ಸೋಮವಾರ, ಅಕ್ಟೋಬರ್ 22, 2012

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು....

                              ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್"ನ ಒಂದು ಅಂಗಡಿ


ಅಂತೂ ಇಂತೂ ಗಡಿ ದಾಟಿದೆವು:
ಗಡಿ ದಾಟಲು ಪರ್ಮಿಷನ್ ತೆಗೆದುಕೊಳ್ಳಬೇಕೆಂದು ಗೊತ್ತಿತ್ತೇ ಹೊರತೂ ಯಾವಾಗ? ಎಲ್ಲಿ? ಮುಂತಾದ ವಿಷಯಗಳು ತಿಳಿದಿರಲಿಲ್ಲ. ನಾವು ತಂಗಿದ್ದ ಹೋಟೆಲಿನಲ್ಲಿ ವಿಚಾರಿಸಿದೆವು. ಹೋಟೆಲ್ ಮಾಲೀಕ ಈ ದಿನ ಭಾನುವಾರವಾಗಿದ್ದರಿಂದ ನಿಮಗೆ ಪರ್ಮಿಷನ್ ಸಿಗುವುದಿಲ್ಲ. ನೀವು ಈ ದಿನ ಇಲ್ಲೇ ತಂಗಿದ್ದು ನಾಳೆ ಗಡಿ ದಾಟಲು ಸಾಧ್ಯ ಎಂದಿದ್ದ. ಅತೀ ಉತ್ಸಾಹದಿಂದ ಶನಿವಾರ ಬೆಳಿಗ್ಗೆ ಮುಂಚೆ ಹೊರಟು, ಎಲ್ಲೂ ನಿಲ್ಲದೆ ರಾತ್ರಿಯೆಲ್ಲಾ ಪ್ರಯಾಣ ಮಾಡಿದ್ದ ನಮಗೆ ನಿರಾಸೆಯಾಗಿತ್ತು. ಹಾಗೇ ತಿಂಡಿ ತಿಂದು ತಿರುಗಾಡಲು ಹೊರಟೆವು. ಭಾರತೀಯರು ಫುಲ್ಷೆಲೊಂಗ್ ನಲ್ಲಿ ಹಾಗೂ ಭೂತಾನೀಯರು ಜೈಗೊನಿನಲ್ಲಿ ಸುತ್ತಲು ಅನುಮತಿ ಪತ್ರ ಬೇಕಿಲ್ಲ. ಹಾಗೇ ಗಡಿ ದಾಟಿ ಸುತ್ತಾಡುತ್ತಾ ಇಮಿಗ್ರೇಷನ್ ಆಫೀಸ್ ತೆರೆದಿರುವುದನ್ನು ಕಂಡೆವು. ಸುಮ್ಮನೆ ಇರಲಿ ಎಂದು ಸೆಕ್ಯುರಿಟಿ ಒಬ್ಬನಿಗೆ ಈ ದಿನ ಅನುಮತಿ ಸಿಗುತ್ತದೆಯೇ ಕೇಳಿದರೆ, ಅರೆ ಭಾಯಿ..ನಿಮ್ಮ ಪಾಸ್ಪೋರ್ಟ್ ಸೈಜ್ ಫೊಟೊ ಹಾಗೂ ಐಡೆಂಟಿಟಿ ಕಾರ್ಡ್ ತನ್ನಿ ಭಾರತೀಯರಿಗೆ ಉಚಿತ ಅನುಮತಿ ಎಲ್ಲಾ ದಿನಗಳಲ್ಲೂ ಸಿಗುತ್ತದೆ ಎನ್ನಬೇಕೇ!! .. ಹೊಟೆಲ್ ಮಾಲೀಕನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಅಲ್ಲಿಂದ ತಡ ಮಾಡದೆ ಬೇಗ ಬೇಗ ಫೋಟೊ ತೆಗೆಸಿಕೊಂಡು, ಅನುಮತಿಗೆ ಅರ್ಜಿ ಹಾಕಿ, ಹೊಟೆಲ್ ತೆರವು ಮಾಡಿ ನಮ್ಮ ಲಗ್ಗೆಜುಗಳೊಂದಿಗೆ ಹಾಜರಾಗುವಷ್ಟರಲ್ಲಿ ನಮ್ಮ ಅನುಮತಿ ಪತ್ರ ನಮಗಾಗಿ ಕಾಯುತ್ತಿತ್ತು. ಅಂತೂ ಇಂತೂ ಅಧಿಕೃತ ಅನುಮತಿ ಪತ್ರದೊಂದಿಗೆ ನಾವು ಭಾನುವಾರ ಭೂತಾನ್ ಪ್ರವೇಶಿಸಿದ್ದೆವು. ಇಲ್ಲಿಂದ ಭೂತಾನಿನ ರಾಜಧಾನಿ ಥಿಂಫುವಿಗೆ ನಮ್ಮ ಪ್ರಯಾಣ ಸಾಗಬೇಕಿತ್ತು. ಸಾರಿಗೆ ವ್ಯವಸ್ಥೆ ಸರಿಯಾಗಿ ಬಳಸಿಕೊಳ್ಳಬೇಕೆಂದಿದ್ದ ನಾವು ಫುಲ್ಷೆಲೊಂಗ್ ನಲ್ಲಿ ಬಸ್ ನಿಲ್ದಾಣ ಎಲ್ಲಿದೆ ಮತ್ತು ಬಸ್ ವ್ಯವಸ್ಥೆ ಹೇಗಿದೆ ಎಂದು ವಿಚಾರಿಸಿಕೊಂಡೆವು. ಅರ್ಧಗಂಟೆಗೊಂದರಂತೆ ಬಸ್ ಸೌಕರ್ಯ ಇದೆ ಎಂದು ತಿಳಿದು ಸಮಾಧಾನವಾಗಿತ್ತು. ನಿಧಾನವಾಗಿ ಊಟ ಮುಗಿಸಿ ೪ ಗಂಟೆಗೆ ಹೊರಡುವ ಆ ದಿನದ ಕೊನೆಯ ಬಸ್ಸಿಗೆ ಹೋದರಾಯಿತೆಂದು ಊಟಕ್ಕೆ ತೆರಳಿದೆವು. ಊಟ ಮುಗಿಸಿ ಬಂದು ನೊಡುತ್ತೇವೆ ಬಸ್ ಹೋಗಿಯಾಗಿತ್ತು. ಆಮೇಲೆ ನಮಗೆ ನೆನಪಾಗಿತ್ತು, ಭೂತಾನಿನಲ್ಲಿ ಸಮಯ ಭಾರತಕ್ಕಿಂತ ಅರ್ಧ ಗಂಟೆ ಮುಂದಿದೆ ಎಂದು. ಥಿಂಫುವಿಗೆ ತೆರಳಬೇಕೆಂದಿದ್ದ ಭೂತಾನೀಯನೊಬ್ಬನನ್ನು ಹುಡುಕಿಕೊಂಡು, ಟ್ಯಾಕ್ಸಿ ಗೊತ್ತು ಮಾಡಿಕೊಂಡು ಥಿಂಫುವಿನ ಕಡೆಗೆ ಪ್ರಯಾಣ ಬೆಳೆಸಿದ್ದೆವು. ಫುಲ್ಷೆಲೊಂಗಿನಿಂದ ಥಿಂಫುವಿಗೆ ಹೋಗುವ ರಸ್ತೆ ಸುಂದರವಾಗಿದೆ. ಸುತ್ತಮುತ್ತಲೂ ಬೆಟ್ಟಗಳೂ, ಕಣಿವೆಗಳೂ, ಜಲಪಾತಗಳು.. ನೋಡನೋಡುತ್ತಿದ್ದಂತೆ. ನಮ್ಮ ಟ್ಯಾಕ್ಸಿ ಕಣಿವೆಗಳನ್ನು ಹತ್ತುತ್ತಾ ಇಳಿಯುತ್ತಾ ರಾತ್ರಿಯ ನೀರವತೆಯನ್ನು ಸೀಳಿ ನಮ್ಮನ್ನು ಹೊತ್ತು ಸಾಗಿತ್ತು. ಧೋ ಎಂದು ಸುರಿಯುವ ಮಳೆಯಲ್ಲಿ ರಾತ್ರಿ ೧೧:೩೦ಕ್ಕೆ ಥಿಂಫು ಪಟ್ಟಣ ಪ್ರವೇಶಿಸಿದೆವು. ಅಲ್ಲಿ ಹುಡುಕಾಡಿದ ಮೇಲೆ ಆಗಲೇ ಮುಚ್ಚಿದ್ದ ಲಾಡ್ಜುಗಳ ನಡುವೆ ಸ್ವಲ್ಪ ಹೊತ್ತಿನಲ್ಲಿ ಮುಚ್ಚಲಿ ತಯಾರಾಗಿದ್ದ ಲಾಡ್ಜ್ ಒಂದರಲ್ಲಿ ನಮಗೆ ತಂಗಲು ಜಾಗ ಸಿಕ್ಕಿತ್ತು(ಥಿಂಫುವಿನಲ್ಲಿ ೯ ಗಂಟೆಗೆಲ್ಲಾ ಹೊಟೆಲ್ಲುಗಳು ಮುಚ್ಚಿರುತ್ತವೆ).

