ಭಾನುವಾರ, ಏಪ್ರಿಲ್ 8, 2012

ಉತ್ತರ ಕರ್ನಾಟಕ ಪ್ರವಾಸ ಭಾಗ- ೩


ಬನಶಂಕರಿ ದೇವಸ್ಥಾನದಿಂದ ನಮ್ಮ ಪಯಣ ಐಹೊಳೆಯತ್ತ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಜೋಳದ ಗದ್ದೆಗಳು. ತೆನೆ ಬಿಟ್ಟು ಕಟಾವಿಗೆ ತಯಾರಾಗಿರುವ ಜೋಳಗಳು, ಇನ್ನೂ ಎಳೆಯ ಜೋಳಗಳು ಹೀಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಗೆ ಬಗೆಯ ಜೋಳದ ತೆನೆಗಳು. ಮಾರು ದೂರಕ್ಕೊಮ್ಮೆ ರಸ್ತೆಯ ಪಕ್ಕದಲ್ಲೇ ಜೊಳ ಹದಮಾಡುವುದರಲ್ಲಿ ಮುಳುಗಿದ ರೈತರು ಹಾಗೂ ಗಟ್ಟಿ ಜೋಳದ ತೆನೆಗಳನ್ನು ನುಂಗಿ ತನ್ನ ಉದರದಿಂದ ಹೊಟ್ಟಿನ ಹೊಗೆ ಬಿಡುವ ಹಾಗೂ ತನ್ನ ಒಂದು ಪಾರ್ಶ್ವದಿಂದ ಹದವಾದ ಜೋಳದ ಪುಟ್ಟ ಕಾಳುಗಳನ್ನು ಹೊರತೂರುವ ರೂವುವೂಮ್ ಎಂದು ಶಬ್ಧ ಮಾಡುವ ಯಂತ್ರ.



ಸ್ವಲ್ಪ ಆಟೋ ನಿಲ್ಸಪ್ಪ, ಎಂದು ಡ್ರೈವರ್ ಗೆ ಹೇಳಿ ಕೆಳಗಿಳಿದೆವು. ಸ್ವಲ್ಪ ದೂರದ ವರೆಗೆ ಜೋಳದ ಗದ್ದೆಯೊಳಗೆ ಅಡ್ಡಾಡಿದೆವು. ಕೆಮ್ಮಣ್ಣು, ಕುಂಬಾರ ಮಣ್ಣು, ಕೆಂಪು ಮತ್ತು ಕಪ್ಪು ಮಿಶ್ರಿತ ಹಿಡಿ ಮಣ್ಣು ಎಲ್ಲವನ್ನೂ ನೋಡಿದ ಮಲೆನಾಡಿಗಳಾದ ನನಗೆ ಕಡುಗಪ್ಪು ಮಣ್ಣಿನಲ್ಲಿ ಸೊಗಸಾಗಿ ಎದ್ದ ಜೋಳದ ತೆನೆಗಳನ್ನು ನೋಡವ ಸಂಭ್ರಮ ಹೇಳತೀರದು. ಹಾಗೆಯೇ ಗದ್ದೆಯಿಂದ ವಾಪಸು ಬರುವಾಗ ಅಲ್ಲೇ ಜೋಳ ಹದ ಮಾಡುತ್ತಿದ್ದ ರೈತರ ಜೊತೆ ಮಾತಿಗಿಳಿದೆವು. ಭಾಷೆ ಬರುವುದಿಲ್ಲವೆಂದು ತಿಳಿದು ಕೈ ಸನ್ನೆ, ಬಾಯಿ ಸನ್ನೆ ಮಾಡಿ ಮಾತನಾಡಲು ತೊಡಗಿದ ಅವರಿಗೆ ನಾವು ಕನ್ನಡದವರೇ ಎಂದು ಮಾತನಾಡಲು ಶುರುವಿಟ್ಟೆವು. ನನ್ನ ಕೈಲಿದ್ದ ಕ್ಯಾಮೆರಾ ನೋಡಿದ ಹೆಂಗಸರು ನಮ್ಮ ಫೋಟೋ ತೆಗೆದು ನಮಗೆ ತೋರಿಸ್ರಿ ಎಂದು ಗಂಟು ಬಿದ್ದರು. ಹಾಗೆಯೇ ಮಾತನಾಡುತ್ತ ಅವರ ಫೋಟೋ ತೆಗೆದು ತೋರಿಸಿದೆ. ಕುಷಿಗೊಂಡ ಅವರು ಕಳೆದ ವಾರ ಗಿಡ್ದನೆಯ ಚಡ್ಡಿ ತೊಟ್ಟಿದ್ದ, ೨ ಅಮೆರಿಕಾದ ಹೆಂಗಸರು ಬಗೆ ಬಗೆಯ ಭಂಗಿಗಳಲ್ಲಿ ತಮ್ಮ ಫೋಟೋ ತೆಗೆದುಕೊಂಡು ಹೋದರೆಂದೂ, ಅದನ್ನು ಅಲ್ಲಿಯ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆಂದೂ ಕುಷಿಯಿಂದಲೂ ಸ್ವಲ್ಪ ನಾಚಿಕೆಯಿಂದಲೂ ಹೇಳಲು ತೊಡಗಿದರು.





