂದು ತುದಿ ಹಿಡಿದು ಜೋರಾಗಿ ಗಾಳಿ ಬೀಸಲು ತೊಡಗಿದೆ. ಅದು ಕ್ಯಾಂಪಿಂಗಿಗೆಂದೇ ಮೀಸಲಿಟ್ಟ ಜಾಗವಾಗಿರದಿದ್ದಕ್ಕೆ ಸುತ್ತಮುತ್ತಲೂ ನಮ್ಮ ನಾಲ್ಕೂ ಜನರನ್ನು ಬಿಟ್ಟು ಇನ್ನಾವ ಹೊಮೋ ಸೆಪಿಯನ್ಸ್ ಸುಳಿವಿದ್ದುದೂ ಕಂಡು ಬರಲಿಲ್ಲ. ನಾವೂ ಸರಿ ಸುಮಾರು ಸಂಜೆ ಗಂಟೆಯಿಂದ ಒಂದೇ ಒಂದು ನರ ಮನುಷ್ಯನ ಸುಳಿವಿಗೆ ಕಾದೂ ಕಾದೂ ಬೇಸತ್ತು ಕತ್ತಲಾವರಿಸುತ್ತಿದ್ದಂತೆ ನಮ್ಮ ಈಗಿನ ಹೀನ ಪರಿಸ್ಥಿತಿಯನ್ನು ಸಂತೊಷದಿಂದ ಅನುಭವಿಸತೊಡಗಿದ್ದೆವು. ಇದೊಂಥರಾ ನಮಗೊದಗಿದ ಅನಿರೀಕ್ಷಿತ ಸಾಹಸದ ಅವಕಾಶ ಎನ್ನಬಹುದೇನೊ. ಗ್ಲೆನ್ ಮತ್ತು ಮೈಕಾ ಬೆಂಕಿಯ ಬೆಳಕಲ್ಲಿ ಟೆಂಟ್ ಹಾಕಲು ತೊಡಗಿದರು. ನಾನು ಹಿತವಾಗಿ ಬೆಂಕಿ ಊದುತ್ತಾ ಉರಿ ಹೆಚ್ಚಿಸಲು ತೊಡಗಿದ್ದೆ. ಚಳಿಯಲ್ಲಿ ಬೆಂಕಿ ಊದುವ ಅನುಭೂತಿಯನ್ನು ಬೇರೆಯವರಿಗೆ ಬಿಟ್ಟುಕೊಡಕು ಮನಸ್ಸು ಕೇಳುತ್ತಿರಲಿಲ್ಲ. ಬೆಕಾ ಟ್ರಕ್ಕಿನ ಡಿಕ್ಕಿ ತೆಗೆದು ಅಳಿದುಳಿದ ಬಿಯರ್ ಬಾಟಲ್, ಚಿಪ್ಸ್ ತೆಗೆದು ರಾತ್ರಿಯ ಔತಣಕ್ಕೆ ರೆಡಿ ಮಾಡುತ್ತಿದ್ದಳು. ನಮ್ಮ ಕಾರಿನಲ್ಲಿದ್ದ ಯಾವ ಸಾಮಾನು ಕೊಡಾ ಹೊರತೆಗೆಯಲು ಸಾಧ್ಯವಿಲ್ಲದ ಕಾರಣ ನಾವಿಬ್ಬರೂ ಬೆಕಾ ಮತ್ತು ಮೈಕಾ ರನ್ನೆ ನೆಚ್ಚಿಕೊಳ್ಳಬೇಕಿತ್ತು. ನನ್ನ ಮತ್ತು ಗ್ಲೆನ್ ಗೆಳೆತನ ವರ್ಷ ಹಳತು. ಅಮೆರಿಕನ್ನನಾದರೂ ಭಾರತೀಯ ಮೌಲ್ಯಗಳ ಬಗ್ಗೆ ಅತೀ ಗೌರವ ಇಟ್ಟುಕೊಂಡ ಗ್ಲೆನ್ ನನ್ನ ಅಚ್ಚು ಮೆಚ್ಚಿನ ಗೆಳೆಯ ಹಾಗೂ ಫೆಲೊ ಟ್ರಾವೆಲರ್. ನಮ್ಮಿಬ್ಬರ ತತ್ವಗಳು, ಹುಚ್ಚಾಟಗಳು ಸುಮಾರು ಸೇಮ್ ಪಿಂಚ್ ಆಗಿದ್ದಕ್ಕೆ ಎಲ್ಲಾ ಬಿಟ್ಟು ಡಾಕ್ಯುಮೆಂಟರಿ ಮಾಡುವ ನೆಪವೊಡ್ಡಿ, ಸಾಫ್ಟ್ವೇರಿನ ಸಾಫ್ಟ್ ಕೂಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ದಕ್ಷಿಣ ಅಮೇರಿಕ ಸುತ್ತಲು ವರ್ಷ ಹೊರಟಿದ್ದು. ವಾಪಾಸು ಮತ್ತೆ ಅಮೇರಿಕಾಕ್ಕೆ ಕಾಲಿಟ್ಟ ಮೇಲೆ ಕ್ಯಾಲಿಫೋರ್ನಿಯ, ಯೂಟ, ನೆವಾಡ ರಾಜ್ಯಗಳನ್ನು ಸುತ್ತುವ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆಯಷ್ಟೇ ಡೆತ್ ವ್ಯಾಲಿ ಎಂಬ ನಿಗೂಢವೆನಿಸುವ, ಭೂಮಿಯಲ್ಲದೆ ಬೇರೆ ಪ್ರದೇಶವೇನೋ ಎಂದು ತೋರುವ ಸುಂದರ ಭೂಪ್ರದೇಷಕ್ಕೆ ಕಾಲಿಟ್ಟಿದ್ದು. ಹಾಗೇ ನಿನ್ನೆ ರಾತ್ರಿ ಕ್ಯಾಂಪ್ ನಲ್ಲಿ ಹರಟುತ್ತಾ ಕುಳಿತಿದ್ದಾಗ ಪಕ್ಕದಲ್ಲಿ ಬೆಂಕಿ ಕಾಯಿಸುತ್ತಾ ಕುಳಿತಿದ್ದ ಹುಡುಗಿಯರ ಪರಿಚಯವಾಗಿತ್ತು. ಮೈಕಾ ಇಟಾಲಿಯನ್-ಜರ್ಮನ್ ಆದರೂ ತಕ್ಕಮಟ್ಟಿಗೆ ಇಂಗ್ಲಿಷ್ ಮಾತನಾಡುತ್ತಿದ್ದಳು. ಬೆಕಾ ಯುರೊಪ್ ಪ್ರವಾಸದಲ್ಲಿ ಮೈಕಾ ಳೊಟ್ಟಿಗೆ ತಂಗಿದ್ದಕ್ಕೆ ಇವರಿಬ್ಬರ ಪರಿಚಯ. ಮೈಕಾಳಿಗೆ ಅಮೇರಿಕಾ ಪ್ರವಾಸದಲ್ಲಿ ಈಗ ಜೊತೆ ನೀಡುತ್ತಿದ್ದಳು.

