ಮಂಗಳವಾರ, ಅಕ್ಟೋಬರ್ 5, 2010

ಭಾಸ್ಕರ ಚಂದಾವರ್ಕರ್ ಒಂದು ನೆನಪು...


ನಾನು 2nd ಬಿಎಸ್ಸಿ ಓದುತ್ತಿದ್ದ ದಿನಗಳವು. ಕ್ಲಾಸ್ ಬಂಕ್ ಮಾಡಿ ನೀನಾಸಂ "ಅನುಸಂಧಾನ" work shop ಅಟೆಂಡ್ ಮಾಡುತ್ತಿದ್ದೆ. ಸಾಹಿತ್ಯ, ಸಂಗೀತ, ನೃತ್ಯ, ಕಲೆ, ನಾಟಕ .. ಹೀಗೆ ವಿವಿಧ ಪ್ರಾಕಾರಗಳಲ್ಲಿ ವಿಧ್ಯಾರ್ಥಿಗಳಿಗೆ ಆಸಕ್ತಿ ಹುಟ್ಟಿಸುವ ಮಹತ್ವಾಕಾಂಕ್ಷೆಯಿಂದ ಟಿ ಪಿ ಅಶೋಕ್, ಜಾದವ್ ಮುಂತಾದವರು ನೀನಾಸಂ ಸಹಯೋಗದೊಂದಿಗೆ ಆಯೋಜಿಸಿದ್ದ ವರ್ಕ್ ಶಾಪ್ ಇದು. ಯು ಆರ್ ಅನಂತಮೂರ್ತಿ, ವೈದೇಹಿ ಮುಂತಾದ ಬರಹಗಾರರನ್ನು ಭೇಟಿ ಮಾಡುವ, ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸುವ ಸದವಕಾಶವದು. ನಾನು ವಿಜ್ಞಾನದ ವಿಧ್ಯರ್ಥಿನಿಯಾಗಿದ್ದರೂ ಸಾಹಿತ್ಯ ನನ್ನ ಅಭಿರುಚಿಯಾಗಿತ್ತು. ಸಾಹಿತ್ಯದ ಜೊತೆ ಜೊತೆಗೆ ಸಂಗೀತದ ಬಗ್ಗೆ ಅಭಿರುಚಿಯನ್ನು ನನ್ನಲ್ಲಿ ಮೂಡಿಸಿದ್ದು "ಅನುಸಂಧಾನ" ಹಾಗೂ ೨ ದಿನ ನಮ್ಮೆಲ್ಲರನ್ನೂ ತಮ್ಮ ಮಾತಿನ ಮೋಡಿಯಿಂದ ಹಿಡಿದಿಟ್ಟಿದ್ದ "ಭಾಸ್ಕರ ಚಂದಾವರಕರ್".