ನಿಮ್ಮ ಪ್ರಮುಖ ಬೆಳೆ ಜೋಳನ?? ಎಂದು ಕೇಳಿದೆ. ಹೌದೆಂದು ಹೇಳಿದ ಅವರು ೧೦೦ ಎಕರೆ ಪ್ರದೇಶದಲ್ಲಿ ಮಲಪ್ರಭಾ ನದಿಯನ್ನೇ ನಂಬಿಕೊಂಡು ಜೋಳ ಬೆಳೆಯುವ ಪಾಡನ್ನೂ, ಆ ವರ್ಷ ಬೆಳೆದ ಜೋಳ ಒಂದು ವರ್ಷದ ರೊಟ್ಟಿ ಹಿಟ್ಟಿಗೆ ಮಾತ್ರ ಸರಿದೂಗುವುದೆಂದೂ, ಹೀಗೆ ಪ್ರತೀ ವರ್ಷವೂ ಬೆಳೆ ಬೆಳೆಯುವ, ಕಟಾವು ಮಾಡುವ, ತಿನ್ನುವ ಮತ್ತೆ ಬೆಳೆಯುವ ಪರಿಯನ್ನು ಹಂತ ಹಂತವಾಗಿ ಮಾತಿನಲ್ಲಿ ಬಿಚ್ಚಿಟ್ಟರು. ನೀವು ಬೆಳೆದ ಜೋಳವನ್ನು ಮಾರಾಟ ಮಾಡೋದಿಲ್ವ ಎಂದು ಕೇಳಿದೆ. ಇಲ್ಲ, ಮನೆಮಂದಿಗಾಗುವಷ್ಟು ಮಾತ್ರ ಬೆಳೆಯಲು ನಮ್ಮಿಂದ ಸಾಧ್ಯ ಎಂದರು. ೧೦೦ ಎಕರೆ ಹೊಲದಲ್ಲಿ ಸಿಗುವ ಬೆಳೆ ಅಷ್ಟೆನ ಎಂದು ನನಗೆ ದಿಗಿಲಾಯಿತು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ ಎಂದು ಕೇಳಿದೆ. ಸರಿ ಸುಮಾರು ೩೦ ಜನರ ಲೆಕ್ಕ ಸಿಕ್ಕಿತು. ಮನೆಯ ಹಿರಿಯರು ಯಜಮಾನರು, ಪತ್ನಿ, ೫ ಜನ ಪುತ್ರರು, ಅವರ ಹೆಂಡತಿ ಹಾಗೂ ಮಕ್ಕಳು. ೩ ತಲೆಮಾರಿನ ಜನ ಒಂದೇ ಸೂರಿನಡಿ ಒಟ್ಟಾಗಿ ಬದುಕುತ್ತಿದ್ದಾರೆ. ನನಗೆ ಮಲೆನಾಡಿನ ಹವ್ಯಕರ (ಸಾಗರದ ಸುತ್ತಲಿನ ಹಳ್ಳಿಗಳ ) ಚಿತ್ರಣ ಆ ಕ್ಷಣದಲ್ಲಿ ಕಣ್ಣ ಮುಂದೆ ಬಂತು. ಅಪ್ಪ ನೆಟ್ಟ ಅಡಕೆ ಮರವನ್ನು ಇಂಚಿಂಚು ಲೆಕ್ಕ ಹಾಕಿ, ಹೆಂಡತಿ ಬಂದ ತಕ್ಷಣ ಹಿಸೆ ಕೇಳುವ, ಬೇರೆ ಮನೆ ಮಾಡಿ ಮಕ್ಕಳ ಹತ್ತಿರ "ನಿನ್ ಅಜ್ಜ ೪ ಅದ್ಕೆ ಮರ ಬಿಟ್ರೆ ಬೇರೆ ಎಂತು ಕೊಡ್ಲೇ, ಹಿಸೆ ಆದ ತಕ್ಷಣ ಮನೆ ಮಾಡಿ, ಹಾಳು ಬಿದ್ದಿದ್ ತೋಟನ ಕೃಷಿ ಮಾಡ್ಸಿ ನಿಂಗ್ಳನ್ನ ದೊಡ್ಡ ಮಾಡಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಿ ಗೊತಿದ??" ಎಂದು ಕೇಳುತ್ತಾ, ಸುಗ್ಗಿಯ ಕಾಲದಲ್ಲಿ ೨ ತಿಂಗಳು ಕೊನೆಗೊಯಿಲು ಮಾಡಿ ಉಳಿದ ಕಾಲವೆಲ್ಲ ಅಕ್ಕ ಪಕ್ಕದ ಮನೆ ಕಟ್ಟೆ ಪಂಚಾಯತಿ, ಯಾರ್ ಮನೆ ಕೂಸು ಓಡಿ ಹೋತು?? ಯಾರ್ ಮದ್ವೆ ತಪ್ಸಿರೆ ನಾವು ಮಜಾ ತಗಳಲಕ್ಕು,?? ಯಾರ್ ಮನೆ ಹಿಸೆ ಪಂಚಾಯತಿಗೆ ಮೂಗು ತೂರಿಸ್ಲಕ್ಕು?? ಕೊನೆಗೆ ಈ ವರ್ಷದ ಅದ್ಕೆ ರೇಟ್ ಎಸ್ಟ್ ಆಗಗು?? ಎಂದು ವೃಥ ಕಾಲಹರಣ ಮಾಡುವ (ಕಷ್ಟ)ಜೀವಿಗಳ ಎದುರಿಗೆ ಉತ್ತರ ಕರ್ನಾಟಕದ ಜನ ಸುಖ ಜೀವಿಗಳೆಂಬ ತೀರ್ಮಾನಕ್ಕೆ ಬಂದೆ. ಜೋಳದ ಹಿಟ್ಟನ್ನು ಹೇಗೆ ಮಾಡುತ್ತೀರಿ?? ಎಂದು ಕೇಳಿದೆ. ಹೊಲದಿಂದ ಜೋಳ ಕಟಾವು ಮಾಡ್ತೆವ್ರಿ, ಜೋಳದ ತೆನೆ ಬಿಡಿಸಿ ಇಲ್ಲಿ ಹಾಕ್ತೆವಿ (ಎಂದು ಯಂತ್ರದ ಬುರುಡೆ ತೋರಿಸಿದ), ಹಿಟ್ಟು ಮಾಡೋ ಜೋಳ ಮತ್ತು ಹೊಟ್ಟು ಎರಡೂ ಬೇರೆ ಆದ ಮೇಲೆ ಜೋಳವನ್ನು ಕುಟ್ಟಿ ಹಿಟ್ಟು ಮಾಡುತ್ತೇವೆ, ಎಂದು ಜೋಳದ ರೊಟ್ಟಿ ತಿನ್ನುವ ಮುನ್ನ ಇರುವ ಎಲ್ಲ ಪ್ರೊಸೆಸ್ಸ್ ಗಳನ್ನೂ ವಿವರಿಸಿದರು. ಅವರಿಂದ ಬಿಳ್ಕೊಂಡು ಆಟೋ ಏರಿ ಮತ್ತೆ ಐಹೊಳೆಯತ್ತ ಸಾಗಿದೆವು.



