ಸೋಮವಾರ, ಜನವರಿ 17, 2011

ಮಾಂದಲ ಪಟ್ಟಿ ಪ್ರವಾಸ, ಹೊಸ ವರ್ಷದ ಶುಭಾರಂಭ..









ಬಿಡುವಿಲ್ಲದ ವಾರಾಂತ್ಯದ ತಿರುಗಾಟಗಳ ಮಧ್ಯೆ ೨ ವಾರ ಮೊದಲೇ ಬರೆಯಬೇಕಾಗಿದ್ದ ನನ್ನ ಈ ಅನುಭವಗಳನ್ನು ಈಗ ಬರೆಯುತ್ತಿದ್ದೇನೆ. ಜನವರಿ ೧, ಹೊಸವರ್ಷ ಎನ್ನುವುದು ನನ್ನ ಮಟ್ಟಿಗೆ ಎಲ್ಲ ದಿನಗಳಂತೆ ಅದೂ ಒಂದು ಸರ್ವೇ ಸಾಮಾನ್ಯವಾದ ದಿನ. ಆದರೆ ಪ್ರವಾಸ ಹೊರಡಲು ಏನಾದರೊಂದು ನೆಪ ಹುಡುಕುವ ನಮ್ಮಂಥವರಿಗೆ ಒಮ್ಮೊಮ್ಮೆ ಹೀಗೆ ಪ್ರತ್ಯೇಕವಾದ ದಿನವಾಗುತ್ತದೆ. ಪ್ರವೀಣನ ಅತೀ ಕಮಂಗಿತನದಿಂದ ಕುಮಾರ ಪರ್ವತಕ್ಕೆ ಚಾರಣ ಹೋಗುವ ನಮ್ಮ ಪ್ಲಾನ್ ಕ್ಯಾನ್ಸಲ್ ಆಗಿ ತಡಿಯದಮೊಲ್ ಅಥವಾ ಮಾಂದಲ ಪಟ್ಟಿಗೆ ಹೋಗೋಣ ಎಂದು ನಿರ್ಧಾರವಾಯಿತು.ತಡಿಯದಮೊಲ್ ಗೆ ಹೋಗಿ ರಾತ್ರಿ ಟೆಂಟ್ ಹಾಕುವ ನಮ್ಮ ನಿರ್ಧಾರವನ್ನು ಕೇಳಿದವರೆಲ್ಲ " ಹುಷಾರು, ಹುಲಿ ಇದೆಯಂತೆ" ಎಂದು ಎಚ್ಹರಿಕೆ ಕೊಡತೊಡಗಿದರು. ಪ್ರವೀಣ "ಬೆಳಿಗ್ಗೆ ಹುಲಿ ಬರೋದಿಲ್ವ?? ರಾತ್ರಿ ಮಾತ್ರನ??" ಎಂದು ತಮಾಷೆ ಮಾಡಿದರೂ, ಎಲ್ಲರ ಎಚ್ಹರಿಕೆ ಗಂಟೆಯನ್ನು ಕಡೆಗಣಿಸಿ ಅಲ್ಲಿ ಹೋಗಿ ಟೆಂಟ್ ಮಾಡುವ ರಿಸ್ಕ್ ಬೇಡ ಎಂದು ಬಿಟ್ಟ. ಮಾಂದಲ ಪಟ್ಟಿಗೆ ಹೋಗುವುದು ಎಂದು ತೀರ್ಮಾನಿಸಿಯಾಯಿತು. ಎಂದಿನಂತೆ ನಾನು, ಪ್ರವೀಣ, ಸುಬ್ಬು ಮೂರೂ ಜನ "ಎಸ್" ಎಂದು ಮೊದಲೇ ನಿರ್ಧಾರ ಮಾಡಿ, ಯಾರಾದ್ರು ಬರ್ತೀರಾ ಎಂದು ಉಳಿದವರನ್ನು ವಿಚಾರಿಸಿದಾಗ ಹರಿ, ಪ್ರಿಯ, ಶುಭ, ಭವಿತ್, ಅವಿನಾಶ್ ಸೇರಿದಂತೆ ಕೆಲವರು ನಮ್ಮ ಜೊತೆ ಬರಲು ತಯಾರಾಗಿ ನಿಂತರು. ೩೧ ಡಿಸೆಂಬರ್ ಸಂಜೆ ಬೆಂಗಳೂರಿನಿಂದ ರೈಲು ಹಿಡಿದು ಮೈಸೂರು ತಲುಪಿ ಅಲ್ಲಿಂದ ಸೀದಾ ಡಿ.ಜೆ ಗೆ ಹೋಗುವುದು, ಮರುದಿನ ಮಾನ್ದಲ ಪಟ್ಟಿಗೆ ಪ್ರಯಾಣ ಬೆಳೆಸುವುದು ಎಂದು ಮೊದಲೇ ನಿರ್ಧಾರವಾಗಿತ್ತು. ನಾವೆಣಿಸಿದಂತೆ ಸುಬ್ಬುವಿನ ಅರ್ಮೋಡ ನಮ್ಮನ್ನು ಹೊತ್ತೊಯ್ಯಲು ರೈಲ್ವೆ ಸ್ಟೇಷನ್ನ್ನಿನ ಹೊರಗೆ ತಯಾರಾಗಿ ನಿಂತಿತ್ತು. ಇಕ್ಕಟ್ಟಾಗಿದ್ದ ಹಿಂದಿನ ಸೀಟಿನಲ್ಲಿ ನಾಲ್ಕು ಜನ ಹುಡುಗರು ಒತ್ತಿ ಕುಳಿತು, ಮಿಸುಕಾಡಲಾಗದೆ ಕುಯ್ಯೋ, ಮರ್ರೋ ಎನ್ನುತ್ತಿದ್ದುದು ಒಳ್ಳೆ ಕಾಮಿಡಿಯಾಗಿತ್ತು. ಅವಿನಾಶ್ ತನ್ನ ಪ್ಯಾಂಟ್ ಜೇಬಿನಲ್ಲಿ ಸೆಲ್ ಫೋನ್ ಅನ್ನು ವೈಬ್ರೇಶನ್ ಮೋಡನಲ್ಲಿಟ್ಟಿದ್ದ. ಯಾರೋ ಅದೇ ಸಮಯದಲ್ಲಿ ಕರೆ ಮಾಡಿದ್ದೂ, ಈ ಪುಣ್ಯಾತ್ಮ ಜೇಬಿಗೆ ಕೈ ತೂರಿಸಲೂ ಜಾಗವಿಲ್ಲದಂತೆ ಬಂಧಿಯಾಗಿದ್ದೂ ಎಲ್ಲ ಒಮ್ಮೆಲೇ ಆಗಿ ಅವಿನಾಶ ನಮ್ಮ ಟ್ರಿಪ್ ನ ಅನಿರ್ಭಂಧಿತ (ನಾನ್ ವೆಜ್) ಜೋಕುಗಳಿಗೆ ಟಾರ್ಗೆಟ್ ಆಗಿಬಿಟ್ಟಿದ್ದ.

