ಗುರುವಾರ, ಜುಲೈ 8, 2010

ಸ್ವಲ್ಪ ಸಿಹಿ ಸ್ವಲ್ಪ ಹುಳಿ, just like ಹಾಜ್ಮೊಲ ಕ್ಯಾಂಡಿ ....!!
ಎಂದಾದರೂ ಪೂರ್ತಿ ಬಿಡುವಾಗಿ ಪಿಜಿ ಯಲ್ಲಿ ಕುಳಿತಾಗ, ಮಾಯಾನಗರಿ ಬೆಂಗಳೂರಿನಲ್ಲಿ ವೋಲ್ವೋ ಬಸ್ ಹತ್ತಿ ಹೆಡ್ ಫೋನ್ ಮರೆತು ಎಫ್ ಎಂ ಕೇಳಲಾಗದೆ ಕಿಟಕಿಯಿಂದಾಚೆ ನೋಡುತ್ತಾ ಕುಳಿತಾಗಲೆಲ್ಲ ನನ್ನ ಬಾಲ್ಯದ ದಿನಗಳಿಂದ ಹಿಡಿದು ಫೈನಲ್ ಬಿಎಸ್ಸಿ ಯವರೆಗೆ ನಾನು ಕಳೆದ, ಕಳೆದುಕೊಂಡ ದಿನಗಳು ನೆನಪಾಗುತ್ತಿರುತ್ತದೆ. ಸಾಗರದ ಹತ್ತಿರ ಮಡಸೂರು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಬೆಂಗಳೂರಿನ ಬ್ಯುಸಿ, ಮೆಟೀರೈಯಲಿಸ್ಟಿಕ್ ಜೀವನಕ್ಕೆ ಹೊಂದಿಕೊಳ್ಳಲು ಪೂರ್ತಿ ೨ ವರ್ಷಗಳೇ ಬೇಕಾಯಿತು.

೨೫ ವರ್ಷಗಳಲ್ಲಿ ಆದ ಬದಲಾವಣೆಗಳನ್ನು ನೆನೆಸಿಕೊಂಡರೆ ಅಬ್ಬಾ!! ಎನಿಸುತ್ತದೆ. ನಾನು ೪-೫ ವರ್ಷದವಳಿದ್ದಾಗ ಬಹುಷಃ ಉರಿಗೊಂದೆ ಬ್ಲಾಕ್ ಅಂಡ್ ವೈಟ್ ಟಿವಿ. ಮಹಾಭಾರತ ಧಾರವಾಹಿ ನೋಡಲು ನಾನು, ಅಜ್ಜಿ, ಪಕ್ಕದಮನೆ ಶಾಂತ ಅತ್ತೆ ರಾತ್ರಿ ಲಘು ಬಗೆಯಲ್ಲಿ ಊಟ ಮಾಡಿ ೧ ಮೈಲು ದೂರ ಇರುವ ಕ್ರಿಷ್ಣಮೂರ್ತಣ್ಣನ ಮನೆಗೆ ಚಳಿ, ಮಳೆ ಲೆಕ್ಕಿಸದೆ ಓಡುತ್ತಿದ್ದೆವು. ನನಗೆ ಧಾರಾವಾಹಿ ನೋಡುವ ಹುಚ್ಚಿಗಿಂತ ಆ ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಮನುಷ್ಯರನ್ನು ನೋಡುವ, ಮಾತು ಕೇಳುವ ಕುತೂಹಲ. ಮಹಾಭಾರತ ನನ್ನೆದುರೇ ನಡೆಯುತ್ತಿದೆಯೇನೋ ಎಂಬಂತೆ ಟಿವಿ ಹತ್ತಿರ ಕುಳಿತು ಗುಂಗಿನಲ್ಲಿ ಕಳೆದು ಹೋಗುತ್ತಿದ್ದೆ. ಧಾರವಾಹಿ ಮುಗಿದ ನಂತರ ಅಜ್ಜಿ, ಶಾಂತ ಅತ್ತೆ ನನ್ನನ್ನು ಒತ್ತಾಯಪೂರ್ವಕವಾಗಿ ಎಬ್ಬಿಸಿಕೊಂಡು ಧಾರಾವಾಹಿ ಮುಂದೇನಾಗುವುದೋ ಎಂಬ ಬಗ್ಗೆ ಚರ್ಚೆ ನಡೆಸುತ್ತ, ವೋಟರುಗಪ್ಪೆಗಳ ಕೂಗು ಕೇಳುತ್ತ ಮನೆ ಸೇರುತ್ತಿದ್ದರು. ಇನ್ನು ಟೆಲಿಫೋನ್ ಅಂತೂ ನಮ್ಮ ಕಲ್ಪನೆಗೂ ನಿಲುಕದ ಅಗೋಚರ ವಸ್ತುವಾಗಿತ್ತು. ೨ ನೇ ತರಗತಿಯಲ್ಲೋ, ೩ ನೇ ತರಗತಿಯಲ್ಲೋ ಅದರ ಬಗ್ಗೆ ಓದಿದ್ದು, ಯಾವಾಗಲೋ ಒಮ್ಮೊಮ್ಮೆ ಪ್ರತ್ಯಕ್ಷ್ಯ ನೋಡಿದ್ದು, ಸಿನೆಮಾದಲ್ಲಿ ನೋಡಿದ್ದು ಬಿಟ್ಟರೆ ಅದರ ಬಗ್ಗೆ ಉಳಿದದದ್ದು ಪರಮ ಕುತೂಹಲ ಮಾತ್ರ. ನೋಡನೋಡುತ್ತಿದ್ದಂತೆ ಎಲ್ಲವು ಬದಲಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಕಾಣುವಂತಾಗಿ ನಾನು ಗಣಕ ಯಂತ್ರದ ಮುಂದೆ ಕೂರುವಂತಾಗಿ ಹೋಯಿತು.

