ಮಂಗಳವಾರ, ಸೆಪ್ಟೆಂಬರ್ 6, 2011

ಚುಂಚಿ ಫಾಲ್ಸ್, ಏರೋಪ್ಲೇನ್ ಚಿಟ್ಟೆ ಮತ್ತು ನನ್ನ ಬಾಲ್ಯ....


ಕಳೆದ ವಾರಾಂತ್ಯದಲ್ಲಿ ಚುಂಚಿ ಫಾಲ್ಸ್ ನೋಡಲು ಹೋಗಿದ್ದೆ. ಚುಂಚಿ ಫಾಲ್ಸ್ ನೋಡಲು ಹೋಗಿದ್ದು ೨ ನೇ ಬಾರಿ ಆದರೂ ಮೊದಲ ಬಾರಿ ಹೋದಾಗ ಅಲ್ಲಿ ಹೆಚ್ಹು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ಹೋದಾಗ ನಮ್ಮ ಗುಂಪಿನ ಇತರರು ಈಜಲು ತೊಡಗಿದರೆ ನಾನು ಸಮಯ ಕಳೆಯಲು ಅಲ್ಲೇ ಕಲ್ಲು ಬಂಡೆಗಳ ಮೇಲೆ ಅಲ್ಪ ಸ್ವಲ್ಪ ನೀರಿದ್ದು, ಮಟ್ಟಿಗಳು ಬೆಳೆದಿದ್ದ ಒಂದು ದಿಣ್ಣೆಯ ಮೇಲೆ ಫೋಟೋಸ್ ತೆಗೆಯುತ್ತಾ ಕುಳಿತಿದ್ದೆ. ಆಗ ತಾನೇ ಬಂತೊಂದು ಹಳದಿ ಬಣ್ಣದ ಏರೋಪ್ಲೇನ್ ಚಿಟ್ಟೆ. ನನಗೆ ನನ್ನ ಸಿಹಿ ಬಾಲ್ಯ ನೆನಪಾಯಿತು. ಆಗೆಲ್ಲ ನಮ್ಮೂರಿನಲ್ಲಿ ನನ್ನದೇ ವಯಸ್ಸಿನ ಮಕ್ಕಳ ಗುಂಪು ಯಾವಾಗಲೂ ಆಟ ಆಡಲು ತಯಾರಾಗಿರುತ್ತಿತ್ತು. ನನ್ನನ್ನೂ ಸೇರಿ ಕೆಲವರಿಗೆ ಪಿಟಿ(ಏರೋಪ್ಲೇನ್ ಚಿಟ್ಟೆ) ಹಿಡಿಯುವುದು, ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಮೋಜಿನ ಆಟ.



ಅಪರೂಪಕ್ಕೆ ಸಿಗುವ ರಕ್ತಗೆಂಪು ಬಣ್ಣದ ಚಿಟ್ಟೆ ಯಾರಾದರೂ ಹಿಡಿದರೆ ಬಾಲಕ್ಕೆ ದಾರ ಕಟ್ಟಲು ನಾ ಮುಂದು ತಾ ಮುಂದು ಎಂದು ಎಲ್ಲರೂ ರೆಡಿ. ಮಳೆಗಾಲದಲ್ಲಿ ಮಣ್ಣಿನಲ್ಲಿ ಕಾಣಸಿಗುವ ನಂಜುಳ್ಳೆ ಹಿಡಿದು, ಅದನ್ನು ಕದ್ದ ಅಪ್ಪನ ಶೇವಿಂಗ್ ಬ್ಲೇಡಿನಿಂದ ೩-೩ ತುಂಡು ಮಾಡಿ, ಮತ್ತೆ ಮಣ್ಣಿನಲ್ಲಿ ಹುದುಗಿಸಿ, ಆ ಮಣ್ಣನ್ನು ಉಂಡೆ ಕಟ್ಟಿ ಅಂಗಳದಲ್ಲಿದುವುದು. ನಂಜುಳ್ಳೆ ಸಾಯದೆ ಮತ್ತೆ ಬೆಳೆಯುತ್ತಿದೆಯಲ್ಲ ಎಂದು ಆಶ್ಚರ್ಯಪಟ್ಟು ಅದನ್ನು ಸಾಯಿಸುವ ಉಪಾಯ ಕಂಡು ಹಿಡಿಯಲು ರಹಸ್ಯ ಮೀಟಿಂಗ್ ಸೇರುವುದು (ಇವೆಲ್ಲ ಕಾರ್ಯಾಚರಣೆಗಳು ಮನೆಯ ಹಿರಿಯರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ನಡೆಯುತ್ತಿತ್ತು).