ಮೈಸೂರಿನಲ್ಲಿದ್ದ ಎಲ್ಲಾ ಎ ಟಿ ಎಂ ಗಳಿಗೂ ಪ್ರದಕ್ಷಿಣೆ ಹಾಕಿ, ದುಡ್ಡು ಡ್ರಾ ಮಾಡಿಕೊಂಡು ಡಿಜೆ ಗೆ ಹೋಗುವಷ್ಟರಲ್ಲಿ ರಾತ್ರಿ ೧೦:೩೦ ಆಗಿಹೋಗಿತ್ತು. ಎಲ್ಲರಿಗೂ ಹೊಟ್ಟೆ ತಾಳ ಹಾಕಲು ಶುರುವಿಟ್ಟು ತುಂಬಾ ಹೊತ್ತಾದುದರಿಂದ ಮೊದಲು ಊಟ ಮಾಡಿ ಡಿಸ್ಕೋ ಮಾಡಿದರಾಯಿತು ಎಂದು ಒಮ್ಮತಕ್ಕೆ ಬಂದು ಊಟ ಮುಗಿಸಿ ಹೋಗುವಷ್ಟರಲ್ಲಿ ಡಿಸ್ಕೋ ಮುಗಿಯುವ ಹಂತಕ್ಕೆ ಬಂದಿತ್ತು. ನಮ್ಮಲ್ಲಿ ತುಂಬಾ ಜನರಿಗೆ ಡಿಜೆ ಗೆ ಹೋಗಿದ್ದು ಮೊದಲ ಅನುಭವವಾಗಿದ್ದರಿಂದಲೂ, ನನ್ನನ್ನೂ ಸೇರಿ ಕೆಲವರಿಗೆ ಇದರಲ್ಲಿ ಆಸಕ್ತಿ ಇಲ್ಲದಿದ್ದುದರಿಂದಲೂ ಅಷ್ಟೇನೂ ಬೇಸರವಾಗಲಿಲ್ಲ. ಆದರೆ ಅವಿನಾಶ, ಭವಿತ್ ಮುಂತಾದವರು ಡಿಜೆ ಗೆ ಹೋಗುವ ಕಲ್ಪನೆಯಿಂದಲೇ ತುಂಬಾ ಎಕ್ಸೈಟ್ ಆಗಿದ್ದರಿಂದ ಹಾಗೂ ತೀರ ಎಕ್ಸ್‌ಪೆಕ್ಟೇಶನ್ ಇಟ್ಟುಕೊಂಡಿದ್ದರಿಂದ ಪೂರ್ತಿ ನಿರಾಸೆಯಾಗಿ ಮೈಸೂರಿನಲ್ಲಿ ನಡೆಯುವ ಚುನಾವಣೆ, ರಾಜಕೀಯ, ಪೋಲಿಸ್ ಹಾಗೂ ಇಡೀ ಸಾಮಾಜಿಕ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತ, ಸ್ವಲ್ಪ ಜನ ಗೆಳೆಯರಿಗೆ ನಾವು ಡಿಜೆ ಎಂಜಾಯ್ ಮಾಡುತ್ತಿದ್ದೇವೆಂದು ಉರಿಸಲು ಇವರೇ ಕರೆ ಮಾಡಿ ಮ್ಯೂಸಿಕ್ ಕೇಳಿಸಿ ಮಳ್ಳು ಹರಿಯುತ್ತಿದ್ದುದು ನಮಗೆಲ್ಲ ನಗು ತರಿಸುತ್ತಿತ್ತು. ಆ ದಿನ ರಾತ್ರಿ ಎಲ್ಲರೂ ಸುಬ್ಬುವಿನ ಮನೆಗೆ ತೆರಳಿ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತ ಕುಳಿತು, ಮಂಗಾಟ ಮಾಡಿ, ಎಲ್ಲರೂ ನಾಳೆ ಬೆಳಿಗ್ಗೆ ಬೇಗ ಎದ್ದು ರೆಡಿ ಆಗಿ ೭ ಗಂಟೆಗೆ ಮೈಸೂರಿನಿಂದ ಹೊರಡಬೇಕೆಂದು ನಿರ್ಧಾರ ಮಾಡಿ ಮಲಗಿದ್ದಾಯಿತು.

ನಿಗದಿಯಾದಂತೆ ಯಾರೂ ಮುಂಚೆ ಏಳದಿದ್ದುದರಿಂದ ನಮ್ಮ ಬೇಗ ಹೊರಡುವ ಅಲಿಖಿತ ಒಪ್ಪಂದವನ್ನು ನಾವೇ ಮುರಿದು ೧೧ ಗಂಟೆ ಸುಮಾರಿಗೆ ಸುಬ್ಬುವಿನ ಅರ್ಮುಡಕ್ಕೆ ನಮ್ಮೆಲ್ಲ ಲಗ್ಗೆಜನ್ನೂ ಹಾಗೂ ರಾತ್ರಿ ಉಳಿಯಲು ಬೇಕಾದ ಟೆಂಟ್ಅನ್ನೂ ಸೇರಿಸಿ ಬಿಗಿಯಾಗಿ ಮೇಲೆ ಕಟ್ಟಿ, ನಾವೆಲ್ಲರೂ ಒಳಗೆ ಕುಳಿತು, ಜಾಗ ಸಾಲದಿದ್ದುದರಿಂದ ನಮ್ಮ ಹುಡುಗರಿಬ್ಬರ ಬೈಕ್ ನಲ್ಲಿ ಬರುವ ಪ್ಲಾನ್ ಗೆ ಎಲ್ಲರೂ ಸಹಮತದಿಂದ ಅಂಗೀಕರಿಸಿ ಮಡಿಕೇರಿಗೆ ಹೊರಟಿದ್ದಾಯಿತು. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ರಾತ್ರಿ ಅಡುಗೆಗೆ ಬೇಕಾದ ಕೆಲ ವಸ್ತುಗಳನ್ನು ಖರೀದಿಸಿ, ನಾಲ್ಕು ಗಂಟೆ ಸುಮಾರಿಗೆ ಮಡಿಕೇರಿಯಿಂದ ಮಾನ್ದಲ ಪಟ್ಟಿ ಕಡೆಗೆ ಹೊರಟಿದ್ದಾಯಿತು. ಮಡಿಕೇರಿಯಿಂದ ಮಕ್ಕಂದೂರು ಮಾರ್ಗವಾಗಿ ಮಾಂದಲ ಪಟ್ಟಿಗೆ ಹೋಗುವ ದಾರಿ ತುಂಬಾ ಚಿಕ್ಕದಾಗಿ, ರಸ್ತೆಯ ಇಕ್ಕೆಲಗಳಲ್ಲೂ ಕಾಡು ಗಿಡಗಳೂ ಹಾಗೂ ಮಟ್ಟಿಗಳಿಂದ ತುಂಬಿದ್ದಾಗಿತ್ತು. ರಸ್ತೆಯ ಮಧ್ಯೆ ಮಧ್ಯೆ ದೊಡ್ಡ ಏರುಗಳು ಬಂದಾಗಲೆಲ್ಲ ನಮ್ಮ ಸುಬ್ಬುವಿನ ಜೀಪ್ ದೊಡ್ಡದಾಗಿ ಸದ್ದು ಮಾಡಿ, ನಾನಿನ್ನು ನಿಮ್ಮನ್ನು ಹೊತ್ತೊಯ್ಯಲಾರೆ ಎಂದು ತನ್ನ ಮೂಕ ವೇದನೆಯನ್ನು ತೋರ್ಪಡಿಸಲು ಮುಷ್ಕರ ಹೂಡಿ ಕಿರ್ರ್ರ್ ಎಂದು ಸದ್ದು ಮಾಡುತ್ತಾ ವಾಪಸು ಇಳಿಯುತ್ತಿತ್ತು. ಆಗೆಲ್ಲ ಸುಬ್ಬು ನಮ್ಮನ್ನು ಕೆಳಗಿಳಿಸಿ, ತನ್ನ ಮುದ್ದಿನ ಜೀಪಿಗೆ ಸಮಾಧಾನ ಮಾಡುತ್ತಾ ಮೇಲೆ ಕೊಂಡೊಯ್ಯುತ್ತಿದ್ದ. ಅಂತೂ ಇಂತೂ ೬ ಗಂಟೆ ಸುಮಾರಿಗೆ ನಮ್ಮ ತಂಡ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಮಾಂದಲ ಪಟ್ಟಿ(ಗಾಳಿ ಪುರ)ಯ ಫಾರೆಸ್ಟ್ ಆಫೀಸ್ ತಲುಪಿದ್ದಾಯಿತು. (ಮಾಂದಲ ಪಟ್ಟಿ ಪುಷ್ಪಗಿರಿ ಅಭಯಾರಣ್ಯದ ಒಂದು ಬೆಟ್ಟ ಪ್ರದೇಶ. ಪುಷ್ಪಗಿರಿ ಅಭಯಾರಣ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಭ್ರಾಹ್ಮಣ್ಯದಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ವರೆಗೆ ಸುಮಾರು ೧೦೨.೬ ಚದರ ಕಿ ಮಿ ವಿಸ್ತೀರ್ಣದ ಅರಣ್ಯ ಪ್ರದೇಶ.)