ಭಾಸ್ಕರ ಚಂದಾವರಕರ್ ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಶಿಷ್ಯರು. ನನಗೆ ತಿಳಿದಂತೆ ಈತ ಸಂಗೀತವನ್ನು ಬರಿಯ ಕಲೆಯಾಗಿ ಸ್ವೀಕರಿಸದೆ ವಿಜ್ಞಾನವಾಗಿ ಅರಿತುಕೊಂಡವರು. ಭೌತಶಾಸ್ತ್ರದಲ್ಲಿ ನಾವು ಓದುವ ಶಬ್ದ, ಕಾಲ-ದೇಶಗಳ ಅರಿವನ್ನು ಸಂಗೀತದೊಂದಿಗೆ ಅಚ್ಹುಕಟ್ಟಾಗಿ ಅಳವಡಿಸಿಕೊಂಡವರು. ಸಂಗೀತವನ್ನು ಆಸ್ವಾದಿಸಲು ಸಂಗೀತವನ್ನು ಕಲಿಯಲೆಬೇಕೆಂದಿಲ್ಲ, ಆಸ್ವಾದಿಸುವ ಮನಸ್ಸೊಂದಿದ್ದರೆ ಮೌನದಲ್ಲೂ ಸಂಗೀತವನ್ನು ಆಸ್ವಾದಿಸಬಹುದೆಂಬ ಪ್ರಜ್ಞೆಯನ್ನು ನನ್ನಲ್ಲಿ ಮೂಡಿಸಿದ ಮೊದಲಿಗರು ಭಾಸ್ಕರ್ ಚಂದಾವರಕರ್. ನಾನೊಂದು ಪ್ರಶ್ನೆಯನ್ನೆತ್ತಿದ್ದೆ " ಟಿಬೆಟಿಯನ್ ಮ್ಯೂಸಿಕ್ ನಿಂದ ಬಂಡೆಯನ್ನು ಮೇಲೆತ್ತಬಹುದೆಂದು ಕೇಳಿದ್ದೇನೆ, ನಿಜವೇ??" ಎಂದು. ಚಂದವರ್ಕರ್ ನಕ್ಕು ಉತ್ತರಿಸಿದ್ದರು "ಸಂಗೀತದ ಬಗ್ಗೆ ಇಂಥಹ ಮೂಢನಂಬಿಕೆಗಳು ಮೊದಲಿನಿಂದಲೂ ಬೇರೂರಿವೆ. ಕೆಲವು ರಾಗಗಳಿಂದ ಮಳೆ ಸುರಿಸಬಹುದು, ಬಂಡೆಗಳನ್ನು ಮೇಲೆತ್ತಬಹುದು.. ಹೀಗೆ ಮುಂತಾದ ನಂಬಿಕೆಗಳು, ಹಾಗೂ ಅವುಗಳಿಗೆಂದೇ ಕೆಲವು ರಾಗಗಳೂ ಕೂಡ ಇವೆ. ಆದರೆ ನನ್ನ ಜೀವನದಲ್ಲಿ ಹಾಗಾದದ್ದನ್ನು ನಾನೆಂದೂ ನೋಡಿಲ್ಲ. ಶಬ್ದ ತರಂಗಗಳು, ಅದರಲ್ಲೂ ನಮ್ಮಲ್ಲಿ ಬಳಕೆಯಲ್ಲಿರುವ ಇನ್ಸ್ಟ್ರುಮೆಂಟ್(ತಮಟೆ, ಡೊಳ್ಳು ಇತ್ಯಾದಿ..) ಯಾವುದರಿಂದಲೂ ಬಂಡೆಗಳನ್ನು ಮೇಲೆತ್ತುವಷ್ಟು ಅಥವಾ ಮಳೆ ಸುರಿಸುವಸ್ಟು ಶಬ್ಧದ ಅಲೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲವೆಂದೇ ನನ್ನ ನಂಬಿಕೆ".

Pi=(22/7) ಎಂಬ ಸೂತ್ರಕ್ಕೂ, ಸಂಗೀತದೊಂದಿಗೆ ಅದಕ್ಕಿರುವ ಸಂಬಂಧದ ಬಗ್ಗೆಯೂ ಗಂಟೆಗಟ್ಟಲೆ ಚರ್ಚಿಸಿದರು. ಸಂಗೀತದಲ್ಲಿರುವ ಒಟ್ಟು ಶ್ರುತಿಗಳು ೨೨, ಸ್ವರಗಳು ೭, Pi=(22/7) ಸಂಗೀತ ಒಂದು ವೃತ್ತ. ಹೀಗೆ ಶ್ರುತಿ, ಲಯ, ತಾಳ, ರಾಗ, ಶಬ್ದ, ಕಾಲ-ದೇಶ ಎಲ್ಲವುಗಳ ವೈಜ್ಞಾನಿಕ ಚಿಂತನೆಯನ್ನು ನಮ್ಮಲ್ಲಿ ಹುಟ್ಟಿಸಿ, ಸಂಗೀತವನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುವ ಹಾಗೂ ಆಸ್ವಾದಿಸುವ ಆಸಕ್ತಿಯನ್ನು ನನ್ನಲ್ಲಿ ಬೆಳೆಸಿದವರು ಭಾಸ್ಕರ ಚಂದಾವರಕರ್. ಒಂದು ಸಂಜೆ ಗೆಳೆಯ ಅವಿನಾಶ್ ಫೋನಾಯಿಸಿ, ಭಾಸ್ಕರ ಚಂದಾವರಕರ್ ಇನ್ನಿಲ್ಲ ಎಂದಾಗ ಮನಸ್ಸಿನ ಮೂಲೆಯಲ್ಲಿ ವಿಷಾದ ಹೊತ್ತೇ ದಿನವಿಡೀ ಸಂಗೀತ ಕೇಳಿದ್ದೆ. ಚಂದಾವರಕರ್ ಅವರನ್ನು ಜೀವನದಲ್ಲಿ ಮತ್ತೊಮ್ಮೆ ಭೇಟಿಯಾಗುವ, ಅವರೊಂದಿಗೆ ಮತ್ತೊಮ್ಮೆ ಕೂತು ಚರ್ಚಿಸುವ ಆಸೆ ನನ್ನಲ್ಲಿ ಈಡೇರದೆ ಉಳಿದುಹೋಯಿತು.