ಪ್ರತಿ ಮಳೆಗಾಲದಲ್ಲೂ ಗದ್ದೆ ನೆಟ್ಟಿಯ ಸಂಭ್ರಮ. ನಮ್ಮ ಗದ್ದೆಯಲ್ಲಿ ಬೀಜ ಭಿತ್ತಿದಾಗ ಹಕ್ಕಿ ಕಾಯಲು ಅಜ್ಜನ ಜೊತೆ ಹೊರಟು ನಿಲ್ಲುತ್ತಿದ್ದೆ. ಜೋರಾಗಿ ಮಳೆ ಬರುವ ಸಮಯದಲ್ಲೇ ಅಜ್ಜನಂತೆ ಕಂಬಳಿ ಕೊಪ್ಪೆ ಹಾಕಿಕೊಂಡು ಹೋಗಬೇಕೆಂದು ಹಠ ಮಾಡುತ್ತಿದ್ದೆ. ನನಗೆಂದೇ ಪುಟ್ಟ ಬಣ್ಣ ಬಣ್ಣದ ಛತ್ರಿಯೊಂದನ್ನು ಅಜ್ಜ ಸಾಗರದಿಂದ ತಂದುಕೊಟ್ಟಿದ್ದರೂ ಅದು ಅಂಗನವಾಡಿಗೆ,ಊರು ಸುತ್ತುವುದಕ್ಕೆ ಮಾತ್ರ ಸೀಮಿತ. ಗದ್ದೆಗೆ ಹೋಗುವುದಕ್ಕೆ ಕಂಬಳಿ ಕೊಪ್ಪೆಯೇ ಬೇಕು. ಅದಕ್ಕೆಂದೇ ಅಜ್ಜ ಉಪಾಯ ಮಾಡಿ ಚಿಕ್ಕ ಗೋಣಿ ಚೀಲವೊಂದರಿಂದ ಕೊಪ್ಪೆ ಮಾಡಿ ಅದರೊಳಗೆ ನನ್ನನ್ನು ತೂರಿಸಿ, ಅಜ್ಜನ ಕಂಬಳಿ ಕೊಪ್ಪೆಯೊಳಗೆ ನನ್ನನ್ನು, ನನ್ನ ಗೋಣಿ ಕೊಪ್ಪೆಯನ್ನೂ ತೂರಿಸಿ ಗದ್ದೆಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಸುಮಾರು ೩-೪ ವಿಧದ ಹಕ್ಕಿಗಳು ಭಿತ್ತಿದ ಬೀಜವನ್ನು ತಿನ್ನಲು ಬರಮಾಡುತ್ತಿದ್ದವು. ಅವನ್ನೆಲ್ಲ ಓಡಿಸುತ್ತಾ ಸಂಜೆಯವರೆಗೂ ಗದ್ದೆಯಲ್ಲಿ ಕುಳಿತಿದ್ದು ಮನೆಗೆ ವಾಪಸಗುತ್ತಿದ್ದೆವು.

