ಬುಧವಾರ, ಸೆಪ್ಟೆಂಬರ್ 14, 2011
ಬಣ್ಣಗಳು..
ಚೌತಿ ಹಬ್ಬಕ್ಕೆಂದು ಊರಿಗೆ ಹೋದಾಗ ತಮ್ಮ ಬಿಸಾಡೋದಕ್ಕೆ ಎಂದು ಎತ್ತಿಟ್ಟಿದ್ದ ಸಿಡಿ ರಾಶಿನ ನೋಡಿ ಇದ್ರಲ್ಲಿ ಏನಾದ್ರೂ ಫೋಟೋಸ್ ತೆಗಿಬಹುದ ಅಂತ ಯೋಚನೆ ಬಂತು. ಹೇಗಿದ್ರು ಹೊರಗೆ ಕಾಲಿಡೋಕೆ ಸಾಧ್ಯ ಇಲ್ಲ. ಜೋರು ಮಳೆ ಬೇರೆ. "ಈ ಮಳೆಲಿ ಕ್ಯಾಮೆರಾ ಹಿಡ್ಕೊಂಡು ಅಲ್ಯಕ್ಕೆ ಹೋಗಡ ನೀನು" ಅಂತ ಅಮ್ಮ ಫರ್ಮಾನು ಹೊರಡಿಸಿ ಆಗಿತ್ತು. ಇನ್ನು ಮಾತು ಮೀರಿ ಹೊರಗೆ ಕಾಲಿಟ್ಟರೆ ಸಿಡಿಸಿಡಿ ಮಾಡುತ್ತಾರೆಂದು ಮನೇಲೆ ಟೈಮ್ ಪಾಸು ಮಾಡುವ ಅನಿವಾರ್ಯಕ್ಕೆ ಈ ಸಿಡಿಗಳು ಬಲಿಯಾದವು.
ಹಾಗೆ ಸಿಡಿ ನ ಒಂದರಮೇಲೊಂದು, ವೃತ್ತಾಕಾರದಲ್ಲಿ ಎಲ್ಲ ಇಟ್ಟು ಫೋಟೋ ತೆಗೆದು ನೋಡಿದೆ. ಯಾಕೋ ಸರೀ ಬರ್ತಾ ಇಲ್ಲ ಅಂತ ಅನಿಸಿತು. ಇದರ ಮೇಲೆ ನೀರು ಸಿಂಪಡಿಸಿ ಯಾಕೆ ಟ್ರೈ ಮಾಡಬಾರದು ಅಂತ ಯೋಚನೆ ಬಂತು. ಸರಿ ಅಂತ ಒಮ್ಮೆ ನೀರು ಸಿಂಪಡಿಸಿ ಅಡಿಗೆ ಮನೆ ಕಿಟಕಿ ಹತ್ರ ಇಟ್ಟು ಸ್ವಲ್ಪ ಫೋಟೋಸ್ ನ ಮಾಕ್ರೋ ಮೋಡ್ ನಲ್ಲಿ ತೆಗೆದರೆ VIBGYOR
ಬಣ್ಣಗಳ ಜೊತೆ ಹನಿಗಳು ಹರಳುಗಳಂತೆ ಗೋಚರಿಸತೊಡಗಿದವು. ಯಾಕೋ ನಾನಿಟ್ಟ ಸಿಡಿ ಲೋಕೇಶನ್ ಸರಿ ಇಲ್ಲ. ಬೆಳಕು ಇವುಗಳ ಮೇಲೆ ಸರಿ ಯಾಗಿ ಪ್ರತಿಫಲಿಸುತ್ತಿಲ್ಲ ಎಂದು ಭಾಸವಾಗತೊಡಗಿತು. ಫೋಟೋ ತೆಗೆಯುವಾಗ ನನ್ನ ಕ್ಯಾಮೆರಾದ ನೆರಳು ಸಿಡಿ ಮೇಲೆ ಕಾಣಿಸುತ್ತ ಪೂರ್ತಿ ಇಮೇಜ್ ನ ಸೌಂದರ್ಯವನ್ನು ಹಾಳು ಮಾಡುತ್ತಿದ್ದವು. ಈಗ ಬೆಳಕಿನ ಪ್ರತಿಫಲನ, ಹನಿಗಳ ಪೀನಮಸೂರದಂಥಹ ಗುಣಗಳನ್ನೆಲ್ಲ ಸರಿಯಾಗಿ ಬಳಸಿಕೊಂಡು ಒಳ್ಳೆಯ ಇಮೇಜ್ ತೆಗಿಬೇಕು ಅಂದ್ರೆ ಸಿಡಿ ಮತ್ತು ನನ್ನ ಕ್ಯಾಮೆರಾದ ಪೊಸಿಶನ್ ಯಾವ ರೀತಿ ಇರಬೇಕೆಂದು ಯೋಚಿಸತೊಡಗಿದೆ. ಮನೆಯ ಅಂಗಳದ ಕಟ್ಟೆಯ ಮೇಲಿಟ್ಟು ಹನಿಗಳಿಗೆ ೪೫ ಡಿಗ್ರಿ ಆಂಗಲ್ ನಲ್ಲಿ ಲೆನ್ಸ್ ಇಟ್ಟರೆ ಸಿಡಿಯ ಮೇಲೆ ಬಣ್ಣಗಳ ಜೊತೆ ಹನಿಗಳ ರಿಫ್ಲೆಕ್ಶನ್, ಜೊತೆಗೆ ಹನಿಯಲ್ಲಿ ಅಂಗಳದಲ್ಲಿ ನೆಟ್ಟ ಗಿಡಗಳ ಹಸಿರು ಹಾಗೂ ಆಕಾಶದ ನೀಲಿ ರಿಫ್ಲೆಕ್ಶನ್ ಬರಬಹುದು ಎಂದು ನನ್ನ ಎಣಿಕೆಯಾಗಿತ್ತು. ಆದರೆ ಬೆಳಕು ಜಾಸ್ತಿಯಿದ್ದು, ಮೋಡದ ವಾತಾವರಣವಿದ್ದಿದ್ದರಿಂದ ನನ್ನ ಈ ಐಡಿಯಾ ಫಲಿಸಲಿಲ್ಲ. ಸಿಡಿ ಯ ಮೇಲೆ ಬೆಳಕಿನಿದ ಉಂಟಾಗುವ ಬಣ್ಣಗಳು ಹೆಚ್ಹು ಕಮ್ಮಿ ಸರಿಸಮನಾದ ದೂರದಲ್ಲಿ ವಿಭಜಿಸಿದಂತೆ ಕಂಡುಬಂದು, ಅಂಗಳದ ಹಸಿರಿನ ಪ್ರತಿಫಲನ ಹನಿಗಳಮೇಲೆ ಅಷ್ಟಾಗಿ ಪ್ರಭಾವಿಸಿದಂತೆ ಕಂಡುಬರಲಿಲ್ಲ. ಕ್ಯಾಮೆರಾವನ್ನು ವಿವಿಧ ಆಂಗಲ್ ನಲ್ಲಿಟ್ಟು ಪ್ರಯತ್ನಿಸಿದರೂ ನಾನಂದುಕೊಂಡಂತೆ ಇಮೇಜ್ ಹೊರತರಲು ಅಸಾಧ್ಯವಾಯಿಯು. ನನಗೀಗ ಬೆಳಕು ತುಂಬಾ ಕಮ್ಮಿ ಅಥವಾ ತುಂಬಾ ಹೆಚ್ಹು ಇರುವ ಪ್ರದೇಶವನ್ನು ಬಿಟ್ಟು ಬೇರೆಯ ಕಡೆಗೆ ಆಬ್ಜೆಕ್ಟ್ ಹಾಗೂ ಕ್ಯಾಮೆರಾವನ್ನು ಕೊಂಡೊಯ್ಯಬೇಕಿತ್ತು. ಅಡಿಗೆಮನೆಯಲ್ಲಿ ಈಗಾಗ್ಲೇ ಎಕ್ಸ್‌ಪೆರಿಮೆಂಟ್ ಮಾಡಿದ್ದು, ಅದು ಸರಿಯಾದ ಜಾಗ ಅಲ್ಲ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜಗುಲಿಯಲ್ಲಿ ಬೆಳಕು ಜಾಸ್ತಿ. ನಡುಮನೆ ಮತ್ತು ಚೌಕಿಗಳಲ್ಲಿ ಬೆಳಕು ಕಡಿಮೆ. ತಳಿವಳ ?? ಹೌದು.. ಅದೇ ಸರಿಯಾದ ಜಾಗ. (ತಳಿವಳ : ನಮ್ಮ ಮನೆಯ ಚೌಕಿ ಮತ್ತು ಅಡುಗೆ ಮನೆ ಲಂಭ ಕೋನದಲ್ಲಿ ಸೇರುತ್ತವೆ, ಇವೆರಡಕ್ಕೂ ಸೇರುವಂತೆ ಒಂದು ಕಡೆ ಗೋಡೆ ಮತ್ತು ಇನ್ನೊಂದು ಕಡೆ ಕಬ್ಬಿಣದ ತಳಿಗಳಿಂದ ಕಟ್ಟಿದ ಭಾಗಕ್ಕೆ ನನ್ನ ಅಜ್ಜ ತಳಿವಳ ಎಂದು ನಾಮಕರಣ ಮಾಡಿದ್ದಾರೆ). ತಳಿವಳ ದಲ್ಲಿಯಾದರೆ ಬಟ್ಟೆಗಳನ್ನು ಒಣಗಿಸುವುದಕ್ಕೆ ತಳಿಗಳ ಎದುರು ನ್ಯಾಲೆ ಕಟ್ಟಲಾಗಿದೆ. ಹಾಗಾಗಿ ಬೆಳಕು ಜಾಸ್ತಿಯಾದರೆ ಬಟ್ಟೆ ಹರಗಿ ಒಳಬರುವ ಬೆಳಕಿನ ಪ್ರಮಾಣವನ್ನು ಕಂಟ್ರೋಲ್ ಮಾಡಬಹುದು. ಅದೇ ಸರಿಯಾದ ಐಡಿಯಾ. ಒಮ್ಮೆ ಟ್ರೈ ಮಾಡೋಣ ಎಂದು ನನ್ನ ಹತಾರಗಳ ಜೊತೆಗೆ ತಳಿವಳಕ್ಕೆ ಶಿಫ್ಟ್ ಆದೆ. ಮತ್ತೊಂದು ಸಿಡಿ ಮೇಲೆ ಸ್ವಲ್ಪವೇ ಸ್ವಲ್ಪ ನೀರಿನ ಹನಿ ಸಿಂಪಡಿಸಿ, ಮತ್ತೊಂದು ಆಪರೇಷನ್ ಗೆ ಸಿದ್ದವಾದೆ. ಹೀಗೆ ಬೆಳಕು ಮತ್ತೆ ಲೆನ್ಸ ಜೊತೆ ಆಟ ಆಡ್ತಾ ಅಂತೂ ನನ್ನ ಕಲ್ಪನೆಯ ಒಂದು ಇಮೇಜ್ ಹೊರಬಿತ್ತು. ಸಿಡಿಯ ಮೇಲೆ ಬಣ್ಣಗಳ ಓಕುಳಿ, ಬಣ್ಣಗಳ ಪ್ರತಿಫಲನ ಹನಿಗಳಮೇಲೆ, ಹನಿಗಳ ಪ್ರತಿಬಿಂಬ ಸಿಡಿಯ ಮೇಲೆ. ಕಿಟಕಿ(ತಳಿ)ಯ ಪ್ರತಿಬಿಂಬ ಸಿಡಿ,ಹನಿ ಮತ್ತು ಪ್ರತಿಬಿಂಬಿತ ಹನಿಗಳ ಮೇಲೆ. ಹೀಗೆ ಕೆಲವು ಫೋಟೋ ಕ್ಲಿಕ್ಕ್ಕಿಸಿ, ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡಿ ನೋಡಿದಾಗ ಒಂದು ಆಶ್ಟರ್ಯ ಕಾದಿದ್ದ್ತು. ಕಿಟಕಿಯ ಪ್ರತಿಫಲನ ಒರಿಜಿನಲ್ ಹನಿಗಳಿಗಿಂತ ಸ್ಪಷ್ಟವಾಗಿ ಪ್ರತಿಬಿಂಬಿತ ಹನಿಗಳ ಮೇಲೆ ಕಾಣುತ್ತಿತ್ತು.(ಅಪ್ಲೋಡ್ ಮಾಡಿದ ೩ ನೆ ಇಮೇಜ್ ಮೇಲೆ ಕ್ಲಿಕ್ ಮಾಡಿ ಕೂಲಂಕುಶವಾಗಿ ಪರಿಶೀಲಿಸಿದರೆ ಮೇಲೆ ಬರೆದಂಥಹ ಎಲ್ಲ ಕ್ಯಾರೆಕ್ಟರಿಸ್ಟಿಕ್ಸ್ ನೋಡಬಹುದು).
