ಭಾನುವಾರ, ಮಾರ್ಚ್ 12, 2017

ಪೆನಿಸಿಲ್ವೇನಿಯಾದಲ್ಲೊಂದು ಪುಟ್ಟ ತರಕಾರಿ ತೋಟ

ಐತಿಹಾಸಿಕ ಪಿಟ್ಟ್ಸ್ ಬರ್ಗಿನ ಇಕ್ಕಟ್ಟು ರಸ್ತೆಗಳ ಇಕ್ಕೆಲಗಳಲ್ಲಿ ಆಚೆ ಈಚೆ ಒಟ್ಟಾಗಿ ಸೇರಿಸಿ ಕಟ್ಟಿದಂತಿದ್ದ ಕಟ್ಟಡಗಳ ಮಧ್ಯೆ ಹಬ್ಬಿದ್ದ ಪೊದೆಗಳನ್ನು ನೋಡಿ ಕೈಲ್ ನನಗೆ ಬರಲು ಹೇಳಿದ ಜಾಗ ಇದೇನಾ ಎಂದು ಸ್ವಲ್ಪ ಇರಿಸು ಮುರಿಸಾಗಿತ್ತು. ಒಂದು ನಿರ್ಜನ ರಸ್ತೆಯ ತುತ್ತ ತುದಿಯಲ್ಲಿ ಪೊದೆಗಳಂತಿದ್ದ ನಿರ್ಜನ ಪ್ರದೇಶಕ್ಕೆ ಗೂಗಲ್ ನಕ್ಷೆ ನನ್ನನ್ನು ಕೊಂಡೊಯ್ದಿತ್ತು. ನಾನು ಕಾರಿನಿಂದಿಳಿಯುತ್ತಿದ್ದಂತೆ ಕೈಲ್ ಕಾವಲು ನಾಯಿ ಕೂಗುತ್ತಾ ನನ್ನ ಮೇಲೆರಗುವುದಕ್ಕೂ, ಕೈಲ್ ಅದನ್ನು ಗದರಿಸುತ್ತಾ ಸಮಾಧಾನಪಡಿಸಿ ನನ್ನತ್ತ ಕೈಚಾಚುತ್ತಿದ್ದಂತೆ ನಾನು ತಲುಪಬೇಕಿದ್ದ ಜಾಗ ಇದೇ ಎಂದು ಮನದಟ್ಟಾಯಿತು. ೩೧ ವರ್ಷದ ಕೈಲ್ ಪ್ಯಾಟಿಸನ್ ಕುರುಚಲು ಪೊದೆಗಳ ಮಧ್ಯೆ ಹಸಿರು ಮನೆಯೊಂದನ್ನು ನಿರ್ಮಿಸಿ ತರಕಾರಿ ಗಿಡಗಳನ್ನು ನೆಡುತ್ತಿದ್ದರು. ಅವರ ಕೆಲಸಕ್ಕೆ ಸ್ವಲ್ಪವೂ ಕುತ್ತು ಬರದಂತೆ ನಾನವರ ಕೃಷಿ ಕೈಂಕರ್ಯಗಳ ಬಗ್ಗೆ ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಾ ಬಂದೆ. ನಮ್ಮಿಬ್ಬರ ಸಂವಾದದ ತುಣುಕು ಹಾಗೂ ಕೃಷಿಗೆ ತಮ್ಮನ್ನು ಹೊಸದಾಗಿ ಅರ್ಪಿಸಿಕೊಂಡ ಕೈಲ್ ಬದುಕು ಮತ್ತು ಪ್ರಯೋಗಗಳ ಪರಿಚಯ ಲೇಖನ.

ನಾನು: ಕೈಲ್, ನೀವು ಕೃಷಿ ಮಾಡಲು ಶುರುವಿಟ್ಟು ಎಷ್ಟು ವರ್ಷಗಳಾಯಿತು? ಎಷ್ಟು ಎಕರೆ ಜಾಗದಲ್ಲಿ ನಿಮ್ಮ ಕೃಷಿ ಭೂಮಿಯನ್ನು ವಿಸ್ತರಿಸಿದ್ದೀರ?