ಪುಟ್ಟದಾದ ಒಂದು ಕೋಣೆಯ ಬಿಲ್ಡಿಂಗ್ ಒಂದು ನಮ್ಮ ಶಾಲೆ. ೧ ನೇ ತರಗತಿಯಿಂದ ೪ ನೇ ತರಗತಿಯವರೆಗೆ ಹೆಚ್ಹೆಂದರೆ ೩೦ ಮಕ್ಕಳು. ಗುಡ್ಡಪ್ಪ ಮೇಸ್ಟ್ರು ಒಬ್ಬರೇ ಆಗ ಎಲ್ಲ ತರಗತಿಗೂ ಪಾಠ ಮಾಡುತ್ತಿದ್ದರು. ನನಗೆ ಎಲ್ಲ ಪಾಟಗಳನ್ನೂ ಮೊದಲೇ ಅಮ್ಮ ಮನೆಯಲ್ಲಿ ಕಲಿಸುತ್ತಿದ್ದುದರಿಂದ ಶಾಲೆಯಲ್ಲಿ ಉಳಿದ ಮಕ್ಕಳಿಗೆ ಕಲಿಸುವ ಮಹತ್ತರ ಜವಾಬ್ದಾರಿಯನ್ನು ಗುಡ್ಡಪ್ಪ ಮೇಸ್ಟರು ನನಗೆ ವಹಿಸುತ್ತಿದ್ದರು. ಯಾರಾದರು ತಪ್ಪು ಮಾಡಿದರೆ ನಾನು ಮೇಸ್ಟರಿಗೆ ವರದಿ ಒಪ್ಪಿಸಬೇಕಿತ್ತು. ನನ್ನ ಸ್ನೇಹಿತೆ ಭಾಗ್ಯ ಹಾಗೂ ನಾನು ಯಾವಾಗಲೂ ಮೇಲ್ವಿಚಾರಕರು. ಹಾಗಾಗಿಯೇ ಉಳಿದ ಮಕ್ಕಳೆಲ್ಲ ನಮಗೆ ಲಂಚವಾಗಿ ಹುಣಸೇಕಾಯಿ, ಮಾವಿನಕಾಯಿ, ಹಾಗೂ ಕೆಲವು ಕಾಡು ಹಣ್ಣುಗಳನ್ನು ತಂದುಕೊಟ್ಟು ಪೂಸಿ ಹೊಡೆಯುತ್ತಿದ್ದರು. ನಮ್ಮ ಶಾಲೆಯ ಪಕ್ಕ ಒಂದು ದೊಡ್ಡದಾದ ಆಲದ ಮರವಿತ್ತು(ಈಗಲೂ ಇದೆ). ಅದರ ಬಿಳಿಲುಗಳನ್ನು ಹಿಡಿದು ಜೋಕಾಲಿಯಾದುವುದಕ್ಕೆಂದೇ ಮನೆಯಿಂದ ಸ್ವಲ್ಪ ಮುಂಚೆ ಹೊರಟು ಶಾಲೆಗೆ ಬರುತ್ತಿದ್ದೆವು. ಅಲ್ಲಿರುವ ಕಟ್ಟೆಯ ಮೇಲಿಂದ ಜಿಗಿದು ಬಿಳಿಲನ್ನು ಹಿಡಿದು ಜೋಕಾಲಿಯಾದುವುದು ನಮಗೆ ದಿನ ನಿತ್ಯದ ಕುಷಿ ಕೊಡುವ ಆಟ. ಈಗಲೂ ಒಮ್ಮೊಮ್ಮೆ ಆ ದಾರಿಯಲ್ಲಿ ಓಡಾಡುವಾಗೆಲ್ಲ ಜೋಕಾಲಿಯಾಡುವ ಮನಸ್ಸಾಗುತ್ತದೆ. ಸುತ್ತ ಮುತ್ತ ನೋಡಿ, ಯಾರೂ ಇಲ್ಲವೆಂದು ಮನದಟ್ಟು ಮಾಡಿಕೊಂಡು ಆಡಿ ಬಂದದ್ದೂ ಇದೆ.

