ಬುಧವಾರ, ಡಿಸೆಂಬರ್ 14, 2011

ಉತ್ತರ ಕರ್ನಾಟಕ ಪ್ರವಾಸ, ಭಾಗ-೨

ದಿನ-೧
ಸೆಪ್ಟೆಂಬರ್೨೪, ಶನಿವಾರ:

ಹುಬ್ಬಳ್ಳಿಯಿಂದ ಬಾದಾಮಿಯವರೆಗೂ ಪ್ರತೀ ನಿಲ್ದಾಣದಲ್ಲೂ ನಿಲ್ಲಿಸುತ್ತಾ, ಆಮೆವೇಗದಲ್ಲಿ ಚಲಿಸುತ್ತಿದ್ದ ನಮ್ಮ ರೈಲು ೮ ಗಂಟೆ ಸುಮಾರಿಗೆ ಬಾದಾಮಿ (ಬಾಗಲಕೋಟೆ ಜಿಲ್ಲೆ) ತಲುಪಿತು. ಬಾದಾಮಿ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಸ್ವಾಗತ ಕೋರುವ ಧಡೂತಿ ಮಂಗಗಳು ಕಾಣಸಿಗುತ್ತವೆ. ಅಪ್ಪೀ-ತಪ್ಪೀ ಕುರುಕಲು ತಿಂಡಿ, ಹಣ್ಣು ಮುಂತಾದ ತಿನ್ನುವ ಪದಾರ್ಥಗಳೇನಾದರೂ ಕೈಯಲ್ಲಿ ಇದ್ದರೆ ಹುಷಾರಾಗಿರಬೇಕು. ಇಲ್ಲವಾದರೆ ಹಿಂದಿನಿಂದ ಬಂದು ಕಸಿದುಕೊಂಡು ಬೇಗ ಬೇಗ ಕಂಬವನ್ನೇರಿ ಮೇಲೆ ಕುಳಿತು ನಿಮಗೆ ಅಣಕಿಸುತ್ತವೆ. ರೈಲ್ವೆ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬನಶಂಕರಿ..ಬನ್ನಿ ಬನಶಂಕರಿ .. ಎಂದು ಕೂಗುವ ಆಟೋ ಚಾಲಕರನ್ನು ಕಾಣಬಹುದು. ನಾವು ಅಲ್ಲಿಂದ ಬಾಡಿಗೆ ಆಟೋವೊಂದನ್ನು ಹಿಡಿದು ಯಾವುದಾದರೂ ಒಳ್ಳೆ ಹೋಟೆಲ್ ತಲುಪಿಸುವಂತೆ ಕೇಳಿಕೊಂಡೆವು. ಆತ ಬಾದಾಮಿ ಬಸ್ ತಂಗುದಾಣದ ಬಳಿಯ ಒಂದು ಹೋಟೆಲ್ ಗೆ ನಮ್ಮನ್ನು ತಲುಪಿಸಿ, ಇಲ್ಲಿರುವ ಹೋಟೆಲ್ ಗಳಲ್ಲೆಲ್ಲ ಇದು ಅತ್ಯುತ್ತಮವಾದುದೆಂದೂ, ಮುಂದೆ ನಾವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗಬೇಕಾದರೆ ತನ್ನನ್ನೇ ಕರೆಯಬೇಕೆಂದು ಹೇಳಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೊರಟ. ಅಷ್ಟರಲ್ಲಾಗಲೇ ಇಲ್ಲಿಯ ಜನರು ಬಾದಾಮಿಯನ್ನು 'ಬದಾಮಿ' ಎಂದು ಸಂಬೋಧಿಸುವುದರಿಂದ ನನಗೆ ಊರಿನ ಹೆಸರಿನ ಬಗ್ಗೆ ಗೊಂದಲ ಶುರುವಾಗಿತ್ತು. ನನ್ನ ಗೆಳೆಯ 'ಸುಮ್ಮನೆ ಕೂರಕ್ಕಾಗ್ದೆ ಇರೋವ್ರು ಇರುವೆ ಬೀಟ್ಕೊಂಡ್ರು' ಅನ್ನೋಹಂಗೆ ಸುಮ್ನೆ ತಲೇಲಿ ಇರುವೆ ಬಿಟ್ಕೊಂಡು ಅನ್ ನೆಸೆಸ್ಸರಿ ಕ್ವೆಶ್‌ಚನ್ ಕೇಳಿ ನನ್ನ ತಲೆ ತಿನ್ಬೇಡ ಎಂದು ನನ್ನ ಕಾಲೆಳೆಯೋದಕ್ಕೆ ಶುರುಮಾಡಿದ್ದರಿಂದ ನನ್ನ ಗೊಂದಲವನ್ನೆಲ್ಲ ಕಂಟ್ರೋಲ್ ಮಾಡಿಕೊಂಡು ಸುಮ್ಮನೆ ಕುಳಿತೆ. ಹೋಟೆಲ್ ನಲ್ಲಿ ರೂಂ ತೆಗೆದುಕೊಂಡು ನಮ್ಮ ಲಗ್ಗೆಜ್ ಗಳನ್ನು ಡಂಪ್ ಮಾಡಿ, ಸ್ನಾನ ಮಾಡಿ (ಇಲ್ಲಿನ ಹೋಟೆಲ್ ರೂಂ ಗಳಲ್ಲಿ ಬಿಸಿ ನೀರಿನ ಸೌಲಭ್ಯವಿರುವುದಿಲ್ಲ) ನಮ್ಮ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸತೊಡಗಿದೆವು. ನಮ್ಮ ಹೋಟೆಲ್ ರಿಸೆಪ್ಶನಿಸ್ಟ್ ನಮಗೆ ಸಲಹೆ ನೀಡತೊಡಗಿದ. 'ನೋಡ್ರೀ ಸರ, ಬದಾಮಿ ನೋಡೂದಕ್ಕ ೧ ದಿನ ಬೇಕರಿ, ನೀವು ಮೊದ್ಲು ಐಹೊಳೆ, ಪಟ್ಟದಕಲ್ಲು ಮುಗಿಸ್ಕೊಂಡ್ ಬಂದ್ ಬಿಡ್ರಿ, ನಿಮಗ ಬೇಕಾದ್ರೆ ನಮ್ಮ ಆಟೋದವನ ಗೊತ್ತು ಮಾಡಿಕೊಡ್ತೆನ್ರಿ, ನೀವು ಬೇಕಾದ್ರ ೫೦ ರೂಪಾಯಿ ಕಮ್ಮಿ ಕೊಡ್ರಿ' ಎಂದು ನಮಗೆ ಸಲಹೆ ಕೊಟ್ಟು, ತನಗೆ ಪರಿಚಯದ ಆಟೋ ಚಾಲಕನಿಗೆ ಬರ ಹೇಳಿ ನಮ್ಮನ್ನು ಸುತ್ತಾಡಿಸುವ ವ್ಯವಸ್ಥೆ ಮಾಡಿದ.