ಕೈಲ್: ಇದು ೨ನೇ ವರ್ಷ. ಹೋದ ವರ್ಷ ಸ್ವಲ್ಪ ಭೂಮಿಯನ್ನು ಬಾಡಿಗೆ ತೆಗೆದುಕೊಂಡು ಕೃಷಿ ಮಾಡಿದೆ. ವರ್ಷ ಜಾಗವೂ ಸೇರಿ ಕಡೆ ಚಿಕ್ಕ ಖಾಲಿ ಜಾಗಗಳನ್ನು ಬಾಡಿಗೆ ಪಡೆದು ಕೃಷಿ ಮಾಡುತ್ತಿದ್ದೇನೆ. ಎಲ್ಲಾ ಸೇರಿ ಸುಮಾರು ಎಕರೆ ಆಗಬಹುದೇನೋ.

ನಾನು: ನೀವು ಯಾವ ಬೆಳೆಗಳನ್ನು ಮುಖ್ಯವಾಗಿ ಬೆಳೆಯುತ್ತೀರಿ?

ಕೈಲ್: ನಾನು ತರಕಾರಿ ಹಾಗೂ ಗಿಡಮೂಲಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನಿನ್ನೂ ಸಾವಯವ ಕೃಷಿ ಪದ್ದತಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಇಂಥದ್ದೇ ತರಕಾರಿ ಬೆಳೆಯಬೇಕೆಂದು ಪೂರ್ತಿಯಾಗಿ ನಿರ್ಧರಿಸಿಲ್ಲ. ಪ್ರತೀ ಬಾರಿಯೂ ಹೊಸ ಹೊಸ ತರಕಾರಿಗಳನ್ನು ಬೆಳೆಸಿ ಮಣ್ಣಿಗೆ ಯಾವ ಬೆಳೆ ಅತ್ಯುತ್ತಮವೆಂದು ನಿರ್ಧರಿಸುವ ಹಂತದಲ್ಲಿ ನಾನಿದ್ದೇನೆ. ಸಧ್ಯಕ್ಕೆ, ಟೊಮ್ಯಾಟೊ, ಲೆಟ್ಟುಸ್, ಪಾಲಕ್ ಸೊಪ್ಪು ,ಬದನೆಕಾಯಿ, ಬೀಟ್ ರೂಟ್, ಬೀನ್ಸ್ವಿಧ ವಿಧ ಬೆಸಿಲ್, ಬೆಂಡೆಕಾಯಿ, ಮುಂತಾದವನ್ನು ಬೆಳೆಯುತ್ತಿದ್ದೇನೆ.

ನಾನು: ನೀವಿನ್ನೂ ಹೊಸದಾಗಿ ಕೃಷಿ ಮಾಡುತ್ತಿರುವವರು ಹಾಗೂ ಸಾವಯವ ಕೃಷಿ ಪದ್ದತಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವವರು, ನಿಮಗೆ ಕೃಷಿ ಮಾಡಬೇಕೆಂಬ ಉಮೇದು ಹಾಗೂ ಸಾವಯವ ಪದ್ದತಿಯಲ್ಲಿ ಮಾಡಬೇಕೆಂಬ ಮನಸ್ಸು ಯಾಕೆ ಬಂತು?
