ಭಾನುವಾರ, ಏಪ್ರಿಲ್ 17, 2011

ಚನ್ನೆಮಣೆ..

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು... ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ....
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ "ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು" ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು. ಆಗೆಲ್ಲ ಚನ್ನೆಮಣೆ, ಪಗಡೆ, ಎತ್ಗಲ್ಲು ಹೀಗೆ ವಿವಿಧ ಸಂಗಾತಿಗಳು ನಮ್ಮ ಜೊತೆಗೆ. ಮಧ್ಯಾಹ್ನ ಊಟ ಮಾಡಿ,ಸ್ವಲ್ಪ ಹೊತ್ತು ಮಲಗೆದ್ದ ಮೇಲೆ ಅಜ್ಜಿ ನಮ್ಮ ಜೊತೆಗೆ ಆಡಲು ಕೂರುತ್ತಿದ್ದರು. ಚನ್ನೆಮಣೆ ಅವರ ತವರುಮನೆಯಿಂದ ಮದುವೆಯ ಸಮಯದಲ್ಲಿ ಬಳುವಳಿಯಾಗಿ ಬಂದಿದ್ದು. ಸರಿ ಸುಮಾರು ಮೂರು ತಲೆಮಾರುಗಳನ್ನು ಕಂಡರೂ ಇನ್ನೂ ಜೀವಂತವಾಗಿ ನಮ್ಮೊಡನೆ ಇರುವ ನಮ್ಮ ಮನೆಯ ಆಟಿಕೆ. ನಾವೆಲ್ಲರೂ ದೊಡ್ಡವರಾದಮೇಲೆ ಕೇರಂ ಬೋರ್ಡ್, ಚೆಸ್ಸ್ ಎಂದು ವಿವಿಧ ಆಟಿಕೆಗಳನ್ನು ಮನೆಗೆ ತಂದು ರಜದ ದಿನಗಳಲ್ಲಿ ಆಡಲು ತೊಡಗಿದ ಮೇಲೆ ಮೂಲೆಗುಂಪಾಗಿದ್ದ ಚನ್ನೆಮಣೆಯನ್ನು ಮೊನ್ನೆ ಯುಗಾದಿಗೆ ಊರಿಗೆ ಹೋದಾಗ ಧೂಳು ಕೊಡವಿ ಆಡಲು ಕುಳಿತೆ. ಹಾಗೆಯೇ ಪಕ್ಕದ ಮನೆಯ ಅಭಿಷ ಈ ಆಟವನ್ನು ಹೊಸತಾಗಿ ಕಲಿಯಲು ಕುಳಿತದ್ದು, ನನ್ನ ಅಜ್ಜಿ ಆಕೆಗೆ ಆಡುವುದನ್ನು ಕಲಿಸುತ್ತಿದ್ದುದನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಂದಿದ್ದೇನೆ.