ಬನಶಂರರಿ ದೇವಸ್ಥಾನ ಮತ್ತು ಹರಿದರ ತೀರ್ಥ

ಮೊದಲು ಬಾದಾಮಿಯಿಂದ ಐಹೊಳೆ ಗೆ ಹೋಗುವ ದಾರಿಯಲ್ಲಿ ಸಿಗುವ ಬನಶಂಕರಿ ದೇವಸ್ಥಾನಕ್ಕೆ ಹೋದೆವು. ಇದು ಬಾದಾಮಿಯಿಂದ ಸುಮಾರು ೪ ಕಿ ಮೀ ದೂರದಲ್ಲಿದೆ. ಸುಮಾರು ಕ್ರಿ.ಶ ೭ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತವಾದ ಹಾಗೂ ೧೭೫೦ ರ ಸುಮಾರಿಗೆ ಮರಾಠ ರಾಜನೋಬ್ಬನಿಂದ ಜೀರ್ಣೋದ್ದಾರ ಗೊಂಡ ಈ ಗುಡಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗುಡಿಯ ಮುಂದೆ ಹರಿದರ ತೀರ್ಥವಿದೆ. ಸುತ್ತಲೂ ಕಲ್ಲಿನಿಂದ ಕೆತ್ತಲ್ಪಟ್ಟ ಮಂಟಪ, ಪ್ರಶಾಂತ ವಾತಾವರಣ