ಡೆತ್ ವ್ಯಾಲಿಗೆ ಇದು ನನ್ನ ೩ನೇ ಭೇಟಿ. ಹೆಸರಿಗೆ ತಕ್ಕಂತೆ ಸಾವಿನ ಕಣಿವೆಯೇನೋ ಎನ್ನುವ ಭಾವನೆ ಹುಟ್ಟಿಸುವ ಪ್ರದೇಶವಿದು. ಪ್ರಕೃತಿಯ ಭೀಕರ ವಿಕೋಪಗಳಿಗೆ ತುತ್ತಾದ ಸುಂದರ ಪಳೆಯುಳಿಕೆಯಂತೆ ಗೋಚರಿಸುವ ಸಾವಿನ ಕಣಿವೆ, ಎಷ್ಟೋ ಮಿಲಿಯನ್ನು ವರುಷಗಳ ಊಹಾತೀತ ಇತಿಹಾಸವನ್ನು ತನ್ನೊಳಗೆ ಹುದುಗಿಕೊಂಡು ಗಾಢ ನಿದ್ರೆಯಲ್ಲಿದೆಯೇನೋ ಎನಿಸುತ್ತದೆ. ಪ್ರತೀ ಬಾರಿ ಇಲ್ಲಿ ಬಂದಾಗಲೂ ಹೊಸತೇನೋ ಅನುಭವವಾಗುವ ನನಗೆ ಇಲ್ಲಿಂದ ಹೊರಡುವ ಮೊದಲು ಏನಾದರೂ ಎಡವಟ್ಟು ಆಗುತ್ತದೆ ಎಂದು ಮೊದಲೇ ಗೊತ್ತಿತ್ತು. ಹಾಗೇ ಇವತ್ತು ನಾವು ನಮ್ಮ ಹಳೆ ಕಾರನ್ನು ಜನ ಸಂಚಾರವಿಲ್ಲದ ಯಾವುದೊ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಅವರಿಬ್ಬರೊಟ್ಟಿಗೆ ಅವರ ಟ್ರಕ್ಕಿನಲ್ಲಿ ಅಲೆದಾಡಿ, ಮತ್ತೆ ಸಂಜೆ ವಾಪಾಸು ಬಂದು ನೋಡಿದಾಗ ನಮ್ಮ ಕಾರಿನ ಕೀ ಕಳೆದು ಹೋಗಿತ್ತು. ನಮಗೆ ಕಾರು ಬಾಡಿಗೆ ಕೊಟ್ಟ ಕಂಪನಿಗೆ ಕರೆ ಮಾಡಿ ಮುಂದಿನ ವ್ಯವಸ್ಥೆ ಮಾಡಲು ಫೊನ್ ನೆಟ್ವರ್ಕ್ ಇಲ್ಲ. ಅಲ್ಲೆಲ್ಲೋ ೧೦ ಮೈಲಿ ದೂರ ಇದ್ದ ಪ್ರವಾಸೋಧ್ಯಮ ಮಾಹಿತಿ ಕೇಂದ್ರವೊಂದಕ್ಕೆ ಹೋಗಿ, ಅಲ್ಲಿಂದ ಕಾರನ್ನು ಬಾಡಿಗೆ ಕೊಟ್ಟ ಕಂಪನಿಗೆ ಕರೆ ಮಾಡಿ ಎಲ್ಲ ಮಾಹಿತಿಗಳನ್ನೂ ವ್ಯವಸ್ಥಿತವಾಗಿ ಕೊಟ್ಟು, ನಮಗೆ ಮತ್ತೊಂದು ಕಾರು ಕಳುಹಿಸುವಂತೆ ಕೋರಿದ್ದರೂ, ೨೦೦ ಮೈಲಿ ದೂರದಿಂದ ದಿನವೇ ನಿರ್ಜನ ಪ್ರದೇಶ ಹುಡುಕಿಕೊಂಡು ಯಾರಾದರೂ ಬರುತ್ತಾರೆಂಬ ನಂಬಿಕೆ ಇರಲಿಲ್ಲ. ಹುಡುಗಿಯರ ಟ್ರಕ್ಕಿನ ಪೆಟ್ರೊಲ್ ಕೂಡಾ ಖಾಲಿ ಆಗುತ್ತಾ ಬಂದಿದ್ದು, ಪಕ್ಕದಲ್ಲೆಲ್ಲೂ  ಪೆಟ್ರೊಲು ಬಂಕ್ ಇಲ್ಲದ್ದರಿಂದ ನಾವು ಹೆಚ್ಚು ತಿರುಗಾಡುವಂತಿರಲಿಲ್ಲ. ಹಾಗಾಗಿ ದಿನ ನಿರ್ಜನ ಪ್ರದೇಶದಲ್ಲಿ ಹೊಸ ಕಾರಿಗಾಗಿ ಕಾಯುತ್ತಾ ಅಲ್ಲೇ ಉಳಿಯುವುದು ಅನಿವಾರ್ಯವಾಗಿತ್ತು.

ಟೆಂಟು ಕಟ್ಟಿ ಆದ ಮೇಲೆ ಬೆಂಕಿಯ ಸುತ್ತಾ ಮತ್ತೆ ಮಾತಿನ ಕಲರವ. ಬಿಯರ್ ಹೀರುತ್ತಾ, ಮನಸ್ಸಿಗೆ ಬಂದಿದ್ದನ್ನು ಹರಟುತ್ತಾ ನಿರ್ಜನ ಪ್ರದೇಶದಲ್ಲಿ ಕೂರುವ ಘಳಿಗೆ ಜೀವನದ ಅತ್ಯಂತ ಹಿತ ಘಳಿಗೆ ಎಂದರೆ ಮಕ್ಕಳು ಮರಿ ಸಂಸಾರ ಮಾಡಿಕೊಂಡು, ಮನೆ ಕಟ್ಟಿ ಬೆಚ್ಚಗೆ ಹೊದ್ದು ಮಲಗಿದ ನನ್ನ ಬಾಲ್ಯದ ಗೆಲತಿಯರು ಯಾರಾದರೂ ಬೆಚ್ಚಿಬಿದ್ದಾರು. ೩೭ ವರ್ಷದ ಮೈಕಾ ತನ್ನ ೧೫ ವರ್ಷಗಳ ಸುತ್ತಾಟದ ಅನುಭವಗಳನ್ನೆಲ್ಲಾ ಹೇಳುತ್ತಿದ್ದಳು. ಇಟಲಿ ಮೂಲದವರಾದ ತನ್ನ ತಂದೆಯವರ ಕ್ಯಾಥೊಲಿಕ್ ನಡವಳಿಕೆಗಳು, ಅದರಿಂದಾಗಿ ತಾನು ತಡಕೊಳ್ಳಬೇಕಾದ ಮದುವೆ, ಮಕ್ಕಳು, ಹಾಗೂ ಕ್ರಿಶ್ಚಿಯನ್ ಹುಡುಗನನ್ನೇ ಮದುವೆಯಾಗಬೇಕೆಂಬ ತಂದೆಯ ವರಾತಗಳು, ಪದೇ ಪದೆ ತಂದೆಯ ತಲೆ ತುಂಬುವ ಇಟಲಿಯಲ್ಲಿ ನೆಲೆಸಿರುವ ಅವರ ಸಂಭಂದಿಕರು, ಇವನ್ನೆಲ್ಲಾ ಸಂಭಾಳಿಸಲು ಒದ್ದಾಡುವ ತಾಯಿ.. ಅಬ್ಬಬ್ಬಾ!! ಅವಳು ತನ್ನ ಕಥೆಯನ್ನೆಲ್ಲಾ ಸಾಕಾರವಾಗಿ ಹೇಳುತ್ತಿದ್ದರೆ,, ಅರೆ ಹೌದಲ್ಲಾ!! ಪ್ರಪಂಚದ ಎಲ್ಲಾ ಭಾಗಗಳ ಜನರಲ್ಲೂ ಒಂದಲ್ಲಾ ಒಂದು ರೀತಿಯ ರಿಲೀಜಿಯಸ್ ನಡವಳಿಕೆಗಳೂ ಹಾಗೂ ಅದರ ಔಟ್ಪುಟ್ಟೂ ಒಂದೇ ಅಲ್ಲವೇ?? ಭಾರತದ ಮಲೆನಾಡಿನ ಮೂಲೆಯಲ್ಲಿ ಹುಟ್ಟಿದ ನನ್ನ ಅನುಭವಗಳು ಇಟಾಲಿಯನ್ ತಂದೆ ಹಾಗೂ ಜರ್ಮನ್ ತಾಯಿಗೆ ಹುಟ್ಟಿದ ಮೈಕಾ ಅನುಭವಗಳೂ ಒಂದೇ ತೆರನಾಗಿದ್ದರೆ!! ಬಹುಶಹ ಪ್ರಪಂಚ ಬದಲಾಗುತ್ತಿದೆ, ನಾವು ಹಿಂದೆಂದಿಗಿಂತಾ ಮುಂದುವರೆದಿದ್ದೇವೆ ಎಂಬ ಕಲ್ಪಿತ ಸುಳ್ಳನ್ನು ನಂಬುತ್ತಾ, ಬೆನ್ನು ತಟ್ಟಿಕೊಳ್ಳುತ್ತಾ ಬದುಕುತ್ತಿರುವ ನಾವೆಷ್ಟು ಮೂರ್ಖರು!!