ದಿನಗಳು ಕಳೆದಂತೆ ನಾನು ಒಂಟಿಯಾಗುತ್ತಿದ್ದೇನೆ. ಇಡೀ ಸಮಾಜಕ್ಕೆ ಬೆನ್ನು ತಿರುಗಿಸಿ ಓಡಬೇಕೆಂದು ಬಯಸಿದಾಗಲೆಲ್ಲ ಸಂಗೀತ ನನಗೆ ಸಾಂತ್ವನ ಹೇಳುತ್ತದೆ. ಸಂಗೀತದೊಂದಿಗೆ ಮಾತನಾಡುತ್ತೇನೆ, ಚಿಂತಿಸುತ್ತೇನೆ. ಇಡೀ ವಿಶ್ವ ಉಗಮವಾದದ್ದೇ ಶಬ್ಧದಿಂದ, ಶಬ್ಧದ ಉಗಮ ಎಲ್ಲಿ, ಹೇಗೆ ಆಯಿತು?? ಶಬ್ಧವೇಕೆ ಅಗೋಚರ?? ವಿಶ್ವದಂತೆ ಶಬ್ಧವು ಆನಂತವೆ?? ವಿಶ್ವದಲ್ಲಿ ಶಬ್ಧದ ಪರಿಧಿಗೆ ನಿಲುಕದ ಯಾವೊಂದು ಪುಟ್ಟ ಜಾಗವೂ ಇಲ್ಲವೇ?? ಹೀಗೆ ನನ್ನೊಳಗೆ ಉದ್ಭವವಾಗುವ ಅನಂತ ಪ್ರಶ್ನೆಗಳೊಂದಿಗೆ ಮನುಷ್ಯನ ವಿಕಾರಗಳು ಮನುಷ್ಯರಂತೆಯೇ ಕಾಲ ಮಿತಿಯೊಳಗೆ ಮೃತವಾಗುತ್ತವೆ. ಸಂಗೀತ ಮತ್ತೂ ಅನಂತವಾಗುತ್ತದೆ. ಆಗೆಲ್ಲ ಚಂದಾವರಕರ್ ನನ್ನ ಮನಸ್ಸಿನಲ್ಲಿ ಸುಳಿದು ಹೋಗುತ್ತಾರೆ.

6 ಕಾಮೆಂಟ್‌ಗಳು:

  1. ಸಂಗೀತದಿಂದ ಮಳೆ ಬರುವುದು ನಾವು ನೋಡಿಲ್ಲ.. ನಿಜವಾಗಲೂ ಅದು ಅಸಾಧ್ಯವೋ ಇಲ್ಲ ನಮ್ಮ ಸಾಮರ್ಥ್ಯಕ್ಕೆ ಮೀರಿದ್ದೋ..
    ಹೆಚ್ಚಾಗಿ ನಮ್ಮ ಪಂಚೇಂದ್ರಿಯಗಳಿಗೆ ಅನುಭವ ತರದ, ನಮ್ಮ ಸಾಮರ್ಥ್ಯಕ್ಕೆ ಮೀರಿದ, ನಮ್ಮ ಊಹೆಗೂ ನಿಲುಕದ ವಿಷಯಗಳಿಗೆ ಮೂಢ ನಂಬಿಕೆ ಅನ್ನುತ್ತೇವೆ.. ಪಾಶ್ಚಾತ್ಯರು ತಮ್ಮ ನಂಬಿಕೆಗಳಿಗೆ fiction ಎಂದು ಹೆಸರಿಟ್ಟಿದ್ದಾರೆ ನಮ್ಮದಕ್ಕೆ ಮೂಢನಂಬಿಕೆ ಅನ್ನುತ್ತಾರೆ.
    ದಿವಂಗತ ಚಂದಾವರ್ಕರರಿಗೆ ಶೃದ್ಧಾಂಜಲಿ.

    ಪ್ರತ್ಯುತ್ತರಅಳಿಸಿ