ಮಂಗಳವಾರ, ಸೆಪ್ಟೆಂಬರ್ 6, 2011
ಚುಂಚಿ ಫಾಲ್ಸ್, ಏರೋಪ್ಲೇನ್ ಚಿಟ್ಟೆ ಮತ್ತು ನನ್ನ ಬಾಲ್ಯ....
ಕಳೆದ ವಾರಾಂತ್ಯದಲ್ಲಿ ಚುಂಚಿ ಫಾಲ್ಸ್ ನೋಡಲು ಹೋಗಿದ್ದೆ. ಚುಂಚಿ ಫಾಲ್ಸ್ ನೋಡಲು ಹೋಗಿದ್ದು ೨ ನೇ ಬಾರಿ ಆದರೂ ಮೊದಲ ಬಾರಿ ಹೋದಾಗ ಅಲ್ಲಿ ಹೆಚ್ಹು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ಹೋದಾಗ ನಮ್ಮ ಗುಂಪಿನ ಇತರರು ಈಜಲು ತೊಡಗಿದರೆ ನಾನು ಸಮಯ ಕಳೆಯಲು ಅಲ್ಲೇ ಕಲ್ಲು ಬಂಡೆಗಳ ಮೇಲೆ ಅಲ್ಪ ಸ್ವಲ್ಪ ನೀರಿದ್ದು, ಮಟ್ಟಿಗಳು ಬೆಳೆದಿದ್ದ ಒಂದು ದಿಣ್ಣೆಯ ಮೇಲೆ ಫೋಟೋಸ್ ತೆಗೆಯುತ್ತಾ ಕುಳಿತಿದ್ದೆ. ಆಗ ತಾನೇ ಬಂತೊಂದು ಹಳದಿ ಬಣ್ಣದ ಏರೋಪ್ಲೇನ್ ಚಿಟ್ಟೆ. ನನಗೆ ನನ್ನ ಸಿಹಿ ಬಾಲ್ಯ ನೆನಪಾಯಿತು. ಆಗೆಲ್ಲ ನಮ್ಮೂರಿನಲ್ಲಿ ನನ್ನದೇ ವಯಸ್ಸಿನ ಮಕ್ಕಳ ಗುಂಪು ಯಾವಾಗಲೂ ಆಟ ಆಡಲು ತಯಾರಾಗಿರುತ್ತಿತ್ತು. ನನ್ನನ್ನೂ ಸೇರಿ ಕೆಲವರಿಗೆ ಪಿಟಿ(ಏರೋಪ್ಲೇನ್ ಚಿಟ್ಟೆ) ಹಿಡಿಯುವುದು, ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಮೋಜಿನ ಆಟ.