ಇಲ್ಲಿಂದ ನಮ್ಮ ಹೊಸ ವರ್ಷದ ಮೊದಲ ದಿನದ ನಾಟಕದ ಇನ್ನೊಂದು ಅಂಕ ಪ್ರಾರಂಭವಾಯಿತು. ಇಷ್ಟು ಹೊತ್ತು ನಾವು ೧೨ ಜನ ಹಾಗೂ ಸುಬ್ಬುವಿನ ಅರ್ಮುಡ ಮಾತ್ರ ಪಾತ್ರಧಾರಿಗಳಾಗಿದ್ದ ನಮ್ಮ ನಾಟಕದಲ್ಲಿ ಹೊಸ ಪಾತ್ರಗಳ ಆಗಮನವಾಯಿತು. ಗಾಳಿಪುರದ ಬೋಳು ಬೆಟ್ಟಗಳ ಮಧ್ಯದಲ್ಲಿ ೨-೩ ಗಾರ್ಡುಗಳು ವಾಸವಾಗುವಂಥಹ ಚಿಕ್ಕ ಮನೆ/ಫಾರೆಸ್ಟ್ ಆಫೀಸ್ ಒಂದಿದೆ. ಯಾರಾದರೂ ಕಾಡಿನಲ್ಲಿ ರಾತ್ರಿ ಟೆಂಟ್ ಹಾಕುವುದಾದರೆ ಫಾರೆಸ್ಟ್ ಡಿಪಾರ್ಟ್ಮೆಂಟ್ ನಿಂದ ಮೊದಲೇ ಅನುಮತಿ ತೆಗೆದುಕೊಳ್ಳುವುದು ಇಲ್ಲಿಯ ನಿಯಮ. ನಾವು ಮೊದಲೇ ಅನುಮತಿ ತೆಗೆದುಕೊಳ್ಳುವ ಗೋಜಿಗೆ ಹೋಗದಿದ್ದುದೂ, ಜೊತೆಗೆ ನಮ್ಮ ತಂಡದಲ್ಲಿ ನಾವು ೫ ಜನ ಹುಡುಗಿಯರಿದ್ದುದೂ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಗೆ ನುಂಗಲಾರದ ತುತ್ತಾಯಿತು. "ನೀವು ವಾಪಸ್ ಹೋಗ್ಬಿಡಿ ಸಾರ್, ಇಲ್ಲಿ ರಾತ್ರಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ. ನಿಮ್ಮ ಜೊತೆ ಹುಡುಗಿಯರು ಬೇರೆ ಇದ್ದಾರೆ, ಸುತ್ತ ಮುತ್ತಲಿನ ಊರಿನ ಜನ ಬೇರೆ ಸರಿಯಿಲ್ಲ. ಸುಮ್ಮನೆ ರಿಸ್ಕ್ ಬೇಡ" ಎಂದು ಸುಬ್ಬು ಹಾಗೂ ಪ್ರವೀಣನಿಗೆ ಬಗೆಬಗೆಯಾಗಿ ಕನ್ವಿನ್ಸ್ ಮಾಡಲು ತೊಡಗಿದ. ಹುಲಿ, ಹಾವು, ಚಿರತೆಗಳ ನಾನಾ ಬಗೆಯ ಕತೆಗಳನ್ನು ಹೇಳಿ ಬೆದರಿಸಲು ಆರಂಭಿಸಿದ. ನಮ್ಮಲ್ಲಿ ಯಾರೂ ರಾತ್ರಿ ಅಲ್ಲೇ ಟೆಂಟ್ ನಲ್ಲಿ ಉಳಿಯುವ ನಿರ್ಧಾರವನ್ನು ಬದಲಿಸಲು ತಯಾರಿಲ್ಲದಿದ್ದುದರಿಂದಲೂ, ಜೊತೆಗೆ ನಾವು ಆ ಜಾಗವನ್ನು ತಲುಪಲು ಪಟ್ಟ ಪಾಡು ನೆನೆದು ಇನ್ನು ರಾತ್ರಿಯಲ್ಲಿ ವಾಪಾಸಾಗುವುದು ಅಸಾಧ್ಯದ ಮಾತೆಂದೂ ಎಲ್ಲರೂ ಬೊಬ್ಬಿಡಲು ತೊಡಗಿದ ಮೇಲೆ, ಅಲ್ಲೇ ಎಲ್ಲೋ ರೆಸಾರ್ಟ್ ಗೆ ಫೋನಾಯಿಸಿ ಮಲಗಲು ಜಾಗ ಇದೆಯೇ ಎಂದು ವಿಚಾರಿಸಿದ. ನಮ್ಮ ಪುಣ್ಯಕ್ಕೆ ಅಲ್ಲಿ ಜಾಗ ಸಿಗದೇ, ನಮ್ಮ ಗ್ರೂಪಿನಲ್ಲಿ ಒಬ್ಬನಾದ ಹರಿಪ್ರಸಾದ್ ತಂದೆ ತುಮಕೂರು ಅರಣ್ಯ ವಿಭಾಗದ ಅಧಿಕಾರಿಯಾದುದರಿಂದ ಹಾಗೂ ಹರಿಯ ಮೊಬೈಲ್ ನೆಟ್ವರ್ಕ್ ಸಿಕ್ಕಿದ್ದರಿಂದ ಅವನ ತಂದೆಗೆ ಕರೆ ಮಾಡಿ, ನಮ್ಮ ಸಮಸ್ಯೆಗಳನ್ನು ವಿವರಿಸಿ, ಒಂದು ದಿನದ ಮಟ್ಟಿಗೆ ಉಳಿಯಲು ಅಲ್ಲಿನ ಆರ್.