ಕೈಲ್: ನಾನು ತಿನ್ನುವ ಆಹಾರ ನಾನೇ ಬೆಳೆಯಬೇಕೆಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ನನ್ನ ತಂದೆ ತಾಯಿ ಇಬ್ಬರೂ ತುಂಬಾ ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದು ನನಗೆ ಗಾಬರಿಯಾಗಿತ್ತು. ಅವರ ನೋವಿನ ದಿನಗಳು ನನಗೆ ಮರೆಯಲಾಗದ್ದು. ಹಾಗೆಯೇ ನನ್ನ ಸುತ್ತ ಮುತ್ತ ಅನೇಕರನ್ನು ಹಲವು ಮಾರಣಾಂತಿಕ ಖಾಯಿಲೆಗಳು ಆವರಿಸುವುದನ್ನು ನೋಡಿ ರೀತಿಯ ರೋಗಗಳೇಕೆ ಬರುತ್ತದೆ? ಯಾವ ರೀತಿಯ ಆಹಾರಗಳಿಗೆ ನಮ್ಮ ದೇಹ ಹೇಗೆ ಸ್ಪಂದಿಸುತ್ತದೆ ಎಂದು ಕೂಲಂಕುಷವಾಗಿ ಅಧ್ಯಯನ ಮಾಡಿದೆ, ಈಗಲೂ ಮಾಡುತ್ತಿದ್ದೇನೆ. ನಾವು ತಿನ್ನುವ ಆಹಾರ ನಿಧಾನವಾಗಿ ನಮ್ಮ ದೇಹಸ್ಥಿತಿಯನ್ನು ನಿರ್ಧರಿಸುತ್ತದೆ. ಆಹಾರದಲ್ಲಿನ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಯೋಚಿಸಿದಾಗ ನಾನು ಹುಟ್ಟಿದಾಗಿನಿಂದ ತಿನ್ನುತ್ತಾ ಬಂದ ಆಹಾರ ಪದಾರ್ಥಗಳು ನನ್ನನ್ನು ರೋಗದ ಕೂಪಕ್ಕೆ ತಳ್ಳುವುದು ಖಚಿತವಾಗಿತ್ತು. ಹಾಗಾಗಿ ನಾನು ತಿನ್ನುವ ಆಹಾರ ಪದಾರ್ಥಗಳನ್ನು ಹೇಗೆ ಬೆಳೆಯಬೇಕೆಂದು ನಿರ್ಧರಿಸುವವನು ನಾನೇ ಆಗುವುದು ಅನಿವಾರ್ಯವಾಗಿತ್ತು. ದಿಸೆಯಲ್ಲಿ ಚಿಂತಿಸುವುದು ಇಡೀ ಮನುಕುಲಕ್ಕೆ ಇಂದಲ್ಲಾ ನಾಳೆ ಅನಿವಾರ್ಯ ಕೂಡಾ.

ನಾನು: ನೀವು ಬರಿಯ ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುವ ಬಗ್ಗೆ ಯೋಚಿಸಿದ್ದೀರಾ? ನಿಮ್ಮ ಸಮಯ ಹೇಗೆ ವಿನಿಯೋಗವಾಗುತ್ತಿದೆ?
ಕೈಲ್: ನಾನು ಗ್ರಾಫಿಕ್ಸ್ ಡಿಸೈನರ್. ದಿನದ ತಾಸು ನನ್ನ ತೋಟಕ್ಕಾಗಿ ಮೀಸಲಿಡುತ್ತೇನೆ.ಹಾಗೂ ವಾರಾಂತ್ಯಗಳನ್ನು ಸಾಮಾನ್ಯವಾಗಿ ತೋಟದಲ್ಲಿ ಕಳೆಯುತ್ತೇನೆ. ಸಧ್ಯಕ್ಕೆ ಹೆಚ್ಚಾಗಿ ನಾನುನೊಬ್ಬನೇ ಹಾಗೂ ಕೆಲವೊಮ್ಮೆ ನನ್ನ ಗೆಳತಿಯೊಟ್ಟಿಗೆ ಕಸುಬನ್ನು ಮಾಡಬೇಕಾಗಿರುವುದರಿಂದ ಬರಿಯ ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುವುದು ಅಸಾಧ್ಯ. ಹವ್ಯಾಸಿ ಕೃಷಿಯನ್ನೆ ತುಂಬಾ ಗಗಂಭೀರವಾಗಿ ಪರಿಗಣಿಸಿದ್ದೇನೆ. ಮುಂದೊಂದು ದಿನ ಸಾವಯವ ಕೃಷಿಪದ್ಧತಿಯ ದೊಡ್ಡ ತೋಟವೊಂದನ್ನು ಮಾಡುವಾಸೆ. ಆದರೆ ಅದಕ್ಕೆ ಇನ್ನೂ ಅನುಭವ ಹಾಗೂ ತಯಾರಿಯ ಅವಶ್ಯಕತೆ ಇದೆ. ಚಿಕ್ಕ ತರಕಾರಿ ತೋಟದ ಜೊತೆಗೆ ಸಣ್ಣ ಪ್ರಮಾಣದಲ್ಲಿ ಜೇನು ಸಾಕಣೆ ಕೂಡಾ ಮಾಡುವುದರಿಂದ ನನ್ನ ಸಮಯ ವ್ಯರ್ಥವಾಗುವುದಿಲ್ಲ. ಇಲ್ಲಿನ ರೆಸ್ಟೊರೆಂಟುಗಳಿಗೆ ನಾನು ದಿನನಿತ್ಯ ತರಕಾರಿ ಹಾಗೂ ಸೊಪ್ಪುಗಳನ್ನು ಒದಗಿಸುತ್ತೇನೆ.