ಐಹೊಳೆ ಊರನ್ನು ನೋಡುವುದು ಮತ್ತೊಂದು ಸೊಗಸು. ಇದು ದೇಶ ವಿದೇಶಗಳ ಪ್ರವಾಸಿಗರ ಆಕರ್ಷನೆಯಾಗಿದ್ದೂ ಕೂಡ ತನ್ನದೇ ಆದ ಸಾಂಸ್ಕೃತಿಕ ಸೊಗಡನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಊರನ್ನು ಪ್ರವೇಶಿಸುತ್ತಿದ್ದಂತೆ ಚಿಕ್ಕ ಚಿಕ್ಕ ನೂರಾರು ಗುಡಿಗಳು ಕಾಣ ಸಿಗುತ್ತವೆ. ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದ ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಮೊದಲ ಅಡಿಪಾಯ ಎಂದು ಇಲ್ಲಿನ ಪ್ರತೀ ಕಲ್ಲುಗಳನ್ನು ನೋಡಿದರೂ ಗೊತ್ತಾಗುವಂಥಹ ಸತ್ಯ. ಇಲ್ಲಿನ ಮನೆಗಳೂ ಕೂಡ ಅಂಥದೇ ಕೆಂಪು ಕಲ್ಲಿನಿಂದ ಕಟ್ಟಲ್ಪತ್ತಿವೆ. ಮನೆ ಮುಂದೆ ಕುರಿ ಮಂದೆ, ಗೊಬ್ಬರಗುಂಡಿ, ಧೂಳೆಬ್ಬಿಸುವ ಮಣ್ಣಿನ ರಸ್ತೆಗಳು ಇನ್ನೂ ವ್ಯವಹಾರೀಕರಣಗೊಂಡಿಲ್ಲದ ಟಿಪಿಕಲ್ ಹಳ್ಳಿಯ ಚಿತ್ರಣ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಬೇರೆ ಪ್ರವಾಸಿ ತಾಣಗಳಿಗಿಂತ ಬೇರೆಯದೇ ಅನುಭವ ನೀಡುತ್ತದೆ. ಎಲ್ಲಿ ಹೋದರು ನಾನು ಇದರ ಪೂರ್ತಿ ಇತಿಹಾಸ ಹೇಳ್ತೀನಿ ೫ ರೂ ಕೊಡಿ ಸಾ ಎಂದು ಬೆನ್ನ ಹಿಂದೆ ಬೀಳುವ ಮಕ್ಕಳು, ಹೇಳದೆ ಕೇಳದೆ ನಿಲ್ಲಿಸಿಕೊಂಡು ಇತಿಹಾಸ ಹೇಳಿ ೨೦ ರೂ ಕೊಡಿ ಎಂದು ದುಡ್ಡು ಕೀಳುವ ಗಂಡಸರು.