ಎಫ್.ಓ ಇಂದ ಪರವಾನಗಿ ಪಡೆಯಲು ಸಾಧ್ಯವಾಯಿತು. ಅಷ್ಟರಲ್ಲಿ ಆ ಸೆಕ್ಯೂರಿಟಿ ಗಾರ್ಡ್ ನ ಬೆದರಿಕೆಗಳಿಗೆ ಸ್ವಲ್ಪ ಮಟ್ಟಿಗೆ ಹೆದರಿದ್ದ ಪ್ರಿಯ ಮತ್ತು ಶುಭ ತಾವು ಮಂಗಳೂರಿನವರೆಂದೂ, ತಮಗೆ ತುಳು ತಿಳಿದಿದೆಯೆಂದು ಮನವರಿಕೆ ಮಾಡಿಕೊಡಲು, ತಮ್ಮ ತಮ್ಮಲ್ಲೇ ತುಳುವಿನಲ್ಲಿ ಮಾತನಾಡುತ್ತಿದ್ದ ಗಾರ್ಡ್ ಗಳ ಜೊತೆ ಮಾತುಕತೆಗೆ ತೊಡಗಿದರು. ಇವರಿಬ್ಬರೂ ತುಳುವಿನಲ್ಲಿ ಮಾತನಾದುವವರೆಂದು ತಿಳಿದಿದ್ದೇ ಒಬ್ಬ ಸ್ವಪ್ಲ ವಯಸ್ಸಾದ ಗಾರ್ಡ್ ನ ಮಮತೆ ಜಾಗೃತವಾಗಿ, ತನ್ನ ಮನೆಯ ಅಂಗಳದಲ್ಲೇ ನಮ್ಮ ಟೆಂಟ್ ಹಾಕಬೇಕೆಂದೂ, ನಾವೆಲ್ಲೂ ಹೊರಗೆ ಹೋಗಕೂಡದೆಂದೂ, ನಾವೆಲ್ಲರೂ ಆತನ ಮಕ್ಕಳಿದ್ದಂತೆ, ಏನಾದರೂ ಎಡವಟ್ಟು ಮಾಡಿ ಆತನ ಮರ್ಯಾದೆಗೆ ಕುಂದು ಬರದಂತೆ ನೋಡಿಕೊಳ್ಳಬೇಕೆಂದೂ ಬಗೆ ಬಗೆಯಾಗಿ ಬೇಡಿಕೊಳ್ಳತೊಡಗಿದ. ನಾವು ಕ್ಯಾಂಪ್ ಫೈರ್ ಗೆ ಒಣ ಕಟ್ಟಿಗೆ ತಂದು ಬೆಂಕಿ ಹಾಕುತ್ತಿರುವುದನ್ನು ನೋಡಿ ಅಡುಗೆ ಬೇಕಾದರೆ ತಾವೇ ರೆಡಿ ಮಾಡಿಕೊಡುವುದಾಗಿ ಹಲುಬತೊಡಗಿದ . ಅಂತೂ ಇಂತೂ ನಾವು ಟೆಂಟ್ ಹಾಕಿ ರಾತ್ರಿ ೧೧ ಗಂಟೆಗೆ ಮಲಗುವವರೆಗೂ ಬಿಡದೆ, ನಾವು ಮಲಗಿದ ನಂತರ ತಾನು ಹೋಗಿ ಮಲಗಿದ ಆ ಸೆಕ್ಯೂರಿಟಿ ಗಾರ್ಡ್.ರಾತ್ರಿಯೆಲ್ಲಾ ಕ್ಯಾಂಪ್ ಫೈರ್ ಮಾಡಿಕೊಂಡು ಹರಟೆ ಹೊಡೆಯುತ್ತ ಕೂರುವ ನಮ್ಮ ಆಸೆ ಈಡೇರದಂತೆ ಮಾಡಿದ ಕೀರ್ತಿ ಈ ಪುಣ್ಯಾತ್ಮನಿಗೆ ಸಲ್ಲಬೇಕು. ಥರಗುಡುವ ಚಳಿಯಲ್ಲೇ ಟೆಂಟ್ ನಲ್ಲಿ ಮಾತನಾಡುತ್ತ ಕಳೆದು ಬೆಳಿಗ್ಗೆ ಆ ಮನೆಯ ಹಿಂದಿರುವ ಬೆಟ್ಟ ಹತ್ತಿ ಸೂರ್ಯೋದಯವನ್ನು ನೋಡಿ ಅಲ್ಲಿಂದ ಪೆರಿ ಕಿತ್ತಿದ್ದಾಯಿತು. ವಾಪಾಸಾಗುವ ದಾರಿಯಲ್ಲಿ ಅಬ್ಬಿ ಫಾಲ್ಸ್ ಗೆ ವಿಸಿಟ್ ಹಾಕಿ, ಮೈಸೂರ್ ತಲುಪಿ, ಅಲ್ಲಿಂದ ಬಸ್ ಹಿಡಿದು ಬೆಂಗಳೂರಿಗೆ ತಲುಪುವಷ್ಟರಲ್ಲಿ ರಾತ್ರಿ ೧೨ ಗಂಟೆ ಆಗಿತ್ತು.