ಗದ್ದೆಯ ಬದುವಿನ ಮೇಲೆ ಕುಳಿತು ನೀರಿನಲ್ಲಿ ಸಿಗುವ ಚಿಕ್ಕ ಚಿಕ್ಕ ಮೀನುಗಳನ್ನು ಮುಷ್ಟಿ ಯಲ್ಲಿ ಹಿಡಿದು ಅವು ಒದ್ದಾಡುವಾಗ ಇಡುವ ಗುಳುಗುಳು ಕಚಕುಳಿಗೆ ಕುಶಿಪದುವುದು, ಅಪ್ಪೀ ತಪ್ಪೀ ರಸ್ತೆ ಬದಿಯಲ್ಲಿ ಎಲ್ಲಾದರೂ ಹಸಿರು ಹಾವಿನ ಮರಿ ಕಣ್ಣಿಗೆ ಬಿದ್ದರೆ ಹವಾಯಿ ಚಪ್ಪಲಿ ಹಾಕಿದ ಕಾಲಿನಿಂದ ಮೆತ್ತಗೆ ತುಳಿದು ಹಿಡಿದುಕೊಂಡು ಕಾಲಿಗೆ ಕಚಕುಳಿ ಆಗುವಾಗ ಆನಂದಿಸುವುದು, ಇವೆಲ್ಲಾ ನಮಗೆ (ವಿಕೃತ) ಕುಶಿ ಕೊಡುವ ಆಟಗಳಾಗಿದ್ದವು.ಈ ರೀತಿಯ ಮಂಗಾಟಗಳಿಗೆ ನಾವು ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹಿರಿಯರಿಗೆ ಸುದ್ದಿ ಮುಟ್ಟಿಸುತ್ತಾರೆಂದು ಹೆದರಿ ನಾವು ಕೆಲವೇ ಕೆಲವು ಮಕ್ಕಳು ಮಾತ್ರಾ ಇಂಥಹ ಹರ ಸಾಹಸಗಳಿಗೆ ಕೈ ಹಾಕುತ್ತಿದ್ದೆವು. ಇವೆಲ್ಲಾ ಕಪಿ ಚೇಷ್ಟೆಗಳು ಚುಂಚಿ ಫಾಲ್ಸ್ ಎದುರು ಕುಳಿತಿದ್ದಾಗ ಒಮ್ಮೆಲೇ ನೆನಪಾಗಿ, ಅಲ್ಲಿ ಎಲ್ಲಾದರೂ ಪಿಟಿ ಹಿಡಿಯಲು ಸಾಧ್ಯವಾ!! ಎಂದು ಹುಡುಕತೊಡಗಿದೆ. ಮೊದಲಿನಂತೆ ಅವಕ್ಕೆ ಜೀವ ಹಿಂಡಲು ನನ್ನ ಮನಸ್ಸು ಒಪ್ಪದಿದ್ದರೂ, ಒಮ್ಮೆ ಕೈಯಲ್ಲಿ ಹಿಡಿದು ೨ ನಿಮಿಷ ಜೊತೆಗಿಟ್ಟುಕೊಂಡು ಬಿಟ್ಟುಬಿಡುವುದು ನನ್ನ ಆಸೆಯಾಗಿತ್ತು. ಹಾಗೇ ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದಾಗ ನಾಲ್ಕೈದು ಬಣ್ಣದ ಸುಮಾರು ಚಿಟ್ಟೆಗಳು ಅಲ್ಲೆಲ್ಲಾ ಹಾರಾಡುತ್ತಿರುವುದು ಕಂಡಿತು.