ಹರಿದರ ತೀರ್ಥದ ಒಂದು ಪಾರ್ಶ್ವದ ಮಂಟಪ


ಬಾದಾಮಿ ಚಾಲುಕ್ಯರು ಬನಶಂಕರಿ ದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಆರಾಧಿಸುತ್ತಿದ್ದರು. ದೇವಸ್ಥಾನದ ಪ್ರವೇಶ ದ್ವಾರದ ಎದುರು ೩ ದೊಡ್ಡ ದೀಪ ಸ್ಥಂಭಗಳಿವೆ. ಕಲ್ಲಿನಿಂದ ಕೆತ್ತಲ್ಪಟ್ಟ ಇವುಗಳ್ಲನ್ನು ಜಾತ್ರೆಯ ಸಮಯದಲ್ಲಿ ದೀಪ ಹಚ್ಚಲು ಬಳಸುತ್ತಾರಂತೆ

ದೀಪಸ್ತಂಭ
ಜನವರಿ- ಫೆಬ್ರವರಿ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ದೀಪಸ್ತಂಭ, ಹರಿದರ ತೀರ್ಥ, ಹಾಗೂ ಶಕ್ತಿ ದೇವಿಯ ಮೂರ್ತಿ ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಮುಂದುವರೆಯುವುದು......

5 ಕಾಮೆಂಟ್‌ಗಳು:

  1. ಹೌದು... ಬನಶಂಕರಿ ಬಾದಾಮಿ.. ನಿಜವಾಗಿಯೂ ಪ್ರಶಾಂತ ವಾತಾವರಣಗಳೇ... :)

    ನೀವು ಇಲ್ಲಿ ಹಾಕಿರುವ ಚಿತ್ರಗಳನ್ನು ನೋಡಿದೊಡನೆಯೇ.. ನಮ್ಮ ಬಾಲ್ಯವು ನೆನಪಾಯಿತು.. ನಾವು ಹೈಸ್ಕೂಲ್ ಅಲ್ಲಿ ಬನಶಂಕರಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು , ಹೊಸಪೇಟೆ ತುಂಗಭದ್ರಾ ಡ್ಯಾಮ್, ಕೂಡಲಸಂಗಮ ಮತ್ತು ಬಿಜಾಪುರದಲ್ಲಿನ ಗೋಲ್`ಗುಂಬಜ್`ಗಳನ್ನು ನೋಡಲು ಶಾಲಾ ಪ್ರವಾಸ ಹೋಗಿದ್ದೆವು.. ಸುಮಾರು ಹದಿಮೂರು ಅಥವಾ ಹದಿನಾಲ್ಕು ವಷಗಳ ಹಿಂದಿನ ನೆನಪುಗಳು.. ಮತ್ತೆ ಈಗ ನಿಮ್ಮ ಲೇಖನದಲ್ಲಿ ಸಿಕ್ಕಿವೆ.. ಅದಕ್ಕೆ ನಿಮಗೆ ನಮ್ಮ ಧನ್ಯವಾದಗಳು... :)