ಅಪರೂಪಕ್ಕೆ ಸಿಗುವ ರಕ್ತಗೆಂಪು ಬಣ್ಣದ ಚಿಟ್ಟೆ ಯಾರಾದರೂ ಹಿಡಿದರೆ ಬಾಲಕ್ಕೆ ದಾರ ಕಟ್ಟಲು ನಾ ಮುಂದು ತಾ ಮುಂದು ಎಂದು ಎಲ್ಲರೂ ರೆಡಿ. ಮಳೆಗಾಲದಲ್ಲಿ ಮಣ್ಣಿನಲ್ಲಿ ಕಾಣಸಿಗುವ ನಂಜುಳ್ಳೆ ಹಿಡಿದು, ಅದನ್ನು ಕದ್ದ ಅಪ್ಪನ ಶೇವಿಂಗ್ ಬ್ಲೇಡಿನಿಂದ ೩-೩ ತುಂಡು ಮಾಡಿ, ಮತ್ತೆ ಮಣ್ಣಿನಲ್ಲಿ ಹುದುಗಿಸಿ, ಆ ಮಣ್ಣನ್ನು ಉಂಡೆ ಕಟ್ಟಿ ಅಂಗಳದಲ್ಲಿದುವುದು. ನಂಜುಳ್ಳೆ ಸಾಯದೆ ಮತ್ತೆ ಬೆಳೆಯುತ್ತಿದೆಯಲ್ಲ ಎಂದು ಆಶ್ಚರ್ಯಪಟ್ಟು ಅದನ್ನು ಸಾಯಿಸುವ ಉಪಾಯ ಕಂಡು ಹಿಡಿಯಲು ರಹಸ್ಯ ಮೀಟಿಂಗ್ ಸೇರುವುದು (ಇವೆಲ್ಲ ಕಾರ್ಯಾಚರಣೆಗಳು ಮನೆಯ ಹಿರಿಯರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ನಡೆಯುತ್ತಿತ್ತು).
ಗದ್ದೆಯ ಬದುವಿನ ಮೇಲೆ ಕುಳಿತು ನೀರಿನಲ್ಲಿ ಸಿಗುವ ಚಿಕ್ಕ ಚಿಕ್ಕ ಮೀನುಗಳನ್ನು ಮುಷ್ಟಿ ಯಲ್ಲಿ ಹಿಡಿದು ಅವು ಒದ್ದಾಡುವಾಗ ಇಡುವ ಗುಳುಗುಳು ಕಚಕುಳಿಗೆ ಕುಶಿಪದುವುದು, ಅಪ್ಪೀ ತಪ್ಪೀ ರಸ್ತೆ ಬದಿಯಲ್ಲಿ ಎಲ್ಲಾದರೂ ಹಸಿರು ಹಾವಿನ ಮರಿ ಕಣ್ಣಿಗೆ ಬಿದ್ದರೆ ಹವಾಯಿ ಚಪ್ಪಲಿ ಹಾಕಿದ ಕಾಲಿನಿಂದ ಮೆತ್ತಗೆ ತುಳಿದು ಹಿಡಿದುಕೊಂಡು ಕಾಲಿಗೆ ಕಚಕುಳಿ ಆಗುವಾಗ ಆನಂದಿಸುವುದು, ಇವೆಲ್ಲಾ ನಮಗೆ (ವಿಕೃತ) ಕುಶಿ ಕೊಡುವ ಆಟಗಳಾಗಿದ್ದವು.ಈ ರೀತಿಯ ಮಂಗಾಟಗಳಿಗೆ ನಾವು ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹಿರಿಯರಿಗೆ ಸುದ್ದಿ ಮುಟ್ಟಿಸುತ್ತಾರೆಂದು ಹೆದರಿ ನಾವು ಕೆಲವೇ ಕೆಲವು ಮಕ್ಕಳು ಮಾತ್ರಾ ಇಂಥಹ ಹರ ಸಾಹಸಗಳಿಗೆ ಕೈ ಹಾಕುತ್ತಿದ್ದೆವು. ಇವೆಲ್ಲಾ ಕಪಿ ಚೇಷ್ಟೆಗಳು ಚುಂಚಿ ಫಾಲ್ಸ್ ಎದುರು ಕುಳಿತಿದ್ದಾಗ ಒಮ್ಮೆಲೇ ನೆನಪಾಗಿ, ಅಲ್ಲಿ ಎಲ್ಲಾದರೂ ಪಿಟಿ ಹಿಡಿಯಲು ಸಾಧ್ಯವಾ!! ಎಂದು ಹುಡುಕತೊಡಗಿದೆ. ಮೊದಲಿನಂತೆ ಅವಕ್ಕೆ ಜೀವ ಹಿಂಡಲು ನನ್ನ ಮನಸ್ಸು ಒಪ್ಪದಿದ್ದರೂ, ಒಮ್ಮೆ ಕೈಯಲ್ಲಿ ಹಿಡಿದು ೨ ನಿಮಿಷ ಜೊತೆಗಿಟ್ಟುಕೊಂಡು ಬಿಟ್ಟುಬಿಡುವುದು ನನ್ನ ಆಸೆಯಾಗಿತ್ತು. ಹಾಗೇ ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದಾಗ ನಾಲ್ಕೈದು ಬಣ್ಣದ ಸುಮಾರು ಚಿಟ್ಟೆಗಳು ಅಲ್ಲೆಲ್ಲಾ ಹಾರಾಡುತ್ತಿರುವುದು ಕಂಡಿತು.
