ಶುಕ್ರವಾರ, ಮಾರ್ಚ್ 11, 2011

ಬಿಸಿಲ ಕೋಲುಗಳು ..


ಕ್ಯಾಮೆರಾ ಮಾಡೆಲ್: CanonSX130IS
ಸೆರೆ ಹಿಡಿದ ದಿನಾಂಕ:೨೯ ನವೆಂಬರ್ ೨೦೧೦
ಸೆರೆಹಿಡಿದ ಸಮಯ: ೦೯:೩೩:37
ISO: 100
Exposure Time: 1/8 sec
Aperture Value: 4.34 EV (F/4.5)


ನಾನು ಕ್ಯಾಮೆರಾ ಕೊಂಡ ಸಂತಸದ ಕ್ಷಣಗಳವು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುವಾಸೆ ಮೊದಲಿನಿಂದಲೂ ಇತ್ತು. ಆದರೆ ನಾನು ಕ್ಯಾಮೆರಾ ಕೊಂಡಾಗಿನಿಂದ ಫೋಟೋ ತೆಗೆಯುವುದು ಬರಿಯ ಸುಂದರ ಕ್ನಣಗಳ ನೆನಪಿಗಾಗಿ ಮಾತ್ರವಲ್ಲದೆ ಅದೊಂದು ಹವ್ಯಾಸವಾಗುತ್ತಾ ಬರುತ್ತಿದೆ. ಬರಿಯ ಪ್ರಕೃತಿಯನ್ನು, ಸ್ನೇಹಿತರ ವಿವಿಧ ಭಂಗಿಗಳನ್ನು ಸೆರೆ ಹಿಡಿಯುವುದು ಮಾತ್ರವಲ್ಲದೆ ಹೊಸತೇನಾದರೂ ಸಿಗುತ್ತದೆಯಾ ಎಂದು ಹುಡುಕಲು ತೊಡಗಿದೆ ನನ್ನ ಮನಸ್ಸು.

"ಬಿಸಿಲ ಕೋಲುಗಳು" ನಾನು ನನ್ನ ಹೊಸ ಕ್ಯಾಮೆರಾ ಜೊತೆಗೆ ಎಕ್ಸ್‌ಪೆರಿಮೆಂಟ್ ಮಾಡುತಿದ್ದಾಗ ಸೆರೆ ಹಿಡಿದದ್ದು. ಹಳ್ಳಿಯ ನಮ್ಮ ಮನೆಯ ಚೌಕಿಯಲ್ಲಿ(ಮಲೆನಾಡಿನಲ್ಲಿ ಮನೆಯ ಪ್ರತಿ ಕೋಣೆಗೂ ಚೌಕಿ,ನಡುಮನೆ,ಜಗುಲಿ ಎಂದು ಕ್ರಮವಾಗಿ ಕೋಣೆಯು ರೂಪಿತವಾದ ಜಾಗಕ್ಕನುಗುಣವಾಗಿ ಹೆಸರಿಸುವುದು ರೂಢಿ) ಬಿಸಿಲ ಕೋಲುಗಳು ಸುಮಾರು ೪೫ ಡಿಗ್ರಿ ಓರೆಯಾಗಿ ಬೀಳುತ್ತಿರುವುದನ್ನು ನೋಡಿ, ಇದನ್ನು ಕೈಯಲ್ಲಿಯಂತೂ ಹಿಡಿಯೋದಕ್ಕೆ ಸಾಧ್ಯವಿಲ್ಲ, ನನ್ನ ಕ್ಯಾಮೆರಕ್ಕಾದರೂ ಸ್ವಲ್ಪ ಕೆಲಸ ಕೊಡೋಣ ಎನಿಸಿತು. ಆಗಿನ್ನೂ ಮ್ಯಾನ್ಯೂವಲ್ ಮೋಡ್ ಬಳಸಿ ಒಳ್ಳೆಯ ಚಿತ್ರಗನ್ನು ಸೆರೆಹಿಡಿಯಲು ಹೆಣಗುತ್ತಾ ಹೊಸ ಹೊಸತನ್ನು ಕಲಿಯುತ್ತಿದ್ದೆ. ಹಾಗೆಯೇ ಸುಮಾರು ಸೆಟ್ಟಿಂಗ್ಸ್ ಬದಲಿಸಿ ಇದೊಂದೇ ಸನ್ನಿವೇಶವನ್ನು ಪದೇ ಪದೇ ಸುಮಾರು ೧೦ ಬಾರಿ ಕ್ಲಿಕ್ಕಿಸಿದಾಗ ಒಂದು ಚಿತ್ರ ಒಳ್ಳೆಯದಿದೆ ಎನಿಸಿತು. ಆಗತಾನೆ ಅಂತರ್ಜಾಲದಲ್ಲಿ ಗೆಳೆಯರಾಗಿ, ನನಗೆ ಫೋಟೋಗ್ರಫಿಯ ಬೇಸಿಕ್ ಹೇಳಿಕೊಡುತ್ತಿದ್ದ ದಿನೇಶ್ ಹೆಗಡೆಯವರಿಗೆ ಈ ಚಿತ್ರವನ್ನು ಮೇಲ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದೆ.ಅವರ ಅಭಿಪ್ರಾಯ ಕೇಳಿ ಅಂತೂ ನಾನು ಕ್ಯಾಮೆರಾ ತೆಗೆದುಕೊಂಡಿದ್ದು ಸಾರ್ಥಕವಾಯಿತೆನಿಸಿತು. ದಿನೇಶ್ ಹೆಗಡೆಯವರ ಸಲಹೆಯಂತೆ ಅದನ್ನು ಫೇಸ್ ಬುಕ್ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದಾಗ, ನನ್ನ ಫೋಟೋಗ್ರಫಿ ಹುಚ್ಹಿನ ಬಗ್ಗೆ ಹಂಗಿಸಿಕೊಂಡು ನಕ್ಕ ಗೆಳೆಯರೆಲ್ಲ ಭೇಷ್ ಎಂದು ಬೆನ್ನು ತಟ್ಟಲು ತೊಡಗಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಗೆಳೆಯನೊಬ್ಬ ಇಂತಹಾ ಚಿತ್ರಗಳನ್ನು ಸೆರೆಹಿಡಿಯಬೇಕಾದರೆ, ಆ ಜಾಗದಲ್ಲಿ ಇರುವ ಅಗತ್ಯ ಹಾಗೂ ಅನಗತ್ಯ ವಸ್ತುಗಳ ಬಗ್ಗೆ ಗಮನವಹಿಸಲು ಸೂಚಿಸಿದ. ಈ ಚಿತ್ರದಲ್ಲಿ ಕಾಣುವ ಗಡಿಯರದಂಥಹಾ ವಸ್ತುಗಳು ಸನ್ನಿವೇಶಕ್ಕೆ ಪೂರಕವಾಗಿಲ್ಲವೆಂದೂ, ಚಿತ್ರವನ್ನು ಓವರ್ ಎಕ್ಸ್‌ಪೋಸ್ ಮಾಡುತ್ತವೆಂದೂ, ಅಂತಹಾ ವಸ್ತುಗಳನ್ನು ಚಿತ್ರದ ಚೌಕಟ್ಟಿನಿಂದ ಹೊರಗಿದಬೇಕೆಂದು ಸಲಹೆ ನೀಡಿದ.