 

                             ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್"ನಲ್ಲಿ ಜೋಡಿ ಮಕ್ಕಳು


ಥಿಂಫು ಎಂಬ ಮಾಯಾನಗರಿ:
ನಾವು ತಂಗಿದ್ದ ಎಲ್ಲಾ ದಿನಗಳಲ್ಲೂ ಭೂತಾನಿನಲ್ಲಿ ಬಹುಬೇಗ, ಎಂದರೆ ೫:೧೫ಕ್ಕೆಲ್ಲಾ ಬೆಳಗಾಗುತ್ತಿತ್ತು ಹಾಗೂ ಸಂಜೆ ೫:೩೦ಕ್ಕೆಲ್ಲಾ ಕತ್ತಲಾವರಿಸುತ್ತಿತ್ತು. ಥಿಂಫು ತಲುಪಿದ ಮರುದಿನವೇ ನಾವು ಮೂವರು ಮುಂಜಾನೆ ಎದ್ದು ಸುತ್ತಾಡಲು ಹೊರಟೆವು. ಸ್ವಲ್ಪ ಸ್ವಲ್ಪ ಮಳೆ ಹನಿಯುತ್ತಿತ್ತಾದರೂ, ರಾತ್ರಿಯ ಜೋರು ಮಳೆಯ ಅಬ್ಬರವಿರಲಿಲ್ಲ. ಕಣ್ಣು ಹಾಯಿಸುವಷ್ಟು ದೂರವೂ ಸುಂದರವಾದ ಮರದ ಕೆತ್ತನೆ ಹೊಂದಿದ ಕಟ್ಟಡಗಳೂ, ಅಂಗಡಿ ಮುಂಗಟ್ಟುಗಳೂ, ಸರ್ಕಾರಿ ಕಛೇರಿಗಳೂ ಹಾಗೂ ಮೋಡ ಮುಚ್ಚಿದ ಹಸಿರು ಗುಡ್ಡ ಬೆಟ್ಟ. ಮೊದಲ ನೋಟಕ್ಕೇ ಥಿಂಫು ಇಷ್ಟವಾಗಿಬಿಟ್ಟಿತ್ತು. ಭೂತಾನಿನ ಎಲ್ಲಾ ಮನೆಗಳಲ್ಲೂ, ಅಂಗಡಿಗಳಲ್ಲೂ ರಾಜ ಮತ್ತು ರಾಣಿಯರ, ಕೆಲವೊಮ್ಮೆ ಪೂರ್ತಿ ರಾಜಮನೆತನದವರ ಫೋಟೊಗಳು ರಾರಾಜಿಸುತ್ತವೆ. ರಾಜಮನೆತನದವರೆಂದರೆ ಇಲ್ಲಿಯ ಜನರಿಗೆ ತುಂಬಾ ಗೌರವ. ಥಿಂಫುವಿನಿಂದ ಸುಮಾರು ೮ ಕಿ ಮೀ ಹೊರವಲಯದಲ್ಲಿ ಅರಮನೆ ಇದೆ. ಆದರೆ ಅರಮನೆಗೆ ಪ್ರವೇಶ ನಿಷಿದ್ದವಾಗಿದ್ದರಿಂದ ನಾವು ಅತ್ತ ಮುಖ ಹಾಕಲಿಲ್ಲ.

ಥಿಂಫು ಭೂತಾನಿನ ರಾಜಧಾನಿಯಾದರೂ ಕೂಡಾ ಕಾಲ್ನಡಿಗೆಯಲ್ಲಿ ಸುತ್ತಬಹುದು. ಇದರ ವಿಸ್ತೀರ್ಣ ತುಂಬಾ ಚಿಕ್ಕದಿದೆ. ಮೊದಲ ದಿನವೇ ನಮಗೆ ತಿಳಿದುಬಂದಿದ್ದು ಇಲ್ಲಿ ಸುತ್ತಾಡುವಾಗ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು, ತಪ್ಪಿದರೆ ದಂಡ ತೆರಬೇಕಾಗುತ್ತದೆ ಎನ್ನುವುದು. ಇಲ್ಲಿ ಟ್ಯಕ್ಸಿಯ ಬಲಭಾಗದ ಬಾಗಿಲಿನಿಂದ ಇಳಿಯುವಂತಿಲ್ಲ. ಕಾಲ್ನಡಿಗೆಯಲ್ಲಿ ಹೋಗುವುದಾದರೆ ಫುಟ್ ಬಾತಿನಲ್ಲಿ ಮಾತ್ರಾ ನಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹುಡುಗಿಯರನ್ನು ಚುಡಾಯಿಸುವಂತೆಯೇ ಇಲ್ಲ. ಚುಡಾಯಿಸಿದರೆ ೧೨೦೦ ನು ದಂಡ ಗ್ಯಾರಂಟಿ. ಭೂತಾನಿನ ಎಲ್ಲ ಸರ್ಕಾರೀ ನೌಕರರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾಂಪ್ರದಾಯಿಕ ಉಡುಗೆ ತೊಡುವುದು ಕಡ್ಡಾಯ. ಇಲ್ಲಿನ ರಸ್ತೆ ನೋಡಿದ ನಮಗೆ ಬೈಕ್ ಟ್ರಿಪ್ ಹೋಗುವುದು ಸೂಕ್ತವೆನಿಸಿದರೂ, ವಿಚಾರಿಸಿ ನೋಡಿದಾಗ ಭೂತಾನೀ ಬೈಕುಗಳಿಗೆ ಭೂತಾನಿ ಪರವಾನಗಿ ಕಡ್ಡಾಯವಾಗಿದ್ದರಿಂದ ಹಾಗೂ ಬೈಕ್ ಸವಾರರು ಬಹಳಾ ಕಡಿಮೆ ಸಂಖ್ಯೆಯಲ್ಲಿ ಇದ್ದಿದ್ದರಿಂದ ನಾವು ನಮ್ಮ ಉಪಾಯವನ್ನು ಕಡೆಗಣಿಸಿ ಟ್ಯಕ್ಸಿಯಲ್ಲಿ ಸುತ್ತಾಡಲು ತೊಡಗಿದೆವು.
 


