ಶುಕ್ರವಾರ, ನವೆಂಬರ್ 12, 2010

ನನ್ನ ವೆಲ್ವೆಟ್ ಹುಳುಗಳು ಕಾಣೆಯಾಗಿವೆ, ನೀವು ಕಾಣಿರೆ?? ನೀವು ಕಾಣಿರೆ??



ನಮ್ಮ ಬಾಲ್ಯದ ದಿನಗಳವು, ಈಗಿನಂತೆ ವೀಡಿಯೊ ಗೇಮ್ಸ್, ಚೆಸ್ಸ್, ಕೇರಂ, ಕ್ರಿಕೆಟ್ ಏನೂ ಗೊತ್ತಿರದ ಆ ದಿನಗಳಲ್ಲಿ ನನ್ನನ್ನು ತುಂಬಾ ಆಕರ್ಷಿಸುತ್ತಿದ್ದುದು ಹುಳುಗಳು(ಈಗಲೂ ಕೂಡ).ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾನು ಪಿ.ಯು.ಸಿ ಯಲ್ಲಿದ್ದಾಗ ಜಿರಳೆಗಳನ್ನು ಸಾಕುವ ಮಂಗಾಟ ಮಾಡುತ್ತಿದ್ದೆ. ನೋಡಿದರೆ ಎಲ್ಲರಿಗು ಪರಮ ಅಸಹ್ಯ ಹುಟ್ಟಿಸುವ, ಕೆಲವರಿಗೆ ಭಯ ಹುಟ್ಟಿಸುವ ಜಿರಲೆಗಳೆಂದರೆ ನನಗೆ ತುಂಬಾ ಪ್ರೀತಿ. ಪೆರಿಪ್ಲ್ಯಾನೆಟ ಓರಿಯಂಟಾಲೀಸ್ ಎಂಬ ಜಾತಿಗೆ ಸೇರಿದ ಜಿರಳೆಗಳು ನಮ್ಮನೆ ಮೇಲ್ಮೆತ್ತಿನಲ್ಲಿ ಹಳೆ ಪುಸ್ತಕ, ಪಾತ್ರೆ-ಪಗಡಗಳ ನಡುವೆ ತಮ್ಮ ಸಂಸಾರ ಸಾಗಿಸುತ್ತಿದ್ದವು. ಅವುಗಳನ್ನು ಹಿಡಿದು ಪಾರದರ್ಶ ಬಾಟಲ್ಲುಗಳಿಗೆ ತುಂಬಿ ಅವುಗಳ ಚಟುವಟಿಕೆಗಳನ್ನು ನೋಡುವುದು ನನ್ನ ಬಹುದಿನಗಳ ಪ್ರೀತಿಯ ಹವ್ಯಾಸವಾಗಿತ್ತು.ನನ್ನ ಈ ಅಬ್ನೋರ್ಮಲ್ ಆಕ್ಟಿವಿಟೀಸ್ ಗಳಿಂದ ತೀರ ರೋಸಿದ್ದು ನನ್ನ ಅಮ್ಮ. ದಿನಾ ರಾತ್ರಿ ಅವುಗಳನ್ನು ಬೇರೆ ಬಾಟಲ್ಲುಗಳಿಗೆ ಸ್ತಳಾ0ತರಿಸಿ, ಅವುಗಳ ಮಲ-ಮೂತ್ರಗಳಿರುವ ಬಾಟಲಿಯನ್ನು ತೊಳೆದು ಒಣಗಿಸುತ್ತಿದ್ದೆ. ಅವು ಮೊಟ್ಟೆ ಇಡುವ, ಮರಿ ಮಾಡುವ ಎಲ್ಲ ಪ್ರೋಸೆಸ್ಸ್ ಗಳನ್ನೂ ಕುತೂಹಲದಿಂದ ಗಂಟೆಗಟ್ಟಲೆ ಕುಳಿತು ಗಮನಿಸುತ್ತಿದ್ದೆ. ಇವೆಲ್ಲ ಮುಕ್ತಾಯವಾಗಿದ್ದು ನನ್ನ ಎಲ್ಲ ಮುದ್ದಿನ ಜಿರಳೆಗಳನ್ನು ಒಂದು ದಿನ ನಾನಿಲ್ಲದ ಸಮಯದಲ್ಲಿ ಅಮ್ಮ ಗೊಬ್ಬರಗುಂಡಿಗೆ ಬಿಸಾಡಿ "ಇನ್ಮೇಲೆ ಇಂಥ ಮಂಗಾಟನೆಲ್ಲ ಮಾಡಹಂಗಿಲ್ಲೆ" ಎಂದು ಸ್ಟ್ರಿಕ್ಟ್ ಆಗಿ ತಾಕೀತು ಮಾಡಿದ ಮೇಲೆ.