ನಾನು: ನೀವು ಭೂಮಿಯ ಫಲವತ್ತತೆಯನ್ನು ಹೇಗೆ ನಿರ್ಧರಿಸುತ್ತೀರಿ? ಭೂಮಿಯನ್ನು ಫಲವತ್ತಾಗಿರಿಸಲು ಯಾವ ವಿಧಾನಗಳನ್ನು ಬಳಸುತ್ತೀರಿ?
ಕೈಲ್: ಇಲ್ಲಿ ಸುತ್ತಾ ಮುತ್ತಾ ಬೆಳೆದಿರುವ ಪೊದೆ, ಗಿಡಗಂಟಿಗಳನ್ನು ನೋಡಿ, ಇದನ್ನು ನಾನು ಪೂರ್ತಿ ಸ್ವಚ್ಚವಾಗಿರಿಸದೇ ಹಾಗೆಯೇ ಬಿಟ್ಟಿದ್ದೇನೆ. ನಾನು ಹೋದ ವರುಷ ಭೂಮಿಯನ್ನು ಬಾಡಿಗೆ ಪಡೆದಾಗ ದಟ್ಟವಾಗಿ ಹಬ್ಬಿದ್ದ ಪೊದೆಗಳಿಂದಾಗಿ ಮಣ್ಣಿಗೆ ಸೂರ್ಯನ ಕಿರಣವಾಗಲೀ, ಆಮ್ಲಜನಕವಾಗಲೀ ದೊರಕದೇ ಮಣ್ಣು ಯಾವ ಬೆಳೆಗಳನ್ನು ಬೆಳೆಯಲು ಕೂಡಾ ಅನುಪಯುಕ್ತವಾಗಿತ್ತು. ಮಧ್ಯೆ ಮಧ್ಯೆ ಅಲ್ಲಲ್ಲಿ ಗಿಡಗಂಟಿಗಳನ್ನು ಸವರಿ, ಸ್ವಲ್ಪ ಸಮತಟ್ಟು ಮಾಡಿ, ಇಲ್ಲಿಯೇ ಗೊಬ್ಬರವನ್ನು ಉತ್ಪಾದಿಸಲು ಪ್ರಾರಂಭಿಸಿದೆ. ನೆಲದಿಂದ ಅಡಿ ಎತ್ತರಕ್ಕೆ ಆಯತಾಕಾರದಲ್ಲಿ ಮರದ ಹಲಗೆಗಳನ್ನು ಹೂತು, ನಗರದ ಎಲ್ಲಾ ರೆಸ್ಟೊರೆಂಟುಗಳಿಂದ ಸಾವಯವ ತ್ಯಾಜ್ಯಗಳನ್ನೂ, ಕಾಫಿ ಡೇ ಗಳಿಂದ ಮತ್ತು ಬ್ರಿವರಿಗಳಿಂದ ಸಿಗುವ ವಿಧ ವಿಧದ ತ್ಯಾಜ್ಯಗಳನ್ನು ಇದರಲ್ಲಿ ಷೇಕರಿಸುತ್ತಾ ಹೋಗುತ್ತೇನೆ.ದಿನಕಳೆದಂತೆ ಸಾರಜನಕಯುಕ್ತ ಗೊಬ್ಬರವಾಗಿ ಪರಿವರ್ತಿತವಾಗುವ ತ್ಯಾಜ್ಯಗಳನ್ನು ನನ್ನ ಬೆಳೆಗಳಿಗೆ ಉಪಯೋಗಿಸುತ್ತೇನೆ ಎನ್ನುತ್ತ ಒಂದು ಕೋಲಿನಿಂದ ಗೊಬ್ಬರವನ್ನು ಸ್ವಲ್ಪ ಮೇಲೆ ಕೆಳಗೆ ಮಾಡಿ ಹಬೆಯಾಡುತ್ತಿದ್ದ ಮಧ್ಯದ ಭಾಗವನ್ನು ನನಗೆ ತೋರಿಸಿದ ಕೈಲ್ ಮುಂದುವರೆದು ಮತ್ತೆ ವಿವರಿಸತೊಡಗಿದರು.