    ಹಾಗೂ ನಿಜಕ್ಕೂ ಬನಶಂಕರಿ ಬಾದಾಮಿ ನೋಡಲು ಪ್ರಶಾಂತ ವಾತಾವರಣ... ಅಲ್ಲಿನ ಆ ಪ್ರಶಾಂತ ವಾತಾವರಣದಲ್ಲಿ ಸಮಯ ಕಳೆದದ್ದೇ ತಿಳಿಯುವುದಿಲ್ಲ.. ಅಷ್ಟು ಸುಂದರ ಮತ್ತು ಮನಸ್ಸಿಗೆ ಶಾಂತಿ ಲಭಿಸುವ ಸ್ಥಳಗಳು.. ಶಾಲಾ ಪ್ರವಾಸದ ನಂತರ ಮತ್ತೆ ಆ ಕಡೆ ಹೋಗಿ ಬರುವ ಸಮಯವೇ ಸಿಕ್ಕಿಲ್ಲ.. ನಮ್ಮೂರು ದಾವಣಗೆರೆ.. ಕರ್ನಾಟಕದ ಮಧ್ಯೆ ಇರುವುದು.. ಆದ್ದರಿಂದ ಯಾವ ದಿಕ್ಕಿನಲ್ಲಿ ಹೋದರು ಕರ್ನಾಟಕದ ಗಡಿ ತಲುಪಲು... ಸುಮಾರು ಏಳರಿಂದ ಹನ್ನೆರಡು ಗಂಟೆಗಳ ಕಾಲ.. ಆದರೂ ನಾವು ಹೆಚ್ಚಾಗಿ ಯಾವ ಪ್ರವಾಸಕ್ಕೂ ಹೋಗಿ ಬರಲು .. ಸಮಯ ಸಿಕ್ಕಿಲ್ಲ ... ಅಪ್ಪ , ಅಮ್ಮ ಮತ್ತು ತಮ್ಮ ಅವರವರ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ.. ಒಂದು ವೇಳೆ ಸಮಯ ಸಿಕ್ಕರೂ ಸಹ.. ನಾವು ಒಬ್ಬರೇ ಉಳಿದು ಬಿಡುತ್ತೇವೆ.. ಒಬ್ಬರೇ ಎಲ್ಲಿಯೂ ಹೋಗಿ ಬರಲು ಮನಸ್ಸಾಗುವುದಿಲ್ಲ.. ಹೀಗಿರುವಾಗ ಅಂತಹಾ ಪ್ರಶಾಂತ ವಾತಾವರಣ ಇರುವ ಸ್ಥಳಗಳ ನೆನಪು ನಮ್ಮಲ್ಲಿ ಕೇವಲ ನಿಮ್ಮಂತಹಾ ಬರಹಗಾರರಲ್ಲಿ ಮತ್ತು ನಿಮ್ಮಂತಹವರ ಕಥೆಗಳಲ್ಲಿ ಮಾತ್ರ ಸಿಗಲು ಸಾಧ್ಯ... :)

    ನೀವು ಬಳಹಾ ಚೆನ್ನಾಗಿ ಬರೆಯುತ್ತೀರಾ.. ಮತ್ತು ರಮಣೀಯ ದೃಶ್ಯಗಳ ಜೊತೆ ನಿಮ್ಮ ಅನುಭವಗಳು .. ಅತೀ ಸೊಗಸಾಗಿರುತ್ತವೆ.. ಮೊದಲ ಭಾಗದಲ್ಲಿ ಸ್ವಲ್ಪ ಕುತೂಹಲ ಇತ್ತು .. ಆದರೆ ಈಗ ಕುತೂಹಲದ ಜೊತೆಗೆ ಮತ್ತಷ್ಟು ಹಳೆಯ ನೆನಪುಗಳು ಕೂಡ ಸೇರಿಕೊಂಡಿವೆ.. ನಿಮಗೆ ಆದಷ್ಟು ಬೇಗನೆ ಮುಂದುವರೆಸಿರೀ ಎಂದು ಕೇಳಿಕೊಳ್ಳುತ್ತೇವೆ.. ನಾವು ಓದಲು ಕಾಯುತ್ತಿದ್ದೇವೆ.. ನಿಮ್ಮ ಮುಂದಿನ ಭಾಗದಲ್ಲಿ ನಮಗೆ ಮತ್ತಷ್ಟು ಹಳೆಯ ದಿನಗಳ ನೆನಪು ಸಿಗಬಹುದೇನೋ ಎಂಬ ಚಿಂತನೆಯಲ್ಲಿ ನಾವು ... :)

    || ಪ್ರಶಾಂತ್ ಖಟಾವಕರ್ ||
    ದಾವಣಗೆರೆ , ಕರ್ನಾಟಕ

    ಪ್ರತ್ಯುತ್ತರಅಳಿಸಿ
  2. ಕಾಂತಿ, ಪ್ರವಾಸ ಕಥನಕ್ಕೆ ನಿಮ್ಮ ನುಭವದ ಮೆರುಗು...ಚನ್ನಾಗಿದೆ ವಿವವರಣೆ... ಕೆಲವು ಕಾಗುಣಿತದ ತಪ್ಪುಗಳಿವೆ ಸರಿಪಡಿಸಿ.

    ಪ್ರತ್ಯುತ್ತರಅಳಿಸಿ