ಭಾರತಕ್ಕೆ ಭೇಟಿ ನೀಡಿದಾಗೊಮ್ಮೆ ಗ್ಲೆನ್ ಹೇಳುತ್ತಿದ್ದ, ಕ್ವಾಂಟಮ್ ಫಿಸಿಕ್ಸ್ ಅಸ್ತಿತ್ವಕ್ಕೆ ಬರುವ ಮೊದಲೆ ಪುರಾತನ ಭಾರತೀಯ ಆಧ್ಯಾತ್ಮ ಅವೆಲ್ಲವನ್ನೂ ಸಾರಾ ಸಗಟಾಗಿ ವಿವರಿಸಿತ್ತು. ಆದರೆ ಭಾರತದ ಈಗಿನ ಪರಿಸ್ಥಿತಿ ನೋಡಿದರೆ ಭಾರತದ ಬಗ್ಗೆಯಿದ್ದ ನನ್ನ ಕಲ್ಪನೆಗಳು ಬದಲಾಗುತ್ತಿವೆ. ಭಾರತೀಯ ಶಿಕ್ಷಣ ವ್ಯವಸ್ಥೆ ಬರೀ ಟೆಕ್ ಸಪೊರ್ಟರುಗಳನ್ನು ನಿರ್ಮಿಸುವ ಕಾರ್ಖಾನೆ ಆಗಿದೆ, ಸ್ವಾಮಿ ವಿವೆಕಾನಂದರ ತತ್ವಗಳನ್ನು ಅರಗಿಸಿಕೊಳ್ಳದವರೆಲ್ಲ ವಿವೇಕಾನಂದರನ್ನು ರಿಲಿಜಿಯಸ್ ಐಕನ್ ಮಾಡಿ ಅಪಚಾರವೆಸಗುತ್ತಿದ್ದಾರೆ, ಧರ್ಮಕ್ಕಿರುವ ವಿಶಾಲಾರ್ಥದ ಗಾಳಿ ಸೊಕಿಸಿಕೊಳ್ಳದವರೆಲ್ಲಾ ವೀರ ಧರ್ಮ ಸಂರಕ್ಷಕರಾಗುತ್ತಿದ್ದಾರೆ, ೪೦೦೦ ವರ್ಷಗಳಿಂದ ಮನುಷ್ಯನ ಮೂಲ ಗುಣ ಬದಲಾಗಿಯೇ ಇಲ್ಲವೇನೊ. ಅದಕ್ಕೇ ಮಹಾಭಾರತ, ರಾಮಾಯಣ ಇನ್ನೂ ಪ್ರಸ್ತುತ. ಮತ್ತದೇ ಗೆಲಿಲಿಯೋಗಳು ವ್ಯವಸ್ಥೆಯ ಚಂಡಮಾರುತಕ್ಕೆ ಸಿಲುಕಿ ಸತ್ಯವನ್ನು ಎತ್ತಿ ಹಿಡಿಯಲು, ಮಾನವತಾವಾದವನ್ನು ಮುನ್ನಡೆಸಲು ಇನ್ನೂ ಹೆಣಗುತ್ತಿದ್ದಾರೆ, ಗುಂಪಲ್ಲಿ ಗೋವಿಂದ ಎನ್ನುವ ಬಹುಸಂಕ್ಯಾತ ಹಿಂಬಾಲಕ ಪ್ರವೃತ್ತಿ ಪ್ರಪಂಚದ ಎಲ್ಲಾ ಕಾಲ-ದೇಶಗಳಲ್ಲೊ ಹಿಂದೆಯೂ ಇತ್ತು, ಇಂದೂ ಇದೆ ಮತ್ತು ಮುಂದೆಂದಿಗೂ ಪ್ರಸ್ತುತವೇ. ಇದೆಂಥಾ ವಿಪರ್ಯಾಸ!! ಪ್ರಪಂಚದ ಅಲ್ಲಲ್ಲಿ "ರಾಫ್ಟರ್" ಎನ್ನುವ ಕಾರ್ಯಕ್ರಮ ಜರುಗುತ್ತದೆ. ಇನ್ನೇನು ಭೂಮಿಗೆ ಕೊನೆಗಾಲ ಬಂದೇ ಬಿಟ್ಟಿದೆ, ಅದಕ್ಕೆ ನಾವೇನು ಮಾಡಬೇಕು, ಏಸು ಕ್ರಿಸ್ತ ಏನು ಮಾಡಬಲ್ಲ ಎಂದು ಹಲುಬುವ ಅನೇಕ ಮಂದಿ ಒಂದೆಡೆ ಸೇರಿ ಚಿಂತನ- ಮಂಥನ ಸಭೆ ನಡೆಸಿ ಸಾವನ್ನೆದುರಿಸಲು ಪದೇ ಪದೇ ತಯಾರಾಗುವ ತಿಕ್ಕಲುತನವನ್ನು ಗ್ಲೆನ್ ನನಗೆ ವರ್ಣರಂಜಿತವಾಗಿ ಆಗಾಗ ಹೇಳುತ್ತಿರುತ್ತಾನೆಅವನು ತಮಾಷೆಯಾಗಿ "ಆರ್ ಯೂ ರೆಡಿ ಫಾರ್ ಎಂಡ್??" ಎಂದರೆ, ನಾನು ಅಷ್ಟೇ ತಮಾಷೆಯಾಗಿ "ನಾವು ಮಂಗಳ ಗ್ರಹಕ್ಕೆ ಓಡಿ ಹೋಗಿ, ಮುಂದಿನ ಜೆನರೇಶನ್ನಿಗೆ ಆಡಮ್ ಮತ್ತೆ ಈವ್ ಆಗೋಣ ಬಿಡು, ಅಲ್ಲಿ ರಿಲೀಜನ್ನು, ಗಡಿ, ಮನುಷ್ಯನ ಬಣ್ಣ, ಆಕಾರ ಇವೆಲ್ಲವುಗಳಿಗಿಂತ ಮಿಗಿಲಾದ ಪ್ರಪಂಚವೊಂದನ್ನು ನಿರ್ಮಿಸೋಣ. ಅಮ್ ರೆಡಿ ಫಾರ್ ನಿವ್ ಬಿಗಿನಿಂಗ್" ಎನ್ನುತಾ ನಗುತ್ತಿದ್ದೆ. ಇಷ್ಟಾದರೂ "ನಿನ್ನ ಕಂಡ್ರೆ ನಂಗಿಷ್ಟ ಕಣೊ, ನಿನ್ನ ಹುಚ್ಚುತನಗಳನ್ನ ಜೀವನ ಪೂರ್ತಿ ತಡೆದುಕೊಳ್ಳಬಲ್ಲೆ" ಅಂತ ಗ್ಲೆನ್ ಗೆ ಹೇಳೊಕೆ ಸಾಧ್ಯ ಆಗಿರಲೇ ಇಲ್ಲ.