ಮಣ್ಣಿನ ಫಲವತ್ತತೆ ಕಾಪಾಡಲು ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೆಲವು ಹೊಸ ಗಿಡಗಂಟಿಗಳು ನಾನು ಬೆಳೆ ತೆಗೆಯಲು ಪ್ರಾರಂಭಿಸಿದ ನಂತರ ತನ್ನಿಂತಾನೇ ಸ್ವಚ್ಚಂದವಾಗಿ ಬೆಳೆಯತೊಡಗಿದವು. ಒಂದು ಹೂವಿನ ಕಾಡು ಗಿಡವನ್ನು ತೋರಿಸಿ, ಗಿಡವನ್ನು ನೋಡಿ ಇದು ಇತ್ತೀಚೆಗಷ್ಟೇ ಬೆಳೆಯಲು ತೊಡಗಿದೆ. ಇದರಲ್ಲಿ ಬಿಡುವ ಹೂವುಗಳಿಗೆ ಆಕರ್ಷಿತವಾಗಿ ಬರುವ ಕೆಲವು ಹುಳು ಹುಪ್ಪೆಗಳು ನನ್ನ ಗಿಡಗಳಿಗೆ ಹಾನಿ ಮಾಡುವ ಹುಳುಗಳನ್ನು ಕೂಡಾ ತಿನ್ನುವಂಥವು.ಹಾಗಾಗಿ ಇವು ನೈಸರ್ಗಿಕ ಕೀಟನಾಶಕವಾಗಿ ಕೆಲಸ ಮಾಡುತ್ತವೆ. ಇನ್ನು ಕೆಲವು ಗಿಡಗಳು ಸಾರಜನಕಯುಕ್ತವಾಗಿದ್ದು ಮಣ್ಣಿನ ಫಲವತ್ತತೆಯನ್ನು ತನ್ನಿಂತಾನೇ ಹೆಚ್ಚಿಸಿ ನನ್ನ ಬೆಳೆಗಳಿಗೆ ಸಹಾಯಕವಾಗಿವೆ. ನಾನು ಇವೆಲ್ಲ ಪ್ರಯೋಗಗಳನ್ನು ಪ್ರಾರಂಭಿಸಿದ ನಂತರ ಮಣ್ಣು ಸ್ವಲ್ಪ ಸ್ವಲ್ಪವಾಗಿ ತನ್ನ ಸ್ಥಿತಿಗತಿಗಳನ್ನು ಸುಧಾರಿಸಿಕೊಂಡು ಮೇಲ್ಪದರ ಬದಲಾವಣೆಯ ಹಂತದಲ್ಲಿರುವುದರಿಂದ ಹೊಸ ತರಕಾರಿ ಬೀಜಗಳನ್ನು ಬಿತ್ತಿ, ಯಾವ ತರಕಾರಿ ಇದಕ್ಕೆ ಒಗ್ಗುತ್ತದೆ ಎಂದು ಪ್ರಯೋಗ ಮಾಡುವುದಷ್ಟೇ ನನ್ನ ಕೆಲಸ.