10 ಕಾಮೆಂಟ್‌ಗಳು:

  1. ಕಾಂತಿ..ನಿಮ್ಮ ಚಿತ್ರಗ್ರಹಣೆ ಮತ್ತು ಸ್ವಾರಸ್ಯ ತುಂಬಿದ ಲೇಖನದಲ್ಲಿ ಲಘುಹಾಸ್ಯದ ಲೇಪ ಓದಿಸಿಕೊಂಡು ಹೋಗುವ ಶೈಲಿ...ಇಷ್ಟವಾದವು...ಹಾಗೇ ಚಾರಣ ಅಥವಾ ಪ್ರವಾಸ ಕಥನ ಎಂದೊಡನೇ ಒಂದು ರೀತಿಯ ಏಕತಾನತೆಯ ನೆನಪಾಗುವ ಮನೋಭಾವಕ್ಕೆ ಅಪವಾದವೆನ್ನುವಂತೆ ಚೊಕ್ಕ ಮಂಡನೆ ನೀಡಿದ್ದೀರಿ..ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  2. ಸ್ಕುಅರೆ = ಚದರ :)

    ರಾತ್ರಿಯೆಲ್ಲಾ ಕ್ಯಾಂಪ್ ಫೈರ್ ಮಾಡಿಕೊಂಡು ಹರಟೆ ಹೊಡೆಯುತ್ತ ಕೂರುವ ನಮ್ಮ ಆಸೆ ಈಡೇರದಂತೆ ಮಾಡಿದ ಕೀರ್ತಿ ಈ ಪುಣ್ಯಾತ್ಮನಿಗೆ ಸಲ್ಲಬೇಕು.......

    ಪಾಪ, ಅವರ ಕಷ್ಟ ಅವರಿಗೆ. ನಿಮಗೆ ಮೋಜು. ಆದರೆ ಅವರಿಗೆ ಕೆಲಸ ಹೋಗುವ ಭಯ.....

    ಪ್ರತ್ಯುತ್ತರಅಳಿಸಿ
  3. ಹ್ಮ್.. ನಿರಂತರ ತಿರುಗಾಟದಲ್ಲಿ....

    ಈ ಸ್ಥಳದ ಬಗ್ಗೆ ಕೇಳಿರಲಿಲ್ಲ. ಮಾಹಿತಿಗೆ ಥ್ಯಾಂಕ್ಸ್. ಆಸಕ್ತಿಯಿಂದ ಓದಿಸಿಕೊಂಡು ಹೋಯಿತು.