ನನ್ನ ಬಾಲ್ಯದಲ್ಲಿ ನನ್ನನ್ನು ಆಕರ್ಷಿಸುತ್ತಿದ್ದ ಇನ್ನೂ ಕೆಲವು ಹುಳುಗಳಿವೆ. ಅವುಗಳಲ್ಲಿ ಒಂದು ಏರೋಪ್ಲೇನ್ ಚಿಟ್ಟೆ. ಪಿಟಿ ಎಂದು ನಾವು ಇದನ್ನು ಕರೆಯುತ್ತಿದ್ದೆವು. ವಿಧ ವಿಧದ ಬಣ್ಣಗಳಿಂದ ನನ್ನನು ಆಕರ್ಷಿಸುತ್ತಿದ್ದ ಈ ಚಿಟ್ಟೆಗಳನ್ನು ಗಿಡಗಳ ಮೇಲೆ, ಕಾಂಪೌಂಡ್ ಮೇಲೆ ಕುಳಿತಾಗ ಉಪಾಯದಿಂದ, ನಿಧಾನವಾಗಿ ಹಿಂದಿನಿಂದ ಹೋಗಿ ಅದರ ರೆಕ್ಕೆಗಳನ್ನು ಗಟ್ಟಿಯಾಗಿ ಹಿಡಿದು, ಅದರ ಉದರಕ್ಕೆ ದಾರ ಕಟ್ಟಿ ಹಾರಲು ಬಿಡುತ್ತಿದ್ದೆವು. ಆ ದಿನಗಳಲ್ಲಿ ಅದೊಂದು ಮೋಜಿನ ಆಟವಾಗಿತ್ತು.ಪಾಪ! ಈಗ ಖೇದವೆನಿಸುತ್ತದೆ. ನಂತರ ಪೂರ್ಣಚಂದ್ರ ತೇಜಸ್ವಿಯವರ "ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು" ಪುಸ್ತಕದಿಂದ ಇದರ ಜೀವನ ವಿಧಾನವನ್ನು ತಿಳಿದುಕೊಂಡೆ. ಸಾಮಾನ್ಯವಾಗಿ ನೀರಿರುವ ಜಾಗವನ್ನು ತನ್ನ ವಾಸಸ್ತಾನವಾಗಿ ಹಾಗೂ ವಂಶಾಭಿವ್ರುದ್ದಿಗೆ ಆಯ್ದುಕೊಳ್ಳುವ ಇವುಗಳ ಜೀವನ ವಿಧಾನ ಸ್ವಾರಸ್ಯವಾಗಿದೆ. ಸುಮಾರು ೬-೭ ವಾರಗಳು ಬದುಕುವ ಏರೋಪ್ಲೇನ್ ಚಿಟ್ಟೆಗಳಲ್ಲಿ ಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಗಳಿಗಿಂತ ಸ್ವಲ್ಪ ಮುಂಚೆ ವಯಸ್ಸಿಗೆ ಬರುತ್ತವೆ. ವಯಸ್ಕ ಗಂಡು ಚಿಟ್ಟೆಗಳು ತಮ್ಮದೇ ಆದ ವಾಸಸ್ಥಾನವನ್ನು ಕಾಯ್ದಿರಿಸುತ್ತವೆ. ಹೀಗೆ ಸ್ವಂತ ಜಾಗ(teritory) ಹೊಂದಿದ ಗಂಡು ಚಿಟ್ಟೆಗಳು ತಮ್ಮ ಗಡಿಯೊಳಗೆ ಬೇರಾವ ಗಂಡು ಚಿಟ್ಟೆಗಳನ್ನು ಬರಗೊಡುವುದಿಲ್ಲ.