ಮಂಗಳವಾರ, ಸೆಪ್ಟೆಂಬರ್ 6, 2011

ಚುಂಚಿ ಫಾಲ್ಸ್, ಏರೋಪ್ಲೇನ್ ಚಿಟ್ಟೆ ಮತ್ತು ನನ್ನ ಬಾಲ್ಯ....


ಕಳೆದ ವಾರಾಂತ್ಯದಲ್ಲಿ ಚುಂಚಿ ಫಾಲ್ಸ್ ನೋಡಲು ಹೋಗಿದ್ದೆ. ಚುಂಚಿ ಫಾಲ್ಸ್ ನೋಡಲು ಹೋಗಿದ್ದು ೨ ನೇ ಬಾರಿ ಆದರೂ ಮೊದಲ ಬಾರಿ ಹೋದಾಗ ಅಲ್ಲಿ ಹೆಚ್ಹು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ಹೋದಾಗ ನಮ್ಮ ಗುಂಪಿನ ಇತರರು ಈಜಲು ತೊಡಗಿದರೆ ನಾನು ಸಮಯ ಕಳೆಯಲು ಅಲ್ಲೇ ಕಲ್ಲು ಬಂಡೆಗಳ ಮೇಲೆ ಅಲ್ಪ ಸ್ವಲ್ಪ ನೀರಿದ್ದು, ಮಟ್ಟಿಗಳು ಬೆಳೆದಿದ್ದ ಒಂದು ದಿಣ್ಣೆಯ ಮೇಲೆ ಫೋಟೋಸ್ ತೆಗೆಯುತ್ತಾ ಕುಳಿತಿದ್ದೆ. ಆಗ ತಾನೇ ಬಂತೊಂದು ಹಳದಿ ಬಣ್ಣದ ಏರೋಪ್ಲೇನ್ ಚಿಟ್ಟೆ. ನನಗೆ ನನ್ನ ಸಿಹಿ ಬಾಲ್ಯ ನೆನಪಾಯಿತು. ಆಗೆಲ್ಲ ನಮ್ಮೂರಿನಲ್ಲಿ ನನ್ನದೇ ವಯಸ್ಸಿನ ಮಕ್ಕಳ ಗುಂಪು ಯಾವಾಗಲೂ ಆಟ ಆಡಲು ತಯಾರಾಗಿರುತ್ತಿತ್ತು. ನನ್ನನ್ನೂ ಸೇರಿ ಕೆಲವರಿಗೆ ಪಿಟಿ(ಏರೋಪ್ಲೇನ್ ಚಿಟ್ಟೆ) ಹಿಡಿಯುವುದು, ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಮೋಜಿನ ಆಟ.



ಅಪರೂಪಕ್ಕೆ ಸಿಗುವ ರಕ್ತಗೆಂಪು ಬಣ್ಣದ ಚಿಟ್ಟೆ ಯಾರಾದರೂ ಹಿಡಿದರೆ ಬಾಲಕ್ಕೆ ದಾರ ಕಟ್ಟಲು ನಾ ಮುಂದು ತಾ ಮುಂದು ಎಂದು ಎಲ್ಲರೂ ರೆಡಿ. ಮಳೆಗಾಲದಲ್ಲಿ ಮಣ್ಣಿನಲ್ಲಿ ಕಾಣಸಿಗುವ ನಂಜುಳ್ಳೆ ಹಿಡಿದು, ಅದನ್ನು ಕದ್ದ ಅಪ್ಪನ ಶೇವಿಂಗ್ ಬ್ಲೇಡಿನಿಂದ ೩-೩ ತುಂಡು ಮಾಡಿ, ಮತ್ತೆ ಮಣ್ಣಿನಲ್ಲಿ ಹುದುಗಿಸಿ, ಆ ಮಣ್ಣನ್ನು ಉಂಡೆ ಕಟ್ಟಿ ಅಂಗಳದಲ್ಲಿದುವುದು. ನಂಜುಳ್ಳೆ ಸಾಯದೆ ಮತ್ತೆ ಬೆಳೆಯುತ್ತಿದೆಯಲ್ಲ ಎಂದು ಆಶ್ಚರ್ಯಪಟ್ಟು ಅದನ್ನು ಸಾಯಿಸುವ ಉಪಾಯ ಕಂಡು ಹಿಡಿಯಲು ರಹಸ್ಯ ಮೀಟಿಂಗ್ ಸೇರುವುದು (ಇವೆಲ್ಲ ಕಾರ್ಯಾಚರಣೆಗಳು ಮನೆಯ ಹಿರಿಯರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ನಡೆಯುತ್ತಿತ್ತು).