                                 ಡಿಚೆಂಗ್ ಪೊಡ್ರಾಂಗ್ ನ ಲಖಾನ್


ಬೆಳಿಗ್ಗೆ ತಿಂಡಿ ತಿಂದಾದ ಮೇಲೆ ನಾವು ಮಾಡಿದ ಮೊದಲ ಕೆಲಸ "ಲೋನ್ಲಿ ಪ್ಲಾನೆಟ್ ಭೂತಾನ್" ಎಂಬ ಪುಸ್ತಕ ಖರೀದಿಸಿದ್ದು. ಹಲವು ಅಂಗಡಿಗಳನ್ನು ಸುತ್ತಾಡಿ ನಮ್ಮ ಪ್ರವಾಸಕ್ಕೆ ಸೂಕ್ತ ಪುಸ್ತಕ ಖರೀದಿಸುವಲ್ಲಿ ಸ್ವಲ್ಪ ಸಮಯ ಕಳೆದಿತ್ತು. ಬೆಳಗ್ಗೆಯಿಂದ ಕೆಲವು ವಾಹನಗಳೂ, ಅಂಗಡಿಗಳೂ ಸಿಂಗರಿಸಲ್ಪಟ್ಟಿದ್ದು ಕಂಡು ಈದಿನ ಹಬ್ಬವೇನಾದರೂ ಇದೆಯೇ ಎಂದು ಅಂಗಡಿಯಾಕೆಯನ್ನು ವಿಚಾರಿಸಿದೆ. ಹೌದು, ಆದಿನ "ಬಿಷೆಗಾರೋ" ಎಂಬ ಹಬ್ಬವಿತ್ತು. ಈ ಹಬ್ಬ ನಮ್ಮಲ್ಲಿನ ಆಯುಧ ಪೂಜೆಯಂತೆ ಯಂತ್ರಗಳನ್ನು ಪೂಜಿಸುವ ಹಬ್ಬ. ಥಿಂಫುವಿನ "ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್" ಕಲಾವಿದರ ಕಲ್ಪನೆಯ ಸುಂದರ ಸೃಷ್ಟಿಗಳಿಗೆ ಪೋಷಣೆಗೈಯುವ ಥಿಂಫುವಿನ ಅದ್ಭುತ ಸ್ಥಳ. ಇಲ್ಲಿ ಕಲಾಪ್ರಿಯರಿಗೆ ಕಣ್ಣಿಗೆ ಹಬ್ಬವುಂಟುಮಾಡುವ ಬಗೆಬಗೆಯ ಕರಕುಶಲ ವಸ್ಥುಗಳನ್ನು ಮಾರಾಟಕ್ಕಿರುತ್ತಾರೆ. ಬಟ್ಟೆಗಳು, ಪೈಂಟಿಂಗುಗಳು, ಒಡವೆಗಳು, ಮುಖವಾಡಗಳು, ಮರಗೆತ್ತನೆ, ಆಟಿಕೆಗಳು.. ಇತ್ಯಾದಿ.. ಎಲ್ಲಾ ರೀತಿಯ ಭೂತಾನೀ ಕಲಾ ವೈವಿಧ್ಯತೆಗಳನ್ನೂ ಇಲ್ಲಿ ಕಾಣಬಹುದು. ಅಲ್ಲಿಂದ ಮುಂದೆ ಡಿಚೆಂಗ್ ಪೊಡ್ರಾಂಗ್ ಎಂಬ ಕಣಿವೆಯೊಂದಕ್ಕೆ ಪ್ರಯಾಣ ಬೆಳೆಸಿದೆವು. ಇಲ್ಲಿನ ಮೊನಾಸ್ಟ್ರಿ (ಮೊನಾಸ್ಟ್ರಿ ಎಂದರೆ ಇಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಾರೆ. ಬೌದ್ಧ ವಿದ್ಯಾರ್ಥಿ ಭಿಕ್ಷುಗಳು ವಿಧ್ಯಾಭ್ಯಾಸ ಮಾಡುವ ಸ್ಥಳವೂ ಹೌದು) ಹಾಗೂ ಮೊನಾಸ್ಟ್ರಿ ಪಕ್ಕದ ಲಖಾನ್(ಬೌದ್ಧ ದೇವಾಲಯ) ಹಾಗೂ ಕಣಿವಯ ಸುತ್ತ ಕಾಣುವ ಸುಂದರ ಪ್ರಕೃತಿಯನ್ನು ಕಣ್ತುಂಬಿಕೊಳ್ಳುತ್ತಾ ವಾಪಾಸು ಕಾಲ್ನಡಿಗೆಯಲ್ಲಿ ಸಾಗಿದೆವು.