ಬೆಕಾ ತನ್ನ ಮುಂದಿನ ಅಂಟಾರ್ಟಿಕ ಪ್ರವಾಸಕ್ಕೆ ತಾನು ಹೇಗೆ ಹೇಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಹೋಗುತ್ತಿದ್ದಳು. ಅಮೇರಿಕ ಮೂಲದವಳಾದ ಆಕೆಗೆ ತನ್ನ ಜೀವನದ ಬಗ್ಗೆ ಸ್ಪಷ್ಟ ನಿಲುವುಗಳಿದ್ದವು. ಎಷ್ಟು ಪ್ರಭುದ್ದವಾಗಿ ತನ್ನ ಅನುಭವಗಳನ್ನು ಬಿಚ್ಚಿಡುತ್ತಿದ್ದಳೆಂದರೆ ೨೩ ವರ್ಷದ ಹುಡುಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಪಂಚದ ಇಷ್ಟೆಲ್ಲಾ ದೇಶಗಳನ್ನು ಹೇಗೆ ಸುತ್ತಿದ್ದಾಳೆ, ಹೇಗೆಲ್ಲಾ ಬದುಕಿದ್ದಾಳೆ ಎಂದು ಆಶ್ಚರ್ಯವಾಗುತ್ತಿತ್ತು. ಚಿಕ್ಕಂದಿಂದಲೂ ಕುಟುಂಬದಿಂದ ಚೊಕ್ಕ ಪೋಷಣೆ, ಪ್ರೊತ್ಸಾಹ ಸಿಕ್ಕ ಪ್ರತೀ ಹುಡುಗಿಯೂ ಸ್ಪಷ್ಟ ನಿರ್ಧಾರ ತಳೆಯುವಲ್ಲಿ ಬಹುಬೇಗ ಸಮರ್ಥಳಾಗುತ್ತಾಳೇನೋಬೆಕಾ ನನ್ನನ್ನು ಕೇಳಿಯೇ ಬಿಟ್ಟಳು "ನೀನು ಸ್ವತಂತ್ರವಾಗಿ ನಿನ್ನ ಬದುಕಿನ ಬಗ್ಗೆ ನಿಲುವುಗಳನ್ನು ತೆಗೆದುಕೊಳ್ಳಲು ಕಲಿತದ್ದು ಯಾವಾಗ??" ಬಹುಶಹ ಅವಳ ವಯಸ್ಸಿನಲ್ಲಿ ನಾನಿನ್ನೂ ಸ್ಥಿತ್ಯಂತರ ಘಟ್ಟ ತಲುಪಿರಲೇ ಇಲ್ಲ. ಕಾಲೇಜಿನಲ್ಲಿ ಕುವೆಂಪು, ತೇಜಸ್ವಿಯವರನ್ನು ಓದಿಕೊಂಡು ವಿಶ್ವಮಾನವ ತತ್ವದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದರೂ, ೨೫ ವರ್ಶವಾದಾಗಲೂ ನನಗೆ ತಂದೆ ತಾಯಿಯರನ್ನು ನೋಯಿಸಿ, ಎಲ್ಲ ಬಿಟ್ಟು ಹೊರ ನಡೆವ ತಾಕತ್ತು ಖಂಡಿತಾ ಇದ್ದಿರಲಿಲ್ಲ. ಅವೇ ಗೊಂದಲಗಳು, ಭಾವನೆಗಳ ಸುಳಿಯಲ್ಲಿ , ನನ್ನತನವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಬದುಕಿನ ಘಟ್ಟವನ್ನು ತಲುಪಿ ಬಿಟ್ಟಿದ್ದೆ. ಜಾತಿ ಬಿಟ್ಟು ಲವ್ವು ಮಾಡಿದರೆ ಮನೆ ಮರ್ಯಾದೆ ಹರಾಜಾಗುತ್ತದೆ ಎಂಬ ಕಾಲದ ಮನಸ್ಥಿತಿ ಈಗ ಎಷ್ಟು ಫನ್ನಿ ಅನ್ನಿಸುತ್ತೆ. ನನ್ನ ನಿಶ್ಚಿತಾರ್ಥದ ಹಿಂದಿನ ದಿನ, ನಾನು ಇಷ್ಟ ಪಟ್ಟ ನನ್ನದೇ ಜಾತಿಯ ಹುಡುಗ "ಯಾರೊ ಬಂದು ನಿನ್ನ ಮನೆತನದ ಬಗ್ಗೆ ಬಹಳಾ ಕೆಟ್ಟ ಮಾತಾಡಿದ್ರು, ನನ್ನ ಅಪ್ಪ ಅಮ್ಮ ಯಾರಿಗೂ ನಾನು ನಿನ್ನ ಮದುವೆ ಆಗುವುದು ಇಷ್ಟವಿಲ್ಲ, ಇದು ಇಲ್ಲಿಗೆ ನಿಲ್ಲಿಸೋಣ" ಎನ್ನದಿದ್ದಿದ್ದರೆ!!, ಅವ ನಾನು ಒಟ್ಟಿಗೆ ಬೆಂಗಳೂರಿಗೆ ಹೋಗುತ್ತೆವೆ, ಏನಂತ ಕೇಳಿ, ಮಾತಾಡಿ ಎಲ್ಲ ಸರಿಯಾಗಿ ವಿವರಿಸಬೇಕು. ಯಾಕೆಂದರೆ ಇದು ನನ್ನ ಮನೆಯ ಮರ್ಯಾದೆ ಪ್ರಶ್ನೆ ಅಂತ ರಾತ್ರಿ ಬಸ್ ಸ್ಟಾಂಡಿನಲ್ಲಿ ಹೆದರುತ್ತಾ, ಅವನಿಗಾಗಿ ಕಾಯುತ್ತಾ ಒಬ್ಬಳೇ ನಿಲ್ಲದಿರುತ್ತಿದ್ದರೆ!! ಹೌದು, ಅವನೇನೋ ನನಗೆ ಹೇಳದೇ ಕೇಳದೇ ರೈಲು ಹತ್ತಿ ಹೋಗಿದ್ದ. ನಮ್ಮಿಬ್ಬರ ಬಸ್ಸಿನ ಟಿಕೆಟು ಮಾತ್ರ ನನ್ನ ಕೈಲಿತ್ತು.   