ಸ್ವಲ್ಪ ಹೊತ್ತು ಅವಕ್ಕೆ ಡಿಸ್ಟರ್ಬ್ ಮಾಡದೆ, ಏನು ಮಾಡುತ್ತಿವೆ ಎಂದು ಮೌನವಾಗಿ ಗಮನಿಸುತ್ತಾ ಕುಳಿತಿದ್ದೆ. ೩ ಏರೋಪ್ಲೇನ್ ಚಿಟ್ಟೆಗಳು ಮಾರು ದೂರದಲ್ಲಿ ಸಂಗಾತಿಗಾಗಿ ನಿರೀಕ್ಷಿಸುತ್ತಾ ಸುಮಾರು ೩-೪ ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದವು. ಅಪ್ಪೀ ತಪ್ಪಿ ಅಲ್ಲಿ ಬೇರೆ ಯಾವುದಾದರೂ ಗಂಡು ಚಿಟ್ಟೆ ಬಂತೆಂದರೆ ಹೊಡೆದಾಟ ಶುರು. ಯಾವುದಾದರೂ ಹೆಣ್ಣು ಚಿಟ್ಟೆ ಆ ಕಡೆ ಸುಳಿದಾಡಿದಲ್ಲಿ ಅವುಗಳನ್ನು ಓಲೈಸುವ, ಪ್ರಣಯಕ್ಕೆ ಆಹ್ವಾನಿಸುವ ಪ್ರಕ್ರಿಯೆ ಮತ್ತು ಗಂಡು ಚಿಟ್ಟೆಗಳ ನಡುವೆ ಹೊಡೆದಾಟ ಅವ್ಯಾಹತವಾಗಿ ನಡೆದಿತ್ತು.
ಎಲ್ಲವನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅಸಾಧ್ಯವಾಗಿ, ಕೇವಲ ನಿರೀಕ್ಷೆಯಲ್ಲಿರುವ ಗಂಡು ಚಿಟ್ಟೆಗಳನ್ನು ವಿವಿಧ ಭಂಗಿಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು. ಹಾಗೆಯೇ ಸುಮಾರು ೨ ಗಂಟೆಗಳ ಕಾಲ ಸುಮ್ಮನೆ ನೋಡುತ್ತಾ ಕುಳಿತಿದ್ದು ಕೊನೆಗೂ ಒಂದು ಪಿಟಿ ಯನ್ನು ಉಪಾಯವಾಗಿ ಕೈಯಲ್ಲಿ ಹಿಡಿದೆ. ೨ ನಿಮಿಷ ನನ್ನ ಕೈಮೇಲೆಲ್ಲ ಕಚಕುಳಿಯಿಟ್ಟು ಹಾಗೆಯೇ ಬಿಟ್ಟುಬಿಟ್ಟೆ. ಹೆದರಿದ ಚಿಟ್ಟೆ, ಎದ್ದೆನೋ ಬಿದ್ದೆನೋ ಎಂದು ಹಾರಿ ಹೋಗಿ ಮತ್ತೆ ತನ್ನ ಆವಾಸ ಸ್ಥಾನದಲ್ಲಿ ಕುಳಿತು ಸಂಗಾತಿಗಾಗಿ ನಿರೀಕ್ಷಿಸತೊಡಗಿತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)