ಮಧ್ಯಾಹ್ನ ಊಟಕ್ಕೆಂದು ಭೂತಾನಿ ಅಭಿರುಚಿಯ ಹೊಟೆಲ್ ಒಂದಕ್ಕೆ ಪ್ರವೇಶಿಸಿದ ನಮಗೆ ಗೊತ್ತಾಗಿದ್ದು, ಭೂತಾನೀಯರು ಕೆಂಪಕ್ಕಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಎಮದಾಚಿ(ಎಮ=ಮೆಣಸು, ದಾಚಿ=ಚೀಸ್), ಕೆವದಾಚಿ(ಕೆವ=ಅಲೂ),ಮಶ್ರೂಮ್ ದಾಚಿ ಇಲ್ಲಿನ ಬಹುಮುಖ್ಯ ತಿನಿಸುಗಳು. ಭೂತಾನೀಯರು ಎಷ್ಟು ಖಾರದ ಖಾದ್ಯಗಳನ್ನು ತಯಾರಿಸುತ್ತಾರೆ ಎಂದರೆ ಮೆಣಸಿನ ಕಾಯಿಗೆ ಸ್ವಲ್ಪ ತರಕಾರಿ ಸೇರಿಸಿ ಖಾದ್ಯ ತಯಾರಿಸುತ್ತಾರೆ. ಮೆಣಸು ಇಲ್ಲಿನ ಬಹುಮುಖ್ಯ ತರಕಾರಿ ಎಂದರೂ ತಪ್ಪಾಗಲಾರದು. ಸೂಜ ಎಂಬ ಬಟರ್ ಟೀ ಕೂಡಾ ಇಲ್ಲಿನ ವಿಶೇಷ ಪಾನೀಯ. ಯಾಕ್ ಚೀಸ್, ಉಪ್ಪು ಹಾಗೂ ಸ್ವಲ್ಪವೇ ಸ್ವಲ್ಪ ಹಾಲು ಬೆರೆಸಿ ತಯಾರಿಸುವ ಈ ಪಾನೀಯಕ್ಕೆ ಬಳಸುವ ವಿಶೇಷ ಟೀ ಎಲೆಗಳನ್ನು ಹೊಟೆಲ್ ಮಾಲೀಕನೊಬ್ಬ ನನಗೆ ತೋರಿಸಿದ್ದ. ಅಂತೂ ಭೂತಾನಿನಲ್ಲಿರುವಷ್ಟು ದಿನ ಎಮದಾಚಿ, ಕೆವದಾಚಿ ನನ್ನ ಪ್ರೀತಿಯ ಖಾದ್ಯವಾಗಿ ಹೋಗಿತ್ತು. ಸಸ್ಯಾಹಾರ ತಿಂದು ಬದುಕಬೇಕಿದ್ದ ನನಗೆ ಕೆಂಪಕ್ಕಿ ಅನ್ನ, ರೊಟಿ ಜೊತೆಗೆ ಎಮದಾಚಿ, ಕೆವದಾಚಿ ಬಿಟ್ಟರೆ ಬೇರೆ ಖಾದ್ಯ ಸಿಗುತ್ತಲೂ ಇರಲಿಲ್ಲ. ಇಲ್ಲಿಂದ ಮುಂದೆ ಎಲ್ಲರೂ ಕದಿಂಚೆ (ಧನ್ಯವಾದಗಳು) ಎಂದು ವಂದಿಸುವುದನ್ನೂ, ಲಸ್ಸಾ(ಬಾಯ್) ಎಂದು ಬೀಳ್ಕೊಡುವುದನ್ನೂ ಅಭ್ಯಾಸ ಮಾಡಿಕೊಂಡೆವು.


 

                                    ತ್ರಾಷಿ ಚೊಝಾಂಗ್ ಪಾರ್ಲಿಮೆಂಟ್ ಭವನ

ಥಿಂಪು ಹಾಗೂ ಭೂತಾನಿನ ಕೆಲವು ಪ್ರಮುಖ ಪಟ್ಟಣಗಳಲ್ಲಿ ವೀಕೆಂಡ್ ಮಾರ್ಕೆಟ್ ಎಂಬ ವಾರಾಂತ್ಯದ ತರಕಾರಿ ವ್ಯಾಪಾರ ನಡೆಯುತ್ತದೆ. ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿಗಳನ್ನು ಇಲ್ಲಿ ಮಾರಾಟಕ್ಕಿಡುತ್ತಾರೆ. ವೀಕೆಂಡ್ ಮಾರ್ಕೆಟನ್ನು ಥಿಂಫುವಿನಲ್ಲಿ ನೋಡಲು ಸಾಧ್ಯವಾಗದಿದ್ದರೂ, ಪಾರೊ ನಗರದಲ್ಲಿ ನೋಡಲು ಸಾಧ್ಯವಾಯಿತು.ಥಿಂಫುವಿನಲ್ಲಿ ಹರಿಯುವ ಥಿಂಫುಚು(ಚು=ನದಿ) ಎಂಬ ನದಿಯ ದಡದಲ್ಲಿರುವ ತ್ರಾಷಿ ಚೊಝಾಂಗ್ ಪಾರ್ಲಿಮೆಂಟ್ ಭವನ ಅದ್ಭುತವಾಗಿದೆ. ಇಲ್ಲಿ ಕೂಡಾ ಒಳಗೆ ಪ್ರವೇಶ ನಿಷಿದ್ಧ. ಹಾಗೆಂದೇ ನಾವು ದೂರದಿಂದ ನೋಡಿ, ಬುದ್ಧಾ ಪಾಯಿಂಟ್ ಎಂಬ ಬುದ್ಧನ ದೊಡ್ಡ ವಿಗ್ರಹವೊಂದು ಕೆತ್ತಲ್ಪಟ್ಟಿರುವ ಎತ್ತರದ ಪ್ರದೇಶವೊಂದಕ್ಕೆ ಹೋದೆವು. ಇಲ್ಲಿಂದ ಥಿಂಫು ನಗರವನ್ನೂ ಹಾಗೂ ಸುತ್ತಲಿನ ಹಳ್ಳಿಗಳನ್ನೂ ವೀಕ್ಷಿಸಬಹುದು.