ಸ್ವಲ್ಪ ಹೊತ್ತು ಅವಕ್ಕೆ ಡಿಸ್ಟರ್ಬ್ ಮಾಡದೆ, ಏನು ಮಾಡುತ್ತಿವೆ ಎಂದು ಮೌನವಾಗಿ ಗಮನಿಸುತ್ತಾ ಕುಳಿತಿದ್ದೆ. ೩ ಏರೋಪ್ಲೇನ್ ಚಿಟ್ಟೆಗಳು ಮಾರು ದೂರದಲ್ಲಿ ಸಂಗಾತಿಗಾಗಿ ನಿರೀಕ್ಷಿಸುತ್ತಾ ಸುಮಾರು ೩-೪ ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದವು. ಅಪ್ಪೀ ತಪ್ಪಿ ಅಲ್ಲಿ ಬೇರೆ ಯಾವುದಾದರೂ ಗಂಡು ಚಿಟ್ಟೆ ಬಂತೆಂದರೆ ಹೊಡೆದಾಟ ಶುರು. ಯಾವುದಾದರೂ ಹೆಣ್ಣು ಚಿಟ್ಟೆ ಆ ಕಡೆ ಸುಳಿದಾಡಿದಲ್ಲಿ ಅವುಗಳನ್ನು ಓಲೈಸುವ, ಪ್ರಣಯಕ್ಕೆ ಆಹ್ವಾನಿಸುವ ಪ್ರಕ್ರಿಯೆ ಮತ್ತು ಗಂಡು ಚಿಟ್ಟೆಗಳ ನಡುವೆ ಹೊಡೆದಾಟ ಅವ್ಯಾಹತವಾಗಿ ನಡೆದಿತ್ತು.


ಎಲ್ಲವನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅಸಾಧ್ಯವಾಗಿ, ಕೇವಲ ನಿರೀಕ್ಷೆಯಲ್ಲಿರುವ ಗಂಡು ಚಿಟ್ಟೆಗಳನ್ನು ವಿವಿಧ ಭಂಗಿಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು. ಹಾಗೆಯೇ ಸುಮಾರು ೨ ಗಂಟೆಗಳ ಕಾಲ ಸುಮ್ಮನೆ ನೋಡುತ್ತಾ ಕುಳಿತಿದ್ದು ಕೊನೆಗೂ ಒಂದು ಪಿಟಿ ಯನ್ನು ಉಪಾಯವಾಗಿ ಕೈಯಲ್ಲಿ ಹಿಡಿದೆ. ೨ ನಿಮಿಷ ನನ್ನ ಕೈಮೇಲೆಲ್ಲ ಕಚಕುಳಿಯಿಟ್ಟು ಹಾಗೆಯೇ ಬಿಟ್ಟುಬಿಟ್ಟೆ. ಹೆದರಿದ ಚಿಟ್ಟೆ, ಎದ್ದೆನೋ ಬಿದ್ದೆನೋ ಎಂದು ಹಾರಿ ಹೋಗಿ ಮತ್ತೆ ತನ್ನ ಆವಾಸ ಸ್ಥಾನದಲ್ಲಿ ಕುಳಿತು ಸಂಗಾತಿಗಾಗಿ ನಿರೀಕ್ಷಿಸತೊಡಗಿತು.

9 ಕಾಮೆಂಟ್‌ಗಳು:

  1. Nice work Kanthi - I'd love to be close enough to that waterfall to take some pictures of my own. :-)

    ಪ್ರತ್ಯುತ್ತರಅಳಿಸಿ
  2. ಬಾಲ್ಯದ ನೆನಪು ಸಹಜ ಅಲ್ವಾ ಅಂತಹ ಸುಂದರ ಪರಿಸರದಲ್ಲಿ,,,?? ಕಾಂತಿ, ಇವು ಡ್ರಾಗನ್ ಫ್ಲೈ ಅಲ್ವಾ? ಜಲಪಾತದ ಸೊಗಸು ಗಾಂಭೀರ್ಯ ಜೋರಾಗಿದೆ..ಅಂತೂ ಒಳ್ಲೆ ಕ್ಯಾಮರಾ ಕೈಚಳಕದ ಜೊತೆ ವಿವರಣೆ ಸಹಾ ಸೂಪರ್ರು.......

    ಪ್ರತ್ಯುತ್ತರಅಳಿಸಿ
  3. ಬಾಲ್ಯದಲ್ಲಿ ಆ ಪೀಟಿ ಹುಳಕ್ಕೆ ನಾವು ಹಿಂಸೆ ಕೊಡುತ್ತಿದ್ದೇವೆ ಎನ್ನುವ ಕಲ್ಪನೆ ಕೂಡ ಇದ್ದಿರುವದಿಲ್ಲ...

    ಪ್ರತಿಯೊಬ್ಬರ ಬಾಲ್ಯದಲ್ಲೂ ಈ ಪೀಟಿ ಹುಳ ಇದ್ದೇ ಇರುತ್ತದೆ..

    ಪ್ರತ್ಯುತ್ತರಅಳಿಸಿ
  4. @Prakashanna: itteechege makkala baalya ee reeti irodilla. videogames, cricket, homework gala madhye kaledu hogtide..Thanks for reading..

    ಪ್ರತ್ಯುತ್ತರಅಳಿಸಿ