ಗದ್ದೆಯ ಬದುವಿನ ಮೇಲೆ ಕುಳಿತು ನೀರಿನಲ್ಲಿ ಸಿಗುವ ಚಿಕ್ಕ ಚಿಕ್ಕ ಮೀನುಗಳನ್ನು ಮುಷ್ಟಿ ಯಲ್ಲಿ ಹಿಡಿದು ಅವು ಒದ್ದಾಡುವಾಗ ಇಡುವ ಗುಳುಗುಳು ಕಚಕುಳಿಗೆ ಕುಶಿಪದುವುದು, ಅಪ್ಪೀ ತಪ್ಪೀ ರಸ್ತೆ ಬದಿಯಲ್ಲಿ ಎಲ್ಲಾದರೂ ಹಸಿರು ಹಾವಿನ ಮರಿ ಕಣ್ಣಿಗೆ ಬಿದ್ದರೆ ಹವಾಯಿ ಚಪ್ಪಲಿ ಹಾಕಿದ ಕಾಲಿನಿಂದ ಮೆತ್ತಗೆ ತುಳಿದು ಹಿಡಿದುಕೊಂಡು ಕಾಲಿಗೆ ಕಚಕುಳಿ ಆಗುವಾಗ ಆನಂದಿಸುವುದು, ಇವೆಲ್ಲಾ ನಮಗೆ (ವಿಕೃತ) ಕುಶಿ ಕೊಡುವ ಆಟಗಳಾಗಿದ್ದವು.ಈ ರೀತಿಯ ಮಂಗಾಟಗಳಿಗೆ ನಾವು ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹಿರಿಯರಿಗೆ ಸುದ್ದಿ ಮುಟ್ಟಿಸುತ್ತಾರೆಂದು ಹೆದರಿ ನಾವು ಕೆಲವೇ ಕೆಲವು ಮಕ್ಕಳು ಮಾತ್ರಾ ಇಂಥಹ ಹರ ಸಾಹಸಗಳಿಗೆ ಕೈ ಹಾಕುತ್ತಿದ್ದೆವು. ಇವೆಲ್ಲಾ ಕಪಿ ಚೇಷ್ಟೆಗಳು ಚುಂಚಿ ಫಾಲ್ಸ್ ಎದುರು ಕುಳಿತಿದ್ದಾಗ ಒಮ್ಮೆಲೇ ನೆನಪಾಗಿ, ಅಲ್ಲಿ ಎಲ್ಲಾದರೂ ಪಿಟಿ ಹಿಡಿಯಲು ಸಾಧ್ಯವಾ!! ಎಂದು ಹುಡುಕತೊಡಗಿದೆ. ಮೊದಲಿನಂತೆ ಅವಕ್ಕೆ ಜೀವ ಹಿಂಡಲು ನನ್ನ ಮನಸ್ಸು ಒಪ್ಪದಿದ್ದರೂ, ಒಮ್ಮೆ ಕೈಯಲ್ಲಿ ಹಿಡಿದು ೨ ನಿಮಿಷ ಜೊತೆಗಿಟ್ಟುಕೊಂಡು ಬಿಟ್ಟುಬಿಡುವುದು ನನ್ನ ಆಸೆಯಾಗಿತ್ತು. ಹಾಗೇ ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದಾಗ ನಾಲ್ಕೈದು ಬಣ್ಣದ ಸುಮಾರು ಚಿಟ್ಟೆಗಳು ಅಲ್ಲೆಲ್ಲಾ ಹಾರಾಡುತ್ತಿರುವುದು ಕಂಡಿತು.