                               ರಾಜಮನೆತನದ ಹೆಂಗಸರಿಗೆ ಕಿರಾ ನೇಯುತ್ತಿರುವ ಹೆಮೊ


ನನ್ನೊಟ್ಟಿಗೆ ಬಂದಿದ್ದ ಗೆಳೆಯರಿಗೆ ಮ್ಯೂಸಿಯುಂ ನೋಡುವುದು ಇಷ್ಟವಿಲ್ಲದ್ದರಿಂದ ಹಾಗೂ ಎಲ್ಲಾರೂ ಸೇರಿ ಥಿಂಫುವಿನಲ್ಲಿ ನೋಡಲು ಏನೂ ಉಳಿದಿಲ್ಲ ಎಂದು ತೀರ್ಮಾನಿಸಿದ್ದರಿಂದ ಮರುದಿನ ಬೆಳಿಗ್ಗೆ ೯ ಗಂಟೆಗೆಲ್ಲಾ ನಾನೊಬ್ಬಳೇ ಇಲ್ಲಿನ ಟೆಕ್ಸ್ ಟೈಲ್ ಮ್ಯೂಸಿಯುಂ ಗೆ ಹೋಗುವುದೆಂದು ತೀರ್ಮಾನಿಸಿದೆ. ಅಂದುಕೊಂಡಂತೆ ಮ್ಯೂಸಿಯುಂ ಬಾಗಿಲು ತೆರೆಯುವ ಮುನ್ನ ನಾನು ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದೆ. ಇಲ್ಲಿ ಭೂತಾನೀಯರ ವಿವಿಧ ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ ಹಾಗೂ ಪ್ರತೀ ಉಡುಗೆಯ ವೈಶಿಷ್ತ್ಯಗಳನ್ನು ವಿವರಿಸುವ ಫಲಕಗಳಿವೆ. ಇಲ್ಲಿ ರಾಜಮನೆತನದವರಿಗೆ ಮಾತ್ರಾ ವಿಶೇಷವಾಗಿ ಬಟ್ಟೆಗಳು ತಯಾರಿಸಲ್ಪಡುತ್ತವೆ. ಭೂತಾನಿನ ಗಂಡಸರು "ಘೋ" ಎಂಬ ಸಾಂಪ್ರದಾಯಿಕ ಉಡುಗೆಯನ್ನೂ, ಹೆಂಗಸರು "ಕಿರಾ" ಎಂಬ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತಾರೆ. ಟೆಕ್ಸ್ ಟೈಲ್ ಮ್ಯೂಸಿಯಂ ನಲ್ಲಿ ಕೆಲಸ ಮಾಡುವ ಯೊಂಗ್ಚಿನ್ ಎಂಬ ಮಹಿಳೆ ರಾಜಮನೆತನದವರ ವಧುವಿನ ಶಾಲ್ ಒಂದಕ್ಕೆ ಎಂಬ್ರಾಯ್ಡರಿ ಮಾಡುತ್ತಿದ್ದಳು. ಈಕೆಯ ಮಾತ್ರುಭಾಷೆ ಕಿಂಗ್ಪಾ. ಈಕೆಗೆ ಕಿಂಗ್ಪಾ, ಝೊಂಕಾ ಹಾಗೂ ಸ್ವಲ್ಪ ಸ್ವಲ್ಪ ಇಂಗ್ಲಿಷ್ ಭಾಷೆ ಬರುತ್ತಿತ್ತು. ಕಿಂಗ್ಪಾ ಎಂಬ ಹೊಸ ಭಾಷೆಯ ಹೆಸರು ಕೇಳಿದ ನನಗೆ ಈ ದೇಶದಲ್ಲಿ ಎಷ್ಟು ಭಾಷೆಗಳು ಚಾಲ್ತಿಯಲ್ಲಿರಬಹುದು ಎಂಬ ಪ್ರಶ್ನೆ ಹುಟ್ಟಿತು. ಭೂತಾನಿನಲ್ಲಿ ೧೫ಕ್ಕೂ ಹೆಚ್ಚು ಭಾಷೆಗಳು ಚಾಲ್ತಿಯಲ್ಲಿವೆಯಂತೆ. ಭೂತಾನಿನ ಪೂರ್ವ ಭಾಗದ ಜನರಿಗೆ ಇಲ್ಲಿನ ರಾಷ್ತ್ರೀಯ ಭಾಶೆ ಝೊಂಕ ಕೂಡಾ ತಿಳಿದಿಲ್ಲವಂತೆ. ಪ್ರತಿಯೊಂದು ಬುಡಕಟ್ಟಿನ ಜನರೂ ಕೂಡಾ ತಮ್ಮದೇ ಆದ ಸಾಂಪ್ರದಾಯಿಕ ಭಾಷೆಯನ್ನು ಹೊಂದಿದ್ದಾರೆ. ಇಷ್ಟು ಪುಟ್ಟ ದೇಶದಲ್ಲಿ ಎಷ್ಟೊಂದು ವಿವಿಧತೆ ಎಂದು ನನಗೆ ಆಶ್ಛರ್ಯವಾಗಿತ್ತು. ಯೊಂಗ್ಚಿನ್ ಇಲ್ಲಿನ "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್"(೧೩ ಆರ್ಟ್ಸ್ ಸ್ಕೂಲ್ ಎಂದು ಕೂಡಾ ಇದನ್ನು ಕರೆಯುತ್ತಾರೆ) ಎಂಬಲ್ಲಿ ೪ ವರ್ಷಗಳ ವಿಶೇಷ ತರಬೇತಿ ಹೊಂದಿದ್ದಳು. ಹೆಮೊ ಎಂಬ ಮಹಿಳೆ ರಾಜಮನೆತನದ ಹೆಂಗಸರಿಗೆ ಕಿರಾ ನೇಯುತ್ತಿದ್ದಳು. ರಾಜಮನೆತನದ ಒಂದು ಬಟ್ಟೆ ತಯಾರಿಸಲು ೧೫ ತಿಂಗಳುಗಳು ಬೇಕಾಗುತ್ತದೆಯಂತೆ. ಹೆಮೋಳಿಗೆ ಇಂಗ್ಲೀಷ್ ಬರುತ್ತಿರಲಿಲ್ಲ ಹಾಗೂ ಝೊಂಕಾ ಕೂಡಾ. ಪೂರ್ವ ಭೂತಾನಿ ಹೆಂಗಸರು ಮುಖ್ಯವಾಗಿ ನೇಕಾರರು. ನೇಕಾರ ಕಾಯಕ ತಾಯಿಯಿಂದ ಮಗಳಿಗೆ ಪರಂಪರಾಗತವಾಗಿ ಬರುತ್ತದೆಯಂತೆ. ಇಲ್ಲಿನ ೧೩ ಆರ್ಟ್ಸ್ ಸ್ಕೂಲಿನಲ್ಲಿ ನೇಕಾರ ತರಬೇತಿ ಇರುವುದಿಲ್ಲ. ಬಟ್ಟೆ ನೇಯುವ ನೂಲನ್ನು ಭಾರತದ ವಾರಣಾಸಿಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಚಳಿಗಾಲದಲ್ಲಿ ಬೆಳಿಗ್ಗೆ ೯ ರಿಂದ ೪ ಗಂಟೆಯವರೆಗೆ, ಹಾಗೂ ಬೇಸಗೆಯಲ್ಲಿ ಬೆಳಿಗ್ಗೆ ೯ ರಿಂದ ೫ ಗಂಟೆಯವರೆಗೆ ಕೆಲಸ ಮಾಡುತ್ತಾರೆ.

