ಶುಕ್ರವಾರ, ಏಪ್ರಿಲ್ 23, 2010
ನನ್ನೊಳಗಿನ ವಿಕಾರಗಳು
ಏನಾದರೂ ಬರೆಯಬೇಕೆಂದು ಕುಳಿತಾಗಲೆಲ್ಲಾ ಏನು ಬರೆಯಬೇಕೆಂಬ ಸಂದಿಗ್ದದಲ್ಲಿ ನಲ್ಲೆಲ್ಲ ಆಲೋಚನೆಗಳೂ ಮನಸ್ಸಿನಿಂದ ಮಾಯವಾಗಿ ಶೂನ್ಯವಾಗಿಬಿಡುತ್ತೇನೆ. ಮನುಷ್ಯನ ಮನಸ್ಸಿನ ವಿಕಾರಗಳ ಬಗೆಗೆ, ಬುದ್ದೀಮತ್ತೆಯ ಬಗೆಗೆ ಯೋಚಿಸುವಾಗಲೆಲ್ಲ ಸೃಷ್ಟಿ ನಿಯಮದ ಬಗ್ಗೆ ವಿಚಿತ್ರ ಕುತೂಹಲ ಉಂಟಾಗುತ್ತದೆ. "ಪ್ರಕೃತಿ ಬರೀ ಮನುಷ್ಯನಿಗೇಕೆ ಅತ್ಯಧಿಕ ಬುದ್ದಿಶಕ್ತಿ ನೀಡಿದೆ? ಮಿಕ್ಕೆಲ್ಲ ಜೀವಿಗಳ ಜೊತೆ ಏಕೆ ಈ ಬೇಧಭಾವ?" ಎಂಬೆಲ್ಲಾ ಚಿಂತನೆಗಳು, ಇಡಿಯಾಗಿ ಚಿಂತಿಸಿದಂತೆಲ್ಲಾ ಮನುಷ್ಯನ ಹೊರತಾಗಿ ಉಳಿದೆಲ್ಲ ಜೀವಿಗಳೂ ಪರಮ ಸುಖಿಗಳು, ಪ್ರಕೃತಿಯ ನಿಯಮದ ಜೊತೆ ಜೊತೆಗೆ ಬದುಕನ್ನು ಸಾಗಿಸುವ, ಸೂಕ್ಷ್ಮವಾಗಿ ಬದುಕುವ ಸಾಮರ್ಥ್ಯ ಮನುಷ್ಯನಿಗಿಂತ ಮಿಗಿಲಾಗಿ ಉಳಿದೆಲ್ಲ ಜೀವಿಗಳಿಗೂ ಪ್ರಕೃತಿದತ್ತವಾಗಿ ಬಂದಿದೆ. ಮನುಷ್ಯನೇಕೆ ಇಷ್ಟು ಬುದ್ದಿವಂತನಾದ? ಇಷ್ಟು ಕ್ರೂರಿಯಾದ? ಪ್ರಕೃತಿಗೆ ಸಡ್ಡು ಹೊಡೆದು ತನ್ನೆಲ್ಲಾ ಬಯಕೆಗಳ ಈಡೇರಿಕೆಗೆ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ಬಲಿಕೊಡುತ್ತಾ ಬಂದ? ಎಂದೆಲ್ಲ ಯೋಚಿಸುವಾಗ ಮನಸ್ಸಿಗೇನೋ ಕಿರಿ ಕಿರಿ. ಇವೆಲ್ಲಾ ಚಿಂತನೆಗಳೂ ಶೂನ್ಯವಾಗಿ, ನನ್ನನ್ನು ನಾನು ಬಾಹ್ಯ ಪ್ರಪಂಚಕ್ಕೆ ತೆರೆದುಕೊಳ್ಳುವಾಗಲೆಲ್ಲ ಅಂದುಕೊಳ್ಳುತ್ತೇನೆ, ನಾವು ಮತ್ತೆಂದೂ ಹಿಂತಿರುಗಿ ನೋಡದಷ್ಟು, ನಡೆಯದಷ್ಟು ಮುಂದುವರೆದಿದ್ದೇವೆ. ನಮ್ಮ ಪೂರ್ವಿಕರಂತೆ, ಅವರ ಪೂರ್ವಿಕರಂತೆ ನಾವೆಂದೂ ಬದುಕಲು ಸಾಧ್ಯವಿಲ್ಲ. ದೈನಂದಿನ ಚಿಕ್ಕ ಪುಟ್ಟ ಅವಶ್ಯಕತೆಗಳಿಗೂ ನಾವು ಪರಾವಲಂಬಿಗಳಾಗಿದ್ದೇವೆ. ಒಂದೊಮ್ಮೆ ಜಲ ಪ್ರಳಯವಾಗಿ, ನಾಗರೀಕತೆ ಪೂರ್ತಿ ನಾಶವಾಗಿ, ಮನುಷ್ಯನ ಚಿಕ್ಕ ಸಂತತಿಯೊಂದು ದ್ವೀಪದಲ್ಲಿ ಉಳಿಯುವಂತಾಗಿ, ಹೊಸ ನಾಗರೀಕತೆಯ ಉಗಮವಾದರೆ ಮಾನವ ಪ್ರಕೃತಿದತ್ತವಾಗಿ ಬದುಕುತ್ತಾನೇನೋ!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)