ನಾನು: ನಿಮ್ಮ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ಇನ್ನೂ ಏನಾದರೂ ವಿಧಾನಗಳನ್ನು ಬಳಸುತ್ತೀರಾ?
ಕೈಲ್: ನಾನು ಸಾವಯವ ಫಿಶ್ ಮೋಶನ್ ಫರ್ಟಿಲೈಸರ್ಗಳನ್ನು ಬಳಸುತ್ತೇನೆ. ಅಮೇರಿಕಾದ ಬುಡಕಟ್ಟು ಜನಾಂಗದವರು ಸಿಸ್ಟೆರ್ ಗಾರ್ಡನ್ ಎಂಬ ಕೃಷಿ ಪದ್ಧತಿಯನ್ನು ಬಳಸುತ್ತಿದ್ದರು. ಜೋಳ, ಬೀನ್ಸ್ ಮತ್ತು ಸ್ಕ್ವಾಷ್ ಬೆಳೆಗಳನ್ನು ಒಟ್ಟಿಗೇ ಬೆಳೆಯುವ ಪದ್ದತಿಯಿದು. ಬೆಳೆಗಳ ಸಂಯೋಜನೆ ಒಂದಕ್ಕೊಂದು ಪೂರಕವಾಗಿದೆಯಲ್ಲದೆ ಮಣ್ಣಿನ ಪೋಶಣೆಗೆ ಸಹಕಾರಿ.ಜೋಳ ಕಾರ್ಬೋಹೈಡ್ರೇಟ್ ಯುಕ್ತವಾಗಿದ್ದರೆ, ಬೀನ್ಸ್ ಪ್ರೊಟೀನ್ ಯುಕ್ತವಾಗಿದ್ದು ಜೋಳದಲ್ಲಿ ಸಾಮಾನ್ಯವಾಗಿ ಅಮೈನೊ ಅಸಿಡ್ ಕೊರತೆಯನ್ನು ನೀಗಿಸುತ್ತದೆ.ಜೋಳದ ಖಾಂಡಗಳು ಬೀನ್ಸ್ ಬಳ್ಳಿಗಳು ಹರಡಲು ಪೂರಕವಾಗಿವೆ ಮತ್ತು ಬೀನ್ಸ್ ಬೇರುಗಳಿಂದ ಸಾರಜನಕವನ್ನು ತಾನೇ ತಾನಾಗಿ ಪಡೆಯುತ್ತವೆ. ಸ್ಕ್ವಾಷ್ ಬಳ್ಳಿಗಳು ಹಲವು ಕಳೆ ಗಿಡಗಳು ಬೆಳೆಯುವುದನ್ನು ನಿಯಂತ್ರಿಸುವುದಲ್ಲದೆ ಮಣ್ಣಿನಲ್ಲಿರುವ ತೇವಾಂಶ ಬೇಗ ಆವಿಯಾಗುವುದನ್ನು ನಿಯಂತ್ರಿಸಿ ಬೆಳೆಗಳಿಗೆ ಪೂರಕವಾಗಿವೆ. ಸಿಸ್ಟರ್ ಗಾರ್ಡನ್ ಗೆ ಬುಡಕಟ್ಟು ಜನರು ನೈಸರ್ಗಿಕ ಗೊಬ್ಬರವಾಗಿ ಮೀನನ್ನು ಬಳಸುತ್ತಿದ್ದರು. ಸತ್ತಾಗ ದುರ್ಗಂಧ ಬೀರುವ ಮೀನುಗಳನ್ನು ಬೆಳೆಗಳ ಮಧ್ಯೆ ಮಣ್ಣಿನಲ್ಲಿ ಹೂತರೆ ಹಾನಿಕಾರಕ ಕೀಟಗಳು ಬೆಳೆಗಳ ಹತ್ತಿರ ಸುಳಿಯುವುದಿಲ್ಲ. ಹಾಗೆಯೇ ದುರ್ವಾಸನೆಯನ್ನು ತಡೆದುಕೊಳ್ಳಲು ನಾವೂ ತಯಾರಿರಬೇಕಷ್ಟೆ. ಮೀನನ್ನು ಹೂಳುವ ಪದ್ಧತಿಯ ಸುಧಾರಿತ ಆವೃತ್ತಿ ಫಿಷ್ ಮೋಷನ್ ಫರ್ಟಿಲೈಸರ್.