ನಂತರ ನಾನು "ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಜೊರಿಗ್ ಚುಸುಮ್"ಗೆ ತೆರಳಿದೆ. ವಿವಿಧ ರೀತಿಯ ಕರಕುಶಲ ಕಲೆಗಳನ್ನು ಕಲಿಸುವ ಭೂತಾನಿನ ವಿಶೇಷ ಶಾಲೆ ಇದು. ೧೦ನೆಯ ತರಗತಿಯವರೆಗೆ ಸಾಮಾನ್ಯ ಶಿಕ್ಷಣ ಕಲಿತು ಮುಂದೆ ವಿಶಿಷ್ಟ ಕಲೆಯೊಂದಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಲಿಚ್ಚಿಸುವವರಿಗೆ ಸರಕಾರ ವಸತಿ ಹಾಗೂ ವೇತನ ಸೌಲಭ್ಯಗಳೊಂದಿಗೆ ಇಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದೆ. ವೃತ್ತಿ ಶಿಕ್ಷಣ ಎಂದು ನಾನು ಬಳಸಿದ್ದು ಭೂತಾನಿನ ವಿಧ್ಯಾಭ್ಯಾಸ ಹಾಗೂ ಜೀವನ ಶೈಲಿಯ ಕಾಂಟೆಕ್ಸ್ಟ್ ಗೆ ಸಮಾನಾರ್ಥಕವಾಗಿ. ಇಲ್ಲಿ ೪ ವರ್ಷ ಹಾಗೂ ೬ ವರ್ಷ ಶಿಕ್ಷಣ ಪಡೆದ ಪ್ರತಿಯೊಬ್ಬ ವಿಧ್ಯಾರ್ಥಿಯೂ ಕಲಾಪ್ರಾವೀಣ್ಯತೆಯಿಂದಾಗಿ ಸ್ವಂತ ಉದ್ಯೊಗ ಮಾಡಲು ಸಮರ್ಥನಾಗುತ್ತಾನೆ. ಪ್ರಸಿದ್ಧ ಆರ್ಟ್ ಗ್ಯಾಲರಿಗಳಲ್ಲಿ ಕೂಡಾ ಇವರಿಗೆ ವಿಶೇಷ ವೇತನವಿದೆ. ಹಾಗಂತ ಇಲ್ಲಿನ ವಿಧ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತಾ ಕಲಾ ಶಿಕ್ಷಣವನ್ನೇ ಆಯ್ದುಕೊಳ್ಳಬೇಕು. ಯಾರ ಒತ್ತಾಯ ಕೂಡಾ ಇರಬಾರದು. ಇಲ್ಲಿ ಮರಗೆಲಸ, ಎಂಬ್ರಾಯಿಡರಿ, ಪೈಂಟಿಂಗ್.. ಇತ್ಯಾದಿ ಕಲಿಯುತ್ತಿದ್ದ ವಿವಿಧ ವಿದ್ಯಾರ್ಥಿಗಳೊಂದಿಗೆ ನಾನು ಮಾತನಾಡಿದೆ. ನಿಮ್ಮ ವಿಧ್ಯಾಭ್ಯಾಸ ಮುಗಿದ ನಂತರ ಏನು ಮಾಡುತ್ತೀರಿ?? ಎಂದು ಕೇಳಿದೆ. ಹೆಚ್ಚಿನ ಜನರು ತಾವು ತರಬೇತಿ ಹೊಂದಿದ ಕಲಾ ಪ್ರಾಕಾರವನ್ನು ಬಳಸಿಕೊಂಡು ಸ್ವಂತ ಉದ್ಯೋಗ ಮಾಡುವ ಒಲವು ತೋರಿದರು. ಥಿಂಫುವಿನಲ್ಲಿ ಸಾಂಪ್ರದಾಯಿಕ ವೈದ್ಯ ಶಿಕ್ಶಣ ಕಲಿಸುವ ಕಾಲೆಜ್ ಕೂಡಾ ಇದೆ. ಆದರೆ ಸಮಯದ ಅಭಾವದಿಂದ ಇಲ್ಲಿನ "ವಾಲೆಂಟರಿ ಆರ್ಟ್ಸ್ ಸ್ಟುಡಿಯೊ, ರಾಯಲ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಗಳನ್ನು ಸಂದರ್ಶಿಸಲು ಆಸಕ್ತಿಯಿದ್ದರೂ ನನಗೆ ಸಾಧ್ಯವಾಗಲಿಲ್ಲ. ಭೂತಾನಿನಲ್ಲಿ ನಾವು ನೋಡಿದ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ಮೊದಲ ಹಾಗೂ ಕೊನೆಯ ವ್ಯಕ್ತಿ. ಎಲ್ಲ ನಿಯಮಗಳಿಗೂ ಒಂದೊಂದು ಎಕ್ಸೆಪ್ಶನ್ ಇರುತ್ತದಲ್ಲವೇ??..