ಸ್ವಲ್ಪ ಹೊತ್ತು ಅವಕ್ಕೆ ಡಿಸ್ಟರ್ಬ್ ಮಾಡದೆ, ಏನು ಮಾಡುತ್ತಿವೆ ಎಂದು ಮೌನವಾಗಿ ಗಮನಿಸುತ್ತಾ ಕುಳಿತಿದ್ದೆ. ೩ ಏರೋಪ್ಲೇನ್ ಚಿಟ್ಟೆಗಳು ಮಾರು ದೂರದಲ್ಲಿ ಸಂಗಾತಿಗಾಗಿ ನಿರೀಕ್ಷಿಸುತ್ತಾ ಸುಮಾರು ೩-೪ ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದವು. ಅಪ್ಪೀ ತಪ್ಪಿ ಅಲ್ಲಿ ಬೇರೆ ಯಾವುದಾದರೂ ಗಂಡು ಚಿಟ್ಟೆ ಬಂತೆಂದರೆ ಹೊಡೆದಾಟ ಶುರು. ಯಾವುದಾದರೂ ಹೆಣ್ಣು ಚಿಟ್ಟೆ ಆ ಕಡೆ ಸುಳಿದಾಡಿದಲ್ಲಿ ಅವುಗಳನ್ನು ಓಲೈಸುವ, ಪ್ರಣಯಕ್ಕೆ ಆಹ್ವಾನಿಸುವ ಪ್ರಕ್ರಿಯೆ ಮತ್ತು ಗಂಡು ಚಿಟ್ಟೆಗಳ ನಡುವೆ ಹೊಡೆದಾಟ ಅವ್ಯಾಹತವಾಗಿ ನಡೆದಿತ್ತು.


ಎಲ್ಲವನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅಸಾಧ್ಯವಾಗಿ, ಕೇವಲ ನಿರೀಕ್ಷೆಯಲ್ಲಿರುವ ಗಂಡು ಚಿಟ್ಟೆಗಳನ್ನು ವಿವಿಧ ಭಂಗಿಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು. ಹಾಗೆಯೇ ಸುಮಾರು ೨ ಗಂಟೆಗಳ ಕಾಲ ಸುಮ್ಮನೆ ನೋಡುತ್ತಾ ಕುಳಿತಿದ್ದು ಕೊನೆಗೂ ಒಂದು ಪಿಟಿ ಯನ್ನು ಉಪಾಯವಾಗಿ ಕೈಯಲ್ಲಿ ಹಿಡಿದೆ. ೨ ನಿಮಿಷ ನನ್ನ ಕೈಮೇಲೆಲ್ಲ ಕಚಕುಳಿಯಿಟ್ಟು ಹಾಗೆಯೇ ಬಿಟ್ಟುಬಿಟ್ಟೆ. ಹೆದರಿದ ಚಿಟ್ಟೆ, ಎದ್ದೆನೋ ಬಿದ್ದೆನೋ ಎಂದು ಹಾರಿ ಹೋಗಿ ಮತ್ತೆ ತನ್ನ ಆವಾಸ ಸ್ಥಾನದಲ್ಲಿ ಕುಳಿತು ಸಂಗಾತಿಗಾಗಿ ನಿರೀಕ್ಷಿಸತೊಡಗಿತು.

ಶುಕ್ರವಾರ, ಜುಲೈ 1, 2011

ಅಣಬೆಗಳು....

