ಶನಿವಾರ, ಡಿಸೆಂಬರ್ 4, 2010

ಲಹರಿ

ಹಸಿರು ಲಂಗದ ಹುಸಿ ನಗೆಯ ಚೆಲ್ಲುವ
ಹೊಸ ಬಾಲೆಯ ಕಪ್ಪು ಕಣ್ಣಾಲಿಗಳಲ್ಲಿ
ಇಣುಕಿದಾಗೆಲ್ಲ; ಬಾಲ್ಯದಲ್ಲಿ ಅಮ್ಮ,
"ನವನೀತ ಚೋರಾ..ನಂದಾ ಕಿಶೋರ.."
ಹಾಡುತ್ತ ಕೈ ತುತ್ತು ತುರುಕಿ ಆಗಸದೆಡೆ
ಬೊಟ್ಟು ಮಾಡಿ ತೋರಿಸುತ್ತಿದ್ದ
ಚಂದಮಾಮ ನೆನಪಾಗುತ್ತಾನೆ.

ಅವಳ ಹಸಿರು ಲಂಗದ
ನಿರಿಗೆಯ ಅಂಚು;
ಮನೆಯ ಹಿತ್ತಿಲ ಹುಲ್ಲು ಹಾಸಿದ
ಗುಡ್ಡವನ್ನೂ, ಅದರ ಅರಿಗಿಗೆ
ಸಣ್ಣಗೆ ತಣ್ಣಗೆ ಹರಿಯುತ್ತಿದ್ದ
ಹೊಳೆಯನ್ನೂ ನೆನಪಿಸುತ್ತದೆ

ಅವಳ ಗುಂಗುರು ಮುಂಗುರುಳು;
ಅಮ್ಮ ತಂಪಾಗಲೆಂದು ತಿಂಗಳಿಗೊಮ್ಮೆ
ತಲೆಗೆ ತಟ್ಟುತ್ತಿದ್ದ ಕಮ್ಮಗಿನ ವಾಸನೆಯ
ಹರಲೆಣ್ಣೆಯನ್ನೂ ಮನೆ ಮುಂದಿನ ಚಪ್ಪರದ
ಮೇಲೆ ಹಂಚಿ ಹರಡಿದ್ದ ಸೂಜಿ ಮಲ್ಲಿಗೆ
ಬಳ್ಳಿಯನ್ನೂ ನೆನಪಿಸುತ್ತದೆ.

ಆ ನೀಳ ಮೂಗಿನ ಮೇಲೆ
ಮಿನುಗುವ ಮುತ್ತಿನ ನತ್ತು
ಕಿವಿಯೋಲೆ, ಕೈ ಬಳೆಯ ಕಿಂಕಿಣಿ,
ಕಾಲ್ಗೆಜ್ಜೆಯ ಕಲರವಕೆ;

ಒಳ ಕೋಣೆಯ ಕತ್ತಲಲ್ಲಿ
ಮುಖ ಮುಚ್ಚಿ ಮುಸಿ ಮುಸಿ ಅಳುವ
ವಿಧವೆ ಅತ್ತೆಯಾ...
ಒಲವಿನ ಒರತೆಯೇ ಬತ್ತಿ ಕೆಂಪಾದ
ಅಪ್ಪನ ಕಿಡಿಗಣ್ಣೂ

ಆಗಸವೇ ನೆತ್ತಿಯ ಮೇಲೆ
ಮಗುಚಿದಂತೆ ಸದಾ ನಿರ್ವಿಕಾರ
ನಿರ್ಭಾವುಕ ಅಮ್ಮನ ಗದ್ಗ ಮುಖವೂ
ತಟ್ಟನೆ ನೆನಪಾಗಿ
"ಹುಚ್ಚೀ !!..... ಬಯಸಿ ತೊಟ್ಟುಕೊಂಡ
ಸಂಕಲೆಗಳಿವು, ಬಿಚ್ಚಿ ಬಿಸುಟು ಬೇಗ"
ಎಂದೊಮ್ಮೆ ಚಿಟ್ಟನೆ ಚೀರಬೇಕೆನಿಸುತ್ತದೆ.

(ಗೆಳೆಯನೊಬ್ಬ ಬರೆದು ನನಗೆ ಉಡುಗೊರೆಯಾಗಿ ಕೊಟ್ಟ ಕವಿತೆ ಇದು. ೭ ವರ್ಷಗಳ ನಂತರ ಅವನ ಒಪ್ಪಿಗೆ ಪಡೆದು ನನ್ನ ಬ್ಲಾಗಿನಲ್ಲಿ ಬರೆಯುತ್ತಿದ್ದೇನೆ.)

1 ಕಾಮೆಂಟ್‌:

  1. ಕಾಂತಿಯವರೇ, ಚಂದಮಾಮನ ತೋರಿಸಿ ತುತ್ತು ತಿನಿಸೋಕೆ ಈಗಿನ ಅಮ್ಮಮ್ದಿರಿಗೆ ಸಾಧ್ಯವಾ? ಅಷ್ಟು ಸಮಯ ಸಿಗುತ್ತಾ,... ಒಟ್ನಲ್ಲಿ ನೀವು ಪುಣ್ಯವಂತರು ...ಆ ಸುಖಾನುಭವ ಪಡೆದ್ರಿ...ಅದನ್ನೇ ಸೊಗಸಾಗಿ ಕವನಿಸಿದ್ರಿ ಸಹಾ...

    ಪ್ರತ್ಯುತ್ತರಅಳಿಸಿ