ರಾತ್ರಿ ಅವೇಳೆಯಲ್ಲಿ ಒಬ್ಬಳೆ ಅಳುತ್ತಾ ನಿಂತು ಬಸ್ ಕಾದಿದ್ದಿದೆಯಲ್ಲ ಅನುಭವ, ಅದರ ಹಿಂದಿದ್ದ ಬದುಕಿನ ಬಗೆಗಿನ ನನ್ನ ಭಯ, ಮನೆಯವರನ್ನೂ, ಸಮಾಜವನ್ನೂ ಎದುರಿಸಬೇಕಲ್ಲ ಎಂಬ ಭಯ, ಮುಂದೇನಾಗುತ್ತೋ ಎನ್ನುವ ಭಯ, ನನ್ನ ಭವಿಷ್ಯ ಪೂರ್ತಿ ಕತ್ತಲಾವರಿಸಿತೇ ಎಂಬ ಭಯ. ರಾತ್ರಿ ಅತ್ತಿದ್ದು ಯಾಕಾಗಿ?? ಕತ್ತಲಲ್ಲಿ ಒಬ್ಬಳೆ ನಿಂತಿದ್ದಕ್ಕೋ ಅಥವಾ ಭವಿಷ್ಯದಲ್ಲಿ ಕತ್ತಲೆ ಕೂಪಕ್ಕೆ ಬೀಳಲಿದ್ದೇನೆ ಎಂಬ ಭಯಕ್ಕೋ?? ಆಮೇಲೆ ಇನ್ನೊಮ್ಮೆ ರೀತಿ ಜೀವನದಲ್ಲಿ ಯಾವತ್ತೂ ಭಯ ಬೀಳಬಾರದೆಂಬು ನಾನು ಮಾಡಿಕೊಂಡ ಗಟ್ಟಿ ನಿರ್ಧಾರಗಳು, ನನ್ನ ಜೀವನ ನಿಜವಾಗಿ ಶುರುವಾಗಿದ್ದೇ ರಾತ್ರಿ. ನಂತರ ನನ್ನನ್ನು, ನನ್ನ ಬದುಕನ್ನು ನಾನೆಷ್ಟೇ ಪ್ರಯೋಗಗಳಿಗೆ ಒಡ್ಡಿಕೊಂಡರೂ, ಎಷ್ಟೇ ರಾತ್ರಿ ಒಬ್ಬಳೆ ಓಡಾಡಿದರೂ, ಎಲ್ಲೋ ಟೆಂಟಿನಲ್ಲಿ, ಅವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಒಬ್ಬಳೇ ಮಲಗುವಾಗ ಎಲ್ಲೂ ನಾನು ಭಯ ಬೀಳಲೇ ಇಲ್ಲ. ಯಾರೋ ಊರ ಮಂದಿಗೆ ನನ್ನ ಬದುಕನ್ನು ಬದುಕಲು ಬಿಡದೆ, ಜಗದ ಜಡ್ಜ್ಮೆಂಟುಗಳಿಗೆ ಕಿವುಡಾಗಿ, ನನ್ನನ್ನು ನಾನು ಬೇರೆಯವರಿಗೆ ಅರ್ಥ ಮಾಡಿಸಲು ಹೆಣಗದೇ, ನನ್ನ ಪಾಡಿಗೆ ನನಗೆ ಸರಿ ತೋಚಿದ್ದನ್ನು ಮಾಡಿಕೊಂಡು ಹೋಗುತ್ತಾ ಬದುಕಿನ ಬಗೆಗೊಂದು ಉಡಾಫೆ ಬೆಳೆಸಿಕೊಂಡುಬಿಟ್ಟಿದ್ದೆಅಪರಿಚಿತರು ಪರಿಚಿತರಾಗಿ, ಪರಿಚಿತರು ಸ್ನೇಹಿತರಾಗಿ,ಕೆಲವು ಸ್ನೇಹಿತರು ಬರೀ ಪರಿಚಿತರಾಗಿ, ಅಪರಿಚಿತರಾಗಿ ಬದಲಾದಾಗಲೂ ಎಲ್ಲಾ ಬದಲಾವಣೆಗಳಿಗೂ ನನ್ನದೊಂದು ನಿರ್ವಿಕಾರ ಪ್ರತಿಕ್ರಿಯೆ ಕೊಡುವ ರೂಢಿ ಬೆಳೆಸಿಕೊಂಡಿದ್ದಿದೆಯಲ್ಲ, ಅದೆಲ್ಲಾ ಶುರುವಾಗಿದ್ದೇ ನನ್ನೊಳಗಿನ ಭವಿಷ್ಯವೆಂಬ ಭಯದ ಮೂಲ ಬೇರುಗಳನ್ನು ಕಿತ್ತೆಸೆಯುವ ಹಪ ಹಪಿಯಿಂದ. ಇಂಥದ್ದೊಂದು ನನ್ನ ಭೂತ ಕಾಲದ ಕಥೆಯನ್ನು ಇಬ್ಬರು ಹೊಸ ಪರಿಚಿತೆಯರಿಗೆ ಹಾಗೂ ವಷದ ಆತ್ಮೀಯ ಗೆಳೆಯನಿಗೆ ನಿರ್ವಿಕಾರವಾಗಿ ಹೇಳಿ ಅಲ್ಲಿಂದೆದ್ದು ಬಂದು ಟೆಂಟಿನ ಹೊರಗೆ ಆಕಾಶ ನೋಡುತ್ತಾ ಮಲಗಿಬಿಟ್ಟೆ. ಭೂತಕಾಲದ ಹಲವು ಅತೀ ನೋವಿನ ಸನ್ನಿವೇಶಗಳು ಈಗ ತಮಾಷೆ ಅನ್ನಿಸುತ್ತಾ, ಅಯ್ಯೋ ಇಷ್ಟೆನಾ!! ಅಂತನ್ನಿಸುವುದು ಬದುಕಿನ ವೈಚಿತ್ರ್ಯವೇನೋ. ಆಕಾಶದಲ್ಲಿ ಮಿನುಗುವ ಅಗಣಿತ ತಾರೆಯರು, ಕಣ್ಣಿಗೆ ಕಾಣುವುದಕ್ಕಿಂತಾ ಎಷ್ಟೋಪಟ್ಟು ವಿಶಾಲವಿರುವ ಅನಂತ ವಿಶ್ವ, ವಿಶಾಲ ವಿಶ್ವದಲ್ಲಿ ತೃಣ ಸಮಾನಳಾದ ನಾನೂ, ನನ್ನ ಬದುಕು, ನನ್ನ ಬದುಕಿನ ತೃಣ ಕಾಲಘಟ್ಟ ಮತ್ತು ನನ್ನ ಪಾಪ ಪುಣ್ಯಗಳ ಫಲಗಳು, ಹಠ, ಸಿಟ್ಟು, ಅಳು, ನಗು, ಪ್ರಪಂಚದ ಯಾವುದೊ ಮೂಲೆಯಲ್ಲಿ ಹುಟ್ಟಿ, ಈಗ ಒಂದಾಗಿ ಹರಟುತ್ತಾ ಕುಳಿತ ನಶ್ವರ ಜೀವಗಳು ಎಲ್ಲವೂ ಕಾಲಚಕ್ರದಲ್ಲಿ ಒಂದೊಮ್ಮೆ ಲೀನವಾಗಿ ಮರೆಯಾಗುವಂಥವೆ. ಮಿಲಿಯನ್ನು ವರ್ಷಗಳ ನಂತರ ಜಗತ್ತಿನ ಇನ್ನಾವುದೊ ಭಾಗ ಸಾವಿನ ಕಣಿವೆಯಾಗುತ್ತದೆ. ಸಾವಿನ ಕಣಿವೆ ಮತ್ತೆ ಹಸಿರಿನಿಂದ ಕಂಗೊಳಿಸುತ್ತದೆ.