ನಾನು: ನೀವು ನಿಮ್ಮ ಕೃಷಿಯನ್ನು ಅಭಿವೃದ್ಧಿಪಡಿಸಲು ಸಾಲ ಮಾಡಿದ್ದೀರಾ ಅಥವಾ ಮಾಡುವ ಯೋಚನೆಯಲ್ಲಿದ್ದೀರಾ? ಯಾವುದಾದರೂ ಸಂಸ್ಥೆಗಳು ಸಾವಯವ ಕೃಷಿಗಾಗಿಯೇ ಸಾಲ ನೀಡುತ್ತಿವೆಯೇ?
ಕೈಲ್: ಕಿವ ಎಂಬ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ, ಸಣ್ಣ ಕೈಗಾರಿಕೆ, ವಿಧ್ಯಾಭ್ಯಾಸ ಹೀಗೆ ಹಲವು ಕಾರಣಗಳಿಗೆ ಸಾಲ ನೀಡುತ್ತಿದೆ. ಇದು ಸಮುದಾಯದತ್ತ ಸೇವೆಯಿದ್ದಂತೆ. ಸಾಲ ನೀಡಬಯಸುವವರು ಸಂಸ್ಥೆಯ ಮೂಲಕ ಕನಿಷ್ಟ ೨೫ ಡಾಲರಿನಿಂದ ಹಿಡಿದು ತಮ್ಮ ಕೈಲಾದಷ್ಟು ನೀಡಬಹುದು. ಸಾಲಗಾರ ಅದನ್ನು ಮರುಪಾವತಿಸಿದ ನಂತರ ಹಣವನು ಹಿಂಪಡೆಯಬಹುದು ಅಥವಾ ಅದೇ ಹಣವನ್ನು ಮತ್ತೆ ಸಾಲ ನೀಡಲು ಹೂಡಿಕೆ ಮಾಡಬಹುದು. ಸಾಲ ಬೇಕಾದವರು ಯಾವುದಾದರೂ ಸಂಸ್ಥೆಯ ಮೂಲಕವೋ ಅಥವ ನೇರವಾಗಿ ಕಿವ ಅಂತರ್ಜಾಲ ಕೊಂಡಿಯ ಮೂಲಕ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿ ಅರ್ಜಿ ಸಲ್ಲಿಸಬಹುದು.

ನಾನು; ಅಮೇರಿಕಾದ ಕೃಷಿ ಕ್ಷೇತ್ರ ಪೂರ್ತಿಯಾಗಿ ವ್ಯಾಪಾರೀಕರಣವಾಗಿದೆಯಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸೀಡ್ ಫ್ರೀಡಂ ಬಗ್ಗೆ ನಿಮಗೇನಾದರೂ ಹೇಳಲಿಕ್ಕಿದೆಯೇ?