ಬೆಳವಣಿಗೆಯ ಹಂತದಲ್ಲಿರುವಾಗ ಗಂಡು ಮತ್ತು ಹೆಣ್ಣು ಚಿಟ್ಟೆಗಳ ಬಣ್ಣ ಸರಿ ಸುಮಾರು ಒಂದೇ ಆದರೂ ವಯಸ್ಸಿಗೆ ಬರುತ್ತಿದ್ದಂತೆಯೇ ಗಂಡು ಚಿಟ್ಟೆಗಳ ಬಣ್ಣ ಮತ್ತೂ ಕಡುವಾಗಿ, ಹೊಳಪಿನಿಂದ ಕೂಡಿರುತ್ತದೆ. ವಯಸ್ಕ ಚಿಟ್ಟೆಗಳ ಬಣ್ಣ, ರೆಕ್ಕೆಯ ಪ್ಯಾಟರ್ನ್ ಮತ್ತು ದೇಹ ಇವೆಲ್ಲವುಗಳೂ ಅವು ವಾಸಸ್ಥಾನವನ್ನು ಆಯ್ದುಕೊಳ್ಳುವಲ್ಲಿ ಪ್ರಮುಖ ಮಾನದಂಡವಾಗುತ್ತದೆ. ಗಂಡು ಚಿಟ್ಟೆಗಳ ವಾಸಸ್ಥಾನದ ಆಧಾರದ ಮೇಲೆ ಹೆಣ್ಣು ಚಿಟ್ಟೆಗಳು ಆಕರ್ಷಿತವಾಗುವುದು. ಹೀಗೆ ಸಂಸಾರ ಆರಂಭಿಸಿದ ಜೋಡಿ ಚಿಟ್ಟೆಗಳು ಮೊಟ್ಟೆ ಇಡುವಾಗ ನೀರು ನಿಂತು ತೇವಗೊಂಡ ಪ್ರದೆಶವನ್ನೋ ಹೊಳೆ ದಂಡೆಯನ್ನೋ ಆಯ್ದುಕೊಳ್ಳುತ್ತವೆ. ಗಂಡು ಚಿಟ್ಟೆಗಳು ಮೊಟ್ಟೆಯಿಡುವ ಜಾಗಕ್ಕೆ ತಮ್ಮ ಸಂಗಾತಿಯನ್ನು ಹೊತ್ತು ಕೊಂಡೊಯ್ಯುತ್ತವೆ ಅಥವಾ ಅವುಗಳ ಜೊತೆ ತಾವೂ ಪಯಣಿಸುತ್ತವೆ.ಸಾಮಾನ್ಯವಾಗಿ ಇಂಥಹ ಸಮಯದಲ್ಲಿ ಸಂಗಾತಿಯಿಲ್ಲದ ಬೇರೆ ಗಂಡು ಚಿಟ್ಟೆಗಳು ಈ ಜೋಡಿಗಳ ಮೇಲೆ ಆಕ್ರಮಣ ಮಾಡಿ ಹೆಣ್ಣು ಚಿಟ್ಟೆಗಳನ್ನು ಹೊತ್ತೊಯ್ಯುವ ಪ್ರಯತ್ನವನ್ನೂ ಮಾಡುತ್ತವೆ. ಹೀಗೆ ತನ್ನ ಪರಿಮಿತ ಜೀವಿತಾವಧಿಯಲ್ಲಿ ಹೋರಾಟದ ಬದುಕನ್ನೇ ಆಯ್ದುಕೊಂಡಿವೆ ಈ ಪುಟ್ಟ ಜೀವಿಗಳು.ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಸುಮಾರು ೫೦೦ ಜಾತಿಯ ಏರೋಪ್ಲೇನ್ ಚಿಟ್ಟೆಗಳ ಬಗ್ಗೆ ಅಭ್ಯಸಿಸಿ ಕೆ.ಎ ಸುಬ್ರಮಣಿಯನ್ ಬರೆದಿರುವ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಉಚಿತ e-ಬುಕ್ (http://www.ias.ac.in/initiat/sci_ed/lifescape/odonates.html)
ಅಂತರ್ಜಾಲದಲ್ಲಿ ಲಭ್ಯವಿದೆ.