******************************************************************************************************************************************************************************

ಭರ್ರ್..ರ್ರ್..ರ್ರ್ ಎಂದು ಧೂಳೆಬ್ಬಿಸುತ್ತಾ ತುಕ್ಕು ಹಿಡಿದ ಲಡಕಾಸಿ ಬಸ್ಸೊಂದು ನನ್ನನ್ನು ಮಲೆನಾಡಿನ ಹಳ್ಳಿಯೊಂದಕ್ಕೆ ತಂದಿಳಿಸಿ, ಮತ್ತೆ ಧೂಳೆಬ್ಬಿಸುತ್ತಾ ಮರೆಯಾಯಿತು. ಹಳದಿ ಚೂಡಿದಾರ್ ತೊಟ್ಟ ನಾನು ನನ್ನ ಸಂಬಂಧಿಕರೊಬ್ಬರ ಮನೆಗೆ ಹೋದೆ. ಅಲ್ಲಿ ನೋಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ನನ್ನ ಹಿರಿಯ ಸಂಭಂದಿಕರು ಗೋಗರೆಯುತ್ತಿದ್ದಾರೆ. ಅವರ ಹೆಂಡತಿ ಬೇರೊಂದು ಸಂಬಂಧ ಇಟ್ಟುಕೊಂಡಿದ್ದಾರೆ, ಅದೂ ವಯಸ್ಸಿನಲ್ಲಿ!! ಅವರ ರೋಧನೆ ಕೇಳಿ ಅವರ ಮಗ ನನ್ನನ್ನು ಅಲ್ಲಿಂದ ಹೊರಗೆ ಕರೆ ತಂದ. ಸಂಬಂಧ ಇಟ್ಟುಕೊಳ್ಳಲು ವಯಸ್ಸಿನ ಮಿತಿಯೇನು?? ಆದರೂ ಸಮಾಜ ಅದನ್ನೊಪ್ಪುವುದೇ?? ಏನಾದರಾಗಲಿ, ಒಮ್ಮೆ ಮನುಷ್ಯನನ್ನು ಭೇಟಿಯಾಗಿ ಮಾತನಾಡಬೇಕೆಂದು ನಾನು ಅವರ ಹೆಂಡತಿ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾದ ಮನುಷ್ಯನನ್ನು ಹುಡುಕಿಕೊಂಡು ಹೊರಟೆ.ಅಲ್ಲಿ ಹೋಗಿ ನೋಡುತ್ತೇನೆ, ಅವನು ನನ್ನ ಬಾಲ್ಯದ ಗೆಳೆಯ. ನನಗೆ ಆಶ್ಚರ್ಯ!! ಅರೆ, ಕನಿಷ್ಟ ಮಗನ ವಯಸ್ಸಿನವನಾದ ಮನುಷ್ಯನ ಜೊತೆ ಆಕೆ ಸಂಭಂದ ಹೊಂದಿರಲು ಹೇಗೆ ಸಾಧ್ಯ?? ಅವ ಹೇಳಿದ, ಮಾರಾಯ್ತಿ, ಈಗ ಪದೇ ಪದೇ ಟಿ ವಿ ಲಿ ಇಂಥದೇ ವಿಷಯ ಚರ್ಚೆ ಆಗೋದು ನೊಡಿ ನೋಡಿ ನಿನ್ನ ಸಂಬಂಧಿಕನ ತಲೆ ಕೆಟ್ಟಿದೆ. ಸುಮ್ಮ ಸುಮ್ಮನೆ ಅನುಮಾನ ಪಡುತ್ತಿದ್ದಾನೆ ಅಂತ. ನಂತರ ಅವನ ಸೈಕಲ್ಲಿನ ಹಿಂದಿನ ಸೀಟಿನಲ್ಲಿ ನಾನು ಕುಳಿತೆ. ಅವ ಸೈಕಲ್ ತುಳಿಯತೊಡಗಿದ. ನಾವಿಬ್ಬರೂ ದಟ್ಟ ಕಾಡಿನ ಮಧ್ಯೆ ಕಿರಿದಾದ ಕಾಲು ದಾರಿಯಲ್ಲಿ ಹೊರಟಿದ್ದೆವು. ಮಧ್ಯೆ ನಾನು ಹೇಳಿದೆ. ಈಗ ಹೀಗೆ ನಿನ್ನ ಜೊತೆ ತಿರುಗಾಡುತ್ತಿರುವುದು ಗೊತ್ತಾದ್ರೆ ನನ್ನ ಸಂಭಂದಿಕರು ಬೇಜಾರು ಮಾಡಿಕೊಂಡಾರು ಪಾಪ. ಅವ ಹೇಳಿದ. ಇಲ್ಲ ಮಾರಾಯ್ತಿ, ನನ್ನ ಅಪ್ಪ ಹಾಗೂ ತಮ್ಮನನ್ನು ಭೇಟಿ ಮಾಡಿ ನೀನು ಹಾಗೇ ವಾಪಾಸು ಹೋಗು. ಸರಿ ಎಂದು ತಲೆ ಅಲ್ಲಾಡಿಸಿದೆ. ಮಧ್ಯದಲ್ಲೆಲ್ಲೋ ಒಂದು ಸಣ್ಣ ಪಟ್ಟಣ ಎದುರಾಯ್ತು. ನಾವಿಬ್ಬರೂ ಏನನ್ನೋ ಕೊಳ್ಳಲು ಅಂಗಡಿ ಹೊಕ್ಕೆವು. ಅಂಗಡಿಯವನಿಗೆ ದುಡ್ಡು ಕೊಡಲು ನೋಡುತ್ತೇನೆ, ನನ್ನ ಕೈ ಖಾಲಿ ಖಾಲಿ. ನನ್ನ ಪರ್ಸು, ಮೊಬೈಲ್ ಫೊನುಗಳನ್ನು ಎಲ್ಲೋ ಕಳಕೊಂಡಿದ್ದೇನೆ. ಅಲ್ಲೇ ಪಕ್ಕದಲ್ಲಿ ಒಂದು ಸ್ಲಮ್ ಇತ್ತು. ಅಲ್ಲೊಂದು ಹೆಂಗಸು ಒಬ್ಬಂಟಿಯಾಗಿ ಗಲೀಜು ಬಟ್ಟೆಯಲ್ಲಿ ಸುತ್ತಿದ ಮಗುವಿಗೆ ಮೊಲೆ ಹಾಲೂಡಿಸುತ್ತಾ ಕೂತಿದ್ದಳು. ನಾನು ಅವಳಲ್ಲಿ ನನ್ನ ಕಳೆದು ಹೋದ ವಸ್ತುಗಳ ಬಗ್ಗೆ ವಿಚಾರಿಸುತ್ತಿದ್ದೆ. ಅವಳೆಲ್ಲೋ ಕದ್ದಿರಬೇಕೆಂಬ ಅನುಮಾನ ನನಗೆ.