    ಪ್ರತ್ಯುತ್ತರಅಳಿಸಿ
  4. @ ಜಲನಯನ & ವಿಕಾಸ್ ಹೆಗಡೆ: ಧನ್ಯವಾದಗಳು

    @ ಜಗಲಿ ಭಾಗವತ: ತಿದ್ದುಪಡಿ ಮಾಡಿದ್ದೇನೆ. ಧನ್ಯವಾದಗಳು.
    ಆತನಿಗೆ ಕೆಲಸ ಹೋಗುವ ಭಯಕ್ಕಿಂತ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಟ್ರಿಪ್ ಬಂದಿದ್ದಾರೆ ಎಂಬ ಕಿರಿ
    ಕಿರಿ ಜಾಸ್ತಿಯಾಗಿತ್ತು. ೨೧ ನೇ ಶತಮಾನದಲ್ಲೂ ಭಾರತದಲ್ಲಿ ಹುಡುಗಿಯರಿಗೆ ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೂ ರಾತ್ರಿ ಟೆಂಟ್‌ನಲ್ಲಿ ಉಳಿಯುವಂತಹ ಅನುಭವಗಳಿಗೆ ತಮ್ಮನ್ನು ತೆರೆದುಕೊಳ್ಳುವ ಹಕ್ಕು ಇಲ್ಲವೆಂತಲೆ ಆತನ ಭಾವನೆಯಾಗಿತ್ತು. ಇದನ್ನು ಆತ
    ಹೇಳಿದ ಕೂಡ(ಆತ ಬೆಳೆದುಬಂದ ಪರಿಸರ ಹಾಗಿದೆ). ನಾವ್ಯಾರೂ ಹುಡುಗಿಯರು ಅಚ್ಚ ಸ್ತ್ರೀವಾದಿಗಳಾಗಲೀ ಅಥವಾ ಪುರುಷ ದ್ವೇಷಿಗಳಾಗಲೀ ಅಲ್ಲ.
    ಆದರೆ ಎಲ್ಲ ಮನುಷ್ಯರಂತೆ ನಮಗೂ ನಮ್ಮ ಅಭಿರುಚಿಗಳಿಗನುಗುಣವಾಗಿ ಬದುಕುವ ಹಕ್ಕು ನಮಗಿರುವುದು ಹಾಗೂ ಅದಕ್ಕಾಗಿ ನಾವು ಪದೇ ಪದೇ ರೆಬೆಲ್ ಮಾಡಬೇಕಾಗಿ ಬರುವುದು ನಮ್ಮ ಪರಿಸ್ಥಿತಿಯ ಹಾಗೂ ನಮ್ಮ ಸಮಾಜದ ದೊಡ್ಡ ದುರಂತ. ಯಾವುದೇ ವಿದೇಶಿ ಮಹಿಳೆ ಒಂಟಿಯಾಗಿ ಪ್ರಪಂಚ ಸುತ್ತುವುದನ್ನು ಕಂಡಾಗ ನಮ್ಮಲ್ಲಿ ಹುಡುಗಿಯರಿಗೆ(ನನ್ನನ್ನು ಸೇರಿ) ಏಕೆ ಈ ರೀತಿಯ ಇನ್‌ಸೆಕ್ಯೂವರ್ ಭಾವನೆ ಕಾಡುತ್ತದೆ ಎನ್ನುವುದಕ್ಕೆ ನಮ್ಮ ಸಮಾಜವೇ ಉತ್ತರ ಹೇಳಬೇಕು. ನಾನು ಬರಿಯ ಪ್ರವಾಸದ ಅನುಭವಗಳಿಂದ ಈ ಮಾತುಗಳನ್ನು ಹೇಳುತ್ತಿಲ್ಲ. ಜೀವನದ ಪ್ರತೀ ಹೆಜ್ಜೆಯಲ್ಲೂ ನೋಡಿದ್ದೇನೆ ಹಾಗೂ ಅನುಭವಿಸಿದ್ದೇನೆ. ಈ ರೀತಿ ಮಾತನಾಡುವುದನ್ನು ಮಹಾ ಅಪರಾಧ ಎನ್ನುವ, ಸಂಸ್ಕೃತಿ, ಆಚರಣೆ, ಮೂಢನಂಬಿಕೆ ಮತ್ತು ಮನುಷ್ಯತ್ವದ ನಡುವೆ ಇರುವ ಭಿನ್ನ ಅರ್ಥಗಳಿಗೆ ಅಪಾರ್ಥ ಹಚ್ಚುವ ಅಕ್ಷರಸ್ತ ಸಮುದಾಯವನ್ನು ನೋಡಿದ್ದೇನೆ.

    ನಿಮ್ಮ ಪ್ರತಿಕ್ರೀಯೆಗೆ ನೀಡಿದ ಉತ್ತರವಲ್ಲ ಇದು. ಆ ರಾತ್ರಿ ಇಷ್ಟೆಲ್ಲಾ ಪ್ರಸಂಗಗಳು ನಡೆದಾಗ ನನ್ನೊಳಗೆ ನಡೆದ ಮಂಥನ.

    ಪ್ರತ್ಯುತ್ತರಅಳಿಸಿ
  5. ಕಾಂತಿ.. ಹರಟೆ, ಲಘು ಬರಹ ಚೆನ್ನಾಗಿ ಬರಿತೀಯ.. ಚೆನ್ನಾಗಿತ್ತು, ಬರೀತಾ ಇರು.

    ಪ್ರತ್ಯುತ್ತರಅಳಿಸಿ
  6. ಮತ್ತೊಮ್ಮೆ ಮಾನ್ದಲಪಟ್ಟಿಗೆ ಹೋಗಿ ಬಂದ ಅನುಭವ ಆಯ್ತು . .:)

    ಪ್ರತ್ಯುತ್ತರಅಳಿಸಿ
  7. ನಮಸ್ತೆ,
    ತುಂಬಾ ಅಂದ್ರೆ ತುಂಬಾ ಚೆಂದದ ಚಿತ್ರಗಳು.......;) ;-) ಖುಷಿ ಕೊಟ್ಟವು.
    ಬರಹ ಕೂಡ ಸರಳವಾಗಿ ಚೆಂದವಾಗಿದೆ.
    ಧನ್ಯವಾದ.
    ಸುನಿಲ್.

    ಪ್ರತ್ಯುತ್ತರಅಳಿಸಿ