ಸುಮಾರು ೧೨೫ ದೇವಸ್ಥಾನಗಳನ್ನೋಳಗೊಂಡ ಐಹೊಳೆಯಲ್ಲಿ ನಾವು ಮೊದಲು ಭೇಟಿ ನೀಡಿದ್ದು ರಾವನಫಡಿ ಎಂಬ ದೇವಾಲಯಕ್ಕೆ. ಒಂದು ದೊಡ್ಡದಾದ ಶಿಲೆಯಲ್ಲಿ ಗುಹೆಯಂತೆ ಕೊರೆದು ಕೆತ್ತನೆಗಳನ್ನು ಮಾಡಲಾಗಿದೆ. ಅಲ್ಲಿ ನಮ್ಮ ಹಿಂದೆ ಬಿದ್ದ ಮಕ್ಕಳಿಗೆ ಇತಿಹಾಸ ಹೇಳಲು ಹೇಳಿದೆವು. ಒಬ್ಬನ ನಂತರ ಇನ್ನೊಬ್ಬ ಹೀಗೆ ಸುಮಾರು ಮಕ್ಕಳು ತಾವು ಬಾಯಿಪಾಟ ಮಾಡಿಕೊಂಡ ಐಹೊಳೆ ಇತಿಹಾಸವನ್ನು ೨ ನಿಮಿಷದಲ್ಲಿ ಹೇಳಿ ಮುಗಿಸದವು. ಆಮೇಲೆ ಮಾಮೂಲಿಯಂತೆ ಕಾಸು ಕಿತ್ತು ಪೆರಿ ಕಿತ್ತವು. ನಂತರ ಹುಚ್ಚಿಮಲ್ಲಿ ಸಂಕೀರ್ಣಕ್ಕೆ ಭೇಟಿ ನೀಡಿ, ದೇವಸ್ಥಾನಗಳ ಸಂಕೀರ್ಣ ಹಾಗೂ ಪುರಾತತ್ವ ಇಲಾಖೆಯ ಮ್ಯುಸಿಯುಂ ಇರುವ ಸ್ಥಳಕ್ಕೆ ಹೋದೆವು.