ಅಷ್ಟರಲ್ಲಿ ನನ್ನ ಗೆಳೆಯ ಹೇಳಿದ, ನೀನು ಒಂದು ಬಿಳೀ ಪ್ಲಾಸ್ಟಿಕ್ ಕವರನ್ನು ಆಗ ಕಸದ ತೊಟ್ಟಿಗೆ ಎಸೆದೆಯಲ್ಲ ಅದರಲ್ಲಿತ್ತೇನೋ.. ನೋಡೋಣ ಬಾ. ನಾವಿಬ್ಬರೂ ಗಡಿಬಿಡಿಯಲ್ಲಿ ಕಸದ ತೊಟ್ಟಿ ಹುಡುಕಿಕೊಂಡು ಹೋಗಿ ನೋಡಿದರೆ ತೊಟ್ಟಿ ಪೂರಾ ಖಾಲಿ ಖಾಲಿ. ನನಗೋ ಎಲ್ಲ ಕಳಕೊಂಡ ತಳಮಳ. ನನ್ನ ಆಮೇರಿಕದ ಡ್ರೈವಿಂಗ್ ಲೈಸೆನ್ಸೂ, ಕ್ರೆಡಿಟ್ ಕಾರ್ಡೂ, ಮೊನ್ನೆಯಷ್ಟೇ ಪ್ರಿಂಟಾದ ನನ್ನ ಹೊಸ ವೀಸಾ ಇರುವ ಪಾಸ್ಪೋರ್ಟು ಎಲ್ಲ ನನ್ನ ಕಳೆದು ಹೋದ ಪರ್ಸಿನಲ್ಲೇ ಇತ್ತು. ನನ್ನ ಸರ್ವಸ್ವವೇ ಕಳೆದು ಹೋಯಿತಲ್ಲಾ. ಎಲ್ಲ ಕಳಕೊಂಡು ನಾನೂ ಇಲ್ಲೇ ಬದುಕಬೇಕೇನೊ!! ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಮನುಷ್ಯನೊಬ್ಬ ನಮ್ಮಿಬ್ಬರ ಗಡಿಬಿಡಿ ತಳಮಳ ನೋಡಿ ಏನು ಹುಡುಕುತ್ತಿದ್ದೀರ ಸಾರ್?? ಎಂದು ಕೇಳಿದ. ನನ್ನ ಗೆಳೆಯ ಅವನಿಗೆ ನಡೆದಿದ್ದೆಲ್ಲಾ ವಿವರಿಸಿದ ಮೇಲೆ, ಅಯ್ಯೋ ಈಗಿನ್ನೂ ಕಾರ್ಪೊರೇಶನ್ ಲಾರಿ ಬಂದು ಕಸದ ತೊಟ್ಟಿಯಲ್ಲಿ ಇದ್ದಿದ್ದೆಲ್ಲಾ ತುಂಬಿಕೊಂಡು ಹೋಯಿತು. ಜಾಸ್ತಿ ಹೊತ್ತೇನೂ ಆಗಲಿಲ್ಲ. ನೀವು ಕಡೆ ಹೋಗಿ ನೋಡಿದರೆ ಸಿಗಬಹುದೇನೊ ಎಂದು ಲಾರಿ ಹೋದ ದಿಕ್ಕಿಗೆ ಕೈ ತೋರಿಸಿದ. ನಾವು ಬೇಗ ಬೇಗ ಮತ್ತೆ ಸೈಕಲ್ಲೇರಿ ಲಾರಿ ಹೋಗಿದೆಯೆನ್ನಲಾದ ದಿಕ್ಕಿಗೆ ದೌಡಾಯಿಸಿದೆವು. ಗಬ್ಬು ನಾತ ಹೊಡೆಯುತ್ತಿದ್ದ ಲಾರಿ ಅಲ್ಲೆಲ್ಲೂ ಮತ್ತೊಂದು ಕಸದ ತೊಟ್ಟಿಯ ಮುಂದೆ ನಿಂತಿತ್ತು. ಲಾರಿಯವನಿಗೆ ಹೇಳಿ ಗಲೀಜು ಲಾರಿಯೊಳಗೆ ನಾನು ನನ್ನ ವಸ್ತುಗಳನ್ನು ಹುಡುಕತೊಡಗಿದೆ. ನನ್ನ ಅದೃಷ್ಟಕ್ಕೆ ನಾನು ಬಿಸಾಡಿದ ಕವರು ಕಂಡಿತು. ಅದರೊಳಗೆ ನನ್ನ ಪರ್ಸೂ, ಮೊಬೈಲೂ .. ನನ್ನ ಸರ್ವಸ್ವವನ್ನೂ ಮತ್ತೆ ಪಡೆಯಲು ನಾನು ಖುಶಿಯಿಂದ ತಿಪ್ಪೆಯ ಪ್ರಪಂಚದೊಳಗೆ ಕೈ ಹಾಕಿ ನನ್ನ ವಸ್ತುಗಳನ್ನು ತೆಗೆದುಕೊಂಡೆ. ಮತ್ತೆ ನನ್ನ ಗೆಳೆಯನ ಅಪ್ಪ ಮತ್ತು ತಮ್ಮನನ್ನು ನೋಡಲು ಹೊರಟೆವು. ವಿಶಾಲವಾದ ಸ್ವಲ್ಪ ಮಟ್ಟಿಗೆ ಸಮತಟ್ಟಾದ ಜಾಗದಲ್ಲಿ ಕುದುರೆ ದೊಡ್ಡಿಯಿದೆ. ನೋಡಿದರೆ ಅಮೇರಿಕಾದ ಯಾವುದೋ ಹಳ್ಳಿಯಿದ್ದಂತಿದೆ. ನನ್ನ ಗೆಳೆಯನ ತಮ್ಮ ಮತ್ತು ಅಪ್ಪ ಅಲ್ಲಿ ನಿಂತಿದ್ದರು. ನನ್ನ ಗೆಳೆಯನ ತಮ್ಮನನ್ನು ನೋಡಿ ನನಗೆ ಮತ್ತೂ ಆಶ್ಚರ್ಯ!! ಅರೆ, ಗ್ಲೆನ್ ಅಪ್ಪಟ ಭಾರತೀಯ ಹಳ್ಳಿ ಹೈದನಂತೆ ಲುಂಗಿ ಉಟ್ಟು ನಿಂತಿದ್ದಾನೆ. ಇವನ ತಮ್ಮ ಬೇರೆ ಎನ್ನುತ್ತಿದ್ದಾನೆ. ನಾನು ಮೂಕವಾಗಿ ನಿಂತೇ ಇದ್ದೆ. ಗ್ಲೆನ್ ನನ್ನ ನೋಡಿ ಸಂತೊಷದಿಂದ ಅಪ್ಪಿಕೊಳ್ಳಲು ಎರಡೂ ತೋಳುಗಳನ್ನೂ ಮುಂದೆ ಮಾಡಿ ಹತ್ತಿರ ಬಂದ. ನನ್ನನ್ನು ಅಪ್ಪುವ ಬದಲು ಗ್ಲೆನ್ ನನ್ನ ತೋಳುಗಳನ್ನು ಹಿಡಿದು ಅಲುಗಾಡಿಸತೊಡಗಿದ. ಇದೇನಾಗುತ್ತಿದೆ ಎಂದು ನಿಧಾನ ಕಣ್ತೆರೆದು ನೋಡಿದರೆ ಸುತ್ತಲೂ ಬೆಳಕಾವರಿಸುತ್ತಿದೆ. ನಾನು ಟೆಂಟಿನ ಹೊರಗೇ ಮಲಗಿಬಿಟ್ಟಿದ್ದೆಯಾರೋ ನನಗೆ ಸ್ಲೀಪಿಂಗ್ ಬ್ಯಾಗ್ ಹೊದೆಸಿದ್ದರು. ನಮ್ಮ ಹಳೇ ಕಾರನ್ನು ಹೊತ್ತೊಯ್ಯಬೇಕಾಗಿದ್ದ ಟ್ರಕ್ಕು ಆಗಲೇ ಬಂದು ನಿಂತಿತ್ತು, ಮತ್ತೊಂದು ಕಾರನ್ನು ಹಿಂಬದಿಯಲ್ಲಿ ಹೊತ್ತು. ಟ್ರಕ್ಕಿನ ಡ್ರೈವರ್ ತನ್ನಲ್ಲಿದ್ದ ಡುಪ್ಲಿಕೆಟ್ ಕೀ ಯಿಂದ ನಮ್ಮ ಹಳೇ ಕಾರಿನ ಬಾಗಿಲು ತೆಗೆದು, ನಮ್ಮೆಲ್ಲಾ ಸರಂಜಾಮುಗಳನ್ನು ಮತ್ತೊಂದು ಕಾರಿಗೆ ತುಂಬಿಸಲು ಅನುವುಮಾಡಿಕೊಟ್ಟ. ಎಲ್ಲ ಮುಗಿದ ಮೇಲೆ ನಮ್ಮ ಹಳೆ ಕಾರು ಅವನ ಟ್ರಕ್ಕಿನ ಹಿಂಬದಿಯೇರಿ ಬೆಚ್ಚಗೆ ಕುಳಿತಿತು

