ಮಂಗಳವಾರ, ಜೂನ್ 28, 2011

ಹನಿ..


ವಾರಾಂತ್ಯದಲ್ಲಿ ಊರಿಗೆ ಹೋಗಿದ್ದೆ. ಜೋರು ಆರಿದ್ರಾ ಮಳೆಯ ಆರ್ಭಟ.ಧೋ.. ಎಂದು ಸುರಿಯುವ ಜಡಿಮಳೆ ಸ್ವಲ್ಪ ಬಿಡುವು ಕೊಟ್ಟಾಗಲೆಲ್ಲಾ ಕ್ಯಾಮೆರಾ ಕೈಯಲ್ಲಿ ಹಿಡಿದು ತೋಟದ ಕಡೆ ಒಂದು ಸುತ್ತು ಹೋಗುವುದು, ಮತ್ತೆ ಬೆನ್ನು ಬಿದ್ದ ಮಳೆಗೆ ಒದ್ದೆಯಾಗಿ ಮನೆಗೆ ಓಡಿ ಬರುವುದೂ ನಡೆದಿತ್ತು. ಹೀಗೆ ಆಗಸವೆಲ್ಲಾ ಕಪ್ಪುಗಟ್ಟಿ, ಜೋರಾಗಿ ಮಳೆ ಸುರಿಯುತ್ತಿದ್ದ ಒಂದು ಮಧ್ಯಾಹ್ನ ಕೊಡೆ ಹಿಡಿದು ತೋಟದಲ್ಲಿ ಅಡ್ದಾಡುತ್ತಿದ್ದೆ. ಕೆಸುವಿನ ಎಲೆಯ ಮೇಲೆ ಬಿದ್ದಿದ್ದ ಸುಂದರ ಮಳೆ ಹನಿಗಳನ್ನು ಕ್ಲಿಕ್ಕ್ಕಿಸುತ್ತಿದ್ದಾಗ ತೆಗೆದ ಫೋಟೋ ಇದು. ಸುತ್ತಾ ಇರುವ ತೋಟದ ಪ್ರತಿಬಿಂಬವನ್ನು ಕನ್ನಡಿಯಂತೆ ತನ್ನ ಒಂದು ಪಾರ್ಶ್ವದಲ್ಲಿ ಹಿಡಿದಿಟ್ಟುಕೊಂಡು, ಉಳಿದ ಭಾಗ ಪೂರ್ತಿ ಪೀನ ಮಸೂರದಂತೆ ಎಲೆಯ ಗೆರೆಗಳನ್ನು ಎನ್‌ಲಾರ್ಜ್ ಮಾಡಿ ತೋರಿಸುವ 'ಹನಿ'ಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹತ್ತಿರದಿಂದ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಕಂಕುಳಲ್ಲಿ ಕೊಡೆ ಹಿಡಿದುಕೊಂಡು, ಮಳೆ ಹನಿಗಳು ನನ್ನ ಕ್ಯಾಮೆರಾ ಮೇಲೂ ಮತ್ತು ಎಲೆಯ ಮೇಲೂ ಬೀಳದಂತೆ ಕಾಪಾಡುತ್ತಾ ನಾಲ್ಕು ಫೋಟೋ ಕ್ಲಿಕ್ಕ್ಕಿಸುವಲ್ಲಿ,ಜೋರಾಗಿ ಬೀಸಿದ ಗಾಳಿಗೆ ಆಯತಪ್ಪಿ ನನ್ನ ಕೈ ಸ್ವಲ್ಪ ಅಲುಗಾಡಿದ್ದೂ, ಎಲೆಯ ಮೇಲಿದ್ದ ನೀರಿನ ಹನಿ ಕೆಳಗೆ ಬಿದ್ದು ಮಣ್ಣಿನೊಂದಿಗೆ ಲೀನವಾಗುವುದಕ್ಕೂ ಸರಿ ಹೋಯಿತು. ವಿಕಾಸಕ್ಕನುಗುಣವಾಗಿ ನೀರು ಮಣ್ಣಿನೊಂದಿಗೆ ಬೆರೆತು ಸಸ್ಯದ ಬೆಳವಣಿಗೆಗೆ ಪೂರಕವಾಗುವುದಕ್ಕೂ, ಪರಿಸರ ಸಮತೋಲನದಲ್ಲಿ ಸಸ್ಯ ಭಾಗವಹಿಸುವುದಕ್ಕೂ, ಮೋಡದಿಂದ ಮಳೆ ಬರುವುದಕ್ಕೂ, ಮಳೆ ಹನಿ ಎಲೆಯ ಮೇಲೆ ಬಿದ್ದು ಸುತ್ತಲಿನ ಪ್ರಕೃತಿಯನ್ನು ತನ್ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುವುದಕ್ಕೂ, ಎಲೆಯನ್ನು ಬೆತ್ತಲುಗೊಳಿಸುವುದಕ್ಕೂ, ಮತ್ತೆ ಎಲೆಯಿಂದ ಉದುರಿ ಮಣ್ಣು ಸೇರುವುದಕ್ಕೂ, ಸಸ್ಯಗಳಿಗೆ ಜೀವಸೆರೆಯಾಗುವುದಕ್ಕೂ, ಆವಿಯಾಗಿ ಮತ್ತೆ ಮೋಡವಾಗುವುದಕ್ಕೂ ಇರುವ ಅವಿನಾಭಾವ ಸಂಭಂಧವನ್ನು ನೆನೆದು, ಪ್ರಕೃತಿ ಸುಂದರ, ಅನಂತ, ಆದರೂ ಎಲ್ಲ ಬರೀ ನಶ್ವರ ಎಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದೆ.
====================================================
ಈ ಫೋಟೋ ನೋಡಿ ಆಜಾದ್ ಸರ್ (ಜಲನಯನ) ಬರೆದ ಚುಟುಕು:

ಹಸಿರೆಲೆ
ಎಲೆಮೇಲೆ ಮಳೆಹನಿ
ಎಲೆಯೊಳಗಿದೆ ಜೀವ ಹನಿ
ಎಲೆಯಿಲ್ಲದಿರೆ ಆಗುವುದಯ್ಯಾ
ಎಣೆಯಿಲ್ಲದ ಜೀವ ಹಾನಿ
====================================================