ಐಹೊಳೆಯಲ್ಲಿ ಇರುವ ಸುಮಾರು ೧೨೫ ದೇವಸ್ತಾನಗಳನ್ನು ಪುರಾತತ್ವ ಇಲಾಖೆ ೨೨ ಗುಂಪುಗಳಾಗಿ ವಿಂಗಡಿಸಿದೆ. ೩ ಪ್ರಮುಖ ದೇವಾಲಯಗಳನ್ನು ಒಳಗೊಂಡ ಕೊಂಟಿಗುಡಿ ಗುಂಪಿನ ದೇವಸ್ಥಾನಗಳು ಹಾಗೂ ಸುಮಾರು ೩೦ ದೇವಸ್ಥಾನಗಳನ್ನೋಳಗೊಂಡ ಗಳಗನಾಥ ದೇವಾಲಯಗಳ ಗುಂಪು ಇವುಗಳಲ್ಲಿ ಪ್ರಮುಖವಾದವು. ಇವುಗಳ ಜೊತೆ ಜೈನ ಬಸದಿಗಳು ಕೂಡ ಇವೆ. ಹಾಗೆ ಎಲ್ಲವನೂ ಹಂತ ಹಂತವಾಗಿ ನೋಡಿ ಮುಗಿಸಿ, ವಾಪಸು ಹೋಗುವ ದಾರಿಯಲ್ಲಿ ನನಗೆ ಹೆಸರು ನೆನಪಿಲ್ಲದ ಯಾವುದೋ ಹಾಳುಬಿದ್ದ ಗುಡಿಗೆ ಹೋಗಿ ಅದರ ಹಿಂಭಾಗದಲ್ಲಿ ಜುಳು ಜುಳು ಹರಿಯುವ ಮಲಪ್ರಭಾ ದಂಡೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ವಿಶ್ರಮಿಸಿದೆವು.