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಲೆನಾಡಿನಲ್ಲಿ ಮಳೆಗಾಲ ಶುರುವಾಯಿತೆಂದರೆ ಕೊಳೆತ ದರಕುಗಳ ಸಂದಿಯಲ್ಲೋ, ಮರದ ಕಾಂಡದಲ್ಲೋ, ಎಲ್ಲೆಂದರಲ್ಲಿ ವಿಧವಿಧದ ಅಣಬೆಗಳ ಸಾಮ್ರಾಜ್ಯ. ಸಾಮಾನ್ಯವಾಗಿ "ನಾಯಿಕೊಡೆ" ಎಂದು ಕರೆಯಲ್ಪಡುವ ಅಣಬೆಗಳಿಗೆ ಹೆಸರು ಅದರ
ಬಾಹ್ಯ ಸ್ವರೂಪದಿಂದಲೂ ಬಂದಿರಬಹುದು. ನೋಡಲು ಬಿಚ್ಚಿದ ಕೊಡೆಯಂತೆ ತಲೆಯ ಮೇಲಿರುವ ಟೋಪಿ ಅಗಲವಾಗಿ ಹರಡಿಕೊಂಡು ಒಂದು ಕಡ್ಡಿಯಂತಹ (ಕಾಂಡ) ರಚನೆಯಿಂದ ಭೂಮಿಗೆ ಅಂಟಿಕೊಂಡಿರುವ ಅಣಬೆಗಳು ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಆದರೆ ವಿವಿಧ ಬಣ್ಣ ಹಾಗೂ ಬಾಹ್ಯ ರಚನೆಗಳನ್ನೋಳಗೊಂಡ ಅಣಬೆಗಳೂ ಕಾಣಸಿಗುತ್ತವೆ. ಸುಮ್ಮನೆ ಅಲೆದಾಡುತ್ತಿದ್ದಾಗ ಆಕರ್ಷಕವಾಗಿ ಕಂಡ ಕೆಲವು ಅಣಬೆಗಳನ್ನು ಸೆರೆಹಿಡಿದು ತಂದಿದ್ದೇನೆ.


ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಸಮಾನಾಂತರ ರೇಖೆಯಲ್ಲಿ ಖಚಿತ ದೂರದಲ್ಲಿ ನಿಗದಿಯಂತೆ ಬೆಳೆಯುತ್ತಿರುವ ಬಿಳಿ ಅಣಬೆಗಳು

ಒಂದರಮೇಲೊಂದು ಸವಾರಿ ಮಾಡುತ್ತಿರುವ ಬಿಳಿ ಅಣಬೆಗಳು

ಬಿಳಿ ಅಣಬೆ

ಒಣಗಿ ಬಿದ್ದ ಕಾಂಡದ ಮೇಲೆ ಬೆಳೆದಿರುವ ಹಳದಿ ಅಣಬೆಗಳು

ಸೊಂಗೆಯ ಸಂದಿಯಿಂದ ಮೇಲೆದ್ದ ಅಣಬೆ

ಪುಟ್ಟ ಬಿಳಿ ಅಣಬೆ


ಕಲ್ಲಿನ ಸಂದಿಯಿಂದ ಮೇಲೆದ್ದ ಕೆಂಪು ಅಣಬೆ

ದರಕಲಿನಿಂದ ಮೇಲೆದ್ದ ಅಣಬೆ

ಮಂಗಳವಾರ, ಜೂನ್ 28, 2011

ಹನಿ..