ಬೆಳಗಿನ ಚುಮು ಚುಮು ಚಳಿಯಲ್ಲಿ ಹಲ್ಲುಜ್ಜಿ, ತಣ್ಣೀರಿಂದ ಮುಖ ತೊಳೆದು, ನಮ್ಮಲ್ಲಿ ಅಳಿದುಳಿದಿದ್ದ ಬ್ರೆಡ್ಡು, ತರಕಾರಿಗಳಿಂದ ಸ್ಯಾಂಡ್ವಿಚ್ ತಯಾರಿಸಿ ತಿಂದು, ನಮಗಾಗೇ ಒಂದು ದಿನ ತಮ್ಮ ಮುಂದಿನ ಪ್ರವಾಸವನ್ನು ರದ್ದುಗೊಳಿಸಿ ನಮ್ಮೊಟ್ಟಿಗೆ ತಂಗಿದ್ದ ಹೊಸ ಗೆಳತಿಯರಿಗೆ ಶುಭ ವಿದಾಯ ಹೇಳಿ ನಾವು ಮತ್ತೆ ಪ್ರಯಾಣ ಶುರು ಮಾಡಿದೆವು. ಗ್ಲೆನ್ ಗಾಡಿ ಚಲಾಯಿಸುತ್ತಿದ್ದ. ನಾನು ಕಿಟಕಿ ಗಾಜು ತಗ್ಗಿಸಿ ಗಾಳಿಗೆ ಮುಖವೊಡ್ಡಿದೆಡೆತ್ ವ್ಯಾಲಿಯಂತಾ ಬರಡು ಭೂ ಪ್ರದೇಶದಲ್ಲೂ ತಂಗಾಳಿ ಹಿತವಾಗಿ ಬೀಸುತ್ತಿತ್ತು. ಅನಿಕೇತನಾ.., ಗ್ಲೆನ್ ಇವತ್ತು ನನ್ನ ಪೂರ್ತಿ ಹೆಸರಿಡಿದು ಕರೆದಿದ್ದ. ಏನು?? ಎಂಬಂತೆ ಮುಖ ನೋಡಿದೆ. "ನಾನು ಯಾವತ್ತಾದರೂ ಕತ್ತಲಲ್ಲಿ ನಿನ್ನ ಒಬ್ಬಳನ್ನೇ ನಿಲ್ಲಿಸಿ ರೈಲು ಹಿಡಿದು ಅರಾಮಾಗಿ ಹೋಗುತ್ತೇನೆ ಅಂತ ಅನಿಸುತ್ತಾ ನಿಂಗೆ??" ನಾನು ಹಿಂದೂ ಮುಂದೂ ಯೋಚಿಸದೆ ಉತ್ತರಿಸಿದೆ "ಇಲ್ಲ". ಅವನ ಮುಖದ ಮೇಲೆ ಮಂದಹಾಸ. ಮತ್ತೆ ತಡೆದು ನಗುತ್ತಾ ಹೇಳಿದೆ, ಕತ್ತಲಿಗೆ ಭಯಪಡುವುದನ್ನು ಬಿಟ್ಟಿದ್ದೇನೆ ಮಾರಾಯ.ಪ್ರತೀ ಕಗ್ಗತ್ತಲ ರಾತ್ರಿಯ ನಂತರವೂ ಮತ್ತೆ ಹಗಲು ನೋಡಿದ್ದೇನಲ್ಲಾ, ನೀನು ಒಂದೊಮ್ಮೆ ಹಾಗೆ ನನ್ನ ಒಬ್ಬಳೇ ನಿಲ್ಲಿಸಿದರೂ ನಾನು ಅಳುವುದಿಲ್ಲ. ಇಬ್ಬರೂ ಹಾಸ್ಯವಲ್ಲದ ಹಾಸ್ಯಕ್ಕೆ ಮತ್ತೆ ನಕ್ಕೆವು. ಅವ ತಡೆದು ಮತ್ತೆ ಕೇಳಿದ, ದೇಶ, ಭಾಷೆ, ಮದುವೆ, ಸಂಸಾರ ಇವೆಲ್ಲವುಗಳನ್ನೂ ಮೀರಿ ನಾವಿಬ್ಬರೂ ಒಟ್ಟಿಗೆ ಬದುಕುವ ಸಾಧ್ಯತೆಯ ಬಗ್ಗೆ ಎಂದಾದರೂ ಯೋಚಿಸಿದ್ದೀಯಾ??". ತಿಳಿ ಮಂದಹಾಸ ಬೀರುತ್ತಾ "ಹೌದು" ಎಂಬಂತೆ ತಲೆ ಅಲ್ಲಾಡಿಸಿದೆ. ಮಾತಿಗಿಂತಾ ಮೌನ ತೀರಾ ಹಿತವೆನಿಸುವ ಘಳಿಗೆಯಿದು. ಕಾರು ಈಗ ಹೈವೇಯಲ್ಲಿ ವೇಗವಾಗಿ ಚಲಿಸುತ್ತಿತ್ತು. ತಂಗಾಳಿಗೆ ಮುಖವೊಡ್ಡಿ ಕಣ್ಮುಚ್ಚಿ ಮತ್ತೆ ಸೀಟಿಗೊರಗಿದೆ. ಅವನು ಮ್ಯುಸಿಕ್ ಪ್ಲೆಯರ್ ಆನ್ ಮಾಡಿದ. ನನ್ನಿಷ್ಟದ ಹಾಡು ಮೆಲುವಾಗಿ ಕೇಳಿಬರುತ್ತಿತ್ತು..

ನನ್ನ ಚೇತನಾ
ಆಗು ನೀ ಅನಿಕೇತನ
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ನನ್ನ ಚೇತನಾ
ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ 
ನಿರ್ದಿಗಂತವಾಗಿ ಏರಿ
.......................
.......................
ಎಲ್ಲಿಯೂ ನಿಲ್ಲದಿರು
ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
......................
....................
........................


ವರ್ಷದಿಂದ ಇದು ಅವನಿಷ್ಟದ ಹಾಡೂ ಕೂಡಾ..

(Note: This story is published in Tushaara Magazine, October 2016 edition)