ಥಿಂಫುವಿನ ಇಮಿಗ್ರೇಷನ್ ಆಫೀಸಿನಲ್ಲಿ ನಾವು ಕೆಲವು ನಿರ್ಭಂಧಿತ ಪ್ರದೇಶಗಳಿಗೆ ಪ್ರವೇಶಿಸಲು ವಿಶೇಷ ಅನುಮತಿ ಪಡೆಯಬೇಕಿತ್ತು. ಥಿಂಫು ಮತ್ತು ಪಾರೊ ನಗರಗಳು ಪ್ರವಾಸಿಗರಿಗೆ ತೆರೆದ ಪ್ರದೇಶಗಳೆಂದು ಅನುಮೋದನೆಯಾಗಿದ್ದರೂ, ಹಾ ಕಣಿವೆ, ಪುನಾಕ, ವ್ಯಾಂಗ್ಡ್ಯೂ, ಟ್ರೊಂಗ್ಸಾ, ಭುಂತಾಂಗ್ ಗಳಿಗೆ ವಿಶೇಷ ಅನುಮತಿ ಪತ್ರ ಪಡೆಯಬೇಕಿತ್ತು. ಬೆಂಗಳೂರಿನ ಆರ್.ಟಿ.ಒ ಆಫೀಸಿನಂತೆಯೇ ನಾವು ಇಡೀ ದಿನ ಇಮಿಗ್ರೇಷನ್ ಆಫೀಸಿನಲ್ಲಿ ಕಳೆದು ಅಂತೂ ಇಂತೂ ಅನುಮತಿ ಪತ್ರದೊಂದಿಗೆ ಹೊರಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇಲ್ಲಿಂದ ಮುಂದೆ ಪಾರೊ ಪಟ್ಟಣದತ್ತ ಮುಖ ಮಾಡಿದೆವು.


ಮುಂದುವರೆಯುತ್ತದೆ.....
 

2 ಕಾಮೆಂಟ್‌ಗಳು:

  1. chennagide.. We should cross border by road when possible... gives whole new experience than flying in

    ಪ್ರತ್ಯುತ್ತರಅಳಿಸಿ
  2. ತುಂಬಾ ಚನ್ನಾಗಿದೆ ಕಾಂತಿ ಪ್ರವಾಸ ಕಥನ, ಇನ್ನೂ ಹೆಚ್ಚು ಫೋಟೋ ಇದ್ರೆ ಚನ್ನಾಗಿತ್ತು... ಆದರೆ ವಿವರಣೆ ಬಹಳ ಚನ್ನಾಗಿದೆ ಚಿತ್ರಗಳ ಕೊರತೆಯನ್ನು ಸುಮಾರು ತುಂಬಿದೆ ವಿವರಣೆ... ಬರೀ ಪರ್ಮಿಶನ್ ಮೂಲಕ ವಿದೇಶಕ್ಕೆ ಹೋಗುವ ಅವಕಾಶ ಪ್ರವಾಸಿಗರಿಗೆ ವರದಾನ ಅದರಲ್ಲೂ ನಿನ್ನಂತಹ ಪ್ರವಾಸ ಚಾರಣ ಪ್ರಿಯರಿಗೆ ..ಅಪೂರ್ವ ಅವಕಾಶ...

    ಪ್ರತ್ಯುತ್ತರಅಳಿಸಿ