ಈ ಚಿತ್ರದ ಪೂರ್ತಿ ಸನ್ನಿವೇಶದ ಬಗ್ಗೆ ನನಗೆ ಭಾವನಾತ್ಮಕವಾದ ನಂಟಿದೆ. ನಾನು ಹುಟ್ಟಿ ಬೆಳೆದ ಪರಿಸರದ ಸೂಕ್ಷ್ಮಗಳನ್ನು ಒಳಗೊಂಡಂತೆ ನನಗೆ ಯಾವಾಗಲೂ ಭಾಸವಾಗುತ್ತದೆ. ಪ್ರತೀ ಭಾರಿ ಈ ಚಿತ್ರವನ್ನು ನೋಡುವಾಗಲೂ ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ತೆಂಗಿನ ಮರದ ಸಂದಿನಿಂದ ತೂರಿಬರುವ ಬಿಸಿಲ ಕೊಲುಗಳಿಗಾಗಿ ಚಳಿಗಾಲದಲ್ಲಿ ಬೆಳಿಗ್ಗೆ ಮುಂಚೆ ಅಜ್ಜನ ಜೊತೆ ಕಾಯುತ್ತ ಕೂರುತ್ತಿದ್ದ ನನ್ನ ಗತ ಕಾಲವೂ, ನಮ್ಮ ಮನೆಯ ಅಟ್ಟದ (ಅಡಿಕೆ ಒಣಗಿಸಲು ಸುಗ್ಗಿಯ ದಿನಗಳಲ್ಲಿ ಅಡಿಕೆ ಮರದ ಕಾಂಡದಿಂದ ತಯಾರಿಸಿದ ಮೇಲ್ಮನೆ) ದಬ್ಬೆಯ ಸಂದಿನಿಂದ ತೂರಿಬರುವ ಚೌಕಾಕಾರದ ನಾಲ್ಕು ಚಿಕ್ಕ ಬಿಸಿಲು ಕೋಲುಗಳನ್ನು ವಿಭಜಕವಾಗಿ ಇರಿಸಿಕೊಂಡು ಅಂಗಳದಲ್ಲಿ ಗೆರೆ ಎಳೆದು ಕುಂಟಾಪಿಲ್ಲೆ ಆಡುತ್ತಿದ್ದ ನಮ್ಮ ಮುಗ್ಧ ವೈಭವದ ದಿನಗಳ ನೆನಪುಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಇತಿಹಾಸದ ಪಳೆಯುಳಿಕೆಗಳಂತೆ ಈ ಬಿಸಿಲ ಕೋಲುಗಳನ್ನು ಸೆರೆ ಹಿಡಿದಿದ್ದೇನೆ.

ಈ ಬರಹ ಸಂವಾದ (http://samvaada.com/themes/article/214/dRushyateera_kanti_html) ದಲ್ಲಿ ಪ್ರಕಟಿತ..