ಕೈಲ್: ನಾನು ಇತ್ತೀಚೆಗಷ್ಟೆ ಅಯೊವ ಪ್ರಾಂತ್ಯಕ್ಕೆ ಹೋಗಿದ್ದೆ. ಬಹುಮುಖ್ಯ ಆಹಾರ ಬೆಳೆಯಾದ ಜೋಳಗಳನ್ನು ಉತ್ಪಾದಿಸುವಲ್ಲಿ ಅಯೊವ ರಾಜ್ಯದ ಕೊಡುಗೆ ಮಹತ್ವದ್ದು. ನಾವು ದಿನನಿತ್ಯ ತಿನ್ನುವ ಕಾರ್ನ್ ಬ್ರೆಡ್, ಕಾರ್ನ್ ಫ್ಲೊರ್ ಗಳು ಇಂಥ ಜೋಳದಿಂದ ತಯಾರಿಸಲ್ಪಟ್ಟಿದ್ದು. ಎಥನಲ್ ಕಂಪನಿ ಕೃಷಿ ಉಪಕರಣಗಳನ್ನು ಬಾಡಿಗೆ ಕೊಟ್ಟು, ಬೀಜಗಳನ್ನು, ಕೀಟನಾಷಕಗಳನ್ನು ಮಾರಾಟ ಮಾಡಿ, ಬೆಳೆದ ಜೋಳಗಳನ್ನು ಖರೀದಿಸುವ ಒಪ್ಪಂದಕ್ಕೆ ರುಜುಮಾಡಿದೆ. ಮೇಲ್ನೋಟಕ್ಕೆ ಇದು ರೈತರಿಗೆ, ಆಹಾರೋಧ್ಯಮಕ್ಕೆ ಸಹಕಾರಿಯಾಗಿ ಕಂಡುಬಂದರೂ ಎಥನಾಲ್ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳು, ತಳೀಯವಾಗಿ ಪರಿವರ್ತಿಸಿದ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ಅವಲಂಭಿಯಾಗಿಸಿ ರೈತರ ಸ್ವಾತಂತ್ರವನ್ನು ಮೊಟಕುಗೊಳಿಸಿವೆಯಷ್ಟೆ. ಜೈವಿಕವಾಗಿ, ನೈಸರ್ಗಿಕವಾಗಿ ಸೀಡ್ ಫ್ರೀಡಂ ಬಹಳಾ ಮುಖ್ಯವಾಗುತ್ತದೆ. ಬಂಡವಾಳ ನೀತಿಯನ್ನು ಎತ್ತಿ ಹಿಡಿಯುವುದಕ್ಕಾಗಿ, ಹಣ ಹೂಡಿಕೆಗಳಿಗಾಗಿ ತಳೀಯವಾಗಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಬಳಸಬೇಕೆಂಬ ನಿಯಮ ಹೇರುತ್ತಿದ್ದರೂ, ಎಥನಲ್ ನಂಥಹಾ ಕಂಪನಿಗಳು ದುಬಾರಿ ಯಂತ್ರಗಳನ್ನು ಬಾಡಿಗೆಗೆ ಕೊಟ್ಟು, ರೈತರು ಮುಗಿಬಿದ್ದು ನಾನಾ ಆಸೆಗೆ ಬಲಿಯಾದರೂ, ಆಹಾರ ಸರಪಳಿಯಲ್ಲಿ ನಾವು ದಿನನಿತ್ಯ ತಿನ್ನುವ ಆಹಾರ ಬಹು ಮುಖ್ಯವಾಗಿದ್ದು. ಸ್ವಚ್ಚ, ಸಮೃದ್ದ ಆಹಾರಕ್ಕಾಗಿ ಮುಂದೊಮ್ಮೆ ಇವೆಲ್ಲ ಗೊಜಲುಗಳಿಂದ ಹೊರಬರುವ ದಾರಿ ಹುಡುಕುವುದು ಅಸಾಧ್ಯವಾದೀತು. ಹಾಗಾಗಿ ಬೆಳೆಯುವ ರೈತರಿಗೆ ಬೀಜ ಸಂರಕ್ಷಣೆ ಹಾಗೂ ಅವುಗಳನ್ನು ಭಿತ್ತನೆಗೆ ಮರುಬಳಕೆ ಮಾಡುವ ಸ್ವಾತಂತ್ರ ಅತೀ ಅವಶ್ಯಕ.


Note: Edited version of this article is published in Prajavani, March 7th 2017.