ನನ್ನ ಮುದ್ದಿನ ಇನ್ನೊಂದು ಹುಳು ವೆಲ್ವೆಟ್ ಹುಳು. ಕೆಂಪುಬಣ್ಣದ ವೆಲ್ವೆಟ್ ಬಟ್ಟೆಯನ್ನು ತೊಟ್ಟಂತಿರುವ ಈ ಪುಟ್ಟ ಹುಳುಗಳು ಮಳೆಗಾಲದಲ್ಲಿ ಮಾತ್ರ ನಮ್ಮ ಮನೆಯ ಹಿಂದೆ ಕಾನುಹಿತ್ತಲಿನಲ್ಲಿ ಹುಲ್ಲುಗಳ ಮಧ್ಯೆ ಅಡಗಿರುತ್ತಿದ್ದವು. ಮಳೆಗಾಲ ಮುಗಿಯುತ್ತಿದ್ದಂತೆಯೇ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗುತ್ತಿದ್ದ ಈ ಹುಳುಗಳನ್ನು ಬೆಂಕಿ ಪೊಟ್ಟಣದಲ್ಲಿ ತುಂಬಿಸಿ ಮನೆಗೆ ತಂದು ನನ್ನ ಅಮ್ಮ ಬೆಳೆಸುತ್ತಿದ್ದ ಪುಟ್ಟ ಹೂದೋಟದಲ್ಲಿ ಬಿಡುತ್ತಿದ್ದೆ.ಮರುದಿನ ನೋಡಿದಾಗ ಎಲ್ಲೋ ಸುತ್ತಮುತ್ತಲೆಲ್ಲೂ ಕಾಣಸಿಗದೆ ಎಸ್ಕೇಪ್ ಆಗಿರುತ್ತಿದ್ದ ಈ ಹುಳುಗಳನ್ನು ಸಾಕಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ನನ್ನಿಂದಾಗಲಿಲ್ಲ.ಬೆಂಕಿ ಪೆಟ್ಟಿಗೆಯಲ್ಲಿ ಇಟ್ಟರೆ ಸತ್ತು ಹೋಗುತ್ತಿದ್ದವು, ಹೊರಗೆ ಬಿಟ್ಟರೆ ಕಾಣೆಯಾಗುತ್ತಿದ್ದವು. ಅವುಗಳ ಆಹಾರ ವಿಧಾನ ಕೂಡ ಗೊತ್ತಿರಲಿಲ್ಲ. ಸಸ್ಯಹಾರಿಗಲೋ, ಮಾಂಸಾಹಾರಿಗಳೋ ಏನೊಂದೂ ತಿಳಿದಿರಲಿಲ್ಲ. ಬರಬರುತ್ತ ಮಳೆಗಾಲದಲ್ಲಿ ಕೂಡ ಕಾಣಸಿಗದ ಈ ಹುಳುಗಳ ಬಗ್ಗೆ ತಿಳಿದುಕೊಳ್ಳಲೆಂದು ಅಂತರ್ಜಾಲದಲ್ಲಿ ಹುಡುಕಿದಾಗ ಇದರ ಒಂದು ಫೋಟೋ ಸಿಕ್ಕಿತು.ದಕ್ಷಿಣ ಅಮೆರಿಕಾದ ಯಾವುದೋ ಕಾಡಿನಲ್ಲಿ ಜೀವಂತವಾಗಿದೆ ಎಂದು ತಿಳಿದು ಸಮಾಧಾನವಾಯಿತು.ಆದರೆ ಇವುಗಳ ಬಗ್ಗೆ ತುಂಬಾ ಮಾಹಿತಿ ನನಗೆ ಗೊತ್ತಿಲ್ಲ.

ಬಹು ವೇಗವಾಗಿ ಓಡುತ್ತಿರುವ ಈ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲೂ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಸಮಯವಿಲ್ಲದೆ ಅಥವಾ ಆಸಕ್ತಿಯಿಲ್ಲದೆ ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ನೈಸರ್ಗಿಕ ಸಮತೋಲನದಲ್ಲಿ ಮುಖ್ಯ ಪಾತ್ರ ವಹಿಸುವ ಚಿಕ್ಕ ಪುಟ್ಟ ಹುಳು ಹುಪ್ಪಟ್ಟೆಗಳು, ಕೀಟಗಳು, ಹೇಳಹೆಸರಿಲ್ಲದಂತೆ ಸರ್ವನಾಶವಾಗುತ್ತಿವೆ.ಒಂದು ಅಂದಾಜಿನ ಪ್ರಕಾರ ಈಗ ಕಂಡುಬರುವ ಜೀವ ವೈವಿಧ್ಯದಲ್ಲಿ ಅರ್ಧ ಭಾಗ ಈ ಶತಮಾನದ ಅಂಚಿನಲ್ಲಿ ಸರ್ವನಾಶವಾಗುವ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.