ವಾರಾಂತ್ಯದಲ್ಲಿ ಊರಿಗೆ ಹೋಗಿದ್ದೆ. ಜೋರು ಆರಿದ್ರಾ ಮಳೆಯ ಆರ್ಭಟ.ಧೋ.. ಎಂದು ಸುರಿಯುವ ಜಡಿಮಳೆ ಸ್ವಲ್ಪ ಬಿಡುವು ಕೊಟ್ಟಾಗಲೆಲ್ಲಾ ಕ್ಯಾಮೆರಾ ಕೈಯಲ್ಲಿ ಹಿಡಿದು ತೋಟದ ಕಡೆ ಒಂದು ಸುತ್ತು ಹೋಗುವುದು, ಮತ್ತೆ ಬೆನ್ನು ಬಿದ್ದ ಮಳೆಗೆ ಒದ್ದೆಯಾಗಿ ಮನೆಗೆ ಓಡಿ ಬರುವುದೂ ನಡೆದಿತ್ತು. ಹೀಗೆ ಆಗಸವೆಲ್ಲಾ ಕಪ್ಪುಗಟ್ಟಿ, ಜೋರಾಗಿ ಮಳೆ ಸುರಿಯುತ್ತಿದ್ದ ಒಂದು ಮಧ್ಯಾಹ್ನ ಕೊಡೆ ಹಿಡಿದು ತೋಟದಲ್ಲಿ ಅಡ್ದಾಡುತ್ತಿದ್ದೆ. ಕೆಸುವಿನ ಎಲೆಯ ಮೇಲೆ ಬಿದ್ದಿದ್ದ ಸುಂದರ ಮಳೆ ಹನಿಗಳನ್ನು ಕ್ಲಿಕ್ಕ್ಕಿಸುತ್ತಿದ್ದಾಗ ತೆಗೆದ ಫೋಟೋ ಇದು. ಸುತ್ತಾ ಇರುವ ತೋಟದ ಪ್ರತಿಬಿಂಬವನ್ನು ಕನ್ನಡಿಯಂತೆ ತನ್ನ ಒಂದು ಪಾರ್ಶ್ವದಲ್ಲಿ ಹಿಡಿದಿಟ್ಟುಕೊಂಡು, ಉಳಿದ ಭಾಗ ಪೂರ್ತಿ ಪೀನ ಮಸೂರದಂತೆ ಎಲೆಯ ಗೆರೆಗಳನ್ನು ಎನ್‌ಲಾರ್ಜ್ ಮಾಡಿ ತೋರಿಸುವ 'ಹನಿ'ಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹತ್ತಿರದಿಂದ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಕಂಕುಳಲ್ಲಿ ಕೊಡೆ ಹಿಡಿದುಕೊಂಡು, ಮಳೆ ಹನಿಗಳು ನನ್ನ ಕ್ಯಾಮೆರಾ ಮೇಲೂ ಮತ್ತು ಎಲೆಯ ಮೇಲೂ ಬೀಳದಂತೆ ಕಾಪಾಡುತ್ತಾ ನಾಲ್ಕು ಫೋಟೋ ಕ್ಲಿಕ್ಕ್ಕಿಸುವಲ್ಲಿ,ಜೋರಾಗಿ ಬೀಸಿದ ಗಾಳಿಗೆ ಆಯತಪ್ಪಿ ನನ್ನ ಕೈ ಸ್ವಲ್ಪ ಅಲುಗಾಡಿದ್ದೂ, ಎಲೆಯ ಮೇಲಿದ್ದ ನೀರಿನ ಹನಿ ಕೆಳಗೆ ಬಿದ್ದು ಮಣ್ಣಿನೊಂದಿಗೆ ಲೀನವಾಗುವುದಕ್ಕೂ ಸರಿ ಹೋಯಿತು. ವಿಕಾಸಕ್ಕನುಗುಣವಾಗಿ ನೀರು ಮಣ್ಣಿನೊಂದಿಗೆ ಬೆರೆತು ಸಸ್ಯದ ಬೆಳವಣಿಗೆಗೆ ಪೂರಕವಾಗುವುದಕ್ಕೂ, ಪರಿಸರ ಸಮತೋಲನದಲ್ಲಿ ಸಸ್ಯ ಭಾಗವಹಿಸುವುದಕ್ಕೂ, ಮೋಡದಿಂದ ಮಳೆ ಬರುವುದಕ್ಕೂ, ಮಳೆ ಹನಿ ಎಲೆಯ ಮೇಲೆ ಬಿದ್ದು ಸುತ್ತಲಿನ ಪ್ರಕೃತಿಯನ್ನು ತನ್ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುವುದಕ್ಕೂ, ಎಲೆಯನ್ನು ಬೆತ್ತಲುಗೊಳಿಸುವುದಕ್ಕೂ, ಮತ್ತೆ ಎಲೆಯಿಂದ ಉದುರಿ ಮಣ್ಣು ಸೇರುವುದಕ್ಕೂ, ಸಸ್ಯಗಳಿಗೆ ಜೀವಸೆರೆಯಾಗುವುದಕ್ಕೂ, ಆವಿಯಾಗಿ ಮತ್ತೆ ಮೋಡವಾಗುವುದಕ್ಕೂ ಇರುವ ಅವಿನಾಭಾವ ಸಂಭಂಧವನ್ನು ನೆನೆದು, ಪ್ರಕೃತಿ ಸುಂದರ, ಅನಂತ, ಆದರೂ ಎಲ್ಲ ಬರೀ ನಶ್ವರ ಎಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದೆ.
====================================================
ಈ ಫೋಟೋ ನೋಡಿ ಆಜಾದ್ ಸರ್ (ಜಲನಯನ) ಬರೆದ ಚುಟುಕು:

ಹಸಿರೆಲೆ
ಎಲೆಮೇಲೆ ಮಳೆಹನಿ
ಎಲೆಯೊಳಗಿದೆ ಜೀವ ಹನಿ
ಎಲೆಯಿಲ್ಲದಿರೆ ಆಗುವುದಯ್ಯಾ
ಎಣೆಯಿಲ್ಲದ ಜೀವ ಹಾನಿ
====================================================

ಸೋಮವಾರ, ಜೂನ್ 13, 2011

Roads...







ಬುಧವಾರ, ಜೂನ್ 1, 2011

ನಂದಿ ಬೆಟ್ಟದಲ್ಲೊಂದು ಸುಂದರ ಸಂಜೆ...

ಹುಡುಕಾಟ...ಹುಡುಗಾಟ.....

ಒಗ್ಗಟ್ಟಿನಲ್ಲಿ ಬಲವಿದೆ......

ಕಣ್ಣಾ ಮುಚ್ಚಾಲೆ!!

ಅಡಗೋದಕ್ಕೆ ಅವಸರವೇಕೆ ಭಾನು!!..

ಬಂಧ.. ಅನುಬಂಧ..

ಭಾನುವಾರ, ಏಪ್ರಿಲ್ 17, 2011

ಚನ್ನೆಮಣೆ..

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು... ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ....
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ "ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು" ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು. ಆಗೆಲ್ಲ ಚನ್ನೆಮಣೆ, ಪಗಡೆ, ಎತ್ಗಲ್ಲು ಹೀಗೆ ವಿವಿಧ ಸಂಗಾತಿಗಳು ನಮ್ಮ ಜೊತೆಗೆ. ಮಧ್ಯಾಹ್ನ ಊಟ ಮಾಡಿ,ಸ್ವಲ್ಪ ಹೊತ್ತು ಮಲಗೆದ್ದ ಮೇಲೆ ಅಜ್ಜಿ ನಮ್ಮ ಜೊತೆಗೆ ಆಡಲು ಕೂರುತ್ತಿದ್ದರು. ಚನ್ನೆಮಣೆ ಅವರ ತವರುಮನೆಯಿಂದ ಮದುವೆಯ ಸಮಯದಲ್ಲಿ ಬಳುವಳಿಯಾಗಿ ಬಂದಿದ್ದು. ಸರಿ ಸುಮಾರು ಮೂರು ತಲೆಮಾರುಗಳನ್ನು ಕಂಡರೂ ಇನ್ನೂ ಜೀವಂತವಾಗಿ ನಮ್ಮೊಡನೆ ಇರುವ ನಮ್ಮ ಮನೆಯ ಆಟಿಕೆ. ನಾವೆಲ್ಲರೂ ದೊಡ್ಡವರಾದಮೇಲೆ ಕೇರಂ ಬೋರ್ಡ್, ಚೆಸ್ಸ್ ಎಂದು ವಿವಿಧ ಆಟಿಕೆಗಳನ್ನು ಮನೆಗೆ ತಂದು ರಜದ ದಿನಗಳಲ್ಲಿ ಆಡಲು ತೊಡಗಿದ ಮೇಲೆ ಮೂಲೆಗುಂಪಾಗಿದ್ದ ಚನ್ನೆಮಣೆಯನ್ನು ಮೊನ್ನೆ ಯುಗಾದಿಗೆ ಊರಿಗೆ ಹೋದಾಗ ಧೂಳು ಕೊಡವಿ ಆಡಲು ಕುಳಿತೆ. ಹಾಗೆಯೇ ಪಕ್ಕದ ಮನೆಯ ಅಭಿಷ ಈ ಆಟವನ್ನು ಹೊಸತಾಗಿ ಕಲಿಯಲು ಕುಳಿತದ್ದು, ನನ್ನ ಅಜ್ಜಿ ಆಕೆಗೆ ಆಡುವುದನ್ನು ಕಲಿಸುತ್ತಿದ್ದುದನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಂದಿದ್ದೇನೆ.