ಇಲ್ಲಿಂದ ಮುಂದೆ ಪಟ್ಟದಕಲ್ಲಿಗೆ ನಮ್ಮ ಪಯಣ ಸಾಗುತ್ತಿತ್ತು. ನಾಸ್ತಿಕಳಾದ ನಾನು ಸುಮಾರು ೫೦ ಗುಡಿಗಳನ್ನು ಸುತ್ತಿದ್ದಕ್ಕೆ ಬರಲೇಬೇಕಾದ ಪುಣ್ಯದ ಬಗ್ಗೆ ನನ್ನ ಗೆಳೆಯ ತನ್ನ ಅಮೋಘ ಕಲ್ಪನೆಗಳನ್ನು ಹರಿಯಬಿಡುತ್ತಿದ್ದ. ಧೂಳೆಬ್ಬಿಸುತ್ತಾ ಇದ್ಯಾವುದೂ ತನಗೆ ಸಂಭಂದವೇ ಇಲ್ಲವೇನೋ ಎಂದುಕೊಂಡ ನಮ್ಮ ಆಟೋ ತನ್ನ ಪಾಡಿಗೆ ತಾನು ಭರ್ರ್ರ್ ಎಂದು ಸದ್ದು ಮಾಡುತ್ತಾ ಚಲಿಸುತ್ತಿತ್ತು.

ಮುಂದುವರೆಯುವುದು ...................














8 ಕಾಮೆಂಟ್‌ಗಳು:

  1. ಬ್ಲಾಗ್ ಚನ್ನಾಗಿದೆ.. ಓದಿ ಖುಷಿ ಆಯಿತು ....

    "TCS ಎಂಬ ಕಂಪನಿಯಲ್ಲಿ ಸಾಫ್ಟ್‌ವೇರ್ ಕೂಲಿ",,,, !!! ನೀನು ಕೂಲಿ ನಾನು ವಿಪ್ರೊ ದಲ್ಲಿ ಜೀತದಾಳು ....ಚನ್ನಾಗಿದೆ... ಇವೆಲ್ಲ ನಮಗೆ ಬೇಕಾ.. ಅಥವಾ ವಿಧಿ ಇಲ್ಲದೆ ಈ ಕೆಲಸ ಮಾಡ್ತಿದಿವ..??

    ಅದೇನೇ ಇರಲಿ ಬಿಡುವಿನ ಸಮಯವನ್ನು ಒಳ್ಲ್ಲೇ ರಿತಿಲ್ಲಿ ಉಪಯೋಗ್ಸ್ಕೊಂತ ಇದ್ದೀಯ.. ..... ಪ್ರಯಾಣ ಸುಖಕರವಾಗಿರಲಿ ... ಶುಭ ವಿದಾಯ..

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪಯಣದ ಅನುಭವ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನ್ನೂರಿನ ಬಗ್ಗೆ ನೀವು ಕಟ್ಟಿರುವ ಪದಗಳಲ್ಲಿ ಅವುಗಳ ಪ್ರತಿಬಿಂಬ ನಾನು ಕಂಡು ಕೊಂಡೆ, ತುಂಬಾ ಧನ್ಯವಾದಗಳು .....

    ಪ್ರತ್ಯುತ್ತರಅಳಿಸಿ
  3. ಛೇ...ಮೊನ್ನೆ ಹಾಕಿದ್ದ ಕಾಮೆಂಟ್ ...ಮಿಸ್ಸಿಂಗೂ...ಕಾಂತಿ..ಇದು ಮೋಸ...
    ಬಹಳ ಚನ್ನಾಗಿ ಬರೆದಿದ್ದೀಯಾ,,ಚಿತ್ರಗಳು ಅದಕ್ಕೆ ತಕ್ಕ ವೀಕ್ಷಕವಿವರಣೆ... ಮುಂದಿನ ಅನುಭವಕ್ಕೆ ಕಾಯ್ತೇನೆ...

    ಪ್ರತ್ಯುತ್ತರಅಳಿಸಿ
  4. I visited all this place and again i recalled it from this blog.
    you narrated it with picture very well. Good luck.

    ಪ್ರತ್ಯುತ್ತರಅಳಿಸಿ