ಹೀಗೆ ಹೇಳುತ್ತಾ ಹೊರಟರೆ ಉದ್ದದ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಬಾಲ್ಯ ಎಂಬ ಸುಂದರ ಸಿಹಿ-ಕಹಿ ನೆನಪುಗಳ ಪೆಟ್ಟಿಗೆಯೊಳಗೆ ಅತ್ಯಂತ ಬೆಲೆ ಬಾಳುವ ವಜ್ರ-ವೈಢೂರ್ಯಗಳನ್ನು ಕಲೆ ಹಾಕಿದ್ದೇನೆ. ಹೇಳಿದಸ್ಟೂ ಮುಗಿಯದು. ಮುಂದೆ ಯಾವಾಗಲಾದರು ಬರೆಯಬೇಕೆನಿಸಿದರೆ ಇದೇ ಬ್ಲಾಗನಲ್ಲಿ ಇನ್ನೊಂದಿಸ್ಟು ಬರೆಯುತ್ತೇನೆ. ಆಗೆಲ್ಲ ಯಾವಾಗ ನಾನೂ ದೊಡ್ಡವಳಾಗಿ ಅಮ್ಮನಂತಾಗುತ್ತೇನೋ ಎಂದು ಹಂಬಲಿಸುತ್ತಿದ್ದ ನನಗೆ ಈಗ ಮತ್ತೆ ಮಗುವಾಗುವ ಬಯಕೆ ಪದೇ ಪದೇ ಕಾಡುತ್ತಿರುತ್ತದೆ. ಬಹುಷಃ ಎಲ್ಲರೊಳಗೂ ಒಂದು ಮಗು ಹೃದಯ ಇರುತ್ತದೇನೋ.. :-)

8 ಕಾಮೆಂಟ್‌ಗಳು:

 1. Another nice write up. In fact, you write better in Kannada. Framing of the sentences show the command over the language and thoughts. We will expect more posts in Kannada from you.

  ಪ್ರತ್ಯುತ್ತರಅಳಿಸಿ
 2. Hi Kanthi..

  Tumba chennagi balyavannella kan munde tainde.. almost ellara balyavu ide reethi irodu.. alli yava ego.. yava bhedabhava irodilla.. adella doddorigaste artha agodu and life vyartha agodu..

  nanu ondsala urige abd balyakke hogi banda haage atu idanna odi...

  ಆಗೆಲ್ಲ ಯಾವಾಗ ನಾನೂ ದೊಡ್ಡವಳಾಗಿ ಅಮ್ಮನಂತಾಗುತ್ತೇನೋ ಎಂದು ಹಂಬಲಿಸುತ್ತಿದ್ದ ನನಗೆ ಈಗ ಮತ್ತೆ ಮಗುವಾಗುವ ಬಯಕೆ ಪದೇ ಪದೇ ಕಾಡುತ್ತಿರುತ್ತದೆ. ಬಹುಷಃ ಎಲ್ಲರೊಳಗೂ ಒಂದು ಮಗು ಹೃದಯ ಇರುತ್ತದೇನೋ.. :-)

  tumba satyavada salugalu

  ಪ್ರತ್ಯುತ್ತರಅಳಿಸಿ
 3. You like maha palayana too !!! One of my all time favorites. Actually I ended up buying the original english version.

  -Chinmay Bhat

  ಪ್ರತ್ಯುತ್ತರಅಳಿಸಿ